ಸೌಜನ್ಯ ಕೇಸ್ ಪರವಾಗಿ ಹೋರಾಟ ಮಾಡಿದರೆ ಹೆಗಡೆ ಅವರಿಗೆ ಅವಮಾನ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ ಹೋರಾಟಗಾರರುಡಿ
ದಕ್ಷಿಣ ಕನ್ನಡ: ಧರ್ಮಸ್ಥಳದ ಸುತ್ತ-ಮುತ್ತ ಅಸಹಜ ಸಾವಿನ ಪಟ್ಟಿ ಸರಣಿ ಇದ್ದು, ಇಲ್ಲೆ ಯಾಕೆ ಇಂತಹ ಕೊಲೆ ನಡೆಯುತ್ತಿದೆ. ಸೌಜನ್ಯ ಕೊಲೆಯನ್ನು ಯಾಕಾಗಿ ಮತ್ತು ಯಾರು ಮಾಡಿದ್ದಾರೆ? ಕಲಬುರಗಿಯಲ್ಲಿ ನಡೆದ ಕೊಲೆಗೆ ತನಿಖೆ ನಡೆಯುತ್ತೆ, ಆದರೆ ಸೌಜನ್ಯ ಪ್ರಕರಣದ ತನಿಖೆ ಯಾಕಿಲ್ಲ? ಎಂದು ಹೋರಾಟಗಾರ್ತಿ ಕೆ. ನೀಲಾ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ‘ಚಲೋ ಬೆಳ್ತಂಗಡಿ’ ಮಹಾ ಧರಣಿಯಲ್ಲಿ ಸೋಮವಾರ ಹೇಳಿದರು.
ಕುಮಾರಿ ಸೌಜನ್ಯ ಕೊಲೆ ಪ್ರಕರಣವನ್ನು ಎಸ್ಐಟಿ ತನಿಖೆಗೆ ಒತ್ತಾಯಿಸಿ ಹಾಗೂ ಉಜಿರೆ ಮತ್ತು ಧರ್ಮಸ್ಥಳದಲ್ಲಿ ನಡೆದಿರುವ ಕೊಲೆ, ಅಸಹಜ ಸಾವುಗಳ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ‘ಚಲೋ ಬೆಳ್ತಂಗಡಿ’ ಮಹಾ ಧರಣಿ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸೋಮವಾರ ನಡೆಯಿತು. ದಕ್ಷಿಣ ಕನ್ನಡ ಜನಪರ ಸಂಘಟನೆಗಳ ಒಕ್ಕೂಟದ ಗೌರವ ಸಂಚಾಲಕರು ಹಾಗೂ ಬೆಳ್ತಂಗಡಿ ಕ್ಷೇತ್ರದ ಮಾಜಿ ಶಾಸಕರಾದ ವಸಂತ ಬಂಗೇರ ಅವರು ಸೌಜನ್ಯ ಹೋರಾಟದ ಪ್ಲೇ ಕಾರ್ಡ್ಸ್ ಹಿಡಿಯುವ ಮೂಲಕ ಧರಣಿಗೆ ಚಾಲನೆ ನೀಡಿದರು.
ಇದನ್ನೂ ಓದಿ: ಸೌಜನ್ಯ ಪ್ರಕರಣ;ಗೃಹ ಸಚಿವ ಪರಮೇಶ್ವರ್ ಹೇಳಿಕೆಗೆ ವ್ಯಾಪಕ ಆಕ್ರೋಶ..!
