ಅನಿಶ್ಚಿತ ಉದ್ಯೋಗ, ಕಡಿಮೆ ವರಮಾನ ಮತ್ತು ಬಿಟ್ಟಿ ದುಡಿಮೆ ಭಾರತದ ಅರ್ಥವ್ಯವಸ್ಥೆಯನ್ನು ಕಾಡುತ್ತಿವೆ

ಸುಬೋಧ್ ವರ್ಮಾ
ಸಂಗ್ರಹಾನುವಾದ:ಜಿ.ಎಸ್‍.ಮಣಿ
(ಕೃಪೆ: ನ್ಯೂಸ್‍ಕ್ಲಿಕ್, ಅಕ್ಟೋಬರ್22)

2022-23 ರಲ್ಲಿ ದೇಶದಲ್ಲಿ ಉದ್ಯೋಗದ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಸರಕಾರ ಬೆನ್ನು ತಟ್ಟಿಕೊಳ್ಳಲು ಆರಂಭಿಸಿದೆ. ಅದರ ಈ ಆಶಾಭಾವನೆಗೆ ಆಧಾರ ಇತ್ತೀಚೆಗೆ ಪ್ರಕಟಗೊಂಡಿರುವ ಉದ್ಯೋಗಾವಕಾಶಗಳನ್ನು ಕುರಿತ ಪಿ.ಎಲ್‍.ಎಫ್‍.ಎಸ್‍ ವರದಿ, ಅಂದರೆ ‘ಆವರ್ತಕ ಶ್ರಮ ಶಕ್ತಿ ಸಮೀಕ್ಷೆ’ಯ ವರದಿ. ಆದರೆ ಈ ವರದಿಯನ್ನು ವಿವರವಾಗಿ ಪರಿಶೀಲಿಸಿದರೆ ಅಂತಹ ಆಶಾಭಾವನೆಗೆ ಏನೂ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ. ಒಟ್ಟಾರೆ ಹೇಳುವುದಾದರೆಉದ್ಯೋಗ ಪರಿಸ್ಥಿತಿ ಗಂಭೀರ ಮತ್ತು ಯಾತನಾಮಯವಾಗಿಯೇ ಇದೆ. ಸಂಪಾದನೆಗಳು ಒಂದು ಘನತೆಯುಳ್ಳ ಜೀವನ ನಡೆಸಲು ಸಾಲದವು ಮತ್ತು ಕೆಲಸದ ಕಾರ್ಪಣ್ಯಗಳಿಗೆ ತಕ್ಕುದಾಗಿಲ್ಲ. ಜನರು ಹೇಗಾದರೂ ಬದುಕುಳಿಯಲು ಸಿಕ್ಕ ಕೆಲಸಗಳನ್ನು ಮಾಡುವ ಹಂಗಿನಲ್ಲೇ ಇದ್ದಾರೆ. ಈ ಕ್ರೂರ ವಾಸ್ತವವನ್ನು ಅರಿತು ನೀತಿ ನಿರೂಪಕರು ವಿವೇಚನೆಯಿಂದ ನಡೆದುಕೊಳ್ಳುವ ಅವಶ್ಯಕತೆಯಿದೆ. ವರಮಾನ

