ಉದಯ ಬಾರ್ಕೂರು
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಹಿರಿಯ ಪ್ರಾಧ್ಯಾಪಕ ಉದಯ ಬಾರ್ಕೂರು ಶುಕ್ರವಾರ ಸಂಜೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಳೆದ 34 ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ, ಸಿಂಡಿಕೇಟ್ ಸದಸ್ಯರಾಗಿ, ಕಲಾ ವಿಭಾಗದ ಡೀನ್ ಆಗಿ ವಿವಿಧ ಜವಬ್ದಾರಿಗಳನ್ನು ಉದಯ ಬಾರ್ಕೂರು ಅವರು ನಿರ್ವಹಿಸಿದ್ದರು. ಅಲ್ಲದೇ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಶ್ವವಿದ್ಯಾಲಯದಿಂದ ಉತ್ತಮ ಪ್ರಾಧ್ಯಾಪಕ ಪ್ರಶಸ್ತಿಯನ್ನು 2017ರಲ್ಲಿ ಅವರು ಪಡೆದುಕೊಂಡಿದ್ದರು.
ಇದನ್ನೂ ಓದಿ: ಶಾಲೆ ತುಂಬಾ ಮಕ್ಕಳು, ಆದರೆ ಶಿಕ್ಷಕರಿಲ್ಲ; ಸ್ಪೀಕರ್ ಯು.ಟಿ. ಖಾದರ್ ಊರಿನ ಸರ್ಕಾರಿ ಶಾಲೆಯ ಕತೆಯಿದು!
ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಕಾಂಗ್ರೆಸ್, ಕರ್ನಾಟಕ ಹಿಸ್ಟರಿ ಕಾಂಗ್ರೆಸ್ನ ಸದಸ್ಯರಾಗಿದ್ದ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ್ದರು. ಇತಿಹಾಸ ತಜ್ಞನಾಗಿ ಗುರುತಿಸಿದ್ದ ಇವರ ಮಾರ್ಗದರ್ಶನದಲ್ಲಿ ಅನೇಕ ವಿದ್ಯಾರ್ಥಿಗಳು ಪಿಹೆಚ್ಡಿ ಪದವಿ ಪಡೆದುಕೊಂಡಿದ್ದಾರೆ.
ವಸಾಹತುಶಾಹಿ ಇತಿಹಾಸ ಚರಿತ್ರೆಯ ವಾಸ್ತವ, ಟಿಪ್ಪು- ಹೈದರಾಲಿ ಇತಿಹಾಸ ಕಥನ, ಹಿಸ್ಟರಿಯಾಗ್ರಫಿ ಆಫ್ ತುಳು ಕಲ್ಚರ್ ಆಂಡ್ ಹಿಸ್ಟರಿ, ಕೊಲೊನಿಯಲಿಸಂ ಆಂಡ್ ನ್ಯಾಷನಲಿಸಂ ಇನ್ ಮಾಡರ್ನ್ ಏಷಿಯಾ, ಇತಿಹಾಸದ ಶೋಧ – ಗತದ ಹುಡುಕಾಟ ಕೃತಿ ಸೇರಿದಂತೆ ಅನೇಕ ಅಮೂಲ್ಯ ಇತಿಹಾಸ ಗ್ರಂಥಗಳನ್ನು ಅವರು ಪ್ರಕಟಿಸಿದ್ದಾರೆ. ಉದಯ ಬಾರ್ಕೂರು ಇತ್ತೀಚೆಗೆಷ್ಟೇ ವಿಶ್ವವಿದ್ಯಾನಿಲಯದ ನೆಹರೂ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಹಿರಿಯ ಇತಿಹಾಸಕಾರರ ಅಗಲಿಕೆಗೆ ಮಂಗಳೂರು ವಿಶ್ವವಿದ್ಯಾಲಯದ ಉಪ ಕುಲಪತಿ, ಕುಲಸಚಿವ, ಡಿವೈಎಫ್ಐ ರಾಜ್ಯಾಧ್ಯ ಮುನೀರ್ ಕಾಟಿಪಳ್ಳ, ವಿಚಾರವಾದಿ ಪ್ರೊ. ನರೇಂದ್ರ ನಾಯಕ್, ಅಖಿಲ ಭಾರತ ವಕೀಲರ ಸಂಘದ ಯಶವಂತ ಮರೋಳಿ, ಪ್ರಗತಿಪರ ಚಿಂತಕರ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ, ಪ್ರೊ. ರಾಜೇಂದ್ರ ಉಡುಪ, ಮಂಗಳೂರು ಸಮುದಾಯದ ವಾಸುದೇವ ಉಚ್ಚಿಲ ಸೇರಿದಂತೆ ಹಲವಾರು ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು ಹಾಗೂ ಹೋರಾಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆರೆಯ ಮಣ್ಣನ್ನು ನುಂಗಿದ “ಸರ್ಕಾರಿ ನೌಕರರ ಸಂಘದ ಅಧ್ಯಕ್ಷ”! 71 ಲಕ್ಷರೂ ವಂಚನೆ!!
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ”ಇತಿಹಾಸವನ್ನು ವಸ್ತುನಿಷ್ಟವಾಗಿ ನೋಡಬಲ್ಲ, ವಿವರಿಸಬಲ್ಲ, ಬರೆಯಬಲ್ಲ ಅಪರೂಪದ ಪ್ರತಿಭಾವಂತ ಉದಯ ಬಾರ್ಕೂರು. ಎರಡು ದಶಕಗಳ ಹಿಂದೆ ನಮ್ಮಗಳ ಕೋರಿಕೆಗೆ ಓಗೊಟ್ಟು ‘ಟಿಪ್ಪು ಇತಿಹಾಸ ಕಥನ’ ಪುಸ್ತಕ ಬರೆದುಕೊಟ್ಟಿದ್ದರು. ಮಧ್ಯ ಪ್ರಾಚ್ಯದ ಇತಿಹಾಸ, ವರ್ತಮಾನದ ರಾಜಕಾರಣದ ಕುರಿತು ಅಪಾರ ಜ್ಞಾನಹೊಂದಿದ್ದ ಇವರು ಆ ಕುರಿತು ಒಳನೋಟಗಳುಲ್ಲ ಬರವಣಿಗೆ ದಾಖಲಿಸಿದ್ದರು. ಎಡ, ದಲಿತ ಚಳುವಳಿಗಳ ಬೆಂಬಲಿಗರಾಗಿದ್ದರು. ನಮ್ಮ ಕಾರ್ಯಕ್ರಮಗಳಲ್ಲಿ ಆಹ್ವಾನಿಸಿದಾಗಲೆಲ್ಲಾ ಬಂದು ಭಾಗಿಯಾಗುತ್ತಿದ್ದರು. ಅವರ ದಿಢೀರ್ ಅಗಲಿಕೆ ಆಘಾತವನ್ನುಂಟು ಮಾಡಿದ್ದು, ಅವರ ನಿಧನಕ್ಕೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ತೀವ್ರ ಸಂತಾಪಗಳನ್ನು ಸಲ್ಲಿಸುತ್ತದೆ” ಎಂದು ಹೇಳಿದ್ದಾರೆ.
ಪತ್ರಕರ್ತ ಜಯನ್ ಮಲ್ಪೆ ಅವರು, “ದಲಿತ ಚಳವಳಿ ಮತ್ತು ವೈಚಾರಿಕ ಚಿಂತನೆಯೊಟ್ಟಿಗೆ ನನ್ನ ಸಂಬಂಧ ಗಾಢಗೊಳ್ಳಲು ಕಾರಣರಾದ ಬಾರ್ಕೂರ್ ಉದಯ ನಮ್ಮನ್ನಗಲಿದ ದು:ಖ ಕೇವಲ ನನ್ನನ್ನಷ್ಟೇ ಅಲ್ಲ ನನ್ನ ಸಂಗಡಿಗರನ್ನೂ ಕೆಂಗೆಡಿಸಿದೆ. ಇತಿಹಾಸ ಅಥವಾ ಚರಿತ್ರೆಯನ್ನು ಚರಿತ್ರಕಾರನೊಬ್ಬ ಒಂದು ನಿರ್ವಿಕಾರ ಮನಸ್ಥಿತಿಯಲ್ಲಿ ಕಾಲಕ್ರಮಕ್ಕನುಗುಣವಾಗಿ ಸಂದು ಹೋದ ಘಟನೆಗಳನ್ನು ದಾಖಲಿಸುವ ನಮ್ಮ ಉದಯ ಬಾರ್ಕೂರು ಇನ್ನಿಲ್ಲ ಎಂಬುದನ್ನೇ ನೆನೆಯಲು ಸಾಧ್ಯವಿಲ್ಲ. ಮೃತ್ಯುವಿನ ಮಬ್ಬಿನಲ್ಲಿ ಡಾ. ಬಾರ್ಕೂರ್ ನೀಡಿದ ಇತಿಹಾಸದ ಅಮೃತ ಜ್ಯೋತಿ ಮಿನುಗಲಿ” ಎಂದು ಹೇಳಿದ್ದಾರೆ.
ವಿಡಿಯೊ ನೋಡಿ: ಪಿಚ್ಚರ್ ಪಯಣ – 135 ಚಿತ್ರ : ಮಾಮನ್ನನ್ ನಿರ್ದೇಶನ : ಮಾರಿ ಸೆಲ್ವರಾಜ್ ವಿಶ್ಲೇಷಣೆ : ಸಂಧ್ಯಾರಾಣಿ