ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ಮಧ್ಯೆ ದೆಹಲಿ ಐಐಟಿ ಪ್ರೊಫೆಸರ್ ದಿವ್ಯಾ ದ್ವಿವೇದಿ ಅವರು, “ಭವಿಷ್ಯದ ಭಾರತವು ಜಾತಿ ದಬ್ಬಾಳಿಕೆ ಮತ್ತು ಹಿಂದೂ ಧರ್ಮವಿಲ್ಲದ ಸಮಾನತೆಯ ಭಾರತವಾಗಿ ಇರಲಿದೆ” ಎಂದು ಶನಿವಾರ ಹೇಳಿದ್ದಾರೆ. ಫ್ರೆಂಚ್ ಮಾಧ್ಯಮವೊಂದಕ್ಕೆ ಅವರು ನೀಡಿದ್ದ ಸಂದರ್ಶನದ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಫ್ರೆಂಚ್ ಮಾಧ್ಯಮದ ಜೊತೆಗೆ ಮಾತನಾಡಿದ ದಿವ್ಯಾ ದ್ವಿವೇದಿ ಅವರು, “ಇಲ್ಲಿ ಎರಡು ಭಾರತಗಳಿವೆ. ಬಹುಸಂಖ್ಯಾತ ಜನಸಂಖ್ಯೆಯನ್ನು ದಮನಿಸುವ, ಜಾತಿ ಎಂಬ ಜನಾಂಗೀಯತೆಯಿರುವ ಹಳೆಯ ಭಾರತ ಮತ್ತು ಎರಡನೆಯದ್ದು ಭವಿಷ್ಯದ ಭಾರತ, ಅದು ಜಾತಿ ದಬ್ಬಾಳಿಕೆ ಮತ್ತು ಹಿಂದೂ ಧರ್ಮವಿಲ್ಲದ ಸಮಾನತೆಯ ಭಾರತವಾಗಿದೆ. ಇದು ಇನ್ನೂ ಪ್ರತಿನಿಧಿಸದ ಭಾರತವಾಗಿದ್ದು, ಆದರೆ ಜಗತ್ತಿಗೆ ತನ್ನ ನೋಟವನ್ನು ಜಗತ್ತಿಗೆ ತೋರಿಸಲು ಹಂಬಲಿಸುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ಆಹ್ವಾನಿಸದಿರುವುದೇ ಸನಾತನ ಧರ್ಮದ ತಾರತಮ್ಯ: ಉದಯನಿಧಿ ಸ್ಟಾಲಿನ್
ಭಾರತದ ಜಾತಿ ವ್ಯವಸ್ಥೆಯ ನಿರಂತರ ಪ್ರಭಾವದ ಬಗ್ಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಜನಸಂಖ್ಯೆಯು (ಮೇಲ್ಜಾತಿ) ದೇಶದ ಹೆಚ್ಚಿನ ಲಾಭದಾಯಕ ಮತ್ತು ಶಕ್ತಿಯುತ ಸ್ಥಾನಗಳನ್ನು ಭದ್ರಪಡಿಸಿಕೊಂಡಿದೆ. ಜೊತೆಗೆ ಈ ಪರಿಸ್ಥಿತಿ ಪ್ರಸ್ತುತ ದಿನಗಳಲ್ಲೂ ಮುಂದುವರೆದಿದೆ ಎಂದು ಹೇಳಿದ್ದಾರೆ.
“ಭಾರತವು 3000 ವರ್ಷಗಳಿಂದ ಜಾತಿ ಎಂಬ ಜನಾಂಗೀಯತೆಯಿಂದ ರೂಪುಗೊಂಡಿದೆ. ಅಲ್ಲಿ 10% ಮೇಲ್ಜಾತಿ ಅಲ್ಪಸಂಖ್ಯಾತರಾಗಿದ್ದಾರೆ. ಆದರೆ ಅವರು 90% ದಷ್ಟು ಲಾಭದಾಯಕ ಮತ್ತು ಶಕ್ತಿಯುತ ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದಾರೆ. ಈ ಸ್ಥಿತಿ ಇಂದಿಗೂ ಮುಂದುವರೆದಿದೆ” ಎಂದು ದಿವ್ಯಾ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮವನ್ನು ಒಪ್ಪಿಕೊಳ್ಳುವವರು ಮನುಷ್ಯರೆ ಅಲ್ಲ; ಉದಯನಿಧಿ ಹೇಳಿಕೆ ಸಮರ್ಥಿಸಿದ ಡಿಎಂಕೆ ನಾಯಕ ಎ. ರಾಜಾ
ದಿವ್ಯಾ ದ್ವಿವೇದಿ ಯಾರು?
ದಿವ್ಯಾ ದ್ವಿವೇದಿ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಅವರು ತತ್ವಜ್ಞಾನ, ಮಾರ್ಕ್ಸ್ವಾದ, ಹಿಂದೂಫೋಬಿಯಾ, ಆಂಟಾಲಜಿ, ಮೆಟಾಫಿಸಿಕ್ಸ್, ಸಾಹಿತ್ಯ ಮತ್ತು ರಾಜಕೀಯದ ತತ್ವಶಾಸ್ತ್ರದ ಬಗ್ಗೆ ಬರೆಯುವ ಲೇಖಕಿ ಆಗಿಯೂ ಗುರುತಿಸಿಕೊಂಡಿದ್ದಾರೆ.
ದಿವ್ಯಾ ಅವರು ಈ ಹಿಂದೆ ಕೂಡಾ ಜಾತಿ ಪದ್ದತಿಗಳು ಮತ್ತು ಹಿಂದೂ ಧರ್ಮದ ಬಗ್ಗೆ ಮಾತನಾಡಿದ್ದರು. ” ಹಿಂದೂ ಧರ್ಮವೂ 20 ನೇ ಶತಮಾನದ ಆರಂಭದಲ್ಲಿ ಕಂಡುಹಿಡಿದ ಸುಳ್ಳು ಧರ್ಮ” ಎಂದು ಅವರು ಪ್ರತಿಪಾದಿಸಿದ್ದರು.
ದಿವ್ಯಾ ಅಲಹಾಬಾದ್ ಮೂಲದವರಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿರುವ ರಾಕೇಶ್ ದ್ವಿವೇದಿ ಅವರ ಪುತ್ರಿಯಾಗಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾನಿಲಯದ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ದೆಹಲಿ ವಿಶ್ವವಿದ್ಯಾನಿಲಯದಿಂದ ತನ್ನ M.Phil ಅನ್ನು ಪಡೆದ ಅವರು, IIT ದೆಹಲಿಯಿಂದ ಡಾಕ್ಟರೇಟ್ ಪಡೆದಿದ್ದಾರೆ.
ವಿಡಿಯೊ ನೋಡಿ: ಕವಿತಾ ಕೃಷ್ಣನ್ ಸಂದರ್ಶನ ನೋಡಿ:
ವಿಡಿಯೊ ನೋಡಿ: ಚಂದ್ರಯಾನ 3 – ಸುತ್ತಮುತ್ತ ಖಗೋಳ ವಿಜ್ಞಾನಿ ಪಾಲಹಳ್ಳಿ ವಿಶ್ವನಾಥ್ ಜೊತೆ ಮಾತುಕತೆ Janashakthi Media