ಮುಜಾಫರ್‌ನಗರದ ಆಘಾತಕ್ಕೊಳಗಾದ ಬಾಲಕನ ಜತೆಗೆ ನಿಲ್ಲಿ- ಎಐಡಿಡಬ್ಲ್ಯುಎ ಕರೆ

ನಮ್ಮ ದೇಶವನ್ನು ಹಾಳುಗೆಡಹುವ  ದ್ವೇಷದ ಸಾಂಕ್ರಾಮಿಕವನ್ನು ನಿಲ್ಲಿಸಿ! ಎಐಡಿಡಬ್ಲ್ಯುಎ

ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ನೇಹಾ ಪಬ್ಲಿಕ್ ಸ್ಕೂಲ್‌ನಲ್ಲಿ ಆಗಸ್ಟ್ 24 ರಂದು ಸಂಭವಿಸಿದ ಮೈನಡುಗಿಸುವ ಘಟನೆಯ ಮಹತ್ವವನ್ನು ಭಾರತದ ಎಲ್ಲ ಪ್ರಜಾಪ್ರಭುತ್ವವಾದಿ ನಾಗರಿಕರು ಗುರುತಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಕರೆ ನೀಡಿದೆ.

ಮುಜಾಫರ್‌ನಗರದ ಖುಬ್ ಬಾಪುರ್ ಗ್ರಾಮದ ನೇಹಾ ಪಬ್ಲಿಕ್ ಶಾಲೆಯ ಶಿಕ್ಷಕಿ ಹಾಗೂ ಮಾಲಕಿಯಾಗಿರುವ ತ್ರಿಪ್ತಾ ತ್ಯಾಗಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ‘ಅಲ್ಪಸಂಖ್ಯಾತರನ್ನು ದ್ವೇಷಿಸುವ’ ತರಬೇತಿ ನೀಡುತ್ತಿರುವ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ಅದರಲ್ಲಿ  ವಿದ್ಯಾರ್ಥಿಗಳನ್ನು  ಒಬ್ಬೊಬ್ಬರಾಗಿ  ಕರೆದು  ತಮ್ಮ ಮುಸ್ಲಿಂ ಸಮುದಾಯದ ಸಹಪಾಠಿಯೊಬ್ಬನ ಕೆನ್ನೆಗೆ ಬಾರಿಸಬೇಕು ಮತ್ತು ಥಳಿಸಬೇಕು,  ಎಂದು ಹೇಳು ತ್ತಿರುವುದು ಕಾಣುತ್ತದೆ. ಆ ವೇಳೆಯಲ್ಲೆಲ್ಲ ತ್ರಿಪ್ತಾ ತ್ಯಾಗಿ ಮುಸ್ಲಿಂ ಸಮುದಾಯದ ವಿರುದ್ಧ ವಿಷಕಾರಿ ಟಿಪ್ಪಣಿಗಳನ್ನು ಮಾಡುತ್ತಿರುವುದು ನಿರಂತರವಾಗಿ ಕೇಳಿಬರುತ್ತದೆ ಎಂದು ಎಐಡಿಡಬ್ಲ್ಯುಎ ಹೇಳಿದೆ.

ಚಿಕ್ಕಮಕ್ಕಳಿಗೆ ಕೋಮುವಾದಿ ಕ್ರೌರ್ಯದ ತರಬೇತಿ!

