ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸೋಲಿನ ನಂತರ ಕಾರ್ಮೋಡ ಕವಿದಿದ್ದ ಕರ್ನಾಟಕ ಬಿಜೆಪಿ ಪಾಳೆಯದಲ್ಲಿ ಮತ್ತೆ ಉತ್ಸಾಹ, ಸಂಭ್ರಮ ಚಿಗುರೊಡೆದಿದೆ. ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ವೀರಶೈವ ಲಿಂಗಾಯತ ಸಮುದಾಯದ ಯುವ ಮುಖಂಡ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದ ನಂತರ ಮಂಕು ಬಡಿದಿದ್ದ ಕಮಲ ಪಾಳಯದಲ್ಲಿ ಮಿಂಚಿನ ಸಂಚಾರವಾದಂತಾಗಿದೆ. ಕಮಲ
ಇಂದು ಪದಗ್ರಹಣ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರರಾಗಿರುವ ಶಿಕಾರಿಪುರ ಕ್ಷೇತ್ರದ ಶಾಸಕ ಬಿವೈ ವಿಜಯೇಂದ್ರ ಇಂದು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಪದಗ್ರಹಣ ಸಮಾರಂಭ ನಡೆಯಲಿದೆ.
ಇದನ್ನೂ ಓದಿ:ಕರ್ನಾಟಕ ಬಿಜೆಪಿಯ ನೂತನ ಅಧ್ಯಕ್ಷರಾಗಿ ಬಿ.ಎಸ್. ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆಯ್ಕೆ
ಬಿಜೆಪಿ ಕಚೇರಿಯಲ್ಲಿ ಹೋಮ, ಹವನ: ಅದಕ್ಕೂ ಮೊದಲು ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೇಂದ್ರರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗುತ್ತದೆ. ಬಳಿಕ ಗೋಪೂಜೆ ನೆರರೇವರಿಸಲಿದ್ದಾರೆ. ಬೆಳಗ್ಗೆ ಪೂರ್ಣಾಹುತಿಯಲ್ಲಿ ನಿಯೋಜಿತ ಅಧ್ಯಕ್ಷ ವಿಜಯೇಂದ್ರ ಭಾಗಿಯಾಗಲಿದ್ದಾರೆ. ಗಣಪತಿ ಹೋಮದ ಪೂರ್ಣಾಹುತಿ ನಂತರ ವಿಜಯೇಂದ್ರಗೆ ಹಾಲಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ನಿನ್ನೆ ರಾತ್ರಿಯಿಂದಲೇ ಪೂಜೆ, ಹೋಮ ಹವನಗಳು ನೆರವೇರುತ್ತಿದೆ.
ಬಿಜೆಪಿ ಕಚೇರಿಯಿರುವ ಮಲ್ಲೇಶ್ವರಂನಲ್ಲಿ ರಸ್ತೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸುತ್ತಿವೆ. ಎಲ್ಲೆಲ್ಲೂ ವಿಜಯೇಂದ್ರ ಪೋಸ್ಟರ್ಗಳು ಮಿಂಚುತ್ತಿವೆ. ಅಲ್ಲದೇ ಬಿಜೆಪಿ ಕಚೇರಿ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಕಮಲಪಾಳಯದಲ್ಲಿ ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಬಿ.ವೈ.ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ ಖುದ್ದು ಕರೆ ಮಾಡಿ ಪದಗ್ರಹಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಸಚಿವರು, ಜಿಲ್ಲಾಧ್ಯಕ್ಷರು ಸೇರಿ ಹಲವರಿಗೆ ವಿಜಯೇಂದ್ರ ಅವರೇ ಕರೆ ಮಾಡಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.
ತಂದೆ ಭೇಟಿ ಮಾಡಿದ ವಿಜಯೇಂದ್ರ: ಇಂದು ಪದಗ್ರಹಣಕ್ಕೆ ಮುನ್ನ ವಿಜಯೇಂದ್ರ ಅವರು ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿರುವ ಬಿ ಎಸ್ ಯಡಿಯೂರಪ್ಪ ನಿವಾಸ ಧವಳಗಿರಿಗೆ ತೆರಳಿ ತಂದೆಯ ಆಶೀರ್ವಾದ ಪಡೆದರು.
ವಿಡಿಯೋ ನೋಡಿ:ಬಿಜೆಪಿ – ಜೆಡಿಎಸ್ ಗೆ ರಾಜಕೀಯ ಸಿದ್ದಾಂತ ಇಲ್ಲ – ಸಿದ್ದರಾಮಯ್ಯ ಆರೋಪ #Siddaramaiah #BJP #JDS