ಬುರ್ಖಾ ಇಲ್ಲದೆ ಬಸ್ ಏರಿದ ಹಿಂದೂ ಮಹಿಳೆಯೊಬ್ಬರನ್ನು ಕೇರಳದ ಮುಸ್ಲಿಂ ಮಹಿಳೆಯರು ಬಸ್ ಪ್ರಯಾಣಿಸಲು ಅನುಮತಿಸುತ್ತಿಲ್ಲ ಎಂದು ಪ್ರತಿಪಾಸಿದಿಸಿ ಬಸ್ ಒಳಗೆ ಗಲಾಟೆ ವಾಗ್ವಾದ ನಡೆಸುತ್ತಿರುವ ಮಹಿಳೆಯರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ವೈರಲ್ ಆಗಿದೆ. ವಿಡಿಯೊದಲ್ಲಿ ಬುರ್ಖಾ ಧರಿಸಿದ ಹಲವಾರು ಮಹಿಳೆಯರು ಬುರ್ಖಾ ಧರಿಸದ, ಹಿಂದೂ ಎಂದು ಮೇಲ್ನೋಟಕ್ಕೆ ಕಾಣುತ್ತಿರುವ ಮಹಿಳೆಯೊಬ್ಬರೊಂದಿಗೆ ಅವಾಚ್ಯ ಶಬ್ಧಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಬಿಜೆಪಿಯನ್ನು ಬೆಂಬಲಿಸುವ ಹಲವಾರು ಪ್ರೊಪಗಾಂಡ ಖಾತೆಗಳು ಈ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇದನ್ನು ವೈರಲ್ ಮಾಡಲಾಗುತ್ತಿದೆ. ಇದನ್ನೂ ಓದಿ: ಫ್ಯಾಕ್ಟ್ಚೆಕ್: ಪ್ರಧಾನಿ ಮೋದಿ ಭಾರತೀಯರಿಗೆ 3 ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ ಎಂಬುದು ಸುಳ್ಳು!
ವೈರಲ್ ಸಂದೇಶದಲ್ಲಿ, “ಇದು ನಿನ್ನೆ ಕೇರಳದಲ್ಲಿ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು. ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆಯು ವರದಿ ಮಾಡಿಲ್ಲ. ಮಾಧ್ಯಮಗಳು ನಿಗೂಢವಾಗಿ ಮೌನವಾಗಿವೆ” ಎಂದು ಹೇಳಿಕೊಂಡಿದೆ. ಆರ್ಕೈವ್ ಲಿಂಕ್.
ಇದು ನಿನ್ನೆ ಕೇರಳದಲ್ಲಿ. ಮುಸ್ಲಿಂ ಮಹಿಳಾ ಪ್ರಯಾಣಿಕರು ಬುರ್ಖಾ ಇಲ್ಲದೆ ಮಹಿಳೆಯರನ್ನು ಬಸ್ನಲ್ಲಿ ಅನುಮತಿಸುವುದಿಲ್ಲ ಎಂದು ಹೇಳಿದ್ದಾರೆ. ಈಗ, ಹಿಂದೂಗಳು ತಮ್ಮ ತಲೆಯನ್ನು ಮುಚ್ಚಿಕೊಳ್ಳಬೇಕು ಮತ್ತು ನಂತರ ಮಾತ್ರ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಬಹುದು.
ಆಶ್ಚರ್ಯಕರವಾಗಿ, ಈ ಘಟನೆಯನ್ನು ಯಾವುದೇ ಟಿವಿ ಚಾನೆಲ್ ಮತ್ತು ಯಾವುದೇ ಪತ್ರಿಕೆ pic.twitter.com/gw510veXL7
— Sridhar Gowda (@SridharGowda73) October 27, 2023
ಕೇವಲ ಟ್ವಿಟರ್ ಮಾತ್ರವಲ್ಲದೆ, ಫೇಸ್ಬುಕ್ ಮತ್ತು ವಾಟ್ಸಪ್ನಲ್ಲಿ ಕೂಡಾ ಈ ಘಟನೆ ವೈರಲ್ ಮಾಡಲಾಗಿದೆ. ಅವುಗಳನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದಾಗಿದೆ ಇದನ್ನೂಓದಿ:ಫ್ಯಾಕ್ಟ್ಚೆಕ್ | ‘ಭಾರತ್ ಮಾತಾ ಕಿ ಜೈ’ ಎಂದಿದ್ದಕ್ಕೆ ಮುಸ್ಲಿಮರು ಥಳಿಸಿದರು ಎಂಬುದು ಸುಳ್ಳು
ಬಿಜೆಪಿ ಬೆಂಬಲಿತ ಹಲವಾರು ವೇರಿಫೈಡ್ ಟ್ವಿಟರ್ ಅಕೌಂಟ್ಗಳು ಈ ಬಗ್ಗೆ ಕೋಮು ಹೇಳಿಕೆಯೊಂದಿಗೆ ವಿಡಿಯೊವನ್ನು ವೈರಲ್ ಮಾಡುತ್ತಿವೆ. ಅವುಗಳನ್ನು ಇಲ್ಲಿ, ಇಲ್ಲಿ ನೋಡಬಹುದಾಗಿದೆ.
