ಬೆಂಗಳೂರು: ಸ್ವಾತಂತ್ರ ಬಂದು 75 ವರ್ಷಗಳಾದರೂ ಕಾರ್ಮಿಕ ಮತ್ತು ರೈತರಿಗೆ ಇನ್ನೂ ಸ್ವಾತಂತ್ರ ಬಂದಿಲ್ಲ ನಮ್ಮನಾಳುವವರಿಗೆ ಚುನಾವಣೆ ಸಂದರ್ಭದಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಎಎಪಿ ಆಮ್ ಆದ್ಮಿ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದರು.
ಮೂರನೇ ದಿನದ ಮಹಾಧರಣಿಯಲ್ಲಿ ಭಾಗವಹಿಸಿ ಕಾರ್ಮಿಕ ಮತ್ತು ರೈತರ ಪರವಾಗಿ ಮಾತನಾಡಿದ ಅವರು, ಇಲ್ಲಿ ನಾನು ಒಬ್ಬ ರಾಜಕಾರಣಿ ಮತ್ತು ಸಿನಿಮಾ ನಟನಾಗಿ ಬಂದಿಲ್ಲ. ಸ್ವಾತಂತ್ರ ಬಂದು 75 ವರ್ಷಗಳಾದರೂ ಕಾರ್ಮಿಕ ಮತ್ತು ರೈತರಿಗೆ ಇನ್ನೂ ಸ್ವಾತಂತ್ರ ಬಂದಿಲ್ಲ. ಅಧಿಕಾರದ ದಾಹದಿಂದ ಅವರು ನಮ್ಮನ್ನು ಕಣ್ಣೊರೆಸುತ್ತಾರೆ, ಹಾಗಾಗಿ ನಾವು ಅವರನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರಿಗೆ ಉತ್ತರ ನೀಡಬೇಕಾಗಿದೆ ಎಂದರು.
ಇದನ್ನೂ ಓದಿ:ಮಹಾಧರಣಿ| ರೈತ ಕಾರ್ಮಿಕರ ಹಕ್ಕೊತ್ತಾಯ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಿದ್ದಾರೆ: ಸಚಿವ ಬೈರೇಗೌಡ
ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ತುಂಬಾ ನಿರಿಕ್ಷೆ ಇತ್ತು. ಆದರು 6 ತಿಂಗಳಾದರೂ ಇಂದಿಗೂ ಕಾರ್ಮಿಕ ಮತ್ತು ರೈತರು ಇನ್ನೂ ಹೋರಾಟದಲ್ಲಿದ್ದಾರೆ. ಏಕ ವ್ಯಕ್ತಿ ಮತ್ತು ಏಕ ದೇಶ ಎನ್ನುವ ಕೇಂದ್ರ ಸರ್ಕಾರಕ್ಕೆ ನಾನು ಹೇಳುವುದು ಒಂದೇ ಟಾಯ್ಲೆಟ್ ಕಟ್ಟಿ ಬಿಡಲಿ. ಇವರು ರಾಮ ಮಂದಿರದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಆದರೆ ನಮ್ಮ ಪ್ರದೇಶದ ದೇವರು ಏನು ಮಾಡಿದ್ದಾರೆ ಎಂದರು.
ಕನ್ಯಾದಾನ ಮಾಡುವಾಗ ಯಾರೋ ಒಬ್ಬನಿಗೆ ಮಗಳನ್ನು ಮದುವೆ ಮಾಡಿಕೊಡುವುದಿಲ್ಲ. ಹಾಗಾಗಿಯೆ ಮತದಾನ ಮಾಡುವಾಗ ಕೂಡಾ ನಮಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಿ ಮತದಾನ ಮಾಡಬೇಕಾಗಿದೆ. ಒಂದು ಮತಕ್ಕೆ ಕೊಳ್ಳುವ ಮಹಿಳೆ ಅದನ್ನು ಎಲ್ಲಾ ರೀತಿಯಲ್ಲಿ ಪರೀಕ್ಷೆ ಮಾಡುತ್ತಾರೆ, ಹಾಗೆಯೆ ನಮ್ಮನ್ನು ಆಳುವವರ ತಲೆಗೆ ಟಣ್ ಎಂದು ಬಡಿದು ಎಚ್ಚರಿಸಿ ಪರೀಕ್ಷೆ ಮಾಡಿಯೆ ಮತ ನೀಡಬೇಕಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಅದಾನಿ ಅಂಬಾನಿಗೆ ಸಾಲ ಮನ್ನಾ ಮಾಡುವ ಸರ್ಕಾರ ಮಹಿಳೆ, ಕಾರ್ಮಿಕರಿಗೆ ಏನು ಕೊಟ್ಟಿದೆ| ಎಸ್. ವರಲಕ್ಷ್ಮಿ
