ಅಸ್ಸಾಂ ಸಿಎಂ ಕುಟುಂಬದ ಕಂಪನಿಗೆ 10 ಕೋಟಿ ರೂ. ಸರ್ಕಾರಿ ಸಬ್ಸಿಡಿ!

ನವದೆಹಲಿ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕುಟುಂಬದ ಒಡೆತನದ ಮಾಧ್ಯಮ ಕಂಪನಿಯು 10 ಕೋಟಿ ರೂಪಾಯಿಗಳ ಸರ್ಕಾರದ ಸಹಾಯಧನವನ್ನು ಪಡೆದಿರುವುದು ವರದಿಯಾಗಿದೆ. ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ನಿರ್ವಹಿಸುವ ಪ್ರಧಾನ ಮಂತ್ರಿ ಕಿಸಾನ್ ಸಂಪದ್ ಯೋಜನೆಗಳ ಕೃಷಿ ಸಂಸ್ಕರಣಾ ಕ್ಲಸ್ಟರ್ ಕಾರ್ಯಕ್ರಮದ ಅಡಿಯಲ್ಲಿ ಸಹಾಯಧನವನ್ನು ನೀಡಲಾಗಿದೆ ಎಂದು ವರದಿ ಹೇಳಿದೆ.

ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ಗ ಎಂಬ ಅವರ ಕಂಪೆನಿಯ 25.88 ಕೋಟಿ ಮೌಲ್ಯದ ಯೋಜನೆಗೆ ನವೆಂಬರ್ 10 ರಂದು ಸಬ್ಸಿಡಿ ನೀಡಲಾಗಿದೆ ಎಂದು ನ್ಯೂಸ್‌ಲಾಂಡ್ರಿ ವರದಿ ಮಾಡಿದೆ. ಅಸ್ಸಾಮಿ ಸುದ್ದಿ ವೆಬ್‌ಸೈಟ್ ದಿ ಕ್ರಾಸ್ ಕರೆಂಟ್‌ ಕೂಡಾ ಈ ಬಗ್ಗೆ ವರದಿಯನ್ನು ಪ್ರಕಟಿಸಿದೆ.

ಇದನ್ನೂ ಓದಿ: ಗಂಡು ಮಗುವಿಗಾಗಿ ಮಂತ್ರವಾದಿಯ ಮಾತಿನಂತೆ ಸ್ವಂತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ತಂದೆ!

ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಪ್ರಧಾನವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ, ಅವರ ತಾಯಿ ಮೃಣಾಲಿನಿ ದೇವಿ, ಅವರ ಮಗ ನಂದಿಲ್ ಬಿಸ್ವಾ ಶರ್ಮಾ ಮತ್ತು ಅವರ ಮಗಳು ಸುಕನ್ಯಾ ಶರ್ಮಾ ಸೇರಿದಂತೆ ಅವರ ಕುಟುಂಬದ ಒಡೆತನದಲ್ಲಿದೆ.

ಕಂಪೆನಿಯು ಎರಡು ಸುದ್ದಿ ವಾಹಿನಿಗಳು, ಒಂದು ಪತ್ರಿಕೆ, ಡಿಜಿಟಲ್ ಪೋರ್ಟಲ್ ಮತ್ತು ಕನಿಷ್ಠ ಮೂರು ಮನರಂಜನಾ ಚಾನೆಲ್‌ಗಳನ್ನು ಹೊಂದಿರುವ ಈಶಾನ್ಯ ಭಾರತದ ಅತಿದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ವ್ಯಾಪಾರ ಆಸಕ್ತಿಗಳನ್ನು ರೇಷ್ಮೆ ಉತ್ಪಾದನೆ ಮತ್ತು ಆಹಾರ ಸಂಸ್ಕರಣೆಗೆ ವಿಸ್ತರಿಸಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ದಾಖಲೆಗಳ ಹೇಳುತ್ತವೆ.

ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಹಿಮಂತ ಬಿಸ್ವಾ ಶರ್ಮಾ, “ನನ್ನ ಪತ್ನಿ ಅಥವಾ ಅವರು ಸಂಬಂಧ ಹೊಂದಿರುವ ಕಂಪನಿಯು ಭಾರತ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯಧನವನ್ನು ಪಡೆದಿಲ್ಲ” ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಅಮೆರಿಕಾದ ಸೇಬಿಗೆ ಆಮದು ಸುಂಕ ಕಡಿತದ ಲಾಭ, ಭಾರತದ ಸೇಬು ಬೆಳೆಗಾರರಿಗೆ ದುರಂತ

ಕಳೆದ ವರ್ಷ ಫೆಬ್ರವರಿ 4 ರಂದು, ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಪ್ರಸ್ತಾವಿತ ಆಹಾರ ಸಂಸ್ಕರಣಾ ಘಟಕಕ್ಕಾಗಿ ನಾಗೋನ್‌ನ ಕಲಿಯಾಬೋರ್ ವೃತ್ತದ ದಾರಿ ಗೋಜಿ ಗ್ರಾಮದಲ್ಲಿ ಸುಮಾರು 30 ಎಕರೆ ಭೂಮಿಯನ್ನು ಬೇರೆ ಬೇರೆ ಜನರಿಂದ ಸ್ವಾಧೀನಪಡಿಸಿಕೊಂಡಿತ್ತು. ಈ ಪ್ಲಾಟ್‌ಗಳನ್ನು ಖರೀದಿಸುವ ಸಮಯದಲ್ಲಿ ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿತ್ತು. ಆದರೆ 2022ರ ಏಪ್ರಿಲ್ 18ರಂದು ಈ ಪ್ಲಾಟ್‌ಗಳಲ್ಲಿ ಕೆಲವನ್ನು ಕೃಷಿಯಿಂದ ಉದ್ಯಮಕ್ಕೆ ಬದಲಾಯಿಸಲಾಗಿದೆ ಎಂದು ಎಂದು ದಾಖಲೆಗಳು ಹೇಳುತ್ತವೆ ಎಂದು ವರದಿ ಹೇಳಿವೆ. ಇದರ ನಂತರ 10 ಕೋಟಿ ರೂ.ಗಳ ಸಹಾಯಧನ ನೀಡುವಂತೆ ಕೋರಲಾಗಿತ್ತು.

ಈಶಾನ್ಯ ಭಾರತದ ಸುದ್ದಿ ಮಾಧ್ಯಮ ದಿ ಕ್ರಾಸ್ ಕರೆಂಟ್ ಈ ಮಾಹಿತಿಯನ್ನು ಬಹಿರಂಗಪಡಿಸಿದ ನಂತರ ವಿವಾದ ಹುಟ್ಟಿಕೊಂಡಿತ್ತು. ಸೆಪ್ಟೆಂಬರ್ 12 ರಂದು ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಖಿಲ್ ಗೊಗೊಯ್ ಅವರು ಸಿಎಂ ಶರ್ಮಾ ಅವರಿಂದ ಈ ಬಗ್ಗೆ ಉತ್ತರವನ್ನು ಕೇಳಿದ್ದರು. ಅಸ್ಸಾಂ ಪ್ರದೇಶ ಕಾಂಗ್ರೆಸ್ ಕೂಡ ತನಿಖೆಗೆ ಒತ್ತಾಯಿಸಿದ್ದು, “ಸಿಎಂ ಬಿಸ್ವಾ ಶರ್ಮಾಅವರು ರಾಜ್ಯದ ಜನರಿಗಾಗಿ ಕೆಲಸ ಮಾಡುವ ಬದಲಿಗೆ ತನ್ನ ಹೆಂಡತಿ ಮತ್ತು ಕುಟುಂಬಕ್ಕಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.

ವಿಡಿಯೊ ನೋಡಿ: ‘ಚಲೋ ಬೆಳ್ತಂಗಡಿ’ ಮಹಾ ಧರಣಿ

Donate Janashakthi Media

Leave a Reply

Your email address will not be published. Required fields are marked *