ಪ್ರಮುಖ ರಾಜ್ಯಗಳ ಚುನಾವಣೆಗಳು ಹತ್ತಿರ ಬಂದಿರುವಾಗ ಆಡಳಿತಾರೂಢ ಬಿಜೆಪಿಗೆ ತನ್ನ ವೈಫಲ್ಯಗಳ ಭೂತಗಳು ಬೆಂಬಿಡದೆ ಕಾಡುತ್ತಿರುವಂತಿದೆ. 2019 ರಿಂದಲೇ ನಿರುದ್ಯೋಗವೆಂಬುದು ಹೆಚ್ಚುತ್ತಲೇ ಇದೆ. ಕೋರೋನ ಸಾಂಕ್ರಾಮಿಕದ ಕಾಲದ ಅರ್ಥ ವ್ಯವಸ್ಥೆ ಮುಚ್ಚುವಿಕೆಯಿಂದ ಅದು ಇನ್ನೂ ತೀವ್ರವಾಗುತ್ತ ಹೋಯಿತು. ಸರ್ಕಾರದ ಕಾಳಜಿ-ಹೀನ ಧೋರಣೆ ಅದನ್ನು ಇನ್ನೂ ದೊಡ್ಡ ಸಮಸ್ಯೆಯಾಗಿಸಿತು. ಈಗ ಅದು ಸಾರ್ವಜನಿಕ ಜೀವನದಲ್ಲಿ ದಿನನಿತ್ಯದ ಮಾತಾಗಿ ರೂಪುಗೊಳ್ಳುತ್ತಿರುವಾಗ ಸರ್ಕಾರಕ್ಕೆ ತನ್ನ ವೋಟು ಬ್ಯಾಂಕಿನ ಚಿಂತೆ ಕಾಡತೊಡಗಿದೆ. ಆದರೆ ಇತ್ತೀಚೆಗೆ ಬಿಡುಗಡೆ ಆಗಿರುವ ಸರ್ಕಾರಿ ವರದಿಯೊಂದು ಆಶಾಭಾವನೆ ಮೂಡಿಸಿದೆ ಎಂದು ಸರಕಾರ ಭಾವಿಸುತ್ತಿರುವಂತಿದೆ. ಇದು ದೇಶದಲ್ಲಿನ ಉದ್ಯೋಗ ಪರಿಸ್ಥಿತಿ ಬಗೆಗೆ ಹೇಳುತ್ತಿವ ವರದಿ. ಅದರಲ್ಲೂ ಎರಡು ಮುಖ್ಯ ಸೂಚಿಗಳ ಬಗೆಗೆ- ಶ್ರಮಿಕರ ಭಾಗವಹಿಸುವಿಕೆ ಮತ್ತು ಕಾರ್ಮಿಕ ಮತ್ತು ಜನಸಂಖ್ಯೆ ಅನುಪಾತದ ಬಗ್ಗೆ. ಈ ಎರಡೂ ಸೂಚಿಗಳಲ್ಲಿ ಸುಧಾರಣೆ ಇದೆ ಎಂಬುದೇ ಈ ಮಾತು. ಅಲ್ಲದೆ ನಿರುದ್ಯೋಗ ಕಡಿಮೆಯಾಗಿದೆ ಎಂಬುದು ಇನ್ನೊಂದು. ಈ ವರದಿಯ ಹೆಸರು PLFS (ಪಿಎಲ್‍ಎಫ್‍ಎಸ್)2022-23, ಅಂದರೆ ‘ಆವರ್ತಕ ಶ್ರಮ ಶಕ್ತಿ ಸಮೀಕ್ಷೆ’. ಈ ವರದಿಯ ಆಧಾರ ಒಂದು ಲಕ್ಷ ಮನೆಗಳ 4.2 ಲಕ್ಷ ಜನಗಳ ಸಮೀಕ್ಷೆ.

ಈ ವರದಿಯನ್ನು ವಿವರವಾಗಿ ನೋಡಿದಾಗ ಸರ್ಕಾರದ ಆಶಾಭಾವಕ್ಕೆ ಯಾವುದೇ ಅವಕಾಶ ಇದರಲ್ಲಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ವರದಿ ಬಿಟ್ಟಿ ದುಡಿಮೆ, ಅದರಲ್ಲೂ ಮಹಿಳೆಯರದು,ಹೆಚ್ಚಾಗಿದೆ ಮತ್ತು ಹೆಚ್ಚಾಗುತ್ತಿದೆ ಎಂಬುದನ್ನು ಮತ್ತು ಕೃಷಿ ವಲಯ ಉದ್ಯೋಗ ಹೆಚ್ಚಳದ ಅಂಗಳವಾಗುತ್ತಿದೆ, ಜೊತೆಗೆ ಕಡಿಮೆ ಆದಾಯದ ಸ್ವ-ಉದ್ಯೋಗಗಳು ಇಂದಿನ ದುಡಿಮೆ ಲೋಕದ ಬೆನ್ನೆಲುಬಾಗುತ್ತಿವೆ ಎಂಬುದನ್ನೂ ಬಿಂಬಿಸುತ್ತಿದೆ.