ಭೂಮಿಯನ್ನು ಬಂಜೆ ಮಾಡುವವರ, ಅವಿವೇಕಿಗಳ ಕೈಗೆ ನಮ್ಮ ಭೂಮಿ ಸೇರುತ್ತಿದೆ: ಸಿದ್ದವೀರಪ್ಪ
ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಸಿದ್ದವೀರಪ್ಪ ಅವರು ಮಹಾಧರಣಿಯನ್ನುದ್ದೇಶಿಸಿ ಮಾತನಾಡಿ ದುಡಿಯುವ ಜನರಿಗೆ ಅಧಿಕಾರ ಬರಬೇಕು, ಕುಟುಂಬ ರಾಜಕಾರಣ ಮಾಡುವವರನ್ನು ವಾಪಾಸು ಕಳುಹಿಸುವ ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಈ ವರೆಗೂ ರೈತ ವಿರೋಧಿ ಕಾಯ್ದೆ ವಾಪಾಸು ಪಡೆದಿಲ್ಲ. ಇವರೆಲ್ಲರೂ ಇದರಲ್ಲಿ ಪಾಲುದಾರರು. ಭೂಮಿಯನ್ನು ಬಂಜೆ ಮಾಡುವವರ, ಅವಿವೇಕಿಗಳ ಕೈಗೆ ನಮ್ಮ ಭೂಮಿ ಸೇರುತ್ತಿದೆ. ಕೇವಲ ರಾಜಕಾರಣಿಗಳಿಗೆ ಮತ್ತು ಸ್ಥಿತಿವಂತರ ಪರವಾಗಿ ಕಾನೂನು ಬರುತ್ತಿವೆ. ದುಡಿವ ವರ್ಗದ ದುಡಿಮೆಗೆ ತಕ್ಕದಾದ ಆದಾಯ ಅವರ ಜೇಬಿಗೆ ಬರಬೇಕಾಗಿದೆ. ಇದು ಬಂದರೆ ಮಾತ್ರ ಸಮಾನತೆ ಬರುತ್ತದೆ. ನಮ್ಮ ದುಡಿಯುವ ಜನರಿಗೆ ಡಿ ವರ್ಗದ ನೌಕರನಿಗೆ ಬರುವ ಆದಾಯ ಕೂಡಾ ಬರುತ್ತಿಲ್ಲ. ಎಲ್ಲಾ ಸರ್ಕಾರಗಳಿಗೆ ಎಚ್ಚರಿಕೆ ಗಂಟೆಯಾಗಿ ಈ ಮೂರು ದಿನಗಳ ಧರಣಿ ಮಾಡುತ್ತಿದ್ದೇವೆ ಎಂದರು.
ರೈತ ಕೊಳ್ಳುವ ವಸ್ತುಗಳಿಗೆ ಎಮ್ಆರ್ಪಿ ಇರುತ್ತದೆ. ಇಷ್ಟೆಲ್ಲಾ ಖರ್ಚು ಮಾಡಿ ಬೆಳೆದ ರೈತ ಮಾತ್ರ ತನ್ನ ಉತ್ಪನ್ನವನ್ನು ಬೇರೆ ಯಾರೋ ಕೊಟ್ಟ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಹಾಗಾಗಿ ಪ್ರೊ ನಂಜುಂಡಸ್ವಾಮಿ ಅವರು ಹೇಳುವತೆ ನೇರ ಕಾರ್ಯಾಚರಣೆ ಮಾಡಬೇಕಿದೆ. ಇಲ್ಲಿ ಆಹಾರ ಕೊಳ್ಳುವವರು ಮತ್ತು ಉತ್ಪಾದನೆ ಮಾಡುವವರು ನಷ್ಟಕ್ಕೆ ಒಳಗಾಗುತ್ತಾರೆ, ಆದರೆ ಈ ನಡುವೆ ಮಾರಾಟಗಾರರು ಮಾತ್ರ ಶ್ರೀಮಂತರಾಗುತ್ತಾರೆ. 17 ವರ್ಷಗಳಿಂದ ಸ್ವಾಮಿನಾಥನ್ ಅವರ ವರದಿ ಇನ್ನೂ ಜಾರಿಯಾಗಿಲ್ಲ. ಇದು ಜಾರಿಯಾದರೆ ರೈತರಿಗೆ ಯಾವುದೆ ಸಬ್ಸಿಡಿ ಬೇಕಾಗಿಲ್ಲ. ಈ ವರದಿಯನ್ನು ಜಾರಿ ಮಾಡುವ ಕೆಲಸವನ್ನು ನಾವೇ ಮಾಡಬೇಕಾಗಿದೆ. ಸಾಲ ವಸೂಲಿ ಮಾಡಲು ಬರುವ ಬ್ಯಾಂಕ್ಗಳಿಗೆ ಮನೆ, ಟ್ರಾಕ್ಟರ್ ಬದಲಿಗೆ ರೈತರು ಬೆಳೆದ ವಸ್ತುಗಳನ್ನು ಜಮೆ ಮಾಡಬೇಕಾಗಿದೆ ಎಂದು ಹೇಳಿದರು.
ವಿಡಿಯೋ ನೋಡಿ:ಮಹಾಧರಣಿ| ದುಡಿಯುವ ಜನರ ಮಹಾಧರಣಿ: ಮೂರನೇ ದಿನದ ನೇರ ಪ್ರಸಾರ