ಸಿಪಿಐ(ಎಂ) ಈಗಾಗಲೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ತ್ರಿಪುರಾ
ಅಗರ್ತಲಾ: ತ್ರಿಪುರಾದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ತಿಪ್ರಾ ಮೋಥಾ ಮತ್ತು ಕಾಂಗ್ರೆಸ್ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಹೇಳಿದೆ. ರಾಜ್ಯದ ಧನಪುರ್ ಮತ್ತು ಬೊಕ್ಸಾನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದ್ದು ಮಾಜಿ ಆಡಳಿತ ಪಕ್ಷವಾದ ಸಿಪಿಐ(ಎಂ) ಈಗಾಗಲೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ತಮ್ಮ ಪಕ್ಷವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ತಿಪ್ರಾ ಮೋಥಾ ಪಕ್ಷದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅನಿಮೇಶ್ ದೆಬ್ಬರ್ಮಾ ಹೇಳಿದ್ದಾರೆ. “ಚುನಾವಣೆಯಲ್ಲಿ ಸ್ಪರ್ಧಿಸುವುದು ಬಹಳಷ್ಟು ಸಂಪನ್ಮೂಲಗಳು, ಹಣ, ಮಾನವಬಲ, ಸಮಯ, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಜೊತೆಗೆ, ವಿರೋಧ ಪಕ್ಷಗಳ ನಡುವೆ ಮತಗಳು ವಿಭಜನೆಯಾದರೆ ಆಡಳಿತ ಪಕ್ಷಕ್ಕೆ ಲಾಭ ಸಿಗುತ್ತದೆ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತ್ರಿಪುರಾ ಚುನಾವಣೋತ್ತರ ಹಿಂಸಾಚಾರ; ತನಿಖೆಗೆ ಆಗಮಿಸಿದ್ದ ಸಂಸದೀಯ ತಂಡದ ಮೇಲೆ ದಾಳಿ
“ತಿಪ್ರಾ ಮೋಥಾ ‘ಲಾಲ್ ಮೋಥಾ’ ಅಥವಾ ಬಿಜೆಪಿಯ ಮಿತ್ರ ಪಕ್ಷವಲ್ಲ. ಪಕ್ಷಕ್ಕೆ ತನ್ನದೇ ಆದ ಸಿದ್ದಾಂತ ಮತ್ತು ಜನರ ಬಗ್ಗೆ ಬದ್ಧತೆ ಇದೆ. ಉಪಚುನಾವಣೆಯಲ್ಲಿ ತಿಪ್ರಾ ಮೋಥಾ ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಯುತ್ತಿದೆ. ಆಗಸ್ಟ್ 19ರೊಳಗೆ ನಮ್ಮ ನಿಲುವು ಪ್ರಕಟಿಸುತ್ತೇವೆ” ಎಂದು ದೆಬ್ಬರ್ಮಾ ಹೇಳಿದ್ದಾರೆ. ಬಿಜೆಪಿಯೊಂದಿಗೆ ಪಕ್ಷ ಎಂದಿಗೂ ಮಾತುಕತೆ ನಡೆಸಿಲ್ಲ ಎಂದು ದೆಬ್ಬರ್ಮಾ ಹೇಳಿದ್ದಾರೆ.
ತ್ರಿಪುರಾ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ)ಯ ಅಧ್ಯಕ್ಷ ಆಶಿಶ್ ಕುಮಾರ್ ಸಹಾ ಅವರು ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಮೈತ್ರಿಯನ್ನು ಗೌರವಿಸಿ ಧನ್ಪುರ ಮತ್ತು ಬೋಕ್ಸಾನಗರದ ಉಪಚುನಾವಣೆಗಳಲ್ಲಿ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ.
“ಟಿಪಿಸಿಸಿ ಮತ್ತು ದೆಹಲಿ ನಾಯಕತ್ವದ ನಿರ್ಧಾರದಂತೆ ನಾವು ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬಿಜೆಪಿ ವಿರೋಧಿ ಶಕ್ತಿಗಳನ್ನು ಕ್ರೋಢೀಕರಿಸಲು ಬಿಜೆಪಿ ವಿರೋಧಿ ವೇದಿಕೆಯಾದ ಇಂಡಿಯಾ ಮೈತ್ರಿಕೂಟದ ಮತ ಬ್ಯಾಂಕ್ ಅನ್ನು ದುರ್ಬಲಗೊಳಿಸಲು ಬಯಸುವುದಿಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಸ್ಪರ್ಧಿಸದಿರಲು ಪಕ್ಷ ನಿರ್ಧಾರ ಕೈಗೊಂಡಿದೆ” ಎಂದು ಅವರು ಹೇಳಿದ್ದಾರೆ.
ಇಂಡಿಯಾ ಒಕ್ಕೂಟದ ಮಿತ್ರಪಕ್ಷವಾದ ಸಿಪಿಐ(ಎಂ) ಈಗಾಗಲೇ ಧನ್ಪುರ ಮತ್ತು ಬೊಕ್ಸಾನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಪಚುನಾವಣೆ ಸೆಪ್ಟೆಂಬರ್ 5 ರಂದು ನಡೆಯಲಿದೆ. ರಾಜ್ಯದ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಮತ್ತು ಕಾಂಗ್ರೆಸ್ ಜಂಟಿಯಾಗಿ ಸ್ಪರ್ಧಿಸಿತ್ತು. ಆದರೆ 13 ಸ್ಥಾನಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದ್ದ ತಿಪ್ರಾ ಮೋಥಾ ಏಕಾಂಗಿಯಾಗಿ ಚುನಾವಣೆ ಎದುರಿಸಿತ್ತು.
ವಿಡಿಯೊ ನೋಡಿ: ಅಂಗನವಾಡಿ ನೌಕರರು ಗ್ರಾಚ್ಯುಟಿ ಪಡೆಯೋದು ಹೇಗೆ ? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ? ವಿಶ್ಲೇಷಣೆ ಎಸ್.ವರಲಕ್ಷ್ಮಿ