मुस्लिम महिलाओं ने हिन्दू महिला पर बुर्का पहनने का डाला दबाव।
कहा, बस में चढ़ने से पहले बुर्का पहन कर आया करो। pic.twitter.com/ub3l1z0kVH
— Panchjanya (@epanchjanya) October 27, 2023
ಈ ಬಗ್ಗೆ ಫ್ಯಾಕ್ಟ್ಚೆಕ್ ಮಾಡುವಂತೆ ಜನಶಕ್ತಿ ಫ್ಯಾಕ್ಟ್ಚೆಕ್ ವಾಟ್ಸಪ್ ನಂಬರ್ (+916361984022)ಗೆ ವಿನಂತಿಗಳು ಬಂದಿವೆ. ಜನಶಕ್ತಿ ಫ್ಯಾಕ್ಟ್ಚೆಕ್ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ.
ಫ್ಯಾಕ್ಟ್ಚೆಕ್
ಈ ಬಗ್ಗೆ ನಾವು ಇಂಟರ್ನೆಟ್ನಲ್ಲಿ ಹುಡುಕಾಡಿದಾಗ ಇದು ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿ ನಡೆದ ಘಟನೆ ಎಂಬುವುದು ತಿಳಿದು ಬಂದಿದೆ. ಮಲಯಾಳಂನ ಪ್ರಮುಖ ಪತ್ರಿಕೆ “ಮಾತೃಭೂಮಿ” ಈ ಘಟನೆಯ ಬಗ್ಗೆ ವರದಿ ಮಾಡಿದೆ.
“ಘಟನೆ ಅಕ್ಟೋಬರ್ 22 ರಂದು ನಡೆದಿದ್ದು, ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿಯ ಶಾಂತಿಪಳ್ಳದ ಖನ್ಸ ಮಹಿಳಾ ಕಾಲೇಜಿನ ಬಳಿ ಖಾಸಗಿ ಬಸ್ಸುಗಳು ನಿಲ್ಲಿಸದ ಕಾರಣ ವಿದ್ಯಾರ್ಥಿನಿಯರು ಪ್ರತಿಭಟಿಸಿ ಬಸ್ ತಡೆದಿದ್ದರು. ಈ ವೇಳೆ ಸಿಬ್ಬಂದಿಯೊಂದಿಗೆ ಹಾಗೂ ಇತರ ಪ್ರಯಾಣಿಕರೊಂದಿಗೆ ಕೂಡಾ ವಾಗ್ವಾದ ನಡೆದಿತ್ತು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ತೆರಳಿದ್ದರು” ಎಂದು ಮಾತೃಭೂಮಿ ವೆಬ್ಸೈಟ್ ವರದಿ ಹೇಳಿದೆ. ಇದನ್ನೂಓದಿ: ಫ್ಯಾಕ್ಟ್ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು!
ಈ ಬಗ್ಗೆ ನಾವು ಮತ್ತಷ್ಟು ಮಾಹಿತಿಗಾಗಿ ಕುಂಬಳೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅನೂಬ್ ಕುಮಾರ್ ಇ. ಅವರೊಂದಿಗೆ ಮಾತನಾಡಿದ್ದೇವೆ. ಜನಶಕ್ತಿ ಮೀಡಿಯಾ, ಅವರಿಗೆ ವೈರಲ್ ವಿಡಿಯೊವನ್ನು ಕೂಡಾ ಕಳುಹಿಸಿದ್ದು, ಅದರ ಬಗ್ಗೆ ಸ್ಪಷ್ಟನೆ ಕೇಳಿದ್ದೇವೆ.
ಜನಶಕ್ತಿ ಮಿಡಿಯಾ ಜೊತೆಗೆ ಮಾತನಾಡಿದ ಅನೂಬ್ ಕುಮಾರ್ ಅವರು, “ಘಟನೆಯಲ್ಲಿ ಯಾವುದೆ ಕೋಮು ಆಯಾಮವಿಲ್ಲ. ಕಾಲೇಜಿನ ಮುಂಬಾಗದಲ್ಲಿ ಬಸ್ ಸ್ಟ್ಯಾಂಡ್ ಇದ್ದರೂ ನಿಲ್ಲಿಸದೆ ಪ್ರಯಾಣಿಸುವ ಖಾಸಗಿ ಬಸ್ ಅನ್ನು ವಿದ್ಯಾರ್ಥಿಗಳ ತಡೆದಿದ್ದರು. ಈ ವೇಳೆ ವಾಗ್ವಾದ ನಡೆದಿದೆ” ಎಂದು ಹೇಳಿದ್ದಾರೆ.
