ಫ್ಯಾಕ್ಟ್‌ಚೆಕ್ | ಪಾಕಿಸ್ತಾನ ಧ್ವಜ ವಿವಾದ; ಸುಳ್ಳು ಸುದ್ದಿ ಹರಡಿದ ಏಷ್ಯಾನೆಟ್‌ ಸುವರ್ಣ ನ್ಯೂಸ್‌!

ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ಭಾರತದ ಧ್ವಜಕ್ಕಿಂತ ಪಾಕಿಸ್ತಾನ ಧ್ವಜವನ್ನು ಎತ್ತರದಲ್ಲಿ ಮತ್ತು ದೊಡ್ಡ ಗಾತ್ರದಲ್ಲಿ ತೂಗು ಹಾಕಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಪ್ರತಿಪಾದಿಸಿ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲಾಗಿದೆ. ಕನ್ನಡದ ಪ್ರಮುಖ ಸುದ್ದಿ ಮಾಧ್ಯಮವಾದ “ಏಷಿಯಾನೆಟ್ ಸುವರ್ಣ ನ್ಯೂಸ್‌” ಮತ್ತು “ಪೊಲಿಟಿಕಲ್ 360” ಎಂಬ ವೆಬ್‌ಸೈಟ್‌ಗಳು ಈ ಬಗ್ಗೆ ವರದಿಯನ್ನು ಕೂಡಾ ಪ್ರಕಟಿಸಿದೆ.

ವಿಶ್ವಕಪ್‌ ಕ್ರಿಕೆಟ್‌ ಪ್ರಯುಕ್ತ ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ವಿವಿಧ ದೇಶಗಳ ಧ್ವಜಗಳನ್ನು ತೂಗು ಹಾಕಲಾಗಿದೆ. ಅವುಗಳಲ್ಲಿ ಪಾಕಿಸ್ತಾನ ಧ್ವಜವನ್ನು ಮಾತ್ರ ದೊಡ್ಡದಾಗಿ ಮತ್ತು ಎತ್ತರದಲ್ಲಿ ಹಾಕಲಾಗಿದ್ದು, ಭಾರತದ ಧ್ವಜ ಸೇರಿದಂತೆ ಇತರ  ರಾಷ್ಟ್ರಗಳ ಧ್ವಜವನ್ನು ಸಣ್ಣದಾಗಿ ಮತ್ತು ತಗ್ಗಿನಲ್ಲಿ ಹಾಕಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ.

ಜನಶಕ್ತಿ ಫ್ಯಾಕ್ಟ್‌ಚೆಕ್ ವಾಟ್ಸಪ್‌ ಗ್ರೂಪ್‌ ಸೇರಲು ಇಲ್ಲಿ ಕ್ಲಿಕ್ ಮಾಡಿ.

ವೈರಲ್ ಚಿತ್ರವೂ ಫೇಸ್‌ಬುಕ್, ಟ್ವಿಟರ್‌ ಹಾಗೂ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಅವುಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದಾಗಿದೆ. ಇವುಗಳನ್ನು ವೈರಲ್ ಮಾಡಿರುವವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಲುಲು ಮಾಲಕ ಯುಸುಫ್ ಅಲಿ ಹಾಗೂ ಕೇರಳವನ್ನು ಗುರಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಿಂದೂಗಳಿಂದ ಚಪ್ಪಲಿ ಕ್ಲೀನ್ ಮಾಡಿಸುತ್ತೇನೆಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆನ್ನುವುದಕ್ಕೆ ಆಧಾರಗಳಿಲ್ಲ!

ಡಿಜೆ ಹಳ್ಳಿ – ಕೆಜೆ ಹಳ್ಳಿ ಗಲಭೆಯ ಆರೋಪಿ ಪಿ. ನವೀನ್ ಕೂಡಾ ತನ್ನ ಫೇಸ್‌ಬುಕ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಬಿಜೆಪಿ ಹಾಗೂ ಸಂಘಪರಿವಾರದ ಬೆಂಬಲಿಗ ಖಾತೆಗಳೆ ಇದನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ.

ಪಾಕಿಸ್ತಾನ ಧ್ವಜ

ಫ್ಯಾಕ್ಟ್‌ಚೆಕ್:

ಈ ಬಗ್ಗೆ ಹುಡುಕಾಡಿದಾಗ ಏಷ್ಯಾನೆಟ್‌ ಮಲಯಾಳಂ ಸುದ್ದಿ ಮಾಧ್ಯಮದ ವರದಿಯೊಂದು ನಮಗೆ ಸಿಕ್ಕಿದ್ದು, ಅದರಲ್ಲಿ ಈ ಘಟನೆಯ ಬಗ್ಗೆ ವಿವರಿಸಲಾಗಿದೆ. ವಾಸ್ತವದಲ್ಲಿ ಕೊಚ್ಚಿಯ ಲುಲು ಮಾಲ್‌ನಲ್ಲಿ ಸಮಾನ ಅಳತೆಯ ವಿವಿಧ ರಾಷ್ಟ್ರಗಳ ಧ್ವಜಗಳನ್ನು ಸಮಾನ ಅಂತರದಲ್ಲಿ ತೂಗು ಹಾಕಲಾಗಿದೆ ಎಂದು ಏಷ್ಯಾನೆಟ್‌ ವರದಿಯು ಹೇಳಿದೆ.