2020 ಮತ್ತು 2022 ರ ಅವಧಿ ಸಾಂಕ್ರಾಮಿಕದ ದಿನಗಳಾದ್ದರಿಂದ ಉದ್ಯೋಗ ಪರಿಸ್ಥಿತಿ ಹದಗೆಟ್ಟಿತ್ತು ಎಂಬುದು ಗೊತ್ತಿರುವುದರಿಂದ ಪಿಎಲ್‍ಎಫ್‍ಎಸ್2022-23ರ ವರದಿಯನ್ನು ಅದರದೇ 2018-19ರ ವರದಿಯೊಂದಿಗೆ ಹೋಲಿಸಿ ನೋಡಿದರೆ ಹೆಚ್ಚು ಅರ್ಥಗಳು ಹೊಮ್ಮುತ್ತವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಉದ್ಯೋಗ ಪರಿಸ್ಥಿತಿ ಹೇಗೆ ಬದಲಾಗಿದೆ ಎಂಬುದನ್ನೂ ಇದು ಸೂಚಿಸುತ್ತದೆ. LFPR (ಶ್ರಮ ಶಕ್ತಿ ಭಾಗವಹಿಸುವಿಕೆಯ ದರ) ಜನಸಂಖ್ಯೆಯ ದುಡಿವವರ ಮತ್ತು ಕೆಲಸ ಬಯಸುವವರ ಪ್ರಮಾಣ ಶೇ 50 ರಿಂದ ಶೇ 58 ಕ್ಕೆ ಈ ಅವಧಿಯಲ್ಲಿ ಹೆಚ್ಚಿದೆ. ಒಟ್ಟು ಜನಸಂಖ್ಯೆಯಲ್ಲಿ ದುಡಿವ ಜನಸಂಖ್ಯೆಯ ಪ್ರಮಾಣ(ಡಬ್ಲ್ಯುಪಿಆರ್) ಶೇ 35ರಿಂದ ಶೇ 41ಕ್ಕೆ ಏರಿದೆ. ಪ್ರಸಕ್ತ ಪಿಎಲ್‍ಎಫ್‍ಎಸ್‌ ಪ್ರಕಾರ ಮಹಿಳೆಯರ ಪಾಲು ಶೇ 25 ರಿಂದ ಶೇ 37 ಕ್ಕೆ ಏರಿದೆ. ಹಾಗೆಯೇ ಮಹಿಳೆಯರ ದುಡಿವ ಜನಸಂಖ್ಯೆಯ  ಪ್ರಮಾಣ (ಡಬ್ಲ್ಯುಪಿಆರ್) ಶೇ 18 ರಿಂದ ಶೇ 27 ಕ್ಕೆ ಏರಿದೆ.

ಹೆಚ್ಚಿದ ‘ಸ್ವ-ಉದ್ಯೋಗ’

ಉದ್ಯೋಗಗಳನ್ನು ನೋಡಿದರೆ, 2018-19 ರಲ್ಲಿ ಒಟ್ಟು ಉದ್ಯೋಗಗಳಲ್ಲಿ ಸ್ವ-ಉದ್ಯೋಗ ಮಾಡುವವರು ಶೇ 52 ರಷ್ಟಿದ್ದರು, ಸಂಬಳ ಪಡೆಯುವವರು ಶೇ 24 ರಷ್ಟು ಮತ್ತು ದಿನಗೂಲಿಗಳು ಶೇ 24 ರಷ್ಟು. 2022-23 ರ ಹೊತ್ತಿಗೆ ಸ್ವ-ಉದ್ಯೋಗಿಗಳ ಪ್ರಮಾಣ ಶೇ 57 ಕ್ಕೆ ಏರಿತ್ತು ಸಂಬಳ ಪಡೆಯುವವರ ಮತ್ತು ದಿನಗೂಲಿಗಳ ಪ್ರಮಾಣ ಇಳಿದಿತ್ತು.

