ರೈತ-ಕಾರ್ಮಿಕ-ದಲಿತರ 72 ಗಂಟೆಗಳ ಮಹಾಧರಣಿ ಭಾನುವಾರದಿಂದ ಪ್ರಾರಂಭ

ಬೆಂಗಳೂರು: ಸಂಯುಕ್ತ ಕಿಸಾನ್ ಮೋರ್ಚಾ  (ಎಸ್‌ಕೆಎಂ) ಮತ್ತು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ 72 ಗಂಟೆಗಳ ಮಹಾಧರಣಿ ನವೆಂಬರ್ 26ರ ಭಾನುವಾರದಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರಾರಂಭವಾಗಲಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ಈ ಹಿಂದಿನ ರಾಜ್ಯ ಸರ್ಕಾರ ತಂದಿದ್ದ ರೈತ-ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ, ಪರ್ಯಾಯ ಜನಪರ ನೀತಿಗಳನ್ನು ಜಾರಿ ಮಾಡುವಂತೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಒತ್ತಾಯಿಸಲಿವೆ.

ರೈತ ಮತ್ತು ಕಾರ್ಮಿಕರ ಈ ಮಹಾಧರಣಿ ದೇಶದಾದ್ಯಂತ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ನಡೆಯಲಿದ್ದು, ಅದರಂತೆ ರಾಜ್ಯದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನವೆಂಬರ್ 26, 27, 28ರಂದು ಜರುಗಲಿದೆ. 2014 ರಿಂದಲೂ ದೇಶದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಕ್ರಮಣಕಾರಿಯಾಗಿ ರೂಪಿಸುತ್ತಿರುವ ಕಾರ್ಪೊರೇಟ್ ಬಂಡವಾಳಪರ ನವ ಉದಾರವಾದಿ ನೀತಿಗಳು ದೇಶದ ದುಡಿಯುವ ಜನರನ್ನು ಸಂಕಷ್ಟಕ್ಕೆ ದೂಡಿದೆ ಎಂದು ರೈತ ಮತ್ತು ಕಾರ್ಮಿಕ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಇದನ್ನೂ ಓದಿ: ತಮಿಳುನಾಡಿಗೆ ಡಿ.31 ಕಾವೇರಿ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ನಿರ್ದೇಶನ

ಮಹಾಧರಣಿ ಬಗ್ಗೆ ಮಾತನಾಡಿದ ‘ಸಂಯುಕ್ತ ಹೋರಾಟ ಕರ್ನಾಟಕ’ದ ಸಂಚಾಲಕರಾದ ಜಿ. ಸಿ. ಬಯ್ಯಾರೆಡ್ಡಿ ಅವರು, “ಕಾರ್ಪೊರೇಟ್ ತೆರಿಗೆಗಳನ್ನು ಕಡಿತ ಮಾಡುತ್ತಿರುವ ಕೇಂದ್ರ ಸರ್ಕಾರ, ಸಾಮಾನ್ಯ ಜನತೆಯ ಮೇಲೆ ಜಿ.ಎಸ್.ಟಿ. ಹೊರೆ ವಿಧಿಸಿದೆ. ಪೆಟ್ರೋಲಿಯಂ ಉತ್ಪನ್ನಗಳು ಸೇರಿದಂತೆ ಬಹುತೇಕ ಸಾರ್ವಜನಿಕ ಸೇವೆಗಳ ಬಳಕೆಗೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದರಿಂದ ಎಲ್ಲಾ ಅಗತ್ಯ ಸರಕುಗಳ ಬೆಲೆಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಜನತೆ ತತ್ತರಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಬಿಜೆಪಿ ಸರ್ಕಾರ ‘ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಯೋಜನೆ’ ಮೂಲಕ ದೇಶದ ಸಂಪತ್ತಾದ ವಿದ್ಯುತ್, ರೈಲ್ವೆ, ಕಲ್ಲಿದ್ದಲು, ದೂರ ಸಂಪರ್ಕ, ವಿಮಾ ಕ್ಷೇತ್ರ, ವಿಮಾನಯಾನ, ರಕ್ಷಣಾ ಸಾಮಾಗ್ರಿ ಉತ್ಪಾದನಾ ಕೈಗಾರಿಕೆ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಸೇವೆ ಒದಗಿಸಬೇಕಾದ ಅಗತ್ಯ ವಲಯಗಳಾದ ಆರೋಗ್ಯ, ಶಿಕ್ಷಣ, ಸಾರಿಗೆ, ಆಹಾರ, ನೀರು, ಭೂಮಿ, ಗಣಿ, ಅರಣ್ಯ ಸೇರಿದಂತೆ ಎಲ್ಲವನ್ನೂ ಕಾರ್ಪೊರೇಟ್ ವಲಯಕ್ಕೆ ಹಸ್ತಾಂತರಿಸಿ ಸೇವೆಯನ್ನು ಸರಕಾಗಿಸಲು ಹೊರಟಿದೆ. ಹಲವು ಸ್ಕೀಂ ಯೋಜನೆಗಳನ್ನು ದುರ್ಬಲಗೊಳಿಸುತ್ತಿದೆ. ಸರ್ಕಾರದ ಇಂತಹ ಜನ ವಿರೋಧಿ ಕ್ರಮಗಳು ಕಾರ್ಪೊರೇಟ್ ವರ್ಗದ ಸಂಪತ್ತು ಮತ್ತು ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದ್ದರೆ, ಶೋಷಿತ ಜನ ಸಮೂಹದ ಜೀವನ ಮಟ್ಟವನ್ನು ದಾರಿದ್ರ್ಯಕ್ಕೆ ತಳ್ಳಲ್ಪಟ್ಟಿದೆ” ಎಂದು ಬಯ್ಯಾರಡ್ಡಿ ಹೇಳಿದ್ದಾರೆ.