ಮುಝಪ್ಪರ್‌ನಗರದ ಶಾಲೆಯಲ್ಲಿ ನಡೆದದ್ದು ಚಿಕ್ಕ ಮಕ್ಕಳಿಗೆ ಅಲ್ಪಸಂಖ್ಯಾತರ ಮೇಲೆ ದ್ವೇಷ ಮತ್ತು ಹಿಂಸಾಚಾರದ ತರಬೇತಿಯ ನಿದರ್ಶನವೇ ಆಗಿದೆ. ವಿಷಕಾರಿ ಹಿಂದುತ್ವ ರಾಜಕಾರಣ ಮತ್ತು ಆ ರಾಜಕೀಯ ಮತ್ತು ಸಿದ್ಧಾಂತವನ್ನು ಸಮರ್ಥಿಸಿಕೊಳ್ಳುವ  ಮತ್ತು ಹಣಕಾಸು ಒದಗಿಸುವ ಎಲ್ಲರು ನಮ್ಮ ರಾಷ್ಟ್ರವನ್ನು ಈ ಅಪಾಯಕಾರಿ ಸ್ಥಿತಿಗೆ ತಂದಿದ್ದಾರೆ ಎಂದಿರುವ ಎಐಡಿಡಬ್ಲ್ಯುಎ  ಈ ಹೇಳಲಾಗದ  ಕ್ರೌರ್ಯವನ್ನು ಮಾತ್ರವಲ್ಲದೆ, ಇದೊಂದು ಅಪರೂಪದ ಘಟನೆ ಎಂದು ಬಣ್ಣಿಸಲು ಆಳುವ ಮಂದಿ ಮತ್ತು ಹೆಚ್ಚಿನ ಮುಖ್ಯವಾಹಿನಿಯ ಮಾಧ್ಯಮಗಳು ನಾಚಿಕೆಯಿಲ್ಲದ ಪ್ರಯತ್ನಿಸುತ್ತಿರುವುದನ್ನು ಬಲವಾಗಿ ಖಂಡಿಸಿದೆ. ಎಐಡಿಡಬ್ಲ್ಯುಎ

ಅಲ್ಪಸಂಖ್ಯಾತ ಮತ್ತು ದಲಿತ ಸಮುದಾಯಗಳ ಸದಸ್ಯರು, ವಿಶೇಷವಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು, ಹಿಂದುತ್ವ ಗ್ಯಾಂಗ್‌ಗಳ ದೊಂಬಿ ಹತ್ಯೆಗೆ ಬಲಿಯಾಗುವುದು ಇಂದು ಒಂದು ನಿಯಮಿತ ಸಂಗತಿಯಾಗಿದೆ. ಈ ಕೊಲೆಗಡುಕ ಪಡೆಗಳು ಸರ್ಕಾರಿ ಮತ್ತು ಪೊಲೀಸ್ ಯಂತ್ರಗಳ ಪ್ರತ್ಯಕ್ಷ  ಹಾಗೂ ಪರೋಕ್ಷ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಮುಸ್ಲಿಮರನ್ನು ಬಹಿಷ್ಕರಿಸುವ ಮತ್ತು ಕೊಲ್ಲುವ ಕರೆಗಳು ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಸಂಸತ್ ಸದಸ್ಯರು ಸೇರಿದಂತೆ ಆಳುವ ಪಕ್ಷದ ರಾಜಕೀಯ ನಾಯಕರಿಂದ ಬಂರುತ್ತಿವೆ. ಶಾಲಾ ಪಠ್ಯಕ್ರಮದ ಪರಿಷ್ಕರಣೆಗಳು, ರಾಜಕೀಯ ಭಾಷಣಗಳು, ಮುದ್ರಣ ಮಾಧ್ಯಮ, ಟಿವಿ ಚಾನೆಲ್‌ಗಳು, ಮುಖ್ಯವಾಹಿನಿಯ ಸಿನಿಮಾ ಮತ್ತು ಸಾಮಾಜಿಕ ಮಾಧ್ಯಮಗಳು ಸೇರಿದಂತೆ ವಿವಿಧ ರೀತಿಗಳಲ್ಲಿ, ವಿವಿಧ ವಿಧಾನಗಳ ಮೂಲಕ ಮುಸ್ಲಿಮರ ಅನ್ಯೀಕರಣ, ತುಚ್ಛೀಕರಣ ಮತ್ತು ನಿಂದನೆಗಳನ್ನು ಹರಡಲಾಗುತ್ತಿದೆ.