ಸ್ವ-ಉದ್ಯೋಗ ಮಾಡುವವರೆಂದರೆ ಕೃಷಿ ಕೆಲಸಗಳು, ಚಿಲ್ಲರೆ ಅಂಗಡಿ, ರಿಕ್ಷಾ ಓಡಿಸುವುದು, ರಿಪೇರಿ ಕೆಲಸ, ಬೇರೆ ಬೇರೆ ತರಹದ ಸೇವೆಗಳನ್ನು ಒದಗಿಸುವುದು ಹೀಗೆ ಬೆರಗುಗೊಳಿಸುವಷ್ಟು ತರಹೇವಾರಿ ಕೆಲಸ ಮಾಡುವವರು. ಇವರು ಯಾವುದೇ ಸಾಮಾಜಿಕ ಭದ್ರತೆ ಇಲ್ಲದೆ ಪುಡಿಗಾಸಿಗಾಗಿ ದುಡಿಯುವವರು. ಇದರ ಅರ್ಥ ಹೆಚ್ಚಿದ ಉದ್ಯೋಗಗಳೆಂದರೆ ಕೆಲಸ ಸಿಕ್ಕರೆ ಸಾಕೆಂಬ ಹತಾಶೆಯಿಂದ, ಬದುಕಿ ಉಳಿಯಲು ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ, ಅದರಿಂದಾಗಿಯೇ ಉದ್ಯೋಗಗಳ ಸಂಖ್ಯೆ ಹೆಚ್ಚಾಗಿರುವಂತೆ ಕಾಣುತ್ತದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!

ಮಹಿಳೆಯರಿಗೆ ಹೆಚ್ಚಿದ್ದು ಬಿಟ್ಟಿ ದುಡಿಮೆ ‘ಅವಕಾಶ’!

ಪುರುಷರು ಮತ್ತು ಮಹಿಳೆಯರಿಗೆ ದೊರೆಯುವ ಕೆಲಸಗಳಲ್ಲಿನ ವ್ಯತ್ಯಾಸ ಚಿಂತಾಜನಕವಾಗಿದೆ. ಸ್ವ-ಉದ್ಯೋಗಗಳಲ್ಲಿ ಮಹಿಳೆಯರ ಪಾಲು 2018-19ರಲ್ಲಿ ಶೇ 53 ಇದ್ದದ್ದು 2022-23 ರಲ್ಲಿ ಶೇ 65ಕ್ಕೆ ಏರಿದೆ. ಇದೇ ಅವಧಿಯಲ್ಲಿ ನಿಯಮಿತ ಸಂಬಳದ ಉದ್ಯೋಗಗಳಲ್ಲಿ ಮಹಿಳೆಯರ ಪಾಲು ಶೇ 22 ರಿಂದ ಶೇ 16 ಕ್ಕೆ ಕುಸಿದಿದೆ. ಹಾಗೆಯೇ ದಿನಗೂಲಿ ಕೆಲಸಗಳಲ್ಲಿ ಶೇ 25 ರಿಂದ ಶೇ 19 ಕ್ಕೆ ಕುಸಿದಿದೆ.

ವರದಿ ಸ್ವ-ಉದ್ಯೋಗ ಮಾಡುವವರು ಯಾರು, ಎಷ್ಟು ಎಂಬ ವಿವರ ಕೊಡುತ್ತದೆ. ತಮಗಾಗಿಯೇ ಕೆಲಸ ಮಾಡುವವರು ಅಥಾವ ಉದ್ಯೋಗದಾತರು ಒಂದು ಕಡೆಯಾದರೆ, ಇನ್ನೊಂದು ಕಡೆ, ‘ಕುಟುಂಬದ ಕೆಲಸಗಳಲ್ಲಿ/ ಕಸುಬಿನಲ್ಲಿ ಸಹಾಯ ಮಾಡುವವರು’.ಇವರು ಬಿಟ್ಟಿ ದುಡಿಮೆಯವರು, ಯಾಕೆಂದರೆ ಕುಟುಂಬದ ಸಾಮೂಹಿಕ ಶ್ರಮದಲ್ಲಿ ಕೈ ಸೇರಿಸುವವರು. ಸ್ವ-ಉದ್ಯೋಗಿ ಮಹಿಳೆಯರಲ್ಲಿ  ತಮಗಾಗಿಯೇ ಕೆಲಸ ಮಾಡುವವರ ಸಂಖ್ಯೆ  2018-19 ರಲ್ಲಿ ಶೇ 23 ರಷ್ಟು ಇದ್ದರೆ 2022-23 ರಲ್ಲಿ ಶೇ 28 ಕ್ಕೆ ಏರಿತ್ತು. ಇದೇ ಅವಧಿಯಲ್ಲಿ ಬಿಟ್ಟಿ ದುಡಿಮೆಯ ಸಹಾಯಕರ ಪ್ರಮಾಣ ಶೇ 31 ರಿಂದ ಶೇ 38 ಕ್ಕೆ ಏರಿತ್ತು. (ಕೆಳಗಿನ ಚಾರ್ಟ್ ನೋಡಿ)

ಸ್ವ-ಉದ್ಯೋಗಿ ಮಹಿಳೆಯರ %

ಸ್ವಂತ ಕೆಲಸ ಮಾಡುವವರು & ಉದ್ಯೋಗದಾತರು *ಕುಟುಂಬ ಕಸುಬುಗಳಲ್ಲಿ* ಒಟ್ಟುಸ್ವ-ಉದ್ಯೋಗಿಗಳು

ದುಡಿಮೆಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂಬ ಘನಂಧಾರಿ ಹೇಳಿಕೆಯ ಒಳ ಅರ್ಥ ಇಲ್ಲಿ ಅಡಗಿದೆ. ಅತ್ಯಂತ ಕಡಿಮೆ ಪ್ರಮಾಣದ ದುಡಿಮೆ ಇರುವಲ್ಲಿ, ಅದೂ ಹಣದುಬ್ಬರದಿಂದ ಕುಸಿದ ಮೌಲ್ಯದಲ್ಲಿ, ಜೊತೆಗೆ ಸರಿಯಾದ ಉದ್ಯೋಗದ ಕೊರತೆ ಇರುವಾಗ ಮಹಿಳೆಯರು ಸಿಗಬಹುದಾದ ಅಲ್ಪ ಪ್ರತಿಫಲಕ್ಕೆ ಹೆಚ್ಚಿನ ಕೆಲಸ ಮಾಡಿ ಕುಟುಂಬದವರ ಗಳಿಕೆಗೆ ಅಲ್ಪ ಸ್ವಲ್ಪ ಸೇರಿಸುವ ಸಲುವಾಗಿ ಮಾಡುತ್ತಿರುವ ದುಡಿಮೆಗಳು ಈ ‘ಸ್ವ-ಉದ್ಯೋಗಗಳು’. ಚೂರು-ಪಾರು ಕೆಲಸ ಮಾಡಿ ಕೂಡಿಸಿ ಬದುಕುವ ಕೌಟುಂಬಿಕ ಪ್ರಯತ್ನಗಳು ಇವು. ಇಂತಹ ಸ್ವ-ಉದ್ಯೋಗದ ಕೆಲಸಗಳನ್ನು ಹೆಚ್ಚಾಗಿ ಮಹಿಳೆಯರು ಮಾಡುತ್ತಿದ್ದಾರೆ ಎಂಬುದನ್ನೂ ನಾವು ಗಮನಿಸಬೇಕು. ಪುರುಷರ ಸ್ವ-ಉದ್ಯೋಗ ಗಮನಿಸಿದರೆ ಅದು ಶೇ 52 ರಿಂದ ಶೇ 54 ಕ್ಕೆ ಏರಿದೆ. ಈ ಮೊತ್ತದಲ್ಲಿ ಸ್ವಂತಕ್ಕೆ ದುಡಿಮೆ ಮಾಡುವವರ ಪಾಲು ಶೇ 44 ರಿಂದ ಶೇ 44.3 ಕ್ಕೆ ಏರಿದೆ. ಬಿಟ್ಟಿ ದುಡಿಮೆಯ ಪಾಲು ಶೇ 7.6 ರಿಂದ ಶೇ 9.3 ಕ್ಕೆ ಇದೇ ಅವಧಿಯಲ್ಲಿ ಏರಿದೆ.

