ಸೌಜನ್ಯ ಕುಟುಂಬದ ಮೇಲೆ ಹೆಗ್ಗಡೆ ಬೆಂಬಲಿಗರಿಂದ ಹಲ್ಲೆ – ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು : ಧರ್ಮಸ್ಥಳದ ಉಜಿರೆಯ ಸೌಜನ್ಯ ಪ್ರಕರಣದಲ್ಲಿ ನ್ಯಾಯ ಕೇಳುತ್ತಿರುವ ಆಕೆಯ ತಾಯಿ ಮತ್ತು ಕುಟುಂಬದವರ ಮೇಲೆ ನಡೆದ ದೌರ್ಜನ್ಯವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡಿಸಿದೆ.

ಈ ಕುರಿತು ರಾಜ್ಯಾಧ್ಯಕ್ಷೆ ಮೀನಾಕ್ಷಿ‌ಬಾಳಿ, ರಾಜ್ಯ ಪ್ರಧಾನ‌ಕಾರ್ಯದರ್ಶಿ ದೇವಿ ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿದ್ದು, ಆಗಸ್ಟ್ 04 ರಂದು ಉಜಿರೆಯಲ್ಲಿ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ಎಂಬ ಸಂಘಟನೆಯ ಹೆಸರಿನಲ್ಲಿ ಸೌಜನ್ಯಳ ಕುರಿತು ನಡೆಸುತ್ತಿದ್ದ ಸಮಾವೇಶ,ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಲೆಂದು ಹೋಗಿದ್ದ ಸೌಜನ್ಯಳ ತಾಯಿ ಕುಸುಮಾವತಿ ಹಾಗೂ ಸಹೋದರಿಯರಾದ ಸೌಂದರ್ಯ, ಸೌಹಾರ್ದ ಮತ್ತು ಸಹೋದರ ಜಯರಾಮ ಅವರನ್ನು ಅಪಮಾನಿಸಿದ್ದು ನೀಚತನದ ಕೆಲಸ ಎಂದು ಆರೋಪಿಸಿದ್ದಾರೆ.

ಸೌಜನ್ಯಳ ಕುಟುಂಬಕ್ಕೆ ಅಲ್ಲಿ ರಕ್ಷಣೆ ಇಲ್ಲ ಎಂಬುದು ಗೋಚರಿಸುತ್ತಿದೆ. ಆದ್ದರಿಂದ ಅವರಿಗೆ ಸರಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹನ್ನೊಂದು ವರ್ಷಗಳ ಹಿಂದೆ ಸೌಜನ್ಯಳ ಮೇಲಾದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮಂಗಳೂರು ಜಿಲ್ಲೆಯಲ್ಲಿ ಹೋರಾಟವನ್ನು ಅಣಿ ನೆರೆಸಿತ್ತು. ಇಡೀ ರಾಜ್ಯದಲ್ಲಿಯೇ ಹೋರಾಟ ಸಂಘಟಿಸಿ ಸೌಜನ್ಯ ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು.

ಅಪರಾಧ ನಡೆದಾಗ ಸ್ವಯಂ ಪ್ರೇರಿತ ದೂರು ದಾಖಲಿಸಿ ಕೊಂಡ ಸ್ಥಳೀಯ ಪೋಲೀಸರು ತಪ್ಪು ತಪ್ಪಾಗಿ ನಡೆದುಕೊಂಡು, ತರಾತುರಿಯಲ್ಲಿ ಅಮಾಯಕ ವ್ಯಕ್ತಿಯನ್ನು ಬಂಧಿಸಿ ಜೈಲಿಗಟ್ಟಿದ್ದು ದುರಂತ ಎಂದರು

ಆಗಲೂ ಜನವಾದಿ ಮತ್ತು ಇತರ ಹಲಾವಾರು ಸಮಾನ ಮನಸ್ಕ , ನ್ಯಾಯದ ಪರ, ದೌರ್ಜನ್ಯ ವಿರೋಧೀ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ನಿಜವಾದ ಅಪರಾಧಿಗಳನ್ನು ಕಂಡು ಹಿಡಿಯದೆಯೇ ಅಮಾಯಕರನ್ನು ಅಪರಾಧಿಗಳೆಂದು ಬಿಂಬಿಸುವುದು ಸರಿಯಲ್ಲ. ನಿಜವಾದ ಅಪರಾಧಿಗಳು ಬಲಾಢ್ಯರೆ ಇದ್ದಾರೆ. ಅಷ್ಟೇ ಅಲ್ಲ ಧರ್ಮಸ್ಥಳದ ಸುತ್ತಲೂ 400 ಕ್ಕೂ ಹೆಚ್ಚು ಅಮಾಯಕರ ಕೊಲೆಗಳು ಆಗಿವೆ. ಇವೆಲ್ಲವುಗಳ ತನಿಖೆಯಾಗಬೇಕೆಂದು ಒತ್ತಾಯಿಸಲಾಗಿತ್ತು.

