ಗುರುರಾಜ ದೇಸಾಯಿ
ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಕೇಂದ್ರಗಳಾಗುತ್ತಿವೆ
ಕೋರ್ಟಗೆ ಸಾಕ್ಷಿ ಹೇಳಬೇಕಾದವರನ್ನು ಕರೆದುಕೊಂಡು ಹೋಗುವುದು ಪೊಲೀಸರ ಕರ್ತವ್ಯ, ಆದರೆ ಅದೇ ಪೊಲೀಸರು ಸಾಕ್ಷಿ ಹೇಳದಂತೆ ವ್ಯಕ್ತಿಗೆ ಕೈಕೋಳ ಹಾಕಿ, ದಿನವಿಡಿ ಠಾಣೆಯಲ್ಲಿ ಕೂಡಿ ಹಾಕಿ ದೌರ್ಜನ್ಯ ನಡೆಸಿದ ಘಟನೆ ಕನಕಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಕನಕಗಿರಿ ತಾಲೂಕು ಬೊಮ್ಮಸಾಗರ ತಾಂಡದ ಸಣ್ಣ ಹನುಮಂತಪ್ಪ ಅವರನ್ನು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಬೇಡಿ ಹಾಕಿ ಕೂಡಿ ಹಾಕಿರುವ ಫೋಟೊ ವೈರಲ್ ಆಗಿದೆ. ಆತ ಗಂಭೀರ ಪ್ರಕರಣದ ಆರೋಪಿಯೂ ಅಲ್ಲ. ಯಾವುದೇ ಕೋರ್ಟ್ ಆತನನ್ನು ಅಪರಾಧಿ ಎಂದು ತೀರ್ಪು ನೀಡಿಲ್ಲ. ಆದರೂ, ಪೊಲೀಸರು ಆತನ ಕೈಗೆ ಕೋಳ ಹಾಕಿ, ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ, ಹೆದರಿಸಿ ಸಂಜೆಯ ಮೇಲೆ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಜನಶಕ್ತಿ ಮೀಡಿಯಾ ಜೊತೆ ಮಾಹಿತಿ ಹಂಚಿಕೊಂಡ ಸಣ್ಣ ಹನುಮಂತಪ್ಪ, ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹಾಕಲು ಪೊಲೀಸರು ನನ್ನನ್ನು ಕೂಡಿ ಹಾಕಿ, ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕಬ್ಬು ಕಟಾವು ಮಾಡಲು ಬೆಳಗಾವಿ ಜಿಲ್ಲೆ ಅಥಣಿಗೆ ಹೋಗಿದ್ದ ನನ್ನನ್ನು ಪೊಲೀಸರು ಬೆದರಿಕೆ ಒಡ್ಡಿ ಕರೆಯಿಸಿಕೊಂಡಿದ್ದಾರೆ. ಬೆಳಗ್ಗೆ ಗಂಗಾವತಿಗೆ ಹೋಗಿ ಮಗಳನ್ನು ಕಾಲೇಜಿಗೆ ಬಿಟ್ಟು ಗ್ರಾಮಕ್ಕೆ ಹೋಗುತ್ತಿದ್ದಾಗ ಅಲ್ಲಿಂದಲೇ ನನ್ನನ್ನು ಪೊಲೀಸರು ಕರೆ ತಂದಿದ್ದಾರೆ. ಈ ಬಗ್ಗೆ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಹನುಮಂತಪ್ಪ ಹೇಳಿಕೊಂಡಿದ್ದಾರೆ.
ನೊಂದವರ ರಕ್ಷಣೆ ಮಾಡಬೇಕಿದ್ದ ಪೊಲೀಸರು ಸಿವಿಲ್ ಕೇಸ್ ಗಳ ಸೆಟ್ಲಮೆಂಟ್ ಮಾಡುತ್ತಿದ್ದು, ಪೊಲೀಸ್ ಠಾಣೆಗಳು ಸೆಟ್ಲಮೆಂಟ್ ಕೇಂದ್ರಗಳಾಗಿವೆ. ಹನುಮಂತಪ್ಪ ಎಸ್ಸಿ ಸಮುದಾಯಕ್ಕೆ ಸೇರಿದ್ದು, ಪೊಲೀಸರು ದೌರ್ಜನ್ಯದ ವಿರುದ್ಧ ಎಸ್ಸಿ/ಎಸ್ಟಿ ಆಯೋಗ ಮತ್ತು ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಮುಕುಂದರಾವ್ ಭವಾನಿಮಠ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಯುವ ವಕೀಲ ಜುನೇದ್ ಬಿ.ಎಂ ಪ್ರತಿಕ್ರಿಯಿಸಿದ್ದು, ಗಂಭೀರವಲ್ಲದ ಸಣ್ಣ-ಪುಟ್ಟ ಪ್ರಕರಣದ ಆರೋಪಿಗಳಿಗೆ ಬೇಡಿ- ಕೋಳ ಹಾಕಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಧರೋಡೆ, ಕೊಲೆ, ಅತ್ಯಾಚಾರ ನಡೆಸಿದ ಆರೋಪಿಗಳಿದ್ದರೆ, ಅವರು ಓಡಿ ಹೋಗುವ ಅಥವಾ ತಪ್ಪಿಸಿಕೊಳ್ಳು ಸಾಧ್ಯತೆ ಇರುವ ಕಾರಣದಿಂದಾಗಿ ಕೋಳ ಹಾಕಲು ಅವಕಾಶ ಇದೆ. ಆದರೆ ಅದನ್ನು ಬಹಿರಂಗವಾಗಿ ಪ್ರದರ್ಶಿಸುವಂತಿಲ್ಲ, ಹೀಗಿರುವಾಗ ಸಣ್ಣ ಹನುಮಂತಪ್ಪಗೆ ಪೊಲೀಸರು ಅವಮಾನ ಮಾಡಿದ್ದಾರೆ, ಸುಳ್ಳು ಸಾಕ್ಷಿ ಹೇಳುವಂತೆ ಒತ್ತಡ ಹಾಕಿದ್ದಾರೆ, ಕೂಡಲೆ ಪೋಲೀಸರ ಮೇಲೆ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ಕನಕಗಿರಿ ಪಿಐ ಜಗದ್ದೀಶ, ಸಣ್ಣ ಹನುಮಂತಪ್ಪ ಮಟ್ಕಾ ಬರೆಯುತ್ತಿದ್ದ. ಈ ಹಿಂದೆ ಠಾಣೆಗೆ ಕರೆತಂದಾಗ ಓಡಿ ಹೋಗಿದ್ದ. ಆ ಕಾರಣಕ್ಕೆ ಬೇಡಿ ಹಾಕಿ ಕೂಡಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ ಆರಗ ಜ್ಞಾನೇಂದ್ರರಿಂದ ಖರ್ಗೆ & ಉತ್ತರ ಕರ್ನಾಟಕದ ಜನರ ವಿರುದ್ಧ ಜನಾಂಗೀಯ ನಿಂದನೆ
ಏನಿದು ಪ್ರಕರಣ : ಬೊಮ್ಮಸಾಗರ ತಾಂಡಾದ ಶೇಖರಪ್ಪ ಎಂಬ ವ್ಯಕ್ತಿ ಸಂಬಂಧಿಸಿದ ಪ್ರಕರಣದಲ್ಲಿ ಸಣ್ಣ ಹನುಮಂತಪ್ಪ ಸಾಕ್ಷಿದಾರನಾಗಿದ್ದ. ಶೇಖರಪ್ಪ ಪರ ಸಾಕ್ಷಿ ಹೇಳುವಂತೆ ಪೊಲೀಸರು ನಿತ್ಯ ಫೋನ್ ಮಾಡಿ ಹಿಂಸೆ ನೀಡುತ್ತಿದ್ದರಂತೆ, ಕನಕಗಿರಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಬಸವರಾಜ ಮತ್ತು ರಮೇಶ್ ಚೌಡ್ಕಿ ಎನ್ನುವವರು ಹಲವು ತಿಂಗಳಿಂದ ಪೋನ್ ಮೂಲಕ ಸಣ್ಣ ಹನುಮಂತಪ್ಪನಿಗೆ ಬೆದರಿಕೆ ಹಾಕುತ್ತಲೆ ಬಂದಿದ್ದಾರೆ.
ಈ ಹಿಂಸೆಯನ್ನು ತಾಳಲಾಗಿದೆ, ಮಹಾರಾಷ್ಟ್ರದ ಸಣ್ಣ ಹುನುಮಂತಪ್ಪ ಠಾಣೆಗೆ ಬರುವುದಾಗಿ ಒಪ್ಪಿಕೊಳ್ಳುತ್ತಾರೆ. ಠಾಣೆಗೆ ಬಂದವರೆ ಕಮಕಗಿರಿ ಪಿಐ ಜಗದೀಶ್‌ರವನ್ನು ಭೇಟಿಮಾಡಿ ಯಾಕಿಷ್ಟು ಹಿಂಸೆ ಮಾಡುತ್ತಿರಿ ಸರ್, ಹೊಟ್ಟೆಪಾಡಿಗಾಗಿ ದುಡಿದು ತಿನ್ನುವ ಜನ ನಾವು ಎಂದು ಹೇಳುತ್ತಿದ್ದಂತೆ, ಸೊಂಟದಲ್ಲಿದ್ದ ಬೆಲ್ಟ್ ಬಿಚ್ಚಿ ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಶೇಖರಪ್ಪ ಪರ ಸಾಕ್ಷಿ ಹೇಳಬೇಕು ಎಂದು ಹೆದರಿಸಿದ್ದಾರೆ. ನಾನು ಸುಳ್ಳು ಸಾಕ್ಷಿ ನುಡಿಯಲ್ಲಿ, ಇರುವುದನ್ನು ಕೋರ್ಟ್‌ಗೆ ಹೇಳುತ್ತೇನೆ ಎಂದಾಗ ನಿನ್ನ ಮೇಲೆ ಕೇಸ್ ಆಗಿದೆ ಎಂದು ಹೊಸ ಕಥೆ ಸೃಷ್ಟಿಸಿ ಆತನ ಕೈಗೆ ಕೋಳ ತೊಡಿಸಿದ್ದಾರೆ.
ಕೈಕೋಳ ಸಮರ್ಥಿಸಿಕೊಳ್ಳಲು ದೂರು ದಾಖಲು : ಸಣ್ಣ ಹನುಮಂತಪ್ಪ ಕೈಗೆ ಕೋಳ ಹಾಕಿದ ಫೋಟೊಯನ್ನು ಯಾರೋ ತೆಗೆದು ಫೆಸ್ಬುಕ್‌ಗೆ ಹಾಕಿದ್ದಾರೆ. ಪೋಟೊ ವೈರಲ್ ಆಗುತ್ತಿದ್ದಂತೆ, ಪೊಲೀಸರು ಇತನ ಮೇಲೆ ಮಟ್ಕಾ ಕೇಸ್ ಇದೆ, ಅದಕ್ಕಾಗಿ ಬೇಡಿ ಹಾಕಿದ್ದೇವೆ ಎಂದು ಸಮರ್ತಿಸಿಕೊಂಡಿದ್ದಾರೆ.
ಶೇಖರಪ್ಪ ಮೂಲಕ ಆಗಸ್ಟ್ 01 ರಂದು ಸಣ್ಣ ಹನುಮಂತಪ್ಪ ವಿರುದ್ದ ಸುಳ್ಳು ದೂರನ್ನು ದಾಖಲಿಸಿಕೊಳ್ಳುತ್ತಾರೆ. ಇದೇ ದೂರನ್ನು ಮುಂದೆ ಮಾಡಿ ಸಣ್ಣ ಹನುಮಂತಪ್ಪನಿಗೆ ಕೋಳ ಹಾಕಿ ಹಿಂಸೆ ನೀಡಿದ್ದಾರೆ.
ಅನುಮಾನ ಹುಟ್ಟಿಸಿದ ಪೊಲೀಸರ ನಡೆ : ಈ ಘಟನೆಯ ಮುಜುಗುರವನ್ನು ತಪ್ಪಿಸಿಕೊಳ್ಳಲು ಪೊಲೀಸರು ಸಣ್ಣ ಹನುಮಂತಪ್ಪನಿಗೆ ಮಟ್ಕಾ ಬುಕ್ಕಿ ಎಂಬ ಹಣೆ ಪಟ್ಟಿ ಕಟ್ಟಿದ್ದಾರೆ. ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
1) ಸದರಿ ಸಣ್ಣ ಹನುಮಂತಪ್ಪ ವಿರುದ್ಧ ಈ ವರೆಗೆ ಎಷ್ಟು ಮಟ್ಕಾ ಪ್ರಕರಣ ದಾಖಲಾಗಿವೆ?
2) ಇದೇ ಮೊದಲು ಎನ್ನುವುದಾದರೆ ಮಟ್ಕಾ ಬರೆಯುವ ಆತ ಅಥಣಿಗೆ ಕಬ್ಬು ಕುಡಿಯಲು ಹೊಗಿದ್ದು ಏಕೆ?
3) ಆತ ಮಟ್ಕಾ ಬುಕ್ಕಿಯೇ ಆಗಿದ್ದರೆ ಆಗಸ್ಟ್ 2ರ ಸಂಜೆ ವರೆಗೆ ಎಫ್ಐಆರ್ ಏಕೆ ಮಾಡಿಲ್ಲ?
4) ಯಾರೋ ಒಬ್ಬರು ಕಾನೂನು ಚೌಕಟ್ಟಿನಡಿ ಮಾತನಾಡಿದ ಕೂಡಲೇ ಆತನನ್ನು ಬಿಟ್ಟು ಕಳುಹಿಸಿದ್ದು ಏಕೆ?
5) ಮಟ್ಕಾ ಬುಕ್ಕಿ ಜೊತೆಗೆ ಆತನ ಪತ್ನಿಯನ್ನು ಪೊಲೀಸ್ ಠಾಣೆಗೆ ಕರೆ ತಂದಿದ್ದು ಏಕೆ?
ಕನಕಗಿರಿಯ ಠಾಣೆಯ ಪೊಲೀಸರು ಇದಕ್ಕೆ ಉತ್ತರಿಸಬೇಕಿದೆ. ಯಾಕೆಂದರೆ, ಕೋರ್ಟ್ ನಲ್ಲಿ ಸುಳ್ಳು ಸಾಕ್ಷಿ ಹೇಳುವಂತೆ ವ್ಯಕ್ತಿ ಒಬ್ಬನನ್ನು ಪೊಲೀಸ್ ಠಾಣೆಗೆ ಕರೆ ತಂದು ಕೋಳ ಹಾಕುವುದು ಅಷ್ಟು ಹಗುರವಾಗಿ ಪರಿಗಣಿಸುವ ಪ್ರಕರಣ ಅಲ್ಲ. ಇಗಾಗಲೇ ಪೊಲೀಸ್ ವ್ಯವಸ್ಥೆಯ ಮೇಲೆ ಜನ ಸಾಮಾನ್ಯರು ನಂಬಿಕೆ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆ ಪೊಲೀಸ್ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಮಾಡಬೇಕಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿಯವರ ಕ್ಷೇತ್ರ ಇದಾಗಿದ್ದು, ಅವರಾದರೂ ಇಂತಹ ದೌರ್ಜನ್ಯಗಳನ್ನು ತಡೆಯಲು ಮುಂದಾಗಬೇಕಿದೆ.