ಕೃಷಿ ಕೆಲಸ ಮತ್ತು ಕೃಷಿಯೆತರ ಅನೌಪಚಾರಿಕ ವಲಯಗಳಲ್ಲೇ ಹೆಚ್ಚು ಅವಕಾಶ

ಹೆಚ್ಚಿನ ಉದ್ಯೋಗ ನೀಡುವ ವಲಯಗಳನ್ನು ನೋಡಿದರೆ ಜನ ಎಂತಹ ಕೆಲಸಗಳ ಮೇಲೆ ಅವಲಂಬಿತರಾಗುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಕೃಷಿ ವಲಯದಲ್ಲಿ ಉದ್ಯೋಗಗಳು ಶೇ 41 ರಿಂದ ಶೇ 43 ಕ್ಕೆ ಹೆಚ್ಚಳವಾಗಿದೆ. ಸ್ವಲ್ಪ ಹೆಚ್ಚಿನ ಉದ್ಯೋಗ ಹೆಚ್ಚಳ ತೋರುವ ಇನ್ನೊಂದು ವಲಯ ಕಟ್ಟಡ ನಿರ್ಮಾಣ ವಲಯ. ಈ ವಲಯದಲ್ಲಿ ಉದ್ಯೋಗ ಶೇ 12 ರಿಂದ ಶೇ 13 ಕ್ಕೆ ಏರಿದೆ. ಈ ಎರಡೂ ವಲಯಗಳು ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ವಲಯಗಳು. ಅಲ್ಲದೆ ಕೆಲಸದ ಲಭ್ಯತೆ ಹಂಗಾಮುಗಳ ಮೇಲೆ ಅವಲಂಬಿತ. ಸಾಮಾಜಿಕ ಭದ್ರತೆ ಇಲ್ಲ. ಮತ್ತು ಕಠಿಣವಾದ ಕೆಲಸಗಳು. ಇವುಗಳ ಹೊರತಾಗಿ ಬೇರೆ ಎಲ್ಲ ವಲಯಗಳು- ಉತ್ಪಾದನೆ, ವ್ಯಾಪಾರ, ಹೋಟೆಲುಗಳು, ಸಾಗಾಣಿಕೆ ಮತ್ತು ಸಂಪರ್ಕ ಮತ್ತು “ಇತರೆ ಸೇವೆಗಳು” ಅಂದರೆ ಆಡಳಿತಾತ್ಮಕ ಮತ್ತು ಖಾಸಗಿ ಸೇವೆಗಳು, ಶಿಕ್ಷಣ, ಆರೋಗ್ಯ ಇತ್ಯಾದಿ -ಉದ್ಯೋಗಗಳ ಇಳಿತವನ್ನು ಕಂಡಿವೆ.

ಮುಖ್ಯವಾಗಿ ಗಮನಿಸಬೇಕಾದದ್ದು ಕೃಷಿಯೆತರ ವಲಯ. ಒಂದೊಮ್ಮೆ ದೇಶದ ಉದ್ಯೋಗ ಸಮಸ್ಯೆಗಳಿಗೆ ಇದು ರಾಮಬಾಣವೆಂಬಂತೆ ಬಿಂಬಿತವಾಗಿತ್ತು-ಯಾಕೆಂದರೆ ಈ ಅನೌಪಚಾರಿಕ ವಲಯ ಬಹುತೇಕ ಉದ್ಯೋಗಾರ್ಥಿಗಳನ್ನು ಆಕರ್ಷಿಸಿತ್ತು. ಕೆಳಗಿನ ತಖ್ತೆಯನ್ನು ನೋಡಿ. ಈ ತರಹದ ಕೆಲಸಗಳಲ್ಲಿ ಪುರುಷರ ಪಾಲು ಶೇ 72 ರಿಂದ ಶೇ 78ಕ್ಕೆ ಏರಿತು. ಮಹಿಳೆಯರ ಪಾಲು ಶೇ 54 ರಿಂದ ಶೇ 61 ಕ್ಕೆ ಏರಿತು. ಸ್ವ-ಉದ್ಯೋಗಗಳು ಮತ್ತು ಈ ಮೇಲಿನ ಅನೌಪಚಾರಿಕ ವಲಯದ ಉದ್ಯೋಗಗಳನ್ನು ಒಟ್ಟು ಕೂಡಿಸಿ ನೋಡಿದರೆ ದೇಶದಲ್ಲಿ ಅಸ್ಥಿರ ಕೆಲಸಗಳದ್ದೇ ಮೇಲುಗೈ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಕೃಷಿಯೆತರ ಅನೌಪಚಾರಿಕ ವಲಯಗಳಲ್ಲಿ ಉದ್ಯೋಗ %

