ಯುವಕರ ಗುಂಪೊಂದು ವೃದ್ಧರೊಬ್ಬರಿಗೆ ಥಳಿಸುವ ವಿಡಿಯೊವೊಂದು, ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ”ಭಾರತ್ ಮಾತಾ ಕಿ ಜೈ” ಎಂದು ಕೂಗಿದ ಕಾರಣಕ್ಕೆ ಥಳಿಸಲಾಗುತ್ತಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಜನರ ಗುಂಪಿನಿಂದ ಥಳಿತಕ್ಕೊಳಗಾದ ವ್ಯಕ್ತಿಯು “ಭಾರತ್ ಮಾತಾಕಿ ಜೈ” ಎಂದು ಹೇಳುವುದು ಮತ್ತು ನಂತರ ಅಲ್ಲಿರುವ ಯುವಕರ ಗುಂಪು ಅವರನ್ನು ಥಳಿಸುವುದು ವಿಡಿಯೊದಲ್ಲಿ ದಾಖಲಾಗಿದೆ.
ಫೇಸ್‌ಬುಕ್, ವಾಟ್ಸಪ್ ಹಾಗೂ ಟ್ವಿಟರ್‌ನಲ್ಲಿ ಈ ವಿಡಿಯೊವನ್ನು ವೈರಲ್ ಮಾಡಲಾಗುತ್ತಿದೆ. ರವಿರಾಜ್ ವಿ. ಎಂಬ ಬಿಜೆಪಿ ಬಿಜೆಪಿ ಬೆಂಬಲಿಗ ಫೇಸ್‌ಬುಕ್ ಖಾತೆಯೊಂದು, “ಮುಸ್ಲಿಮರ ಬಾಹುಳ್ಯ ಹೆಚ್ಚಿರುವ ಕ್ಷೇತ್ರದಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಕೂಗಿದರೆ ಪೆಟ್ಟು ತಿಂದು ಸಾಯಬೇಕಾಗಬಹುದು… ಈ ಹೇಗಿದೆ ನಮ್ಮ ದುರಾವಸ್ತೆ,..??” ಎಂಬ ಹೇಳಿಕೆಯೊಂದಿಗೆ ಈ ವಿಡಿಯೊವನ್ನು ಪೋಸ್ಟ್ ಮಾಡಿದೆ. ಇದನ್ನೂಓದಿ: ಫ್ಯಾಕ್ಟ್‌ಚೆಕ್ | ‘ತಾಲಿಬಾನ್ ಕಾರ್ಯದರ್ಶಿ ಆರೆಸ್ಸೆಸ್ ಮತ್ತು ಬಿಜೆಪಿಯನ್ನು ಹೊಗಳುತ್ತಿದ್ದಾರೆ’ ಎಂಬುದು ಸುಳ್ಳು!
ಈ ಸುದ್ದಿ ಬರೆಯುವ ಹೊತ್ತಿಗೆ ರವಿರಾಜ್ ಅವರ ಈ ಪೋಸ್ಟ್ ಅನ್ನು 3,900ಕ್ಕಿಂತಲೂ ಹೆಚ್ಚು ಜನರು ಹಂಚಿಕೊಂಡಿದ್ದಾರೆ. ಅಷ್ಟೆ ಅಲ್ಲದೆ ಇದುವೇ ಲಿಂಕ್ ಅನ್ನು ಬಿಜೆಪಿ ಐಟಿ ಸೆಲ್‌ಗಳ ವಾಟ್ಸಪ್‌ನಲ್ಲಿ ಕೂಡಾ ಹಂಕಿಕೊಳ್ಳಲಾಗುತ್ತಿದೆ. ಜೊತೆಗೆ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಹಲವಾರು ಜನರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್
ಈ ಬಗ್ಗೆ ಇಂಟರ್‌ನೆಟ್‌ನಲ್ಲಿ ಹುಡುಕಾಡಿದಾಗ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಬೂಮ್ ಲೈವ್ ಈ ವೀಡಿಯೊ ಬಗ್ಗೆ ವರದಿ ಮಾಡಿದೆ. “ಸಿಖ್ ಸಮುದಾಯದ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದ್ದಾರೆ” ಎಂಬ ಹೇಳಿಕೆಯೊಂದಿಗೆ ಕೂಡಾ ಇದನ್ನು ವೈರಲ್ ಮಾಡಲಾಗುತ್ತಿದೆ ಎಂದು ಬೂಮ್ ಲೈವ್ ವರದಿ ಮಾಡಿದೆ. “ಘಟನೆಯು ರಾಜಸ್ಥಾನದ ಭಿಲ್ವಾರಾದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ರಾಜಕೀಯ ಅಥವಾ ಕೋಮು ಆಯಾಮವಿಲ್ಲ. ಐವರನ್ನು ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾಗಿ ಬೂಮ್ ಲೈವ್ ತನ್ನ ವರದಿಯಲ್ಲಿ ಹೇಳಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಅಮೆರಿಕದ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದರು ಎಂಬುದು ಸುಳ್ಳು
