ಮುಂಬೈ: ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ 48 ಗಂಟೆಯಲ್ಲಿ 59 ರೋಗಿಗಳು ಮೃತಪಟ್ಟಿದ್ದಾರೆ.
ನಾಂದೇಡ್ ಮತ್ತು ಔರಂಗಾಬಾದ್ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಮುಂದುವರೆಯುತ್ತಲೇ ಇದೆ. ನಾಂದೇಡ್ನ ಶಂಕರರಾವ್ ಚವಾನ್ ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದರೆ ಔರಂಗಾಬಾದ್ನ ಘಾಟಿ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯದ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಇಲ್ಲ, ಸಿಬ್ಬಂದಿಗಳೂ ಇಲ್ಲ, ರೋಗಿಗಳನ್ನು ನೋಡಿಕೊಳ್ಳುವವರಂತೂ ಮೊದಲೇ ಇಲ್ಲ. ಇದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌವ್ಹಾಣ್ ಹೇಳಿದ್ದಾರೆ.
ಈ ಅವಘಡಕ್ಕೆ ಸರ್ಕಾರಿ ಆಸ್ಪತ್ರೆ ಎದುರಿಸುತ್ತಿರುವ ಸಿಬ್ಬಂದಿ ಹಾಗೂ ಔಷಧಗಳ ಕೊರತೆಯ ಕಾರಣ ಎಂದು ನಾಂದೇಡ್ ಶಂಕರ್ ರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ. ಮೃತಪಟ್ಟ 12 ವಯಸ್ಕರ ಪೈಕಿ ಹೆಚ್ಚಿನವರು ಹಾವು ಕಡಿತಕ್ಕೊಳಗಾದವರಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸಾವನ್ನಪ್ಪಿವೆ. ವಿವಿಧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಆಸ್ಪತ್ರೆಯು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಆಸ್ಪತ್ರೆಯ ಡೀನ್ ಹೇಳಿದ್ದರು.
ನಾಂದೇಡ್ ಮತ್ತು ಘಾಟಿಯಲ್ಲಿ ಸಂಭವಿಸಿದ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇನ್ನು ನಾಂದೇಡ್ ಮತ್ತು ಘಾಟಿಯಲ್ಲಿ ಔಷಧಿ ಕೊರತೆ ಹಾಗೂ ವೈದ್ಯರ ಅಲಭ್ಯತೆಯಿಂದ ಸಾವು ಸಂಭವಿಸಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಶಿಂಧೆ ಅಲ್ಲಗಳೆದಿದ್ದಾರೆ.
ಈ ದಿಢೀರ್ ಹಾಗೂ ಆಘಾತಕಾರಿ ಸರಣಿ ಸಾವುಗಳ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಛತ್ರಪತಿ ಸಂಭಾಜಿನಗರ ಜಿಲ್ಲೆಯ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ತನಿಖೆ ಬಳಿಕ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ಪರಾಮರ್ಶ ನಡೆಸಲು ನಾನು ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶಕ ಡಾ ದಿಲೀಪ್ ಮೈಸೇಕರ್ ಹೇಳಿದ್ದಾರೆ.