“ಬಸ್ ತಡೆದು ನಿಲ್ಲಿಸಿದ ವಿದ್ಯಾರ್ಥಿನಿಯರು ಬಸ್ ಹತ್ತಿದ್ದಾರೆ. ಈ ವೇಳೆ ವೈರಲ್ ವಿಡಿಯೊದಲ್ಲಿ ಇರುವ ಮಹಿಳೆಯು, ‘ಮುಂದೆ ನಿಲ್ದಾಣ ಇದೆಯಲ್ಲವೆ? ಅಲ್ಲಿಯೆ ಬಸ್ ಏರಬಹುದಲ್ಲವೆ’ ಎಂದು ವಿದ್ಯಾರ್ಥಿನಿಯರೊಂದಿಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ವಿದ್ಯಾರ್ಥಿನಿಯರು, ‘ಈ ಬಿಸಿಲಲ್ಲಿ ನಾವು ಅಷ್ಟು ದೂರ ನಡೆದುಕೊಂಡು ಬರಬೇಕಾಗುತ್ತದೆ. ನಿಮಗೆ ಹೆಣ್ಣು ಮಕ್ಕಳಿದ್ದರೆ, ನಮ್ಮ ನೋವು ಅರ್ಥವಾಗುತ್ತಿತ್ತುʼ ಎಂದು ಮಹಿಳೆಯೊಂದಿಗೆ ಹೇಳಿದ್ದಾರೆ. ಈ ಮಾತನ್ನು ನಿಮಗೆ ವಿಡಿಯೊದಲ್ಲಿ ಕೇಳಬಹುದು. ಘಟನೆಯಲ್ಲಿ ಯಾವುದೆ ಕೋಮು ಆಯಾಮವಿಲ್ಲ, ಬುರ್ಖಾ ವಿಚಾರವಾಗಿ ಮಹಿಳೆಯೊಂದಿಗೆ ಯಾವುದೆ ವಿದ್ಯಾರ್ಥಿನಿಯರು ತಕರಾರು ತೆಗೆದಿಲ್ಲ” ಎಂದು ಅನೂಬ್ ಕುಮಾರ್ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ. ಇದನ್ನೂಓದಿ: ಫ್ಯಾಕ್ಟ್ಚೆಕ್ | ಅಮೆರಿಕದ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದರು ಎಂಬುದು ಸುಳ್ಳು
ಇಷ್ಟೆ ಅಲ್ಲದೆ, ಘಟನೆ ಬಗ್ಗೆ ಹಲವಾರು ಯೂಟ್ಯೂಬ್ ಚಾನೆಲ್ಗಳು ವರದಿ ಮಾಡಿದೆ. ಅವುಗಳಲ್ಲಿ ವೈರಲ್ ವಿಡಿಯೊದಲ್ಲಿ ಇರುವ ಬಸ್, ಮಹಿಳೆ ಮತ್ತು ವಿದ್ಯಾರ್ಥಿನಿಯರನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಅವುಗಳನ್ನು ಇಲ್ಲಿ ಇಲ್ಲಿ ನೋಡಬಹುದಾಗಿದೆ.
ಒಟ್ಟಿನಲ್ಲಿ ಹೇಳಬಹುದಾದರೆ, ಬುರ್ಖಾ ಇಲ್ಲದೆ ಬಸ್ ಏರಿದ ಹಿಂದೂ ಮಹಿಳೆಯೊಬ್ಬರನ್ನು ಕೇರಳದ ಮುಸ್ಲಿಂ ಮಹಿಳೆಯರು ಬಸ್ ಪ್ರಯಾಣಿಸಲು ಅನುಮತಿಸುತ್ತಿಲ್ಲ ಎಂದು ಪ್ರತಿಪಾಸಿದಿಸಿ ವೈರಲ್ ಆಗಿರುವ ವಿಡಿಯೊ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಮಾಡಲಾಗುತ್ತಿದೆ. ಘಟನೆಯಲ್ಲಿ ಯಾವುದೆ ಕೋಮು ಆಯಾಮವಿಲ್ಲ, ಬುರ್ಖಾ ವಿಚಾರವಾಗಿ ಮಹಿಳೆಯೊಂದಿಗೆ ಯಾವುದೆ ವಿದ್ಯಾರ್ಥಿನಿಯರು ತಕರಾರು ತೆಗೆದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕಾಲೇಜಿನ ಮುಂಬಾಗದಲ್ಲಿ ಬಸ್ ಸ್ಟ್ಯಾಂಡ್ ಇದ್ದರೂ ನಿಲ್ಲಿಸದೆ ಪ್ರಯಾಣಿಸುವ ಖಾಸಗಿ ಬಸ್ ಅನ್ನು ವಿದ್ಯಾರ್ಥಿಗಳ ತಡೆದು ನಿಲ್ಲಿಸಿದಾಗ ನಡೆದ ವಾಗ್ವಾದ ಇದಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಪ್ಯಾಲಿಸ್ತೇನ್ ಪರ ಪ್ರತಿಭಟನೆ ಮಾಡುವುದು ಅಪರಾಧವೆ?