ಜನಪರ ಸಂಘಟನೆಗಳ ಹೋರಾಟ ತೀವ್ರಗೊಂಡ ನಂತರ ಸರಕಾರ
ಪ್ರಕರಣವನ್ನು CBI ಗೆ ಒಪ್ಪಿಸಿತು. ಆದರೆ ಅಷ್ಟರಲ್ಲಾಗಲೇ ಪೋಲೀಸ್ ಮತ್ತು ಸಿ.ಐ.ಡಿ. ತನಿಖಾಕ್ರಮದಲ್ಲಿ ಎಲ್ಲ ರೀತಿಯ ಲೋಪವೆಸಗಿ ಸಾಕ್ಷಿಗಳನ್ನು ನಾಶ ಮಾಡಲಾಗಿದೆ ಎಂದು ಸಿ.ಬಿ.ಐ ವಿಶೇಷ ನ್ಯಾಯಾಲಯವೂ ಕೂಡಾ ತನ್ನ ತೀರ್ಪಿನಲ್ಲಿ ಹೇಳಿದೆ.

ದೀರ್ಘ ಅವಧಿಯ ನಂತರ ಈಗ ಸಿ.ಬಿ.ಐ ನ್ಯಾಯಾಲಯವು ಸಂತೋಷರಾವ್ ನಿರಪರಾಧಿ ಎಂದು ಬಿಡುಗಡೆ ಮಾಡಿ ನಿರಪರಾಧಿಯೊಬ್ಬರಿಗೆ ನ್ಯಾಯದಾನ ನೀಡಿದೆ. ಈಗ ನಿಜವಾದ ಅಪರಾಧಿ ಯಾರೆಂದು ಪತ್ತೆ ಹಚ್ಚಬೇಕಾದ ಜವಾಬ್ದಾರಿ ಸರಕಾರದಾಗಿದೆ ಎಂದು ತಿಳಿಸಿದ್ದಾರೆ.

ಸೌಜನ್ಯಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದವರನ್ನು ಮತ್ತು ಕೊಲೆಗಡುಕರನ್ನು ಬಚಾವ್ ಮಾಡುತ್ತಿರುವವರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತಿವೆ. ಈ ದಿಸೆಯಲ್ಲಿ ಮೈಸೂರು,ಬೆಂಗಳೂರು ಇನ್ನು ಹಲವಾರು ಕಡೆ ಪ್ರತಿಭಟನೆ ನಡೆದಿವೆ. ಇದೇ ಹೊತ್ತಿನಲ್ಲಿ ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವವರು ಸೌಜನ್ಯಳ ಪರವಾಗಿ ಹೋರಾಟ ಮಾಡುತ್ತಿರುವವರ ಮೇಲೆ ಹರಿ ಹಾಯುತ್ತಿದ್ದಾರೆ. ಅಷ್ಟಕ್ಕೂ ಕುಸುಮಾವತಿಯವರು ಇದು ತಮ್ಮ ಮಗಳ ಪರವಾಗಿ ನಡೆಯುತ್ತಿರುವ ಹೋರಾಟ ಆದ್ದರಿಂದ ನಮಗೆ ವೇದಿಕೆ ಮೇಲೆ ಅವಕಾಶ ಕೊಡಿ ಎಂದು ಕೇಳಿದ್ದೆ ಅಪರಾಧ ಎಂಬಂತೆ ಆಯೋಜಕರು ಘೋಷಣೆ ಕೂಗುತ್ತ ದೂರ ಸರಿಸಿದ್ದಾರೆ. ಜಯರಾಮನ ಕಾಲರ್ ಪಟ್ಟಿ ಹಿಡಿದು ಎಳೆದಾಡಲಾಗಿದೆ. ಕುಸುಮಾವತಿಯವರು ತಮ್ಮ ಮೈ ಮುಟ್ಟಿ ವೇಲ್ ಹಿಡಿದು ಎಳೆದಾಡಿದ್ದಾರೆ ಎಂದು ದೂರಿದ್ದಾರೆ. ಹಾಗಾದರೇ ಮಂಜುನಾಥಸ್ವಾಮಿಯ ಭಕ್ತರೆಂದು ಹೇಳಿಕೊಳ್ಳುತ್ತಿರುವವರ ನೈತಿಕತೆಯಾದರೂ ಏನು ? ನ್ಯಾಯ ದೇವತೆ, ಸತ್ಯ ನೀತಿಗಳಿಗೆ ಹೆಸರಾದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಅದೂ ಅದೇ ದೇವರ ಹೆಸರು ಹೇಳಿಕೊಂಡು ನ್ಯಾಯ ಕೇಳಲು ಬಂದವರನ್ನು ಎಳೆದಾಡಿರುವುದು ಹೇಸಿಗೆ ಬರಿಸುತ್ತಿದೆ. ಭಕ್ತಿ ಎಂಬುದನ್ನೆ ಅಪಮಾನಿಸಿದ ಅವರನ್ನು ಕೂಡಲೇ ಬಂಧಿಸಬೇಕು. ಜಾಗ್ರತ ದೇವರೆಂದೆ ಜನಜನಿತವಾದ ಮಂಜುನಾಥ ಸ್ವಾಮಿಯ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವವರನ್ನು ನಿಗ್ರಹಿಸಬೇಕು. ದೇವರನ್ನು ದೇವರಂತೆ ಇರಲು ಬಿಟ್ಟು ಹೊಟ್ಟೆ ಹೊರೆಯುವ ಹುಸಿ ಭಕ್ತರನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *