“ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್ ಪರ; ಒವಾಸಿ ವಿವಾದಿತ ಹೇಳಿಕೆ” ಎಂಬ ತಲೆ ಬರಹವಿರುವ ಪತ್ರಿಕೆಯ ಕಟ್ಟಿಂಗ್ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹೈದರಾಬಾದ್ ಸಂಸದ, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆಂದು ಆರೋಪಿಸುವ ಈ ಪೇಪರ್ ಕಟ್ಟಿಂಗ್ 2020ರಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೀಗ ಮತ್ತೆ ಸಾಮಾಜಿಕ ಮಾಧ್ಯಮ ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ಗಳಲ್ಲಿ ಹರಿದಾಡುತ್ತಿದೆ.
“ಕೊನೆಗೂ ಭಾರತದ ಜಿಹಾದಿ ಮುಸ್ಲಿಮರ ಮನದ ಇಂಗಿತವನ್ನು ನೈಜ ಹಿಂದೂ ಭಾರತೀಯರ ಮುಂದೆ ಇಟ್ಟ ಪಾಕಿಸ್ತಾನದ ಅನಭಿಷಿಕ್ತ ನಾಯಕ ಒವೈಸಿ!. ಎಲ್ಲೊದ್ರಪ್ಪಾ ಜಾತ್ಯಾತೀತತೆ,ಸರ್ವ ಜನಾಂಗದ ಶಾಂತಿಯ ತೋಟ ಅಂತಾ ಉದ್ದುದ್ದ ಭಾಷಣ ಮಾಡ್ತಿದ್ದ ನಾಲಾಯಕರು” ಎಂದು ಹೇಳಿಕೆಯೊಂದಿಗೆ ಈ ಪತ್ರಿಕೆಯ ಕಟ್ಟಿಂಗ್ ವಾಟ್ಸಪ್‌ನಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಬೆಂಬಲಿಗ Kiran K R Kenchanahalli ಎಂಬವರು ಫೇಸ್‌ಬುಕ್‌ನಲ್ಲೂ ಇದನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | ಫ್ಯಾಕ್ಟ್‌ಚೆಕ್: ಬುರ್ಖಾ ಧರಿಸಿ ಮಹಿಳಾ ವಾಶ್‌ರೂಮ್‌ನಲ್ಲಿ ಮೊಬೈಲ್ ಚಿತ್ರೀಕರಣ ಮಾಡಿದ ಈ ವ್ಯಕ್ತಿ ಮುಸ್ಲಿಂ ಅಲ್ಲ.
ಸುಳ್ಳಿನ ಮೂಲಕ ಬಿಜೆಪಿ ಪರವಾಗಿ ಪ್ರೊಪಗಾಂಡ ಹರಡುವ ಪೋಸ್ಟ್‌ಕಾರ್ಡ್ ಎಂಬ ಬಲಪಂಥೀಯ ಪೇಜ್‌ಗಳನ್ನು ನಡೆಸುತ್ತಿರುವ ಮಹೇಶ್ ವಿಕ್ರ ಹೆಗ್ಡೆ ಎಂಬವರ ಪೇಜ್‌ನಲ್ಲಿ ಇದೇ ಪೇಪರ್ ಕಟಿಂಗ್ ಅನ್ನು 2020 ಫೆಬ್ರವರಿ 21ರಂದು ಸಂತೋಷ್ ಕುಮಾರ್ ಎಂಬ ಖಾತೆಯು ಕಮೆಂಟ್ ಮಾಡಿದ್ದರು. ಅದರ ನಂತರ 2020ರ ಫೆಬ್ರವರಿ 24ರಂದು ”Chanukya / ಚಾಣಕ್ಯ ನೀತಿ” ಎಂಬ ಬಿಜೆಪಿ ಪರ ಫೇಸ್‌ಬುಕ್ ಪೇಜ್ ಇದೇ ಚಿತ್ರವನ್ನು ಹಂಚಿಕೊಂಡಿತ್ತು. ಅದರ ನಂತರ ಈ ಚಿತ್ರವನ್ನು 2020ರ ಮೇ 24ರಂದು “BJP Volunteer’s” ಎಂಬ ಫೇಸ್‌ಬುಕ್ ಪೇಜ್ ಹಂಚಿಕೊಂಡಿತ್ತು.
