ಬೆಂಗಳೂರು: ರೆವಿನ್ಯೂ ಇನ್ಸ್ಪೆಕ್ಟರ್ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಸಿಕ್ಕಿ ಬಿದ್ದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಮಾದವಾರ ಸರ್ಕಲ್ ದಾಸನಪುರದ ರೆವಿನ್ಯೂ ಇನ್ಸ್ಪೆಕ್ಟರ್ ವಸಂತ್ ನಾಲ್ಕು ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದುಕೊಂಡಿದ್ದಾರೆ.
ಖಾತ ಪೊಡಿ ಮಾಡಲು ಆರೋಪಿ ರೆವಿನ್ಯೂ ಇನ್ಸ್ಪೆಕ್ಟರ್ ವಂಸತ್ 28 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದರಂತೆ. ಮೊದಲು 3.5 ಲಕ್ಷ ರೂಪಾಯಿಗಳನ್ನು ನಗದು ರೂಪದಲ್ಲಿ ಲಂಚ ಪಡೆದಿದ್ದ ಆರ್ಐ, ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಚೆಕ್ ಸ್ವೀಕರಿಸಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ನಿನ್ನೆ ರಾತ್ರಿ ಮತ್ತೆ ನಾಲ್ಕು ಲಕ್ಷ ರೂಪಾಯಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ದರ್ಶಿನಿ ಹೊಟೇಲ್ ನಲ್ಲಿ ಲಂಚ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಲು ಟ್ರ್ಯಾಪ್ ಮಾಡಿದ್ದಾರೆ. ಪ್ರಕರಣದಲ್ಲಿ ವಸಂತ್ ಹಾಗೂ ಅವರ ಖಾಸಗಿ ಕಾರು ಚಾಲಕ ಸೇರಿದಂತೆ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ರೆವಿನ್ಯೂ ಇನ್ಸ್ಪೆಕ್ಟರ್ ಟ್ರ್ಯಾಪ್ ಆದ ಬಳಿಕ ಲೋಕಾಯುಕ್ತ ಪೊಲೀಸರು ಅಧಿಕಾರಿಯ ನಿವಾಸದ ಮೇಲೂ ದಾಳಿ ಮಾಡಿ ಶೋಧ ನಡೆಸಿದ್ದಾರೆ. ನಿವಾಸದಲ್ಲಿ 9 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದ್ದು, ಈ ಹಣವನ್ನೂ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಲೋಕಾಯುಕ್ತ ಎಸ್ ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸುಂಕದಕಟ್ಟೆಯ ಬೆಟ್ಟಸ್ವಾಮಿ ಗೌಡ ಎಂಬುವರು ನೀಡಿದ ಮೇರೆಗೆ ಅಧಿಕಾರಿಯನ್ನು ಟ್ರ್ಯಾಪ್ ಮಾಡಿದ್ದಾರೆ.