ಸರಿಯಾದ ಊಟ ಇಲ್ಲ, ನಿದ್ದೆ ಇಲ್ಲ – ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ರಸ್ತೆ ತಡೆ

ಮಾನ್ವಿ: ವಸತಿನಿಲಯದಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ, ಕಟ್ಟಡ ಶಿಥಿಲಗೊಂಡಿದ್ದು, ಭಯ ಭೀತಿಯಿಂದ ವಾಸ ಮಾಡಬೇಕಾಗಿದೆ ಎಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

ಮಾನ್ವಿ ಪಟ್ಟಣದ ಡಾ. ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ಬಾಲಕಿಯರ ಮೆಟ್ರಿಕ್‌ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ, ವಿದ್ಯಾರ್ಥಿನಿಯರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ವಸತಿನಿಲಯದಲ್ಲಿ ಅಗತ್ಯವಾದ ಮೂಲಭೂತ ಸೌಲಭ್ಯಗಳಿಲ್ಲ, ಕಟ್ಟಡ ಶಿಥಿಲಗೊಂಡಿದ್ದು, ಭಯ ಭೀತಿಯಿಂದ ವಾಸ ಮಾಡಬೇಕಾಗಿದೆ, ಮಳೆ ಬಂದರೆ ಗೋಡೆಗಳಿಗೆ ವಿದ್ಯುತ್ ಹರಿಯುವುದರಿಂದ ವಾರ್ಡನ್‌ ರಾತ್ರಿ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಾರೆ, ಇದರಿಂದ ರಾತ್ರಿಯೆಲ್ಲ ಕತ್ತಲೆಯಲ್ಲಿ ಕಾಲ ಕಳೆಯಬೇಕು, ಜತೆಗೆ ಇಲಿ, ಹೆಗ್ಗಣ. ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಇದರಿಂದ ತೀವ್ರ ತೊಂದರೆಯಾಗುತ್ತದೆ. ಇನ್ನು ವಸತಿ ನಿಲಯದಲ್ಲಿ ಶುದ್ದ ಕುಡಿಯುವ ನೀರು, ಬಳಸುವುದಕ್ಕೆ ಅಗತ್ಯವಿರುವ ನೀರು ಕೂಡ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಮೆನು ಪ್ರಕಾರ ಊಟ ನೀಡದೆ ಅಲ್ಪ ಪ್ರಮಾಣದಲ್ಲಿ ನೀಡಲಾಗುತ್ತದೆ, ಶುಚಿ ರುಚಿಯಾದ ಊಟದ ವ್ಯವಸ್ಥೆ ಇಲ್ಲ ಜತೆಗೆ ವಸತಿ ನಿಲಯದಲ್ಲಿ ಸುಸಜ್ಜಿತ ಶೌಚಾಲಯ ಇಲ್ಲದಿರುವುದರಿಂದ ಹೆಣ್ಣುಮಕ್ಕಳು ಪರದಾಡುವಂತಾಗಿದೆ, ಈ ಕುರಿತು ಅನೇಕ ಬಾರಿ ಅಧಿಕಾರಿಗಳು, ಹಾಸ್ಟೆಲ್ ವಾರ್ಡನ್ ಗಮನಕ್ಕೆ ತಂದರೂ ನಮ್ಮ ಸಮಸ್ಯೆಗಳು ಬಗೆಹರಿಸುವಲ್ಲಿ ನಿರ್ಲಕ್ಷ ಧೋರಣೆ ತೋರಿದ್ದಾರೆ ಎಂದು ಆರೋಪಿಸಿದರು.

ಉಪ ತಹಸೀಲ್ದಾರ್ ಅಬ್ದುಲ್ ವಾಹಿದ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವಿಕರಿಸಿದರು. ಬಳಿಕ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿನಿಯರು 15 ಮೂಲಭೂತ ಸೌಲಭ್ಯಗಳಿಗೆ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಅವುಗಳನ್ನು ತಾ.ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರವೀಂದ್ರ ಉಪ್ಪಾರ ಜೊತೆ ಚರ್ಚಿಸಿ ಇನ್ನು 15 ದಿನಗಳಲ್ಲಿ ಕಟ್ಟಡ ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವಾಪಸ್ ಪಡೆದರು.

Donate Janashakthi Media

Leave a Reply

Your email address will not be published. Required fields are marked *