ತನಿಖೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಢರೇಶನ್ ಆಗ್ರಹ, ಮೂರು ಹಂತದ ಹೋರಾಟಕ್ಕೆ ನಿರ್ಧಾರ
ಬೆಂಗಳೂರು: ಜುಲೈ 20 ರಂದು ಕಾರ್ಮಿಕ ಸಚಿವರು ತಮ್ಮಕಚೇರಿಯಲ್ಲಿ ಕಟ್ಟಡ ಕಾರ್ಮಿಕ ಸಂಘಗಳ ಜತೆ ನಡೆಸಿದ ಸಭೆಯಲ್ಲಿ ಇನ್ನೂ ಮುಂಡಳಿಯಲ್ಲಿ ಯಾವುದೇ ಖರೀದಿಗಳು ನಡೆಯುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ 71 ಕೋಟಿ ಮೌಲ್ಯದ 10 ಸಾವಿರ ಲ್ಯಾಪ್ಟಾಪ್ ಖರೀದಿ ಮಾಡಿರುವುದರ ಹಿಂದೆ ಭ್ರಷ್ಟಾಚಾರದ ವಾಸನೆ ಸ್ಪಷ್ಟವಾಗಿ ಇದೆ. ಈ ಖರೀದಿಗಳ ಕುರಿತಾಗಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿಐಟಿಯು ಸಂಯೋಜಿತ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ರಿ) ಆಗ್ರಹಪಡಿಸಿದೆ. ಖರೀದಿ
ಇದನ್ನೂ ಓದಿ:ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದ ನಕಲಿ ಫಲಾನುಭವಿಗಳ ಗುರುತಿನ ಚೀಟಿ ರದ್ದತಿಗೆ ಅಭಿಯಾನ; ಕಾರ್ಮಿಕ ಇಲಾಖೆ
ಈ ಕುರಿತು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಪ್ರತಿಕ್ರಿಯಿಸಿದ್ದ, ಕಲ್ಯಾಣ ಮಂಡಳಿಯ ವಿಷಯದಲ್ಲಿ ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಗಳ ಸಭೆ ನಡೆಸುವ ಅಗತ್ಯವಿದೆ ಎಂದರು. ಹಿಂದಿನ ಬಿಜೆಪಿ ಸರ್ಕಾರದ ಕಾರ್ಮಿಕ ಸಚಿವ ಶ್ರೀ ಶಿವರಾಮ ಹೆಬ್ಬಾರ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದ ವ್ಯಾಪಕ ಅವ್ಯವಹಾರ, ಭ್ರಷ್ಟಾಚಾರ, ಆಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಕಟ್ಟಡ ಕಾರ್ಮಿಕರ ಹಲವು ಬಾರಿ ಹೋರಾಟ ನಡೆಸಿದ್ದಾರೆ ಮತ್ತು ಅಂತಹ ಭ್ರಷ್ಟ ಸರ್ಕಾರವನ್ನು ಸೋಲಿಸಿದ್ದಾರೆ ಎಂದು ಹೇಳಿದರು.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ಪ್ರಮುಖವಾಗಿ ಮರಣ ಪರಿಹಾರ, ಪಿಂಚಣಿ, ಹೆರಿಗೆ ಭತ್ಯೆ ಮತ್ತು ಆರೋಗ್ಯ ಪರಿಹಾರ,ಶೈಕ್ಷಣಿಕ ಸಹಾಯ ಧನ ವಸತಿ ಸೌಲಭ್ಯ, ಮದುವೆ ಸಹಾಯ ಧನ ಸೇರಿ ಹತ್ತಾರು ಸೌಲಭ್ಯಗಳ ಸಾವಿರಾರು ಅರ್ಜಿಗಳು ಬಾಕಿ ಇವೆ. ಶೈಕ್ಷಣಿಕ ಧನಸಹಾಯಕ್ಕಾಗಿ 11 ಲಕ್ಷ ಅರ್ಜಿಗಳಿಗೆ ಧನ ಸಹಾಯ ಇತ್ಯರ್ಥವಾಗಿಲ್ಲ ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದರು.
ಈ ಬಗ್ಗೆ ನಿರಂತರವಾಗಿ ಹೊಸ ಸರ್ಕಾರದ ಕಾರ್ಮಿಕ ಸಚಿವರು ಹಾಗೂ ಮಂಡಳಿ ಕಾರ್ಯದರ್ಶಿ ಗಳ ಜತೆ ಮಾತುಕತೆ ನಡೆಸಲಾಗಿದೆ ಹೋರಾಟಗಳನ್ನು ಸಂಘಟಿಸಲಾಗಿದೆ. ಈ ಕುರಿತು ಶೀಘ್ರವಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ಸಚಿವರು ಅಧಿಕಾರಿಗಳು ಇದ್ದಕ್ಕಿದ್ದಂತೆ ತಮ್ಮ ಮಾತಿನಿಂದ ದೂರ ಸರಿದು ಈಗ ಮತ್ತೆ ಹಿಂದಿನ ಬಿಜೆಪಿ ಸರ್ಕಾರದಂತೆ ಖರೀದಿಗಳ ಹಿಂದೆ ಬಿದ್ದಿದ್ದಾರೆ. ಇತ್ತೀಚೆಗೆ ಪುನರಚಿಸಲಾದ ಕಲ್ಯಾಣ ಮಂಡಳಿಯಲ್ಲೂ ಕಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ಉದ್ದೇಶಪೂರ್ವಕವಾಗಿ ಕೈ ಬಿಟ್ಟು ಕೇವಲ ಕೆಲ ಹಿಂಬಾಲಕರನ್ನು ಸೇರಿಸಿಕೊಂಡು ಕಲ್ಯಾಣ ಮಂಡಳಿ ಮೂಲ ಆಶಯವನ್ನೇ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಸಾಮಾಜಿಕ ಭದ್ರತೆಗಾಗಿ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮಾವೇಶ
ಕಾರ್ಮಿಕ ಸಂಘಗಳ ಜತೆಗಿನ ಸಭೆಯಲ್ಲಿ ಎಲ್ಲ ಖರೀದಿಗಳನ್ನು ನಿಲ್ಲಿಸಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದ ಸಚಿವರು ಮತ್ತೊಂದು ಕಡೆ ಹಿಂದಿನ ಸಚಿವ ಶಿವರಾಂ ಹೆಬ್ಬಾರ್ ಸಮಯದಲ್ಲಿ 16-03-2023 ರಂದು ತಡೆಹಿಡಿಯಲಾಗಿದ್ದ ಟೆಂಡರ್ಗೆ ಮತ್ತೆ ಜೀವ ನೀಡಿ 17-08-2023ರಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಮೂಲಕ 10 ಸಾವಿರ ಲ್ಯಾಪ್ಟಾಪ್ ಖರೀದಿಸಿ ಎಲ್ಲ 5 ಉಪ ಕಾರ್ಮಿಕ ಆಯುಕ್ತರಿಗೆ ತಲಾ 1400 ರಂತೆ ಹಂಚಿಕೆ ಮಾಡಲಾಗಿದೆ. ಇದರ ಪ್ರಕಾರ ಪ್ರತಿ ಲ್ಯಾಪ್ಟಾಪ್ಗೆ 71,000/-ದಂತೆ ಹಣ ಪಾವತಿ ಮಾಡಲಾಗಿದೆ. ಇದರ ಬೆಲೆ ಮಾರುಕಟ್ಟೆಯಲ್ಲಿ ಹಾಲಿ 31,000/- ಇದೆ, ಅಂದರೆ ಪ್ರತಿ ಲ್ಯಾಪ್ಟಾಪ್ಗೆ 40,000/- ವ್ಯತ್ಯಾಸವಿದ ಅಂದರೆ ಲ್ಯಾಪ್ಟಾಪ್ ಖರೀದಿ ಮೂಲಕ ಸುಮಾರು 28 ಕೋಟಿ ರೂ.ಗಳ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿದರು.
ಈ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಕಾರ್ಮಿಕ ಸಚಿವಾಲಯದ ಎಲ್ಲಾ ಆದೇಶಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಆದ್ದರಿಂದ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗುವಂತೆ ಮಾಡಲು ಮಾನ್ಯ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ತಮ್ಮ ಅಧ್ಯಕ್ಷತೆಯಲ್ಲಿ ಕೂಡಲೇ ಕಟ್ಟಡ ಕಾರ್ಮಿಕ ಸಂಘಗಳೊಂದಿಗೆ ಸಭೆಯನ್ಯು ಆಯೋಜಿಸಬೇಕು ಎಂದರು.
ಹೋರಾಟಕ್ಕೆ ಕರೆ:
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಎಲ್ಲ ವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಮತ್ತು ಕಾರ್ಮಿಕರಿಗೆ ಬಾಕಿ ಇರುವ ಸೌಲಭ್ಯಗಳ ಅರ್ಜಿಗಳಿಗೆ ಧನಸಹಾಯ ಪಾವತಿಸಲು ಆಗ್ರಹಿಸಿ ಸೆಪ್ಟೆಂಬರ್ 25 ರಂದು ಎಲ್ಲ ಕಾರ್ಮಿಕ ನಿರೀಕ್ಷಕರ ಕಚೇರಿ ಎದುರು, ಅಕ್ಟೋಬರ್ 26 ಹಾಗೂ 27 ರಂದು ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಧರಣಿಯನ್ನು ಹಾಗೂ ಅಂತಿಮವಾಗಿ ನವೆಂಬರ್ 24 ರಿಂದ ಬೆಂಗಳೂರಿನ ಕಲ್ಯಾಣ ಮಂಡಳಿ ಮುಂಭಾಗ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.