ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ”ಅವಕಾಶ ಸಿಗುವ ಎಲ್ಲಾ ಸಮಯ”ಗಳಲ್ಲಿ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೆಹಲಿ ಪೊಲೀಸರು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ದೆಹಲಿ ಪೊಲೀಸರು ಈ ಹೇಳಿಕೆ ನಿಡಿದ್ದಾರೆ.
ಮಹಿಳಾ ಕುಸ್ತಿಪಟು ನೀಡಿದ ದೂರನ್ನು ಉಲ್ಲೇಖಿಸಿದ ದೆಹಲಿ ಪೊಲೀಸರನ್ನು ಪ್ರತಿನಿಧಿಸಿದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು, ”ತಜಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಿಜ್ ಭೂಷಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುವನ್ನು ತನ್ನ ಕೋಣೆಗೆ ಕರೆದು ಬಲವಂತವಾಗಿ ತಬ್ಬಿಕೊಂಡಿದ್ದರು. ಆದರೆ ಮಹಿಳಾ ಕುಸ್ತಿಪಟು ಇದನ್ನು ಪ್ರತಿಭಟಿಸಿದ ಮೇಲೆ, ಕುಸ್ತಿಪಟುವನ್ನು ತಾನು ಅಪ್ಪನ ಭಾವನೆಯಿಂದ ತಬ್ಬಿಕೊಂಡಿದ್ದೇನೆ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ.
“ಅವರು ತಮ್ಮ ನಡೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದರು ಎಂದು ಇದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ದೆಹಲಿ ಪೊಲೀಸರು ಹೇಳಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಗೋ ಮಾಂಸ ಸಾಗಾಟ ಆರೋಪ: ಶ್ರೀರಾಮ ಸೇನೆಯಿಂದ ಕಾರಿಗೆ ಬೆಂಕಿ
ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಆರು ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕೆಲಸದ ವಿಚಾರವಾಗಿ ಸಹಾಯ ಮಾಡುವುದಾಗಿ ಹೇಳಿ ಕನಿಷ್ಠ ಎರಡು ಸಂದರ್ಭಗಳಲ್ಲಿ ಬ್ರಿಜ್ ಭೂಷಣ್ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆರೋಪಿಯು ಲೈಂಗಿಕ ಕಿರುಕುಳ ಮತ್ತು ಇತರ ರೀತಿಯ ಕಿರುಕುಳದ ಸೇರಿದಂತೆ ಒಟ್ಟು 15 ಘಟನೆಗಳ ಬಗ್ಗೆ ದೂರು ನೀಡಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ , ಬಜರಂಗ್ ಪುನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಜನವರಿಯಲ್ಲಿ ಬ್ರಿಜ್ ಭೂಷಣ್ ವಿರುದ್ಧ ಮೊದಲು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು.
ಆರೋಪಗಳ ತನಿಖೆಗಾಗಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯು ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಕ್ರೀಡಾಪಟುಗಳು ಏಪ್ರಿಲ್ನಲ್ಲಿ ಮತ್ತೆ ಪ್ರತಿಭಟನೆ ಪ್ರಾರಂಭಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಕುರಿತು ಎಫ್ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ ನಂತರ ಬ್ರಿಜ್ ಭೂಷಣ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮಣಿಪುರ | 5 ತಿಂಗಳ ನಂತರ ಇಂಟರ್ನೆಟ್ ನಿಷೇಧ ತೆರವು ಮಾಡುವುದಾಗಿ ಸಿಎಂ ಘೋಷಣೆ
ಜೂನ್ 15 ರಂದು ಬ್ರಿಜ್ ಭೂಷಣ್ ವಿರುದ್ಧ 1,000 ಪುಟಗಳ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಅಪ್ರಾಪ್ತ ವಯಸ್ಕ ಕುಸ್ತಿಪಟುವಿನ ಮೇಲೆ ಬ್ರಿಜ್ ಭೂಷಣ್ ಮಾಡಿದ್ದ ಲೈಂಗಿಕ ಹಲ್ಲೆಯ ಆರೋಪವನ್ನು ಕೈಬಿಡುವಂತೆ ಪೊಲೀಸರು ಸಲಹೆ ನೀಡಿದ್ದರು, ಏಕೆಂದರೆ ಒಂದು ವೇಳೆ ಆ ಪ್ರಕರಣದ ದಾಖಲಾದರೆ, ಮಕ್ಕಳ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಆತನ ಬಂಧನ ಮಾಡಲೇಬೇಕಿತ್ತು.
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಮತ್ತು ಅವರ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರು ಆಗಸ್ಟ್ನಲ್ಲಿ ನಡೆದ ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದರು.
ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಬ್ರಿಜ್ ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಅಕ್ಟೋಬರ್ 7 ರಂದು ಕೋರ್ಟ್ ಮುಂದಿನ ವಿಚಾರಣೆ ನಡೆಸಲಿದೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 138 ಸಿನೆಮಾ : ಜೂಲ್ಸ್ ಮತ್ತು ಜಿಮ್ ಭಾಷೆ : ಫ್ರೆಂಚ್ ನಿರ್ದೇಶನ : ನಿರ್ದೇಶಕರು: ಪ್ರಾನ್ಸುವಾ ತ್ರೂಫಾ