ಮಿಜೋರಾಂ ನಿರ್ಮಾಣ ಹಂತದ ಸೇತುವೆ ಕುಸಿತ: ತನಿಖೆಗಾಗಿ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ

ಐಜ್ವಾಲ್: ಮಿಜೋರಾಂನ ಐಜ್ವಾಲ್ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಕುಸಿದು 22 ಕಾರ್ಮಿಕರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಸಿತದ ಹಿಂದಿನ ಕಾರಣವನ್ನು ತನಿಖೆ ಮಾಡಲು ರೈಲ್ವೆ ಸಚಿವಾಲಯ ನಾಲ್ಕು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ಅಧಿಕಾರಿಗಳು ಆಗಸ್ಟ್‌-25 ಶುಕ್ರವಾರ ತಿಳಿಸಿದ್ದಾರೆ.

ಇದನ್ನೂಓದಿ:ಮಿಜೋರಾಂದಲ್ಲಿ ನಿರ್ಮಾಣ ಹಂತದ ರೈಲ್ವೆ ಮೇಲ್ಸೇತುವೆ ಕುಸಿದು 17 ಕಾರ್ಮಿಕರ ಸಾವು

ಆಗಸ್ಟ್‌-24 ರಂದು ರೈಲ್ವೆ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಸಮಿತಿಯು ರಚನೆಯಾದ ದಿನಾಂಕದಿಂದ ಒಂದು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಆರ್‌ಡಿಎಸ್‌ಒದ ಬಿಪಿ ಅವಸ್ತಿ, ಐಐಟಿ ದೆಹಲಿಯ ಡಾ. ದೀಪ್ತಿ ರಂಜನ್ ಸಾಹೊ, ಐಆರ್‌ಸಿಇಎನ್‌ನ ಶರದ್ ಕುಮಾರ್ ಅಗರ್ವಾಲ್ ಮತ್ತು ಎನ್‌ಎಫ್ ರೈಲ್ವೆಯ ಮುಖ್ಯ ಸೇತುವೆ ಎಂಜಿನಿಯರ್ ಸಂದೀಪ್ ಶರ್ಮಾ ಸಮಿತಿಯ ನಾಲ್ವರು ಸದಸ್ಯರಾಗಿದ್ದಾರೆ. ಸಮಿತಿಯ ಕಾರ್ಯನಿರ್ವಹಣೆ ಮತ್ತು ವರದಿಯನ್ನು ರೈಲ್ವೆ ಮಂಡಳಿಯ ಪರಿಗಣನೆಗೆ ಸಲ್ಲಿಸುವುದು, ಸಮಿತಿಯ ಶಿಫಾರಸಿನ ಅನುಷ್ಠಾನ ಮತ್ತು ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ರೈಲ್ವೆ ಮಂಡಳಿಯ ವರ್ಕ್ಸ್-I ಶಾಖೆ ನೋಡಲ್ ಶಾಖೆಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಐಜ್ವಾಲ್ ಬಳಿ ಬೈರಾಬಿ-ಸೈರಾಂಗ್ ಹೊಸ ಮಾರ್ಗದ ಯೋಜನೆ ಅಡಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ರೈಲ್ವೆ ಸೇತುವೆ ಆಗಸ್ಟ್ 23ರ ಬುಧವಾರದಂದು ಕುಸಿದು 22 ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ. ನಾಪತ್ತೆಯಾಗಿದ್ದ ನಾಲ್ವರು ಕಾರ್ಮಿಕರ ಮೃತದೇಹಗಳು ಗುರುವಾರ ಪತ್ತೆಯಾಗಿವೆ. ಓರ್ವ ಕಾರ್ಮಿಕ ಇನ್ನೂ ನಾಪತ್ತೆಯಾಗಿದ್ದು, ನಾಪತ್ತೆಯಾದ ಕಾರ್ಮಿಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮೃತರೆಲ್ಲರೂ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಮಯದಲ್ಲಿ 26 ಕಾರ್ಮಿಕರು ಸ್ಥಳದಲ್ಲಿ ಇದ್ದರು. ಕುರುಂಗ್ ನದಿ ಮೇಲೆ ನಿರ್ಮಾಣ ಹಂತದಲ್ಲಿರುವ ಸೇತುವೆ ಮೇಲೆ ಪ್ರಾರಂಭಿಸಲಾಗುತ್ತಿದ್ದ ಗ್ಯಾಂಟ್ರಿ ಕುಸಿದಿದ್ದೇ ಅಪಘಾತಕ್ಕೆ ಕಾರಣ ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಮಿಕರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *