ಅಂತರ್ಜಾತಿ ವಿವಾಹ| ದಂಪತಿಗೆ ಗ್ರಾಮಸ್ಥರ ಬಹಿಷ್ಕಾರ

ಚಿತ್ರದುರ್ಗ: ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವ ದಂಪತಿಯನ್ನು ಗ್ರಾಮಸ್ಥರು ಬಹಿಷ್ಕರಿಸಿದ ಘಟನೆ ಚಳ್ಳಕೆರೆ ತಾಲೂಕಿನ ಎನ್.ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ಚಾಮರಾಜನಗರ: ಅಂತರ್ಜಾತಿ ವಿವಾಹ ಆಗಿದ್ದಕ್ಕೆ ದಂಪತಿಗೆ 6 ಲಕ್ಷ ದಂಡ, ಗ್ರಾಮದಿಂದ ಬಹಿಷ್ಕಾರ ಶಿಕ್ಷೆ; ದೂರು ದಾಖಲು

ಸೆ-28 ಗುರುವಾರ ಈ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾಗಿರುವ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರದ ಮಣಿಕಂಠ ಎಂಬುವರೇ ಬಹಿಷ್ಕಾರಕ್ಕೊಳಗಾದವರು. ಇವರಿಬ್ಬರೂ ಹುಟ್ಟು ಶ್ರವಣದೋಷ ಮತ್ತು ವಾಕ್ ದೋಷದಿಂದ ಬಳಲುತ್ತಿದ್ದಾರೆ.

ಸಾವಿತ್ರಮ್ಮ ಎನ್.ದೇವರಹಳ್ಳಿ ಗ್ರಾಮದ ಜೋಗಿ ಜನಾಂಗಕ್ಕೆ ಸೇರಿದವರು, ರೆಡ್ಡಿ ಜನಾಂಗಕ್ಕೆ ಸೇರಿದ ಮಣಿಕಂಠ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯವರು. ಇಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೂಡಿ 2021 ಏಪ್ರಿಲ್ 7ರಂದು ಮದುವೆಯಾಗಿದ್ದರು. ಹೆರಿಗೆಗೆಂದು ತಿಂಗಳ ಹಿಂದೆ ತನ್ನ ಮನೆಗೆ ಬಂದಿದ್ದ ಸಾವಿತ್ರಮ್ಮ ಮಗುವಿಗೆ ಜನ್ಮ ನೀಡಿದ್ದರು. ಆದರೆ, ಗ್ರಾಮದ ಮುಖಂಡರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಬೇರೆ ಜಾತಿಗೆ ಸೇರಿದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.

ನವದಂಪತಿ ಗ್ರಾಮಕ್ಕೆ ಬಂದಾಗ ಸಾವಿತ್ರಮ್ಮನ ಸಮಾಜದ ಮುಖಂಡರು ಅಂತರ್ಜಾತಿ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಕೆಯ ಪೋಷಕರಿಗೆ 30 ಸಾವಿರ ದಂಡ ವಿಧಿಸಿ, ದಂಪತಿಯನ್ನು ಗ್ರಾಮದಿಂದ ಹೊರಗೆ ಕಳುಹಿಸಿದ್ದರು. ಆಗ ದಂಪತಿ ಬೆಂಗಳೂರಿಗೆ ಮರಳಿದ್ದರು. ಬಳಿಕ ಹೆರಿಗೆಗೆಂದು ಬಂದಿದ್ದ ಸಾವಿತ್ರಮ್ಮನನ್ನು ಮನೆಯೊಳಗೆ ಸೇರಿಕೊಂಡಿದ್ದಕ್ಕೆ ಸಮುದಾಯದ ಮುಖಂಡರು ಸಾವಿತ್ರಮ್ಮ ಪೋಷಕರೊಂದಿಗೆ ಮತ್ತೆ ವಾಗ್ವಾದ ನಡೆಸಿದ್ದಾರೆ. ಸಾವಿತ್ರಮ್ಮ ಮತ್ತು ಪತಿಯನ್ನು ಅವರ ತಿಂಗಳ ಮಗುವಿನೊಂದಿಗೆ ಮನೆಯಿಂದ ಹೊರಗೆ ಕಳುಹಿಸದಿದ್ದರೆ, ಸಮುದಾಯದಿಂದ ಶಾಶ್ವತ ಬಹಿಷ್ಕಾರ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ದಲಿತ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಸ್ವಜಾತಿಯಿಂದ ಬಹಿಷ್ಕಾರ

ಈ ಬೆಳವಣಿಗೆಯ ಬಗ್ಗೆ ಚಳ್ಳಕೆರೆಯ ಕಿವುಡ ಮತ್ತು ಮೂಗ ಶಾಲೆಯ ಸಿಬ್ಬಂದಿಗೆ ದಂಪತಿ ಮಾಹಿತಿ ನೀಡಿದ್ದಾರೆ. ಬಳಿಕ ದಂಪತಿಯನ್ನು ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದು, ಘಟನೆಯ ಬಗ್ಗೆ ತಹಶೀಲ್ದಾರ್‌ಗೆ ಮಾಹಿತಿ ನೀಡಲಾಗಿದೆ. ಈ ವಿಚಾರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗಮನಕ್ಕೂ ತರಲಾಗಿತ್ತು.

ತಹಶೀಲ್ದಾರ್ ರಹಾನ್ ಪಾಷಾ ಪುನರ್ವಸತಿ ಕೇಂದ್ರಕ್ಕೆ ಧಾವಿಸಿ, ದಂಪತಿಗೆ ಸರ್ಕಾರದಿಂದ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಸಮಾಜದ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಘಟನೆ ಕುರಿತು ಪೊಲೀಸ್ ದೂರು ದಾಖಲಿಸಲು ಮತ್ತು ಗ್ರಾಮದಲ್ಲಿ ಜಾಗೃತಿ ಅಭಿಯಾನವನ್ನು ಕೈಗೊಳ್ಳಲು ಆಡಳಿತವು ಚಿಂತನೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ನೋಡಿ:ಮಹಿಳೆಯರ ಭಾಗಿದಾರಿಕೆ ಇಲ್ಲದ ವ್ಯವಸ್ಥೆ ಪ್ರಜಾತಂತ್ರ ಆಗಲು ಹೇಗೆ ಸಾಧ್ಯ? – ಡಾ. ಮೀನಾಕ್ಷಿ ಬಾಳಿJanashakthi Media

Donate Janashakthi Media

Leave a Reply

Your email address will not be published. Required fields are marked *