2020ರ ಫೆಬ್ರವರಿ 24ರಂದು ”Chanukya / ಚಾಣಕ್ಯ ನೀತಿ” ಎಂಬ ಪೇಜ್‌ನಲ್ಲಿ ಹಂಚಿದ್ದ ಈ ಚಿತ್ರವನ್ನು 2700ಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ.
ಇದನ್ನೂ ಓದಿ: ಆಡಳಿತಕ್ಕೆ ಕಳಂಕ ತರುವ ಋಣಾತ್ಮಕ ಸುದ್ದಿಗಳ ಫ್ಯಾಕ್ಟ್‌ಚೆಕ್ ಮಾಡಿ: ಡಿಸಿಗಳಿಗೆ ಯುಪಿ ಸರ್ಕಾರ ಪತ್ರ
ಫ್ಯಾಕ್ಟ್‌ಚೆಕ್
” ‘ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್ ಪರ’ ಒವಾಸಿ ವಿವಾದಿತ ಹೇಳಿಕೆ” ಎಂಬ ಕೀವರ್ಡ್ ಅನ್ನು ಇಟ್ಟುಕೊಂಡು ನಾವು ಗೂಗಲ್‌ನಲ್ಲಿ ಹುಡುಕಾಡಿದಾಗ ಈ ರೀತಿಯಲ್ಲಿ ಕನ್ನಡ ಪತ್ರಿಕೆಗಳು ವರದಿ ಮಾಡಿರುವ ಯಾವುದೆ ವರದಿಗಳು ನಮಗೆ ಲಭ್ಯವಾಗಿಲ್ಲ. ಜೊತೆಗೆ ಇಂಗ್ಲಿಷ್‌ನಲ್ಲೂ ಕಿ ವರ್ಡ್ ಹಾಕಿ ಹುಡುಕಿದಾಗ ಕೂಡಾ ಅಸಾದುದ್ದೀನ್ ಒವೈಸಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂಬ ಯಾವುದೆ ವರದಿಗಳು ನಮಗೆ ಲಭ್ಯವಾಗಿಲ್ಲ.
ಚುನಾಯಿತ ಪ್ರತಿನಿಧಿ ಆಗಿರುವ ಅಸಾದುದ್ದೀನ್ ಒವೈಸಿ ಅವರು ಒಂದು ವೇಳೆ ಈ ರೀತಿಯ ವಿವಾದಿತ ಹೇಳಿಕೆ ನೀಡಿರುತ್ತಿದ್ದರೆ ದೇಶದ ಪ್ರಮುಖ ಇಂಗ್ಲಿಷ್ ಪತ್ರಿಕೆಗಳು ಅದನ್ನು ಖಂಡಿತಾ ವರದಿ ಮಾಡಿರುತ್ತಿದ್ದವು. ಆದರೆ ಯಾವುದೆ ಇಂಗ್ಲಿಷ್ ಅಥವಾ ಕನ್ನಡ ಪತ್ರಿಕೆಗಳು, ವೆಬ್‌ಸೈಟ್‌ಗಳು ಅವರು ಈ ರೀತಿಯಾಗಿ ಹೇಳಿಕೆ ನೀಡಿರುವ ಬಗ್ಗೆ ವರದಿಗಳನ್ನು ಮಾಡಿರುವುದು ನಮಗೆ ಲಭ್ಯವಾಗಿಲ್ಲ.
ವಾಸ್ತವದಲ್ಲಿ ಪೇಪರ್ ಕಟ್ಟಿಂಗ್ ಅಲ್ಲಿ ಏನಿದೆ?
ವೈರಲ್ ಪೇಪರ್ ಕಟ್ಟಿಂಗ್ ಅಲ್ಲಿ ” ‘ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್ ಪರ’ ಒವಾಸಿ ವಿವಾದಿತ ಹೇಳಿಕೆ ” ಎಂಬ ತಲೆಬರಹವಿದ್ದರೂ, ಸುದ್ದಿಯ ವಿವರಣೆಯನ್ನು ಸೂಕ್ಷ್ಮವಾಗಿ ನೋಡಿದರೆ, “ಹೈದರಾಬಾದ್ ಸಂಸದ ಅಸಾದುದ್ದೀನ್ ಒವಾಸಿ ಮತ್ತೊಮ್ಮೆ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿದ್ದಾರೆ. ಒವಾಸಿ ಹೇಳಿಕೆ ಇರುವ ಚಿತ್ರವೊಂದು ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗುತ್ತಿದೆ” ಎಂದು ಬರೆಯಲಾಗಿದೆ.