ಆದರೆ ಅವುಗಳ ಚಿತ್ರಗಳನ್ನು ಕ್ಲಿಕ್ ಮಾಡುವವರು ಯಾವ ಧ್ವಜದ ಹತ್ತಿರ ಹಾಗೂ ಯಾವ ಮಹಡಿಯಲ್ಲಿ ನಿಂತಿದ್ದಾರೆ ಎಂಬುವುದರ ಆಧಾರದಲ್ಲಿ ಅದು ದೊಡ್ಡದಾಗಿ ಕಾಣುತ್ತದೆ ಹಾಗೂ ಉಳಿದೆಲ್ಲವೂ ಸಣ್ಣದಾಗಿ ಹಾಗೂ ತಗ್ಗಿನಲ್ಲಿ ಕಾಣುತ್ತದೆ. ಬೇರೆ ಆಯಾಮದಲ್ಲಿ ಚಿತ್ರವನ್ನು ಕ್ಲಿಕ್ ಮಾಡಿದರೆ ಬೇರೆ ಧ್ವಜ ದೊಡ್ಡದಾಗಿ ಕಂಡು ಉಳಿದ ಧ್ವಜಗಳು ಸಣ್ಣದಾಗಿ ಮತ್ತು ತಗ್ಗಿನಲ್ಲಿ ಅಥವಾ ಎತ್ತರದಲ್ಲಿ ಕಾಣುತ್ತದೆ.

ಪಾಕಿಸ್ತಾನ ಧ್ವಜ
ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಈ ಬಗ್ಗೆ ಏಷ್ಯಾನೆಟ್‌ ಮಲಯಾಳಂ ಲುಲು ಗ್ರೂಪ್‌ ಅವರು ಪತ್ರಿಕಾ ಹೇಳಿಕೆ ಕೂಡಾ ನೀಡಿದ್ದ, ಪಾಕಿಸ್ತಾನ ಧ್ವಜವೂ ಭಾರತದ ಧ್ವಜಕ್ಕಿಂತ ದೊಡ್ಡಾಗಿರುವುದು ಸುಳ್ಳು ಎಂದು ಹೇಳಿದೆ. “ಮಾಲ್‌ನ ಮಧ್ಯದಲ್ಲಿ, ವಿವಿಧ ದೇಶಗಳ ಧ್ವಜಗಳನ್ನು ಒಂದೇ ಮಟ್ಟದಲ್ಲಿ ಸೀಲಿಂಗ್‌ನಿಂದ ಕೆಳಗೆ ನೇತುಹಾಕಲಾಗಿದೆ. ಧ್ವಜಗಳನ್ನು ಮೇಲಿನಿಂದ ಕ್ಲಿಕ್ ಮಾಡಿದಾಗ ಮತ್ತು ಬದಿಯಿಂದ ಕ್ಲಿಕ್ ಮಾಡಿದಾಗ ಆಯಾ ಬದಿಯಲ್ಲಿರುವ ಧ್ವಜಗಳು ದೊಡ್ಡದಾಗಿ ಕಾಣಿಸುತ್ತವೆ. ಆದರೆ ಕೆಳಗಿನಿಂದ ಕ್ಲಿಕ್ ಮಾಡುವಾಗ, ಎಲ್ಲವೂ ಸಮಾನ ಗಾತ್ರದಲ್ಲಿದೆ ಎಂದು ತಿಳಿಯುತ್ತದೆ” ಎಂದು ಅದು ಹೇಳಿದೆ. ಇದನ್ನೂ ಓದಿ: ಫ್ಯಾಕ್ಟ್‌ಚೆಕ್ | ವಿಪಕ್ಷಗಳ ನಾಯಕರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿ ಸುಳ್ಳು ಹರಡುತ್ತಿರುವ ಬಿಜೆಪಿ ಬೆಂಬಲಿಗರು

“ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನ ಧ್ವಜ ದೊಡ್ಡದು, ಭಾರತದ ಧ್ವಜ ಚಿಕ್ಕದು ಎಂದು ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಪಾಕಿಸ್ತಾನಿ ಧ್ವಜದ ಗಾತ್ರದ ಬಗ್ಗೆ ಹರಡಲಾಗುತ್ತಿರುವ ಅಭಿಯಾನವು ಸಂಪೂರ್ಣವಾಗಿ ಸುಳ್ಳಾಗಿದ್ದು, ತಪ್ಪಾಗಿ ಬಿಂಬಿಸಲಾಗುತ್ತಿದೆ. ಇಂತಹ ಸುದ್ದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ. ಇಂತಹ ತಪ್ಪಾದ ಮತ್ತು ಸುಳ್ಳು ಪ್ರಚಾರದಿಂದ ದೂರವಿರುವಂತೆ ವಿನಂತಿಸುತ್ತಿದ್ದೇವೆ” ಎಂದು ಲುಲು ಆಡಳಿತ ಮಂಡಳಿ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಅದೇ ಸ್ಥಳದಲ್ಲಿ ಬೇರೆ ಬೇರೆ ಕೋನ ಮತ್ತು ಆಯಾಮದಲ್ಲಿ ಕ್ಲಿಕ್ ಮಾಡಿರುವ ಫೋಟೋಗಳನ್ನು ನೀವು ಕೆಳಗೆ ನೋಡಬಹುದಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಕೇರಳದ ಕೊಚ್ಚಿಯಲ್ಲಿರುವ ಲುಲು ಮಾಲ್‌ನಲ್ಲಿ ತೂಗು ಹಾಕಲಾಕಿರುವ ವಿವಿಧ ದೇಶಗಳ ಧ್ವಜಗಳ ಪೈಕಿ ಪಾಕಿಸ್ತಾನ ಧ್ವಜವನ್ನು ಮಾತ್ರ ದೊಡ್ಡದಾಗಿ ಮತ್ತು ಎತ್ತರದಲ್ಲಿ ಪ್ರದರ್ಶಿಸಿ, ಭಾರತದ ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ ಎಂಬ ಪ್ರತಿಪಾದನೆಯು ಸುಳ್ಳಾಗಿದೆ. ಈ ಬಗ್ಗೆ ಲುಲು ಆಡಳಿತ ಮಂಡಳಿ ಸ್ಪಷ್ಟೀಕರಣ ನೀಡಿದ್ದು, ಎಲ್ಲಾ ರಾಷ್ಟ್ರದ ಧ್ವಗಳನ್ನು ಸಮಾನ ಅಂತರದಲ್ಲಿ ತೂಗುಹಾಕಲಾಗಿದೆ ಹಾಗೂ ಎಲ್ಲಾ ಧ್ವಜವೂ ಸಮಾನ ಗಾತ್ರದಲ್ಲಿರುವುದು ದೃಡಪಟ್ಟಿದೆ.

ಲುಲು ಮಾಲ್ ಮಾಲೀಕ ಯುಸುಫ್ ಅಲಿ ಮುಸ್ಲಿಂ ಆಗಿದ್ದು, ಬೆಂಗಳೂರು ಲುಲು ಮಾಲ್‌ನ ಪಾಲುದಾರಾಗಿ ಡಿ.ಕೆ. ಶಿವಕುಮಾರ್ ಅವರು ಇದ್ದಾರೆ ಎಂಬ ವರದಿಯಿದೆ. ಅಲ್ಲದೆ ವೈರಲ್ ಆಗಿರುವ ಚಿತ್ರವೂ ಕೇರಳದ್ದಾಗಿದ್ದು, ಅಲ್ಲಿ ಎಡಪಕ್ಷಗಳ ಆಡಳಿತವಿದೆ. ಅಲ್ಲಿ ಬಿಜೆಪಿಯ ಒಬ್ಬ ಶಾಸಕ ಮತ್ತು ಸಂಸದರು ಆಯ್ಕೆಯಾಗಿಲ್ಲ. ಹೀಗಾಗಿ ಮಾಲ್, ಅದರ ಮಾಲಿಕರು ಹಾಗೂ ಅದು ಇರುವ ಪ್ರದೇಶವನ್ನು ತಪ್ಪಾಗಿ ಬಿಂಬಿಸಲು ಬಿಜೆಪಿ ಹಾಗೂ ಸಂಘಪರಿವಾದ ನಡೆಸುವ ಪ್ರಯತ್ನ ಇದಾಗಿದೆ ಎಂದು ಸ್ಪಷ್ಟವಾಗುತ್ತದೆ.


ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.


ವಿಡಿಯೊ ನೋಡಿ: ರೈತ, ಕಾರ್ಮಿಕ, ದಲಿತ, ಕೂಲಿಕಾರರ, ಮಹಿಳೆಯರ ಹಕ್ಕುಗಳಿಗಾಗಿ ಮಹಾಧರಣಿ Janashakthi Media

Donate Janashakthi Media

Leave a Reply

Your email address will not be published. Required fields are marked *