ರೈತ-ಕಾರ್ಮಿಕ-ದಲಿತರ 72 ಗಂಟೆಗಳ ಮಹಾಧರಣಿ ಭಾನುವಾರದಿಂದ ಪ್ರಾರಂಭ 72-hour Mahadharani of farmers-labour-Dalits to begin from Sunday

ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಸಂಯುಕ್ತ ಹೋರಾಟ ಕರ್ನಾಟಕದ ಸಂಚಾಲಕರಾದ ಬಡಗಲಪುರ ನಾಗೇಂದ್ರ, “ರಾಷ್ಟ್ರೀಯ ಆದಾಯದಲ್ಲಿ ಭಾರತದ ಅತ್ಯಂತ ಮೇಲ್ತರದ ಶೇ.1 ರಷ್ಟು ಜನ ಶೇ.40.5 ರಷ್ಟು ಒಡೆತನ ಹೊಂದಿದ್ದರೆ, ಶೇ.50 ರಷ್ಟು ಸಾಮಾನ್ಯ ಜನರ ಒಡೆತನ ಶೇ.3ಕ್ಕೆ ಕುಸಿದಿದೆ. ನಿರುದ್ಯೋಗ, ಬಡತನ, ಹಸಿವು, ಮಹಿಳಾ ಮತ್ತು ಮಕ್ಕಳ ಅಪೌಷ್ಟಿಕತೆ ಹೆಚ್ಚಾಗುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಬಿಸಿ ಇಸ್ರೇಲ್ ಪರವಾಗಿ ಪಕ್ಷಪಾತಿ ವರದಿ ಮಾಡುತ್ತಿದೆ | ಅದೇ ಸಂಸ್ಥೆಯ ಪತ್ರಕರ್ತರಿಂದಲೆ ಆರೋಪ

“ದೆಹಲಿಯಲ್ಲಿ ಸತತ 13 ತಿಂಗಳ ಕಾಲ ರೈತರು ಐತಿಹಾಸಿಕ ಹೋರಾಟ ನಡೆಸಿದ ಪರಿಣಾಮ ಮೋದಿ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ಸು ಪಡೆಯಿತು. ಆದರೂ ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ) ಕಾಯ್ದೆ ಜಾರಿ, ವಿದ್ಯುತ್ ತಿದ್ದುಪಡಿ ಮಸೂದೆ ರದ್ದತಿ ಮುಂತಾದ ವಿಷಯಗಳಲ್ಲಿ ರೈತರಿಗೆ ನೀಡಿದ್ದ ಲಿಖಿತ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಸರ್ಕಾರದ ಈ ಧೋರಣೆಗಳು ರೈತಾಪಿ ವರ್ಗವನ್ನು ಸಾಲದ ಸುಳಿಗೆ ಸಿಲುಕಿಸಿ ಕೃಷಿಯಿಂದ ಹೊರ ದೂಡಲಾಗುತ್ತಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಕೃಷಿ ಆರ್ಥಿಕತೆ ಬಿಕ್ಕಟ್ಟಿನಲ್ಲಿ ಸಾಗುತ್ತಿದೆ” ಎಂದು ನಾಗೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು. ಮಹಾಧರಣಿ

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, “ಕೇಂದ್ರ ಸರ್ಕಾರ 29 ಕಾರ್ಮಿಕ ಕಾನೂನುಗಳನ್ನು ಬದಲಾಯಿಸಿ ಕಾರ್ಪೊರೇಟ್ ಬಂಡವಾಳಪರ ನಾಲ್ಕು ಸಂಹಿತೆಗಳಾಗಿ ರೂಪಿಸಿ, ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲು ಹಾಗೂ ಬಂಡವಾಳಗಾರರ ಲಾಭವನ್ನು ಹೆಚ್ಚಿಸಲು ಶ್ರಮದ ಶೋಷಣೆಗೆ ಅನುವುಗೊಳಿಸಿದೆ. ಬಹುದೊಡ್ಡ ಸಂಖ್ಯೆಯ ಕೃಷಿ ಕೂಲಿಕಾರರು, ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ” ಎಂದು ಹೇಳಿದರು. ಮಹಾಧರಣಿ

“ಕೇಂದ್ರದ ಬಿಜೆಪಿ ಸರ್ಕಾರ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಕಾರ್ಪೊರೇಟ್ ಶೋಷಣೆಗೆ ಅಡ್ಡಿಯಿಲ್ಲದಂತೆ ಮಾಡಲು ಜಾತಿ, ಧರ್ಮ, ಭಾಷೆ, ವಿವಿಧ ಹೆಸರಿನಲ್ಲಿ ರೈತರನ್ನು, ಕಾರ್ಮಿಕರನ್ನು, ಒಟ್ಟಾರೆ ಜನತೆಯನ್ನು ಕೋಮು ವಿಭಜನೆಯ ಮೂಲಕ ನೈಜ ಸಮಸ್ಯೆಗಳಿಂದ ಬೇರೆಡೆ ಗಮನಹರಿಸುವಂತೆ ಮಾಡಿ ಐಕ್ಯ ಚಳುವಳಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರö್ಯ, ಮಾನವ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ” ಎಂದು ಮೀನಾಕ್ಷಿ ಸುಂದರಂ ಹೇಳಿದರು.

ಇದನ್ನೂ ಓದಿ: ಮೋದಿ ವಿರುದ್ಧ ‘ಪನೌತಿ’ ಹೇಳಿಕೆ | ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ಕರ್ನಾಟಕ ಜನಶಕ್ತಿ ಮುಖಂಡ ನೂರ್ ಶ್ರೀಧರ್ ಮಾತನಾಡಿ, “ಈ ಹಿಂದಿನ ಸರ್ಕಾರ ತಂದಿದ್ದ ಜನ ವಿರೋಧಿ ನೀತಿಗಳನ್ನೆಲ್ಲಾ ನೂತನ ರಾಜ್ಯ ಸರ್ಕಾರ ಕೂಡಲೇ ರದ್ದುಗೊಳಿಸಬೇಕು. ಅಲ್ಲದೇ ಅದೇ ಹಾದಿಯಲ್ಲಿ ಸಾಗದೆ ಪರ್ಯಾಯ ಜನಪರ ನೀತಿಗಳನ್ನು ತರುವ ಮೂಲಕ ರೈತರ – ಕಾರ್ಮಿಕರ – ಕೂಲಿಕಾರರ – ಮಹಿಳೆಯರ – ದಲಿತರ, ಅಲ್ಪಸಂಖ್ಯಾತರ – ಆದಿವಾಸಿಗಳ ರಕ್ಷಣೆಗೆ ಇಚ್ಛಾ ಶಕ್ತಿ ಪ್ರದರ್ಶಿಸಬೇಕಿದೆ” ಎಂದು ಹೇಳಿದರು.

ಜನವಾದಿ ಮಹಿಳಾ ಸಂಘಟನೆ ನಾಯಕರಾದ ಮೀನಾಕ್ಷಿ ಬಾಳಿ, ವಕೀಲರಾದ ಮೈತ್ರೆಯಿ, ರೈತ ನಾಯಕ ಸಿದ್ದನಗೌಡ ಪಾಟೀಲ್, AITUC ನಾಯಕರಾದ ವಿಜಯ್ ಭಾಸ್ಕರ್ ಸೇರಿದಂತೆ ರೈತ, ದಲಿತ, ಕಾರ್ಮಿಕ, ಕೂಲಿಕಾರ, ಮಹಿಳೆ, ವಿದ್ಯಾರ್ಥಿ, ಯುವಜನ ಸಂಘಟನೆಗಳ ಸಮನ್ವಯ ಸಮಿತಿ ಮಹಾಧರಣಿಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದ್ದಾರೆ.

ವಿಡಿಯೊ ನೋಡಿ: ನೇಜಾರು ಹತ್ಯೆ ಪ್ರಕರಣ :ಕೊಲೆಗಾರನ ಹಿನ್ನೆಲೆ ತನಿಖೆಯಾಗಲಿ, ಕೋಮುವಾದದ ವಾಸನೆಯೂ ಬಡಿಯುತ್ತಿದೆ Nejaru murder case

Donate Janashakthi Media

Leave a Reply

Your email address will not be published. Required fields are marked *