ಸಭೆಯಲ್ಲಿ ಮಾತನಾಡಿದ ಕೆ. ನೀಲಾ, “ಬಡವರ ಮಕ್ಕಳನ್ನು ಕಂಡರೆ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾರೆ. ಮಣಿಪುರ ಘಟನೆಗೆ ಇಡೀ ದೇಶವೇ ತಲೆ ತಗ್ಗಿಸಬೇಕು. ಬಿಸಿಲನಾಡಿನಿಂದ ನಾವು ನ್ಯಾಯ ಕೇಳಲು ಬಂದಿದ್ದೇವೆ. ಪದ್ಮಾಲತನ ಕೊಲೆ ಮಾಡಿ ನೇತ್ರಾವತಿಗೆ ಹಾಕಿದವರು ಯಾರು? ನಮಗೆ ನ್ಯಾಯ ಬೇಕಿದೆ. ಈ ನಾಡಿನಲ್ಲಿ ಕೊಲೆಗಳು ಮತ್ತು ಅಸಹಜ ಸಾವಿನ ಪಟ್ಟಿಯ ಸರಣಿ ಇದೆ. ಈ ಜಾಗದಲ್ಲೆ ಯಾಕೆ ಕೊಲೆ ಆಗುತ್ತದೆ. ಅಸಹಜ ಸಾವಿಗಳಿಗೆ ನ್ಯಾಯ ಕೊಡಬೇಕು. ಸಂತೋಷ ರಾವ್ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನಿಜವಾದ ಆರೋಪಿಯನ್ನು ಬಂಧಿಸಿಲ್ಲ” ಎಂದು ಆಕ್ರೊಶ ವ್ಯಕ್ತಪಡಿಸಿದರು.
“ಕಮ್ಯುನಿಸ್ಟರು ಯಾವತ್ತು ಷಡ್ಯಂತ್ರ ಮಾಡಿಲ್ಲ, ಮಾಡುವುದು ಇಲ್ಲ. ನಾವು ಬಡವರು ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತೇವೆ. ದೇವರು ಹಾಗೂ ದೇವಸ್ಥಾನದಲ್ಲಿ ಕಮ್ಯುನಿಷ್ಟರು ರಾಜಕಾರಣ ಮಾಡುವುದಿಲ್ಲ. ಸೌಜನ್ಯ ಕೊಲೆಯನ್ನು ಯಾಕಾಗಿ ಮತ್ತು ಯಾರು ಮಾಡಿದ್ದು? ಕಲಬುರಗಿಯಲ್ಲಿ ಕೊಲೆ ನಡೆದರೆ ತನಿಖೆ ನಡೆಯುತ್ತದೆ, ಆದರೆ ಸೌಜನ್ಯ ಕೇಸ್ ತನಿಖೆ ಯಾಕಿಲ್ಲ?” ಎಂದು ನೀಲಾ ಕೇಳಿದರು.
ಸೌಜನ್ಯ ಅವರ ತಾಯಿ ಕುಸುಮಾವತಿ ಮಾತನಾಡಿ, “ನನ್ನ ಮಗಳಿಗಾಗಿ ನಾನು ನ್ಯಾಯ ಕೇಳಲು ಬಂದಿದ್ದೇನೆ. ನಾವು ಪಾದಯಾತ್ರೆ ಹೋದಾಗ ತಡೆದಿದ್ದಾರೆ. ನಾಳೆಯೂ ನಾನು ಹೋಗುತ್ತೇನೆ. ಸಂತೋಷ ರಾವ್ ಅತ್ಯಾಚಾರಿ ಅಲ್ಲ. ಹಾಗಾದರೆ ಅತ್ಯಾಚಾರಿ ಯಾರು” ಎಂದು ಕೇಳಿದರು.
ಇದನ್ನೂ ಓದಿ: “ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ
ಹೋರಾಟಗಾರ ವಕೀಲರಾದ ಬಿ.ಎಂ. ಭಟ್ ಮಾತನಾಡಿ, ”ನಮ್ಮ ಹೋರಾಟ ನ್ಯಾಯಕ್ಕಾಗಿ ನಡೆಯುತ್ತಿದೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳಿದರೆ ಯಾರಿಗೆ ಭಯ ಆಗುತ್ತದೆ? ನಾವು ಧರ್ಮಸ್ಥಳವನ್ನು ಉಳಿಸುವ ಹೋರಾಟ ಮಾಡಿದ್ದೇವೆ. ಸೌಜನ್ಯ ಕೇಸ್ ಬಗ್ಗೆ ಹೋರಾಟ ಮಾಡಿದರೆ ಹೆಗಡೆ ಅವರಿಗೆ ಅವಮಾನ ಆಗುತ್ತದೆಯೆ? ಕೇಂದ್ರ ಸರಕಾರ ನ್ಯಾಯಾ ನೀಡಲ್ಲ ಎಂದು ನಾನು ಮಾಧ್ಯಮಕ್ಕೆ ಹೇಳಿದ್ದೆ. ಸದಾನಂದ ಗೌಡರು ನಮಗೆ ನ್ಯಾಯಕೊಡಿಸಿಲ್ಲ, ಹಾಗಾಗಿ ಸಿದ್ದರಾಮಯ್ಯ ಅವರ ಬಳಿ ನ್ಯಾಯ ಕೇಳಿದ್ದೇವು. ನಿಷ್ಠಾವಂತ ಅಧಿಕಾರಿಯನ್ನು ಮನೆಗೆ ಕಳಿಸಿದ್ದು ಯಾರು? ಕೂಡಲೇ ತನಿಖೆ ಮಾಡಿ” ಎಂದು ಹೇಳಿದರು.