ಗಂಡಸರು ಹೆಂಗಸರು ವ್ಯಕ್ತಿಗಳು

ಕಡಿಮೆ ಸಂಪಾದನೆ

ಪಿಎಲ್‍ಎಫ್‍ಎಸ್ 2022-23 ವರದಿ  ಬೇರೆ ಬೇರೆ ತರಹದ ಕೆಲಸಗಳಿಂದ ಬರುವ ಸಂಪಾದನೆಯ ಬಗೆಗೆ ನೀಡುವ ಮಾಹಿತಿಗಳು ವಿಚಲಿತಗೊಳಿಸುವಂತದ್ದು. ಈ ವರದಿಗೆ ಕೃಷಿ ಹಂಗಾಮುಗಳನ್ನು ಗಮನದಲ್ಲಿಟ್ಟುಕೊಂಡು ವರ್ಷ ಪೂರ್ತಿ ಪಸರಿಸಿದ್ದ ನಾಲ್ಕು ಸುತ್ತಿನ ದತ್ತಾಂಶ ಸಂಗ್ರಹ ಮಾಡಲಾಯಿತು( ಜುಲೈ 2022 ರಿಂದ ಜೂನ್ 2023 ರ ವರೆಗೆ). ಇವುಗಳ ಸರಾಸರಿ ನೋಡಿದರೆ ಅಲ್ಪ ಸಂಪಾದನೆ, ಪುರುಷ ಮತ್ತು ಮಹಿಳೆಯರ ನಡುವಿನ ಸಂಪಾದನೆಯ ವ್ಯತ್ಯಾಸ, ಗ್ರಾಮೀಣ ಮತ್ತು ನಗರ ಪ್ರದೇಶಗಳ ಸಂಪಾದನೆಯ ವ್ಯತ್ಯಾಸಗಳನ್ನು ಗಮನಿಸಬಹುದು.

ದಿನಗೂಲಿಯೊಬ್ಬನ ದಿನದ ಸರಾಸರಿ ಸಂಪಾದನೆ ಬರೀ 403 ರೂಪಾಯಿಗಳು. ತಿಂಗಳು ಪೂರ್ತಿ ಅಂದರೆ 30 ದಿನಗಳು, ದುಡಿದರೆ ಇದು ತಿಂಗಳಿಗೆ 12075 ರೂಪಾಯಿಗಳಾಗುತ್ತವೆ. ಪುರುಷ ದಿನಗೂಲಿಯ ಸಂಪಾದನೆ ತಿಂಗಳಿಗೆ  12990 ರೂಪಾಯಿಗಳಾದರೆ, ಮಹಿಳಾ ದಿನಗೂಲಿಯ ತಿಂಗಳ ವರಮಾನ 8385 ರೂಪಾಯಿಗಳು. ಸ್ವ-ಉದ್ಯೋಗ ವರ್ಗದಲ್ಲಿ ಸರಾಸರಿ ತಿಂಗಳ ವರಮಾನ 13131 ರೂಪಾಯಿಗಳು. ಪುರುಷರಿಗೆ ತಿಂಗಳ ಸಂಪಾದನೆ 15197 ರೂಪಾಯಿಗಳಾದರೆ ಮಹಿಳೆಯರಿಗೆ ತಿಂಗಳಿಗೆ ಬರೀ 5516 ರೂಪಾಯಿಗಳು. ನಿಯಮಿತ ವೇತನ/ಸಂಬಳ ಪಡೆವವರ ಸರಾಸರಿ ತಿಂಗಳ ಸಂಪಾದನೆ 19492. ಪುರುಷರ ಸಂಪಾದನೆ ತಿಂಗಳಿಗೆ 20666 ರೂಪಾಯಿಗಳಾದರೆ ಮಹಿಳೆಯರದು 15722 ರೂಪಾಯಿಗಳು. ಈ ಶೋಚನೀಯ ಸಮಖ್ಯೆಗಳು ಸರಾಸರಿ ಮಟ್ಟದ್ದು. ಅಂದರೆ. ಹಲವರ ವರಮಾನ ಇದಕ್ಕಿಂತ ಬಹಳ ಕಡಿಮೆ ಇದೆ.ಅಂದರೆ ಲಭ್ಯವಾಗುವ ಉದ್ಯೋಗಗಳು (ಮೇಲೆ ವಿವರಿಸಿದಂತೆ) ಅವಶ್ಯ ವರಮಾನ ನೀಡುವಂತವುಗಳಲ್ಲ ಎಂಬುದು ಸ್ಪಷ್ಟ.

ಐದು ವರ್ಷಗಳ ಹಿಂದಿನ ವರದಿ(2018-19)ಯೊಂದಿಗೆ  ಹೋಲಿಸಿ ನೋಡಿದರೆ ಅದು ಆರ್ಥಿಕ ಸಂಕಷ್ಟದ ಇನ್ನೊಂದು ಆಯಾಮವನ್ನು ತೆರೆದಿಡುತ್ತದೆ. ಸ್ವ-ಉದ್ಯೋಗಿಗಳು ಮತ್ತು ನಿಯಮಿತ ಸಂಬಳದ ದುಡಿಮೆಗಾರರಿಬ್ಬರಿಗೂ ಅವರ ವೇತನ ಹೆಚ್ಚಳ ಅದೇ ಅವಧಿಯಲ್ಲಿನ ಬೆಲೆ ಹೆಚ್ಚಳಕ್ಕಿಂತ ಕಡಿಮೆ ಎಂಬುದು ಕಾಣಬರುತ್ತದೆ. (ಕೆಳಗಿನ ಚಾರ್ಟ್ ನೋಡಿ). ದಿನಗೂಲಿಗಳ ಕೂಲಿ ಹೆಚ್ಚಳ ಸ್ವಲ್ಪ ಉತ್ತಮವಾಗಿದೆ; ಬಹುಶಃ ಅವರ ಕೂಲಿಯೇ ಅತಿ ಕಡಿಮೆ ಇರುವುದರಿಂದ ಇರಬಹುದು. ಬೆಲೆ ಏರಿಕೆಯನ್ನು ಸಂಖ್ಯಾಶಾಸ್ತ್ರ ಮಂತ್ರಾಲಯ ಮತ್ತು ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯಗಳು ನೀಡುವ ದತ್ತಾಂಶವನ್ನು ಬಳಸಿ ಲೆಕ್ಕ ಹಾಕಲಾಗುತ್ತದೆ.

ವರಮಾನಗಳಲ್ಲಿ % ಹೆಚ್ಚಳ ಮತ್ತು ಬೆಲೆಯೇರಿಕೆ

ನಿಯಮಿತ/ಸಂಬಳದ ಉದ್ಯೋಗಕ್ಯಾಷುವಲ್‍ ಉದ್ಯೋಗ ಸ್ವ-ಉದ್ಯೋಗ

ಒಟ್ಟಾರೆ ಹೇಳುವುದಾದರೆ, ಉದ್ಯೋಗ ಪರಿಸ್ಥಿತಿ ಗಂಭೀರ ಮತ್ತು ಯಾತನಾಮಯವಾಗಿಯೇ ಇದೆ. ಸಂಪಾದನೆಗಳು ಒಂದು ಘನತೆಯುಳ್ಳ ಜೀವನ ನಡೆಸಲು ಸಾಲದವು ಮತ್ತು ಕೆಲಸದ ಕಾರ್ಪಣ್ಯಗಳಿಗೆ ತಕ್ಕುದಾಗಿಲ್ಲ. ಜನರು ಹೇಗಾದರೂ ಬದುಕುಳಿಯಲು ಸಿಕ್ಕ ಕೆಲಸಗಳನ್ನು ಮಾಡುವ ಹಂಗಿನಲ್ಲೇ ಇದ್ದಾರೆ. ಈ ಕ್ರೂರ ವಾಸ್ತವವನ್ನು ಅರಿತು ನೀತಿ ನಿರೂಪಕರು ವಿವೇಚನೆಯಿಂದ ನಡೆದುಕೊಳ್ಳುವ ಅವಶ್ಯಕತೆಯಿದೆ.

ಇದು 20 ತಿಂಗಳ ಹಿಂದಿನ ವ್ಯಂಗ್ಯಚಿತ್ರ : ಕೃಪೆ: ಪಂಜುಗಂಗೊಳ್ಳಿ, ಫೇಸ್ಬುಕ್, ಫೆ.2022

 

ವಿಡಿಯೋ ನೋಡಿ: ಖಾಲಿ ಹುದ್ದೆಗಳಿಗೆ ನಿವೃತ್ತಿ ಹೊಂದಿದವರೇ ಮರು ನೇಮಕವಾದರೆ ಯುವಕರ ಗತಿ ಏನು? ಎಂ.ಎನ್‌ ವೇಣುಗೋಪಾಲ್‌ ಜೊತೆ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *