ಮಂಡ್ಯ: ತಮಿಳುನಾಡಿಗೆ ಕೆಆರ್ಎಸ್ ಡ್ಯಾಂನಿಂದ ನೀರು ಬಿಡುಗಡೆ ಮಾಡಿರುವುದ್ನು ವಿರೋಧಿಸಿ ಇಂದು ರೈತ ಸಂಘದಿಂದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಬಂದ್ ಮಾಡಿ. ಎಕ್ಸ್ಪ್ರೆಸ್ ವೇನಲ್ಲಿ ವಾಹನ ಸಂಚಾರವನ್ನು ತಡೆದು ರೈತರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿರುವ ರೈತರನ್ನು ಪೋಲಿಸರು ಬಂಧಿಸಿದರು.
ಇದನ್ನೂ ಓದಿ:ಕರ್ನಾಟಕದಿಂದ ತ.ನಾಡಿಗೆ ನೀರು ಬಿಡುಗಡೆ: ರೈತರಿಂದ ತೀವ್ರ ಆಕ್ರೋಶ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಂಜೇಶ್ ಗೌಡ, ಸೊ.ಶಿ.ಪ್ರಕಾಶ್, ಬನ್ನೂರು ನಾರಾಯಣ, ಸಿದ್ದೇಗೌಡ,ಇ.ಬಸವರಾಜ್,ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್ ಗೌಡ ಸೇರಿದಂತೆ ನೂರಾರು ರೈತರನ್ನು ಪೊಲೀಸರು ಬಂಧಿಸಿದ್ದಾರೆ.
ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿರುವುದನ್ನು ಖಂಡಿಸಿ ರೈತರು ಇಂದು ಮತ್ತೆ ಪ್ರತಿಭಟನೆ ಆರಂಭಿಸಿದ್ದು, ಮಂಡ್ಯದ ಇಂಡುವಾಳು ಗ್ರಾಮದಿಂದ ಹೆದ್ದಾರಿ ತಡೆಗೆ ಎತ್ತಿನಗಾಡಿ, ಟ್ರ್ಯಾಕ್ಟರ್ ಜೊತೆ ತೆರಳಿ ಪ್ರತಿಭಟನೆ ನಡೆಸಲು ಮುಂದಾದರು. ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ರೈತರ ಉದ್ದೇಶವಾಗಿತ್ತು.
ಈ ವೇಳೆ, ಹೆದ್ದಾರಿ ಬಂದ್ ಮಾಡದಂತೆ ರೈತರನ್ನು ಪೊಲೀಸರು ಬ್ಯಾರಿಕೇಡ್ಗಳ ಮೂಲಕ ತಡೆದರು. ಈ ನಡುವೆ ರೈತರು ಪೊಲೀಸರ ಭದ್ರತೆಯನ್ನೂ ಮೀರಿ ರಸ್ತೆಗಿಳಿಯಲು ಮುಂದಾದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಎತ್ತಿನ ಗಾಡಿ, ಟ್ರ್ಯಾಕ್ಟರ್ ಸಹಿತ ಮೆರವಣಿಗೆ ಹೊರಟಿದ್ದರು. ಹೆದ್ದಾರಿ ಬಂದ್ ಆಗದಂತೆ ಮುಂಚಿತವಾಗಿಯೇ ಪೊಲೀಸರು ಸರ್ಪಗಾವಲು ಹಾಕಿದ್ದರು.
ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ರೈತರನ್ನು ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ರೈತರು ವಾಗ್ವಾದ ನಡೆಸಿದರು. ನಂತರ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.