ಪೋಕ್ಸೋ ಪ್ರಕರಣ| 14 ತಿಂಗಳ ಜೈಲು ವಾಸದ ಬಳಿಕ ಮುರುಘಾ ಸ್ವಾಮಿಗೆ ಜಾಮೀನು ಮಂಜೂರು

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠಕ್ಕೆ ಸೇರಿದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 2022ರ ಸೆಪ್ಟೆಂಬರ್‌ 1ರ ರಾತ್ರಿ ಬಂಧನಕ್ಕೆ ಒಳಗಾಗಿದ್ದ  ಶಿವಮೂರ್ತಿ ಮುರುಘಾ ಸ್ವಾಮಿಗೆ ಕೊನೆಗೂ ಜೈಲಿನಿಂದ ಬಿಡುಗಡೆ  ಮಾಡಲಾಗಿದೆ. ರಾಜ್ಯ ಹೈಕೋರ್ಟ್ ಜಾಮೀನಿನಲ್ಲಿ ಬಿಡುಗಡೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಜೈಲಿನಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಪೋಕ್ಸೋ ಪ್ರಕರಣ

ಜೈಲಿಂದ ಬಿಡುಗಡೆಯಾದ ಅವರಿಗೆ ಚಿತ್ರದುರ್ಗ ಪ್ರವೇಶವನ್ನು ಹೈಕೋರ್ಟ್‌ ನಿರ್ಬಂಧಿಸಿದೆ. ಹೀಗಾಗಿ ಅವರು ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ವಾಸವಾಗಿರಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಪೋಕ್ಸೋ ಪ್ರಕರಣ: ಮುರುಘಾ ಸ್ವಾಮಿ ನ್ಯಾಯಾಂಗ ಬಂಧನ ಅ.21ರ ತನಕ ವಿಸ್ತರಣೆ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 2022ರ ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಸ್ವಾಮಿ ವಿರುದ್ಧ ಪೋಕ್ಸೋ ಕೇಸು ದಾಖಲಾಗಿತ್ತು. ಇದು ಇಡೀ ರಾಜ್ಯವನ್ನೇ ಭಾರಿ ಆಘಾತಕ್ಕೆ ಗುರಿ ಮಾಡಿತ್ತು. ತೊಂದರೆಗೆ ಒಳಗಾದ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಪೊಲೀಸ್‌ ಮೆಟ್ಟಿಲು ಹತ್ತಿದ್ದರು. ಮುರುಘಾ ಸ್ವಾಮಿ, ಸನಿವಾಸ ಹಾಸ್ಟೆಲ್‌ ವಾರ್ಡನ್‌ ಆಗಿರುವ ರಶ್ಮಿ ಹಾಗೂ ಇತರ ನಾಲ್ವರ ಮೇಲೆ ಕೇಸು ದಾಖಲಾಗಿತ್ತು.

ಸೆಪ್ಟೆಂಬರ್‌ 1ರ ರಾತ್ರಿ ಶ್ರೀಗಳನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಕೆಲವು ದಿನಗಳ ಕಾಲ ಅವರನ್ನು ಪೊಲೀಸ್‌ ಕಸ್ಟಡಿಯಲ್ಲಿಟ್ಟು ವಿಚಾರಣೆ ನಡೆಸಿದ ಬಳಿಕ ಚಿತ್ರದುರ್ಗದ ಜೈಲಿಗೆ ಹಾಕಲಾಗಿತ್ತು. ಅವರ ವಿರುದ್ಧ 761 ಪುಟಗಳ ಚಾರ್ಜ್‌ಶೀಟ್‌ ದಾಖಲಾಗಿತ್ತು. ಮುರಘಾ ಸ್ವಾಮಿ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಲವು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿ, ನಿರಾಕರಣೆಗೆ ಒಳಗಾದ ಬಳಿಕ ಬುಧವಾರ (ನವೆಂಬರ್‌ 15) ಹೈಕೋರ್ಟ್‌ ಒಂದು ಪ್ರಕರಣದಲ್ಲಿ ಜಾಮೀನು ನೀಡಿತ್ತು. ಇನ್ನೊಂದು ಪ್ರಕರಣದ ವಿಚಾರಣೆ ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯದಲ್ಲಿ ಗುರುವಾರ ನಡೆದಿದೆ. ಮೊದಲ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದರಿಂದ ಎರಡನೇ ಪ್ರಕರಣದಲ್ಲೂ ಜಾಮೀನು ಸಿಗುತ್ತದೆ ಎಂಂದು ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ:ಮುರುಘಾ ಸ್ವಾಮೀಜಿಗೆ ಸೆಪ್ಟೆಂಬರ್ 27 ರವರೆಗೆ ನ್ಯಾಯಾಂಗ ಬಂಧನ

ಮುರಘಾ ಸ್ವಾಮಿಗೆ ಹಲವು ಷರತ್ತು

  • ಶಿವಮೂರ್ತಿ ಮುರುಘಾ ಸ್ವಾಮಿ ಬಿಡುಗಡೆಗೆ ಹೈಕೋರ್ಟ್‌ ಹಲವು ಷರತ್ತುಗಳನ್ನು ವಿಧಿಸಿದೆ.
  • ಪ್ರಕರಣದ ಸಾಕ್ಷ್ಯಗಳನ್ನು ನಾಶ ಮಾಡುವಂತಿಲ್ಲ, ಪ್ರಭಾವ ಬೀರುವಂತಿಲ್ಲ.
  • ಇಂಥ ಅಪರಾಧ ಕೃತ್ಯ ಪುನರಾವರ್ತನೆ ಮಾಡುವಂತಿಲ್ಲ.
  • ಇಬ್ಬರು ಶೂರಿಟಿ ನೀಡಬೇಕು. ಪಾಸ್‌ಪೋರ್ಟ್ ಕೋರ್ಟ್‌ಗೆ ಸಲ್ಲಿಸಬೇಕು.
  • ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡಬಾರದು, ಕೋರ್ಟ್‌ಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಬೇಕು ಎಂಬ ಷರತ್ತು ವಿಧಿಸಿದೆ. ಪೋಕ್ಸೋ ಪ್ರಕರಣ

ವಿಡಿಯೋ ನೋಡಿ:ಲೈಂಗಿಕ ದೌರ್ಜನ್ಯ ಪ್ರಕರಣ : ಮುರುಘಾ ಸ್ವಾಮೀಜಿ ಮುಂದೆ ಮಂಡಿಯೂರಿದ ಕಾನೂನು! ವಕೀಲರು ಹೇಳುವುದೇನು?

Donate Janashakthi Media

Leave a Reply

Your email address will not be published. Required fields are marked *