ಘಟನೆಯು 2019 ರ ಅಕ್ಟೋಬರ್ 15 ರಂದು ಆಜಾದ್ ಚೌಕ್‌ನಲ್ಲಿ ನಡೆದಿದೆ. ಸಂತ್ರಸ್ತ ವೃದ್ಧನನ್ನು ಹೋಟ್‌ಚಂದ್ ಸಿಂಧಿ (55) ಎಂದು ಗುರುತಿಸಲಾಗಿದೆ. ಐವರು ಆರೋಪಿಗಳು ಸಿಂಧಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸಿಂಧಿ ಈ ಹಿಂದೆ ತನ್ನ ಪತ್ನಿಯ ಕೊಲೆಗೆ ಸಂಬಂಧಿಸಿದಂತೆ ಜೈಲು ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ಸಂತ್ರಸ್ತ ಸಿಂಧಿ ಅವರು ಆಜಾದ್ ಚೌಕ್‌ನಲ್ಲಿ ಅಂಗಡಿ ಇಡುತ್ತಿದ್ದರು. ಈ ಹಿಂದೆ ಮಾರುಕಟ್ಟೆಯಲ್ಲಿ ಅವರು ಇತರ ವ್ಯಾಪಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಅವರಿಗೆ ಮಾನಸಿಕ ಆರೋಗ್ಯ ಸಮಸ್ಯೆಯಿದೆ” ಎಂದು ಭಿಲ್ವಾರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಶ್ ಮೀನಾ ತಿಳಿಸಿದ್ದಾರೆ ಎಂದು ಬೂಮ್ ಲೈವ್ ತನ್ನ ವರದಿಯಲ್ಲಿ ಹೇಳಿದೆ.
ಪ್ರಕರಣದಲ್ಲಿ ಮನೋಜ್ ಅಲಿಯಾಸ್ ಮುಲ್ಲಾ ಸಿಂಧಿ (39), ಹೇಮಂತ್ ನಥಾನಿ (45), ಭಗವಾನ್ ದಾಸ್ (37), ಮೇಜೂರ್ ಶೇಖ್ (31), ಮತ್ತು ಇರ್ಫಾನ್ (34) ಬಂಧಿತ ಐವರು ಆರೋಪಿಗಳು ಬಂಧನಕ್ಕೆ ಒಳಗಾಗಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 151 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಷ್ಟೆ ಅಲ್ಲದೆ, ಈ ಘಟನೆ ಬಗ್ಗೆ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಎಸ್. ಸಿರ್ಸಾ ಅವರು ಕೂಡಾ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
Hope this report will clarify pic.twitter.com/lSbTRO0gV1
— Manjinder Singh Sirsa (@mssirsa) October 20, 2019
ಪ್ರತಿಪಾದನೆ 1: ಸಿಖ್ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ಥಳಿಸುತ್ತಿದ್ದಾರೆ
ಸಂತ್ರಸ್ತ ಹೋಟ್‌ಚಂದ್ ಸಿಂಧಿ ಅವರು ”ಸಿಂಧಿ” ಸಮುದಾಯದವರಾಗಿದ್ದು, ಅವರು ಸಿಖ್ ಸಮುದಾಯದವರಲ್ಲ. ಈ ಬಗ್ಗೆ ಹೇಳಿಕೆ ನೀಡಿರುವ ಎಸ್ಪಿ ಮೀನಾ ಅವರು, “ಬಂಧಿತ ಐವರು ಆರೋಪಿಗಳು ವ್ಯಾಪಾರಿಗಳಾಗಿದ್ದು, ಅದೇ ಪ್ರದೇಶದಲ್ಲಿ ಅಂಗಡಿಗಳನ್ನು ಹೊಂದಿದ್ದಾರೆ. ಪ್ರಕರಣದಲ್ಲಿ ಯಾವುದೇ ರಾಜಕೀಯ ಆಯಾಮಲ್ಲ” ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ಪಾಕಿಸ್ತಾನ ಧ್ವಜ ವಿವಾದ; ಸುಳ್ಳು ಸುದ್ದಿ ಹರಡಿದ ಏಷ್ಯಾನೆಟ್ ಸುವರ್ಣ ನ್ಯೂಸ್!
ಪ್ರತಿಪಾದನೆ 2: ”ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ್ದಕ್ಕಾಗಿ ಮುಸ್ಲಿಮರು ವ್ಯಕ್ತಿಯನ್ನು ಥಳಿಸಿದ್ದಾರೆ
ಸಂತ್ರಸ್ತ ಸಿಂಧಿ ಅವರು ”ಭಾರತ್ ಮಾತಾ ಕಿ ಜೈ” ಎಂದು ಘೋಷಣೆ ಕೂಗಿದ್ದರಿಂದ ಥಳಿಸಲಾಗಿದೆ ಎಂಬ ಎಲ್ಲಾ ಹೇಳಿಕೆಗಳನ್ನು ಭಿಲ್ವಾರಾ ಪೊಲೀಸರು ನಿರಾಕರಿಸಿದ್ದಾರೆ.
“ಸಂತ್ರಸ್ತ ಮತ್ತು ಆರೋಪಿಗಳು ಪರಸ್ಪರ ಪರಿಚಯಸ್ಥರಾಗಿದ್ದರು ಮತ್ತು ಈ ಹಿಂದೆಯೂ ಜಗಳವಾಡಿದ್ದರು. ಸಂತ್ರಸ್ತ ಸಿಂಧಿ ಅವರ ಅಂಗಡಿಯ ಬಳಿ ಆರೋಪಿಗಳು ಕೂಡಾ ಅಂಗಡಿಗಳನ್ನು ಹೊಂದಿದ್ದು, ಆಗಾಗ್ಗೆ ಸಿಂಧಿ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದರಿಂದ ಅವರು ಸಿಟ್ಟಾಗಿದ್ದರು. ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ. ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಕ್ಕಾಗಿ ಬಲಿಪಶುವನ್ನು ಥಳಿಸಲಾಗಿದೆ ಎಂದು ಹೇಳುವುದು ಸರಿಯಲ್ಲ” ಎಂದು ಎಸ್ಪಿ ಮೀನಾ ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ, ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ”ಭಾರತ್ ಮಾತಾ ಕಿ ಜೈ” ಎಂದು ಕೂಗಿದ ಕಾರಣಕ್ಕೆ ಥಳಿಸಲಾಗುತ್ತಿದೆ ಹಾಗೂ ಸಿಖ್ ವ್ಯಕ್ತಿಯನ್ನು ಬಿಜೆಪಿ ಕಾರ್ಯಕರ್ತರು ಥಳಿಸಿದರು ಎಂಬ ಪ್ರತಿಪಾದನೆ ಸುಳ್ಳಾಗಿದೆ. ಘಟನೆಗೆ ಯಾವುದೆ ಕೋಮು ಹಾಗೂ ರಾಜಕೀಯ ಆಯಾಮವಿಲ್ಲ ಎಂದು ರಾಜಸ್ಥಾನ ಪೊಲೀಸರು ದೃಡಪಡಿಸಿದ್ದಾರೆ. ಘಟನೆಯು ವ್ಯಾಪಾರಿಗಳ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ವಾಗ್ವಾದದಿಂದಾಗಿ ನಡೆದಿದ್ದಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಮೈಸೂರು ದಸರಾ ಉದ್ಘಾಟನೆ :ಕನ್ನಡ ಉಳಿವಿಗೆ ‘ಹಂಸಲೇಖ 10 ಸಂಕಲ್ಪ ಸೂತ್ರ’ Janashakthi Media