ತಮಿಳುನಾಡು | ವಿದ್ಯಾರ್ಥಿಗಳಿಗೆ ಥಳಿಸಿದ ಬಿಜೆಪಿ ನಾಯಕಿ ರಂಜನಾ ನಾಚಿಯಾರ್; ಬಂಧನ

ಚೆನ್ನೈ: ಕಾಂಚೀಪುರಂನ ಕುಂದ್ರತ್ತೂರಿನ ಬಳಿ ಸರ್ಕಾರಿ ಬಸ್‌ನಲ್ಲಿ ಶಾಲಾ-ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಥಳಿಸಿದ ಆರೋಪದಲ್ಲಿ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ರಂಜನಾ ನಾಚಿಯಾರ್ ಅವರನ್ನು ಮಾಂಗಾಡು ಪೊಲೀಸರು ಶನಿವಾರದಂದು ಬಂಧಿಸಿದ್ದಾರೆ. ರಂಜನಾ ಅವರು ಬಸ್ ಕಂಡಕ್ಟರ್‌ನನ್ನೂ ಅವಾಚ್ಯವಾಗಿ ನಿಂದಿಸಿದ್ದು, ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದಿರುವುದು, ವಿದ್ಯಾರ್ಥಿಗಳಿಗೆ ಕಪಾಳಮೋಕ್ಷ, ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ನವೆಂಬರ್ 3 ರ ಶುಕ್ರವಾರದಂದು  ಸರ್ಕಾರಿ ಬಸ್ಸನ್ನು ತಡೆದಿದ್ದ ರಂಜನಾ ಅವರು ವಿದ್ಯಾರ್ಥಿಗಳಿಗೆ ಥಳಿಸಿದ್ದರು. ಸರ್ಕಾರಿ ಬಸ್‌ನಲ್ಲಿ ತುಂಬಿದ್ದ ವಿದ್ಯಾರ್ಥಿಗಳು ಬಸ್‌ನ ಮೆಟ್ಟಿಲ ಮೇಲೆ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಇದನ್ನು ಗಮನಿಸಿದ್ದ ರಂಜನಾ ಅವರು ವಿದ್ಯಾರ್ಥಿಗಳನ್ನು ಬಲವಂತವಾಗಿ ಇಳಿಯುವಂತೆ ಒತ್ತಾಯಿಸಿದ್ದರು. ಈ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ತಮಿಳುನಾಡು

ಇದನ್ನೂ ಓದಿ: ತೆಲಂಗಾಣ | ಆಡಳಿತರೂಢ ಬಿಆರ್‌ಎಸ್‌ಗೆ ಓವೈಸಿ ಬೆಂಬಲ

ವಿಡಿಯೊದಲ್ಲಿ ವಿದ್ಯಾರ್ಥಿಗಳು ಬಸ್‌ನ ಮೆಟ್ಟಿಲ ಮೇಲೆ ಅಪಾಯಕಾರಿಯಾಗಿ ನೇತಾಡುತ್ತಿರುವುದು ದಾಖಲಾಗಿದೆ. ನಂತರ ಬಸ್ಸನ್ನು ತಡೆದು ನಿಲ್ಲಿಸಿದ ರಂಜನಾ ಅವರು, ಬಸ್ ಡ್ರೈವರ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿ ವಾಗ್ವಾದ ನಡೆಸಿದ್ದರು. ನಂತರ ಮಟ್ಟಿಲ ಬಳಿ ಬಂದ ಅವರು ವಿದ್ಯಾರ್ಥಿಗಳನ್ನು ಬಸ್‌ನಿಂದ ಇಳಿಯುವಂತೆ ಎಳೆದಾಡಿದ್ದಾರೆ. ಈ ವೇಳೆ ಕೆಲವು ವಿದ್ಯಾರ್ಥಿಗಳು ಇಳಿಯಲು ನಿರಾಕರಿಸಿದಾಗ ಅವರನ್ನು ಬಲವಂತವಾಗಿ ಹೊರಗೆಳೆದು ಥಳಿಸಿದ್ದಾರೆ. ಜೊತೆಗೆ ಬಸ್ಸಿನ ಕಂಡಕ್ಟರ್‌ಗೂ ರಂಜನಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಇದನ್ನೂ ಓದಿ: ಆಂಧ್ರಪ್ರದೇಶ | ಜಾತಿ ಗಣತಿಗೆ ಅನುಮೋದನೆ ನೀಡಿದ ರಾಜ್ಯ ಸಂಪುಟ

ಮಾಧ್ಯಮ ವರದಿಗಳ ಪ್ರಕಾರ, ಮಾಂಗಾಡು ಪೊಲೀಸ್ ಠಾಣೆಯಲ್ಲಿ ರಂಜನಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 341, 323, 353 ಮತ್ತು 75ಜೆ (ಮಕ್ಕಳ ಮೇಲಿನ ಕ್ರೌರ್ಯಕ್ಕೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶನಿವಾರ ಅವರ ಮನೆಯಿಂದ ಬಂಧಿಸಲು ಪ್ರಯತ್ನಿಸಿದಾಗ ಪೊಲೀಸರೊಂದಿಗೂ ರಂಜನಾ ಅವರು ವಾಗ್ವಾದ ನಡೆಸಿದ್ದಾರೆ. ತಾನು ಮನೆಯ ಕೋಣೆಯ ಒಳಗೆ ಬಟ್ಟ ಬದಲಾಯಿಸುತ್ತಿದ್ದಾಗ ಪುರುಷ ಪೊಲೀಸ್ ಅಧಿಕಾರಿಗಳು ತನ್ನ ಮನೆಯ ಕಿಟಕಿಗೆ ಬಡಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಮಿಳುನಾಡು

ಅವರು ತನ್ನ ಬಂಧನದ ವಾರಂಟ್‌ ಅನ್ನು ಕೇಳುತ್ತಿರುವ ವಿಡಿಯೊ ಕೂಡಾ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿಲ್ಲ, ಆದರೆ ಎಫ್‌ಐಆರ್ ಮಾತ್ರ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ ಎಂದು ನ್ಯೂಸ್‌ ಮಿನಿಟ್ ವರದಿ ಹೇಳಿದೆ.

ವಿಡಿಯೊ ನೋಡಿ: ಗಾಜಾಪಟ್ಟಿಯನ್ನು ಇಸ್ರೇಲ್ ಗೆಲ್ಲುತ್ತಾ? ಪ್ಯಾಲಿಸ್ಟೈನ್ ತಿರುಗಿ ಬಿದ್ದರೆ ಏನಾಗಬಹುದು?

Donate Janashakthi Media

Leave a Reply

Your email address will not be published. Required fields are marked *