ಮುಂದಿನ ವಿಚಾರಣೆಗಾಗಿ ಆಗಸ್ಟ್ 9 ರಂದು ಪಟ್ಟಿ ಮಾಡುವ ಸಾಧ್ಯತೆಯಿದೆ ಉಮರ್ ಖಾಲಿದ್
ನವದೆಹಲಿ: 2020ರ ದೆಹಲಿ ಹಿಂಸಾಚಾರಕ್ಕೆ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿ ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯ್ದೆ(ಯುಎಪಿಎ) ಅಡಿಯಲ್ಲಿ ಬಂಧಿಸಲ್ಪಟ್ಟ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಮುಂದೂಡಿದೆ. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಪೀಠವು ಅರ್ಜಿದಾರರ ಪರ ವಕೀಲರು ಒಂದು ವಾರದ ಅವಧಿಗೆ ಕಾಲಾವಕಾಶ ಕೋರಿ ರವಾನಿಸಿದ ಪತ್ರವನ್ನು ಪರಿಗಣಿಸಿ ವಿಚಾರಣೆಯನ್ನು ಮುಂದೂಡಿತು.
ಸುಪ್ರೀಂ ಕೋರ್ಟ್ನ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಪ್ರಕರಣದ ಮುಂದಿನ ವಿಚಾರಣೆಗಾಗಿ ಆಗಸ್ಟ್ 9 ರಂದು ಪಟ್ಟಿ ಮಾಡುವ ಸಾಧ್ಯತೆಯಿದೆ. ಉಮರ್ ಖಾಲಿದ್ ಅವರ ಮನವಿಗೆ ಪ್ರತಿಕ್ರಿಯೆಯಾಗಿ, ದೆಹಲಿ ಪೊಲೀಸರು ಭಾನುವಾರ ತನ್ನ ಪ್ರತಿವಾದ ಅಫಿಡವಿಟ್ ಅನ್ನು ಸಲ್ಲಿಸಿದ್ದು, ಇದು ಇನ್ನೂ ಅಧಿಕೃತವಾಗಿ ದಾಖಲೆಯಲ್ಲಿ ಸ್ವೀಕರಿಸಬೇಕಾಗಿದೆ.
ಇದನ್ನೂ ಓದಿ: ‘ಹೇಯ್ ಜೋ ಬೈಡನ್, ಮೋದಿಯನ್ನು ಪ್ರಶ್ನಿಸಿ…!’: ಅಮೆರಿಕಾದಲ್ಲಿ ಪ್ರಧಾನಿ ವಿರುದ್ಧ ಪ್ರತಿಭಟನೆ
ಜುಲೈ 12 ರಂದು, ದೆಹಲಿ ಪೊಲೀಸರ ವಕೀಲರು ಸಾವಿರಾರು ಪುಟಗಳಲ್ಲಿರುವ ಬೃಹತ್ ಚಾರ್ಜ್ ಶೀಟ್ ಅನ್ನು ಉಲ್ಲೇಖಿಸಿ ಉತ್ತರವನ್ನು ಸಲ್ಲಿಸಲು ಹೆಚ್ಚಿನ ಸಮಯವನ್ನು ಕೋರಿದ್ದರಿಂದ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜುಲೈ 24 ಕ್ಕೆ ಮುಂದೂಡಿತ್ತು.
“ಒಬ್ಬ ಮನುಷ್ಯ ಎರಡು ವರ್ಷ ಹನ್ನೊಂದು ತಿಂಗಳು ಬಂಧನದಲ್ಲಿದ್ದಾನೆ. ಸಲ್ಲಿಸಲು ಯಾವ ಕೌಂಟರ್ ಅಫಿಡವಿಟ್ ಇದೆ? ಇದು ಜಾಮೀನು ಅರ್ಜಿ” ಎಂದು ಉಮರ್ ಖಾಲಿದ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು.
ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಣೆ ಮಾಡಿರುವುದರ ವಿರುದ್ಧ ಉಮರ್ ಖಾಲಿದ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರ ಪೀಠವು ಕಳೆದ ವರ್ಷ ಅಕ್ಟೋಬರ್ 18 ರಂದು ನಿಯಮಿತ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿತು. ಯುಎಪಿಎ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಇದನ್ನೂ ಓದಿ: ಸತ್ಯ-ಮಿಥ್ಯೆಗಳನ್ನು ತಿರುವು-ಮುರುವು ಮಾಡಲು ಹೊರಟವರ ಅಂತ್ಯ ಎಂದು: ಕವಿತಾ ಕೃಷ್ಣನ್
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಅಮರಾವತಿಯಲ್ಲಿ ಅವರು ಮಾಡಿದ ಆಕ್ಷೇಪಾರ್ಹ ಭಾಷಣಗಳು ದೆಹಲಿ ಗಲಭೆ ಪ್ರಕರಣದಲ್ಲಿ ಅವರ ವಿರುದ್ಧದ ಆರೋಪಗಳಿಗೆ ಆಧಾರವಾಗಿವೆ.
ಜೆಎನ್ಯು ಸಂಶೋಧನಾ ವಿದ್ಯಾರ್ಥಿಯು ಆಗಿರುವ, ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರು, ದೆಹಲಿ ಗಲಭೆಗೆ ಸಂಬಂಧಿಸಿದ ದೊಡ್ಡ ಪಿತೂರಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಪೊಲೀಸರು ಈ ಪ್ರಕರಣದಲ್ಲಿ ಸುಮಾರು 12 ಜನರ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಸಿಎಎ ವಿರೋಧಿ ಮತ್ತು ಸಿಎಎ ಪರ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದರಿಂದ 2020ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಗಲಭೆಗಳು ಭುಗಿಲೆದ್ದವು. ಇದರಲ್ಲಿ 50 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು, 700 ಕ್ಕೂ ಹೆಚ್ಚು ಜನರು ಗಾಯಗೊಂಡರು.
ವಿಡಿಯೊ ನೋಡಿ: ಗುಜರಾತ್ನಲ್ಲಿ ಭಾರಿ ಮಳೆ | ಮುಚ್ಚಲ್ಪಟ್ಟ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು Janashakthi Media