ದೆಹಲಿ: ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ನಾಲ್ವರು ಸದಸ್ಯರಿಗೆ ತಮ್ಮ ಸತ್ಯಶೋಧನಾ ವರದಿಯ ಮೇಲೆ ದಾಖಲಿಸಲಾದ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ತನ್ನ ನಿರ್ದೇಶನಗಳ ಕಾರ್ಯಾಚರಣೆಯನ್ನು ವಿಸ್ತರಿಸುವುದಾಗಿ ಹೇಳಿದೆ.
ಪ್ರಕರಣದಲ್ಲಿ ಸೆಪ್ಟೆಂಬರ್ 6 ರಂದು ಜಾಮೀನು ನೀಡಲಾಗಿತ್ತು. ಇದೀಗ ಮತ್ತೆ ಸುಪ್ರೀಂಕೋರ್ಟ್ ಮಣಿಪುರ ಪೊಲೀಸರಿಗೆ ನಾಲ್ವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಕೇಳಿಕೊಂಡಿದೆ. ಶುಕ್ರವಾರ ಮುಂದಿನ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ. ಮಣಿಪುರ ಪೊಲೀಸರಿಂದ ಪರಿಹಾರ ಕೋರಿ ಎಡಿಟರ್ಸ್ ಗಿಲ್ಡ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಇದನ್ನೂ ಓದಿ: ಈದ್ಗಾ ಮೈದಾನದ ಗೋಡೆ ಕೆಡವುದಾಗಿ ವಿವಾದಾತ್ಮಕ ಹೇಳಿಕೆ: ಸನಾತನ ಸಂಘಟನೆ ಕಾರ್ಯಕರ್ತನ ವಿರುದ್ಧ ಎಫ್ಐಆರ್ ದಾಖಲು
ಹಿರಿಯ ಪತ್ರಕರ್ತರಾದ ಭರತ್ ಭೂಷಣ್, ಸಂಜಯ್ ಕಪೂರ್ ಮತ್ತು ಸೀಮಾ ಗುಹಾ ಅವರು ಸೆಪ್ಟೆಂಬರ್ 2 ರಂದು ವರದಿಯನ್ನು ಪ್ರಕಟಿಸಿದ್ದರು. ಮೂವರು ಕೂಡಾ ಆಗಸ್ಟ್ 7 ರಿಂದ ಆಗಸ್ಟ್ 10 ರವರೆಗೆ ಮಣಿಪುರದಲ್ಲಿದ್ದು, ಅಲ್ಲಿನ ಜನರು, ಪತ್ರಕರ್ತರು ಮತ್ತು ಇತರರೊಂದಿಗೆ ಮಾತನಾಡಿದ್ದರು.
ಮಣಿಪುರದ ಮಾಧ್ಯಮಗಳು”ಮೈತೇಯಿ ಮಾಧ್ಯಮಗಳಾಗಿ ಮಾರ್ಪಟ್ಟಿರುವಂತೆ ಕಾಣುತ್ತಿದೆ” ಎಂದು ವರದಿ ಹೇಳಿತ್ತು. ಈ ವರದಿಯ ಹಿನ್ನಲೆ, ಎಡಿಟರ್ಸ್ ಗಿಲ್ಡ್ನ ಮೂವರು ಸದಸ್ಯರು ಮತ್ತು ಅದರ ಅಧ್ಯಕ್ಷರ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ವರದಿಯು ಮಾನಹಾನಿ ಮಾಡಿದ್ದು, ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಆರೋಪಸಲಾಗಿತ್ತು.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದೇ ಸನಾತನ ಧರ್ಮದ ತಾರತಮ್ಯ: ಉದಯನಿಧಿ ಸ್ಟಾಲಿನ್
ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕೂಡ ಗಿಲ್ಡ್ ವಿರುದ್ಧ ವಾಗ್ದಾಳಿ ನಡೆಸಿ, “ನಾನು ಎಡಿಟರ್ಸ್ ಗಿಲ್ಡ್ ಸದಸ್ಯರಿಗೆ ಎಚ್ಚರಿಕೆ ನೀಡುತ್ತೇನೆ. ನೀವು ಏನಾದರೂ ಒಳ್ಳೆಯದು ಮಾಡಲು ಬಯಸಿದರೆ, ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ವಾಸ್ತವತೆಯನ್ನು ನೋಡಿ. ಎಲ್ಲಾ ಸಮುದಾಯಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ನಂತರ ನೀವು ಕಂಡುಕೊಂಡದ್ದನ್ನು ಪ್ರಕಟಿಸಿ. ಆದರೆ ಕೆಲವು ವಿಭಾಗಗಳನ್ನು ಮಾತ್ರ ಭೇಟಿ ಮಾಡಿ ತೀರ್ಮಾನಕ್ಕೆ ಬರುವುದು ಅತ್ಯಂತ ಖಂಡನೀಯ” ಎಂದು ಹೇಳಿದ್ದರು.
“ವರದಿಯ ಮೂಲ ಕಲ್ಪನೆಯು ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಾಧ್ಯಮಗಳ ನಡವಳಿಕೆಯ ಬಗ್ಗೆ ಆತ್ಮಾವಲೋಕನ ಮತ್ತು ಪ್ರತಿಬಿಂಬವನ್ನು ಸಕ್ರಿಯಗೊಳಿಸುವುದು” ಎಂದು ಹೇಳಿರುವ ಎಡಿಟರ್ಸ್ ಗಿಲ್ಡ್, ಎಫ್ಐಆರ್ಗಳನ್ನು ಮುಚ್ಚುವಂತೆ ಮಣಿಪುರ ಸರ್ಕಾರವನ್ನು ಒತ್ತಾಯಿಸಿದೆ. ಜೊತೆಗೆ ಸಂಸ್ಥೆಯನ್ನು ‘ರಾಜ್ಯ ವಿರೋಧಿ’ ಮತ್ತು ‘ರಾಷ್ಟ್ರವಿರೋಧಿ’ ಎಂದು ಕರೆದಿರುವ ಸಿಎಂ ಅವರು ಹೇಳಿಕೆಯನ್ನು ‘ತೀವ್ರ ಆತಂಕಕಾರಿ’ ಎಂದು ಗಿಲ್ಡ್ ಹೇಳಿದೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 137, ಸಿನೆಮಾ : ಏಕ್ ದಿನ ಅಚಾನಕ್, ವಿಶ್ಲೇಷಣೆ : ಮೀನಾಕ್ಷಿ ಬಾಳಿ Janashakthi Media