ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಲೋಕಸಭಾ ಚುನಾವಣೆಗೆ ಫಂಡ್ ಕಲೆಕ್ಷನ್ಗೆ ಇಳಿದಿದೆಯೇ? ಎಂದು ರಾಜ್ಯದ ಮಾಜಿ ಸಚಿವ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಪದ್ಮನಾಭನಗರದ ಶಾಸಕರ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್? ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಸರ್ಕಾರದ ಮೇಲೆ ಶೇ. 40 ರಷ್ಟು ಕಮಿಷನ್ ಕುರಿತು ನಿರಾಧಾರ ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಶೇ.15ರ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು? ಗುತ್ತಿಗೆದಾರರು ಅಜ್ಜಯ್ಯ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ದಾರೆ. ನೀವು ಕಮಿಷನ್ ಕೇಳದೆ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ʻಮಂಡ್ಯ ಬಿಟ್ಟು ಹೋಗಿʼ ; ಬಿಜೆಪಿಗರಿಂದಲೇ ಸಚಿವ ಆರ್ ಅಶೋಕ್ ವಿರುದ್ಧ ಅಭಿಯಾನ
ಫಂಡ್ ಕಲೆಕ್ಷನ್ ಎಂಬುದು ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ? ಎಂದು ಕೇಳಿದ ಅವರು, ಗುತ್ತಿಗೆದಾರರ ಸಮಸ್ಯೆ ವಿಚಾರ ಪ್ರಸ್ತಾಪಿಸಿದ್ದ ಕೆಂಪಣ್ಣನವರೇ ಎಲ್ಲಿದ್ದೀರಪ್ಪ ಎಂದು ಕೇಳಿದರು. ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡ್ತ ಇದ್ದೀರಿ. ನೀವು ಪ್ರಾಮಾಣಿಕರಿದ್ದರೆ 2013ರಿಂದ ತನಿಖೆ ಮಾಡಬಹುದಲ್ಲವೇ? ಗುತ್ತಿಗೆದಾರರೆಲ್ಲರೂ ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ಸಿನ ಬಳುವಳಿ ಇವರೇ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಕಥೆ ಏನು? ದಯಾಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು? ದೆಹಲಿಯಲ್ಲಿ ಸಚಿವರ ಸಭೆ ಮಾಡಿದ್ದು ಲೋಕಸಭಾ ಸೀಟು ಗೆಲ್ಲಿಸಲೇ ಅಥವಾ ಸೂಟ್‍ಕೇಸ್ ತುಂಬಿಸಲೋ? ಶಿವಕುಮಾರ್ ಅವರೇ ನಿಮ್ಮದು ಬ್ರ್ಯಾಂಡ್ ಬೆಂಗಳೂರೇ ಅಥವಾ ಬ್ಲ್ಯಾಕ್ ಬೆಂಗಳೂರೇ? ಎಂದು ಕೇಳಿದ ಅವರು, 11 ಪ್ರಶ್ನೆಗಳಿಗೆ ಉತ್ತರವನ್ನು ನಾವು ನಿರೀಕ್ಷೆ ಮಾಡುತ್ತಿದ್ದು, ಜನರೂ ನಿರೀಕ್ಷೆ ಮಾಡುತ್ತಾರೆ ಎಂದು ನುಡಿದರು.
ಕಾಂಗ್ರೆಸ್ಸಿನವರು ಸತ್ಯ ಹರಿಶ್ಚಂದ್ರರೇ?
ಹೊಸ ಸರಕಾರ ಬಂದಾಗ 6 ತಿಂಗಳು ವಿರೋಧ ಪಕ್ಷ, ಜನರು ಮಾತನಾಡುವುದಿಲ್ಲ. ಮಾಧ್ಯಮದವರು ಅವರ ತಂಟೆಗೆ ಹೋಗುವುದಿಲ್ಲ. ಇಲ್ಲಿ ಬಂದು ಎರಡೇ ತಿಂಗಳಿಗೆ ಹಗರಣಗಳೇ (ಸ್ಕ್ಯಾಂಡಲ್) ಹೆಚ್ಚುತ್ತಿದೆ. ದಿನನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಟೀಕಿಸಿದರು.
ಹಲವು ಸಚಿವರ ವಿರುದ್ಧ ಕಮಿಷನ್ ಆರೋಪ ಬಂದಿದೆ ಎಂದು ಅಶೋಕ್ ಅವರು ಆಕ್ಷೇಪಿಸಿದರು. ನೀವೇನು ಸತ್ಯಹರಿಶ್ಚಂದ್ರರೇ? 2013ರಿಂದ ತನಿಖೆ ನಡೆಸಿ ಎಂದು ಸವಾಲೆಸೆದರು.ಭ್ರಷ್ಟಾಚಾರ ಕೇಸಿನಲ್ಲಿ ಜಾಮೀನಿನಲ್ಲಿ ಇರುವವರು ನೀವಲ್ಲವೇ? ನೀವು ಸತ್ಯ ಹರಿಶ್ಚಂದ್ರನಂತೆ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ನುಡಿದಂತೆ ಎಂದು ಟೀಕಿಸಿದರು.
ಪಾಲಿಕೆಗಳಲ್ಲಿ ವರ್ಗಾವಣೆ ಮಾಡಬೇಕಾದರೆ, ನನ್ನ ಗಮನಕ್ಕೆ ತರದೆ ಮಾಡಬಾರದೆಂದು ಡಿಸಿಎಂ ಪತ್ರ ಬರೆದಿದ್ದಾರೆ. ನಾನು ಕೂಡ 4 ಸಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಯಾವತ್ತೂ ಕೂಡ ಇಂಥ ಒಂದು ಪತ್ರವನ್ನೂ ಬರೆದಿಲ್ಲ. ಬಿಲ್ ಎಲ್ಲವನ್ನೂ ಪಾವತಿಸದೆ ನಿಲ್ಲಿಸಲು ನಾನು ಯಾವತ್ತೂ ಹೇಳಿರಲಿಲ್ಲ ಎಂದರು. ಕೆಲಸ ಕಾರ್ಯ ಸ್ಥಗಿತವಾದರೆ ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ ಹೇಗೆ ಸಾಧ್ಯ? ಲೋಡ್‍ಗಟ್ಟಲೆ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ. ಕಸ ತೆಗೆಯುವವರಿಲ್ಲ. ಕಾಮಗಾರಿ ನಡೆಸುವವರಿಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ಅರ್ಧದಲ್ಲಿ ನಿಂತ ಮೋರಿ, ರಸ್ತೆ ಮತ್ತಿತರ ಕಾಮಗಾರಿ ನಿಲ್ಲಬಾರದು ಎಂದ ಅವರು, ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಬಾಕಿ ಇರುವ ಹಣ ಬಿಡುಗಡೆ ಮಾಡಿ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.