ಬೆಳ್ತಂಗಡಿ: ಕರ್ತವ್ಯ ನಿರತ, ಯೂನಿಫಾರ್ಮ್ ನಲ್ಲಿದ್ದ ವಲಯ ಅರಣ್ಯಧಿಕಾರಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವಾಗ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಕಾರಣಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲಾಗಿದ್ದು, ಧರ್ಮಸ್ಥಳ ಪೊಲೀಸರು ಸೆಕ್ಷನ್ 353 ರಂತೆ ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಶಾಸಕ ಹರೀಶ್ ಪೂಂಜಾರ ವಿರುದ್ಧ ಪುತ್ತೂರು ಸಹಾಯಕ ಆಯುಕ್ತರಿಗೂ ದೂರು ನೀಡಲಾಗಿದೆ.
ಇದನ್ನೂ ಓದಿ:ರಾಷ್ಟ್ರಧ್ವಜಕ್ಕೆ ಅವಮಾನ: ಬಿಜೆಪಿ ಶಾಸಕನ ವಿರುದ್ಧ ದೂರು ದಾಖಲು
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಸರ್ವೆ ನಂಬರ್ 309ರ ನಿಡ್ಲೆ ವಿಕೃತ ಬ್ಲಾಕ್ 2ರಲ್ಲಿ ಅಮ್ಮಿನಡ್ಕ-ಕುದ್ದ ನಿವಾಸಿ ಲೋಲಾಕ್ಷ ಬಿನ್ ದೇವಣ್ಣ ಗೌಡರು ರವರು ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ನೂತನ ಮನೆ ನಿರ್ಮಾಣಕ್ಕೆ ಮುಂದಾಗಿರುವ ಬಗ್ಗೆ ಮಂಗಳೂರು ಅರಣ್ಯ ಇಲಾಖೆಗೆ ದೂರು ಬಂದಿತ್ತು. ಈ ಹಿನ್ನೆಲೆ ಅಕ್ಟೋಬರ್-6 ರಂದು ಅರಣ್ಯ ಇಲಾಖೆ ಸಿಬ್ಬಂದಿಗಳು ನೂತನ ಮನೆಯ ಫೌಂಡೇಶನ್ ತೆರವುಗೊಳಿಸಿದ್ದರು.
ಶಾಸಕ ಹರೀಶ್ ಪೂಂಜ ಅ-7ರಂದು ಸ್ಥಳಕ್ಕೆ ಭೇಟಿ ನೀಡಿ ಅರಣ್ಯಾಧಿಕಾರಿಗಳ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಸ್ಥಳದಲ್ಲಿ ಯುನಿಫಾರ್ಮ್ನಲ್ಲಿದ್ದ ಆರ್.ಎಫ್.ಓ ಬಗ್ಗೆ ʼಅವನು ಯಾರ್ರಿ ಲೋಫರ್ ನನ್ ಮಗʼ ಎಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ವಿಡಿಯೋವನ್ನು ರಾಜ್ಯ ಕಾಂಗ್ರೇಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು.
ಇದನ್ನೂ ಓದಿ:ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ
ಅರಣ್ಯ ಇಲಾಖೆ ಜಾಗವನ್ನು ಒತ್ತುವರಿ ನಡೆಸಿದವರು ಹಾಗೂ ಅದಕ್ಕೆ ಸಹಕರಿಸಿದ 11 ಜನರ ವಿರುದ್ಧ ಅಕ್ಟೋಬರ್-7 ರಂದು ಧರ್ಮಸ್ಥಳ ಠಾಣೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ದೂರು ದಾಖಲಿಸಿದ್ದರು.
ಅ-09 ರಂದು ಮತ್ತೆ ಮೇಲಾಧಿಕಾರಿಗಳ ಆದೇಶದಂತೆ ಎಸಿಎಫ್ ಸುಬ್ಬಯ್ಯ ನಾಯ್ಕ ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ.ಕೆ.ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ದೇವಣ್ಣ ಗೌಡ ಅವರ ಮನೆಯ ಶೆಡ್ ತೆರವಿಗೆ ಮುಂದಾಗಿದ್ದರು. ಜಿಲ್ಲೆಯ ಹಲವು ಶಾಸಕರು ಪ್ರಕರಣದಲ್ಲಿ ದೇವಣ್ಣ ಗೌಡರ ಅವರ ಪರ ನಿಂತು ಶೆಡ್ ತೆರವುಗೊಳಿಸದಂತೆ ನೋಡಿಕೊಂಡರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಜಯಪ್ರಕಾಶ್ ಕೆ.ಕೆ.ರವರಿಗೆ ಅವಾಚ್ಯ ಪದ ಬಳಸಿ ನಿಂದಿಸಿರುವ ಬಗ್ಗೆ ಅಕ್ಟೋಬರ್-13 ರಂದು ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಡಿಯೋ ನೋಡಿ:ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಿಸಿಯೇ ಸಿದ್ದ: ಬಿಜೆಪಿ ಶಾಸಕನ ವಿವಾದಾತ್ಮಕ ಹೇಳಿಕೆ