“ಸೀನಪ್ಪ ಅವರನ್ನು ಹಿಡಿದರೆ ಸತ್ಯ ಬಯಲಾಗುತ್ತೆ. ಸೌಜನ್ಯ ಬಗ್ಗೆ ಮಾತನಾಡಿದರೆ ಮಂಜುನಾಥನಿಗೆ ಅವಮಾನ ಆಗುವುದು ಹೇಗೆ? ನಾವು ಪದ್ಮಲತಾನಿಗಾಗಿಯು ಹೋರಾಟ ಮಾಡಿದ್ದೇವೆ. ಇಲ್ಲಿಯೆ ಯಾಕೆ ಇಲ್ಲಿ ಕೊಲೆ ನಡೆಯುತ್ತದೆ. ಯಾಕೆ ತನಿಖೆ ನಡೆಯುವುದಿಲ್ಲ? ರಾಜಕಾರಣಿಗಳು ಇದರ ರಾಜಕಾರಣ ಅರ್ಥ ಮಾಡಬೇಕು. ಕೋರ್ಟ್ ಕೂಡಾ ತನಿಖೆ ಮಾಡಬೇಕೆಂದು ಹೇಳಿದೆ. CBI ಅಧಿಕಾರಿಗಳೇ ನಮಗೆ ಅನ್ಯಾಯ ಮಾಡಿದ್ದಾರೆ. ಕಾರ್ಮಿಕರ ಹೋರಾಟಕ್ಕೆ ಜೀವ ಕೊಟ್ಟವರು ನಾವು, ಸೌಜನ್ಯ ಪ್ರಕರಣದಲ್ಲೂ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ” ಎಂದು ಭಟ್ ಹೇಳಿದರು.
ಚಿಂತಕಿ ಮೀನಾಕ್ಷಿ ಬಾಳಿ ಮಾತನಾಡಿ, “ಆಳಂದ ತಾಲೂಕಿನಲ್ಲಿ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ನಮ್ಮೂರಿನಲ್ಲಿ ಅತ್ಯಾಚಾರಿಗಳು ಕೂಡ ಬಿಡುಗಡೆ ಆಗುತ್ತಾರೆ. ಸೌಜನ್ಯ ಪ್ರಕರಣ ಮುಚ್ಚಿ ಹೋಗಬಾರದು. ನಾವು ಕಮ್ಯುನಿಸ್ಟರಾಗಿದ್ದು, ರೆಪಿಸ್ಟರ ಪರವಾಗಿಲ್ಲ. ಭಗತ್ ಸಿಂಗ್ ಸಂತತಿಗಳಾದ ನಾವು ಬಗ್ಗುವುದಿಲ್ಲ, ಸಾವಿನ ಜೊತೆ ನಾವು ನಿತ್ಯ ಹೋರಾಡುತ್ತೇವೆ. ಸನ್ನಡೆತೆಗಳ ಹೆಸರಲ್ಲಿ ರೆಪಿಸ್ಟ್ಗಳ ಬಿಡುಗಡೆ ಅಗುತ್ತಿದೆ. ನಿನ್ನೆ ಇಲ್ಲಿ ನಡೆದ ಸೌಜನ್ಯ ಪರ ಹೋರಾಟ ಡ್ರಾಮಾ ಆಗಿತ್ತು. ವೀರಾವೇಷದ ಭಾಷಣ ಮಾಡುವ ಚಾಳಿ ನಮ್ಮದಲ್ಲ.” ಎಂದು ಹೇಳಿದರು. ಚಲೋ ಬೆಳ್ತಂಗಡಿ
