ರಾಹುಲ್ ಗಾಂಧಿ ಲೋಕಸಭೆ ಸದಸ್ಯತ್ವ ಪುನಃಸ್ಥಾಪಿಸಿದ ಲೋಕಸಭೆ ಸಚಿವಾಲಯ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಸೋಮವಾರ ರದ್ದುಪಡಿಸಲಾಗಿದೆ. ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಲೋಕಸಭೆ ಸಚಿವಾಲಯ,ರಾಹುಲ್‌ ಗಾಂಧಿಯವರ ಸದಸ್ಯತ್ವ ಅನರ್ಹತೆಯನ್ನು ಆದೇಶವನ್ನು ಹಿಂಪಡೆಯಲಾಗಿದ್ದು, ಸದಸ್ಯತ್ವವನ್ನು ಮರುಸ್ಥಾಪಿಡಲಾಗಿದೆ ಎಂದು ತಿಳಿಸಿದೆ.

ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್‌ ನ್ಯಾಯಾಲಯವು ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್‌ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪುನಃಸ್ಥಾಪಿಸಿದ್ದಾರೆ.

ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ಅವರು 2019ರ ಏಪ್ರಿಲ್ 13 ರಂದು  ಭಾಷಣ ಮಾಡಿದ್ದರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಪ್ರಕರಣದಲ್ಲಿ ರಾಹುಲ್ ಅವರು, ಎರಡು ವರ್ಷ ಶಿಕ್ಷೆಗೆ ಗುರಿಯಾಗಿ ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿದ್ದರು.

ಇದನ್ನೂ ಓದಿ:ಜನಮತ 2023 : ಚುನಾವಣಾ ಪೂರ್ವ ತಯಾರಿಯಲ್ಲಿ ವಿಪಕ್ಷಗಳನ್ನು ಒಗ್ಗೂಡಿಸುವತ್ತ ಖರ್ಗೆ, ರಾಹುಲ್‍

ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‍ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆದೇಶದ ವಿರುದ್ಧ ಸುಪ್ರೀಂಗೆ ಜು.15 ರಂದು  ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು  ಪ್ರಕರಣದ ವಿಚಾರಣೆ ನಡೆಸಿತ್ತು. ಈ ವೇಳೆ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು.

Donate Janashakthi Media

Leave a Reply

Your email address will not be published. Required fields are marked *