ಮುಂದುವರೆದು, “ಭಾರತೀಯ ಮುಸ್ಲಿಮರು ಪಾಕಿಸ್ತಾನದ ಮುಸ್ಲಿಮರಿಂದ ಪ್ರತ್ಯೇಕವಾಗಿದ್ದಾರೆ ಎಂದು ಹಿಂದೂಗಳು ತಿಳಿಯಬಾರದು. ಭಾರತ ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಧೈರ್ಯ ತೋರಿದ್ದಲ್ಲಿ ಭಾರತೀಯ ಮುಸ್ಲಿಮರು ಪಾಕಿಸ್ತಾನದ ಸೇನೆ ಸೇರಿ ಭಾರತದ ವಿರುದ್ಧ ಯುದ್ಧ ಮಾಡಲಿದ್ದಾರೆ ಎಂದು ಒವೈಸಿ ಹೇಳಿಕೆಯಿರುವ ಪೋಸ್ಟರ್ ಸಾಮಾಜಿಕ ತಾಣದಲ್ಲಿ ಪ್ರಸಾರವಾಗುತ್ತಿದೆ” ಎಂದು ಬರೆಯಲಾಗಿದೆ.
ವಾಸ್ತವದಲ್ಲಿ ಸುದ್ದಿಯನ್ನು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಬಗ್ಗೆ ಬರೆಯಲಾಗಿದೆಯೆ, ಹೊರತು ಈ ಹೇಳಿಕೆಯನ್ನು ಅಸಾದುದ್ದೀನ್ ಒವೈಸಿ ಅವರೇ ನೀಡಿದ್ದಾರೆ ಎಂದು ಇಡೀ ವರದಿಯಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಇದನ್ನು ನೀವು ಸುದ್ದಿಯನ್ನು ಸೂಕ್ಷ್ಮವಾಗಿ ಓದಿದಾಗ ತಿಳಿದು ಬರುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ, ‘ಯುದ್ಧ ನಡೆದರೆ ಭಾರತದ ಮುಸ್ಲಿಮರು ಪಾಕ್ ಪರ’ ಒವಾಸಿ ವಿವಾದಿತ ಹೇಳಿಕೆ’ ಎಂಬ ತಲೆಬರಹವಿರುವ ಈ ಹೇಳಿಕೆಯನ್ನು ಸಂಸದ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ ಎಂಬುವುದಕ್ಕೆ ಯಾವುದೆ ಆಧಾರವಿಲ್ಲ. ಜೊತೆಗೆ ಪೇಪರ್ ಕಟ್ಟಿಂಗ್ ತಲೆಬರಹ ಕೂಡಾ ಓದುಗರ ದಾರಿತಪ್ಪಿಸುವಂತಿದೆ. ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟರ್ ಬಗ್ಗೆ ಬರೆದ ವರದಿಗೆ ತಪ್ಪಾಗಿ ತಲೆ ಬರಹ ನೀಡಲಾಗಿದೆ.
ಯಾವುದೆ ವಿಡಿಯೊ, ಚಿತ್ರ ಅಥವಾ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮುಂಚೆ ಅದು ಸತ್ಯವೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ. ಅವುಗಳ ಬಗ್ಗೆ ನಿಮಗೆ ಸಂಶಯವಿದ್ದರೆ ಜನಶಕ್ತಿ ಮೀಡಿಯಾದ +916361984022 ಈ ನಂಬರ್‌ಗೆ ಕಳುಹಿಸಿ. ನಾವು ಅದನ್ನು ಫ್ಯಾಕ್ಟ್‌ಚೆಕ್ ಮಾಡುತ್ತೇವೆ.
ವಿಡಿಯೊ ನೋಡಿ: ಮಾತು ಮತ್ತು ಹಾಡಿನ ಮೂಲಕ ಸೌಜನ್ಯ ಹೋರಾಟಕ್ಕೆ ಧ್ವನಿಯಾದ ಜನಪರ ಗಾಯಕ ಜನ್ನಿ Janashakthi Media