ಇದನ್ನೂ ಓದಿಕ್ರೂರ ವರ್ತನೆಗೆ ಗುರಿಯಾದ ಬಾಲಕನ ಮನೆಗೆ ಸಿಪಿಐ(ಎಂ) ನಿಯೋಗದ ಭೇಟಿ

ಪ್ರತಿ ಮನಸ್ಸೂ ದ್ವೇಷ ಅಥವಾ ಭಯದಲ್ಲಿ ಬಂಧಿಯಾಗುತ್ತಿದೆ!”

“ಆ ಶಾಲಾ ತರಗತಿ ಕೊಠಡಿಯಲ್ಲಿ ಕ್ರೂರವಾಗಿ ಹಲ್ಲೆಗೊಳಗಾದ ಮತ್ತು ಭಯೋತ್ಪಾದನೆಗೊಳಗಾದ ಬಾಲಕನೊಂದಿಗೆ ನಿಲ್ಲಬೇಕು ಎಂದು  ನಾವು ಭಾರತದ ಎಲ್ಲಾ ಶಾಂತಿಪ್ರಿಯ ಜನರಿಗೆ ಮನವಿ ಮಾಡುತ್ತೇವೆ. ಆ ಮಗುವಿನ ಆಘಾತವೇ ಇಂದಿನ ನಮ್ಮ ರಾಷ್ಟ್ರದ ಸ್ಥಿತಿ ಎಂಬುದನ್ನು ಗುರುತಿಸಬೇಕು. ಬಹುಸಂಖ್ಯಾತ ಸಮುದಾಯದ ಜನರ ಮನಸ್ಸಿನಲ್ಲಿ ದ್ವೇಷ ಮತ್ತು ಅಲ್ಪಸಂಖ್ಯಾತರಲ್ಲಿ  ಮಾರಣಾಂತಿಕ ಭಯವನ್ನು ಹುಟ್ಟುಹಾಕುವುದು – ಇದು ಇಂದು ಸಂಘಪರಿವಾರದ ಪ್ರಮುಖ ಕೆಲಸವಾಗಿದೆ. ಪ್ರತಿ ಮನಸ್ಸೂ ದ್ವೇಷ ಅಥವಾ ಭಯದಲ್ಲಿ ಬಂಧಿಯಾಗುತ್ತಿದೆ!” ಎಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ “ನಮ್ಮ ದೇಶದ ‘ಅಧಿಕೃತ ಸಿದ್ಧಾಂತ’ವಾಗಿ ಬೇರೂರಲು ಪ್ರಯತ್ನಿಸುತ್ತಿರುವ ಹಿಂಸಾತ್ಮಕ ಬಹುಸಂಖ್ಯಾಕವಾದಕ್ಕೆ ಪ್ರತಿರೋಧ ಒಡ್ಡಲು  ನಮ್ಮ ಎಲ್ಲಾ ಪಡೆಗಳನ್ನು ಒಟ್ಟುಗೂಡಿಸಬೇಕು,  ನಮ್ಮ ಮುಗ್ಧ ಮಕ್ಕಳೂ ಸೇರಿದಂತೆ ನಮ್ಮ ನಲ್ಮೆಯ ದೇಶದ ಮೇಲೆ ಅವರು ಉಂಟು ಮಾಡುತ್ತಿರುವ ಗಾಯಗಳಿಗೆ ಕೇಂದ್ರ ಮತ್ತು ಉತ್ತರಪ್ರದೇಶದ ಸರ್ಕಾರ ಉತ್ತರದಾಯಿಯಾಗುವಂತೆ ಮಾಡಲು ನಾವು ಒಂದಾಗಬೇಕು” ಎಂದು  ಹೇಳಿದೆ.

ಎಐಡಿಡಬ್ಲ್ಯುಎ

Donate Janashakthi Media

Leave a Reply

Your email address will not be published. Required fields are marked *