ಇದನ್ನೂ ಓದಿ: “ಸೌಜನ್ಯ” ಹೋರಾಟ ಯಶಸ್ಸುಗೊಳಿಸಲು ಸಮಾನ ಮನಸ್ಕರ ಒಕ್ಕೂಟ ಮನವಿ
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮಾತನಾಡಿ, ”ಸರಕಾರವು ಮೋಸದ ಮಾತುಗಳನ್ನು ಆಡಬಾರದು. ಸರಕಾರಕ್ಕೆ ಇಚ್ಚೆ ಇರಬೇಕು. ಸಿಎಂ ಸಾಹೆಬ್ರೇ ನಿಮ್ಮ ಭಾಗ್ಯಗಳ ಜೊತೆ ಗೌರವದ ಭಾಗ್ಯ ಕೊಡಿ. ಸೌಜನ್ಯಗೆ ನ್ಯಾಯ ಸಿಕ್ಕರೆ ನಿಮಗೂ ಒಳ್ಳೇ ಹೆಸರು ಬರುತ್ತದೆ. ಸೌಜನ್ಯ ಮನೆ ಮಗಳಾಗಿ ನಿಮಗೆ ಕಾಣುತ್ತಿಲ್ಲವೆ? ಎಲ್ಲಾ ಧರ್ಮಾಧಿಕಾರಿಗಳು ಸೌಜನ್ಯ ಪರವಾಗಿ ನ್ಯಾಯ ಕೇಳಬೇಕಿದೆ. ಮಾನವೀಯತೆ ಇಲ್ಲದೆ ಯಾವುದೇ ಧರ್ಮ ಇಲ್ಲ. ಅತ್ಯಾಚಾರಿ ವಿರುದ್ದ ಧರ್ಮಾಧಿಕಾರಿಗಳು ಹೋರಾಟ ಮಾಡಿ ನ್ಯಾಯ ಕೇಳಬೇಕಿದೆ.” ಚಲೋ ಬೆಳ್ತಂಗಡಿ
“ಸೌಜನ್ಯ ಕೇಸ್ ನ್ಯಾಯ ಸಿಗೊವರೆಗೆ ವಿದ್ಯಾರ್ಥಿ ಸಮೂಹ ಹೋರಾಟ ಮಾಡಿ ಎದ್ದೇಳಿ ಸೌಜನ್ಯಗೆ ನ್ಯಾಯ ಕೊಡಿಸಬೇಕಿದೆ. ಪ್ರಕರಣವನ್ನು ಮರು ತನಿಖೆ ಮಾಡಬೇಕಿದ್ದು, ಸಿಎಂ ಸಿದ್ದರಾಮಯ್ಯ ಅವರು ಮಹಿಳೆ, ದಲಿತರ ಪರ, ನೊಂದವರ ಪರ ಇದ್ದಾರೆಂದು ಭಾವಿಸಿದ್ದೇವೆ. ಆದರೆ, ಇದರ ಬಗ್ಗೆ ನಮಗೆ ಗೊತ್ತಿಲ್ಲವೆಂದು ಕೈ ತೊಳೆದುಕೊಳ್ಳಬೇಡಿ. ಈ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟದಿಂದ ವಿರಮಿಸುವುದಿಲ್ಲ” ಎಂದು ಹೇಳಿದರು.
ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, “ಈ ಪ್ರಕರಣ ಮುಚ್ಚಿ ಹೋಗುತ್ತಿರುವುದು ಹಾಗೂ ದಾರಿ ತಪ್ಪಿ ಹೋಗುತ್ತಿರುವುದು ಈ ದುಷ್ಟ ರಾಜಕೀಯ ಶಕ್ತಿಗಳಿಂದ. ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗಲಿಲ್ಲವೆಂದೆ ಬಿಜೆಪಿ ಸರಕಾರ ಬಿತ್ತು. ಈ ರಾಜಕೀಯ ವ್ಯವಸ್ಥೆ ಆರೋಪಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಪರಭಾರೆ ಮಾಡಿಕೊಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಕಾಮಾಂಧರ ಮನೆಯಲ್ಲಿ ಬಿದ್ದಿದ್ದಾರೆ. ಅಧರ್ಮ ಮಾಡುತ್ತಿದ್ದೀರಿ ಅದಕ್ಕಾಗಿ ನಿಮ್ಮ ಪಕ್ಷ ಬಿದ್ದುಹೋಗುತ್ತದೆ ಎಂದು ಬಿಜೆಪಿಗೆ ಎಚ್ಚರಿಸಿದ್ದೆ. ಈಗ ಅದೆ ರೀತಿ ಆಗಿದೆ. ಕಾಮಾಂಧರಿಗೆ ಶಿಕ್ಷೆ ಕೊಡಬೇಕಾಗಿದ್ದು ಸರ್ಕಾರ ಅಲ್ಲವೆ? ಧರ್ಮಸ್ಥಳ ಇವರ ಅಪ್ಪನದಾ? ಕಳೆದ 11 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆ ಸತ್ತು ಹೋಗಿದೆಯೆ?” ಎಂದು ಕೇಳಿದರು. ಚಲೋ ಬೆಳ್ತಂಗಡಿ
ಇದನ್ನೂ ಓದಿ: “ಸೌಜನ್ಯ” ಹೋರಾಟ ಯಶಸ್ಸುಗೊಳಿಸಲು ಸಮಾನ ಮನಸ್ಕರ ಒಕ್ಕೂಟ ಮನವಿ
ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ ಮಾತನಾಡಿ, “ಯಾವುದೇ ಪಕ್ಷದ ಪರವಾಗಿ ನಾವು ಮಾತನಾಡುತ್ತಿಲ್ಲ. ನಾವು ಸೌಜನ್ಯ ಪರವಾಗಿ ಮಾತನಾಡುತ್ತಿದ್ದೇವೆ. ಸೌಜನ್ಯ ಸೇರಿದಂತೆ ಹಳ್ಳಿಗಳ ಬೀದಿಗಳಲ್ಲಿ ಅತ್ಯಾಚಾರ ನಡೆಯುತ್ತಿವೆ. ನಾವು ಚಂದ್ರಯಾನಕ್ಕೆ ಹೋದರಷ್ಟೆ ಸಾಲದು, ನಮ್ಮ ಕಂದಮ್ಮಗಳ ಮೇಲೆ ನಡೆದ ಅತ್ಯಾಚಾರಿಗಳಿಗೆ ಶಿಕ್ಷೆಯಾಗಬೇಕು. ಸೌಜನ್ಯ ಪ್ರಕರಣದಲ್ಲಿ ಇನ್ನೂ ಹೆಚ್ಚಾಗಿ ಕೆಲಸ ಮಾಡಬೇಕಿದೆ” ಎಂದು ಹೇಳಿದರು. ಚಲೋ ಬೆಳ್ತಂಗಡಿ
ಧರಣಿಯಲ್ಲಿ ವಿಶ್ರಾಂತ ಕುಲಪತಿಗಳಾದ ಸಭಿಹಾ ಭೂಮಿಗೌಡ, ವಿಚಾರವಾದಿ ಒಕ್ಕೂಟದ ಅಧ್ಯಕ್ಷರಾದ ನರೇಂದ್ರ ನಾಯಕ್, ಅಖಿಲಾ ವಿದ್ಯಾಸಂದ್ರ, ಡಿವೈಎಫ್ಐ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಹೋರಾಟಗಾರ್ತಿ ಕೆ.ಎಸ್. ವಿಮಲಾ, ಕಾಂಗ್ರೆಸ್ ನಾಯಕಿ ಶಾಲೆಟ್ ಪಿಂಟೊ, ಜನವಾದಿ ಮಹಿಳಾ ಸಂಘದ ದೇವಿ, ವಕೀಲರಾದ ಶ್ರೀನಿವಾಸ ಸೇರಿದಂತೆ ಜನಪರ, ಪ್ರಗತಿಪರ ಸಂಘಟನೆಗಳ ಮುಖಂಡರು ಮಾತನಾಡಿದರು.
ವಿಡಿಯೊ ನೋಡಿ: ನೇರ ಪ್ರಸಾರ | ಸೌಜನ್ಯ ಪ್ರಕರಣ : SIT ರಚಿಸಿ ಮರು ತನಿಖೆಗೆ ಆಗ್ರಹಿಸಿ ಚಲೋ ಬೆಳ್ತಂಗಡಿ ಮಹಾಧರಣಿ