ನವದೆಹಲಿ: ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಈ ಹಿಂದೆ ನೀಡಿದ್ದ ನಿರೀಕ್ಷಣಾ ಹಾಗೂ ಮಧ್ಯಂತರ ಜಾಮೀನನ್ನು ಸುಪ್ರೀಂಕೋರ್ಟ್ ಬುಧವಾರ ಖಾಯಂ ಗೊಳಿಸಿದೆ. ಅವರಿಗೆ ನೀಡಿರುವ ಜಾಮೀನನ್ನು ವಿರೋಧಿಸಿ ಕೇಂದ್ರ ಹಾಗೂ ಗುಜರಾತ್ ಸರ್ಕಾರಗಳು ಹಾಕಿದ್ದ ಅರ್ಜಿಗಳನ್ನು ಇದೇ ವೇಳೆ ಕೋರ್ಟ್ ವಜಾ ಮಾಡಿದೆ.
ಪ್ರಕರಣದಲ್ಲಿ ಭಾರಿ ಸಮಯ ಕಳೆದುಹೋಗಿದೆಯಾದರೂ ಯಾವುದೇ ಆರೋಪಪಟ್ಟಿ ಈವರೆಗೆ ಸಲ್ಲಿಸಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಹೇಳಿದೆ. ಪ್ರಕರಣದಲ್ಲಿ ನ್ಯಾಯಾಲವು ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ನೀಡಿದೆ.
ಇದನ್ನೂ ಓದಿ: ಬಿಜೆಪಿ ಸಂಸದರು ರಾಜ್ಯ ಸರ್ಕಾರವನ್ನು ಟೀಕಿಸುವ ಬದಲು ಕೇಂದ್ರದೊಂದಿಗೆ ಮಾತನಾಡಿ| ಸಿಎಂ ಸಿದ್ದರಾಮಯ್ಯ
ಪ್ರಕರಣಕ್ಕೆ ಸಂಬಂಧಿಸಿದ ಇತರೆ ಪೂರಕ ಪ್ರಕರಣಗಳಲ್ಲಿಯೂ ಅವರಿಗೆ ನ್ಯಾಯಾಲಯಗಳು ಜಾಮೀನು ನೀಡಿದ್ದರಿಂದ ಪ್ರಕರಣದಲ್ಲಿ ಏನೂ ಉಳಿದಿಲ್ಲ ಎಂದು ನ್ಯಾಯಾಲಯವು ಹೇಳಿದೆ. ತೀಸ್ತಾ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ಗುಜರಾತ್ ಪೊಲೀಸರು ಸಲ್ಲಿಸಿದ್ದ ಮನವಿಯನ್ನೂ ಸುಪ್ರೀಂ ಕೋರ್ಟ್ ವಜಾ ಮಾಡಿದೆ.
“ಚಾರ್ಜ್‌ಶೀಟ್ ಇನ್ನೂ ಸಲ್ಲಿಕೆಯಾಗಿಲ್ಲ. ಇದಕ್ಕೆ ಕಾರಣ ಪ್ರತಿವಾದಿಗಳ ಕಡೆಯಿಂದ ಅಸಹಕಾರ ಎಂದು ಅಸಿಸ್ಟೆಂಟ್ ಸಾಲಿಟರ್ ಜನರಲ್ ಹೇಳಿದ್ದಾರೆ. ಅದು ಇರಲಿ. ತನಿಖೆಗೆ ಸಹಕರಿಸಲು ಪ್ರತಿವಾದಿಗಳಿಗೆ ನಿರ್ದೇಶಿಸಲು ಸೂಕ್ತ ಆದೇಶವನ್ನು ರವಾನಿಸಲಾಗುತ್ತದೆ. ಈಗಾಗಲೇ ನೀಡಿರುವ ಆದೇಶವನ್ನು ಖಾಯಂ ಮಾಡಲಾಗಿದೆ,” ಎಂದು ಪೀಠ ಹೇಳಿದೆ.
ಅಹಮದಾಬಾದ್‌ನ ಗುಲ್ಬರ್ಗ್ ಹೌಸಿಂಗ್ ಸೊಸೈಟಿಯಲ್ಲಿ ಸಂಭವಿಸಿದ 2002ರ ಕೋಮುಗಲಭೆಯಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಸ್ಮರಣಾರ್ಥ “ಮ್ಯೂಸಿಯಂ ಆಫ್ ರೆಸಿಸ್ಟೆನ್ಸ್” ನಿರ್ಮಿಸಲು ಸಂಗ್ರಹಿಸಲಾದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತೀಸ್ತಾ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ತೀಸ್ತಾ ಸೆಟಲ್ವಾಡ್ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ.
ವಿಡಿಯೊ ನೋಡಿ: ಕರ್ನಾಟಕ ರಾಜ್ಯೋತ್ಸವ : ಜನರ ಬದುಕಿನ ಪ್ರಶ್ನೆಗಳು ಯಾಕಿಲ್ಲ? – ಜಿ.ಎನ್ ನಾಗರಾಜ ಅವರ ವಿಶ್ಲೇಷಣೆ