ಸಾರಿಗೆ ಇಲಾಖೆ ವಿರುದ್ಧ ಹೋರಾಟದ ಎಚ್ಚರಿಕೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಡಿವೈಎಫ್ಐ ಸಮಿತಿ
ಮಂಗಳೂರು: ಜನರ ತೆರಿಗೆಯ ದುಡ್ಡಿನಿಂದ ಸರಕಾರದ ಸಂಬಳ ಪಡೆಯುವ ಅವಳಿ ಜಿಲ್ಲೆಯ ಸಾರಿಗೆ ಅಧಿಕಾರಿಗಳು ಖಾಸಗಿ ಬಸ್ಸು ಮಾಲಕರ ಅಡಿಯಾಳಂತೆ ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು. ಅವರು ಮಂಗಳೂರಿನ ಕ್ಲಾಕ್ ಟವರ್ ಬಳಿ ಡಿವೈಎಫ್ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಗೆ ಸರಕಾರಿ ಬಸ್ ಓಡಾಟ ನಡೆಸಲು ಒತ್ತಾಯಿಸಿ ಹಾಗೂ ವಿವಿಧ ಸಾರಿಗೆ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿ.ಕೆ ಇಮ್ತಿಯಾಝ್, “ರಾಜ್ಯ ಸರಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ ಅವಳಿ ಜಿಲ್ಲೆಯ ಬಡ ಮಹಿಳೆಯರಿಗೂ ಸಿಗುವಂತಾಗಲು ಜಿಲ್ಲೆಯ ಮೂಲೆ ಮೂಲೆಗೂ ಸರಕಾರಿ ಬಸ್ಸು ಓಡಬೇಕು. ಅಧಿಕಾರಿಗಳ ಜನವಿರೋಧಿ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದರು.
ಇದನ್ನೂ ಓದಿ: ಹೆರಿಗೆಗೆಂದು ಹೋದ ಯುವತಿ ಕೋಮಾಗೆ | ಮಂಗಳೂರು ಎ.ಜೆ. ಆಸ್ಪತ್ರೆ ನಿರ್ಲಕ್ಷ್ಯ ಆರೋಪ
“ಸುರತ್ಕಲ್ ಟೋಲ್ ಗೇಟ್ ಮುಚ್ಚಿ ಎಂಟು ತಿಂಗಳಾದರೂ ಟೋಲ್ ಹೆಸರಿನಲ್ಲಿ ಪ್ರಯಾಣಿಕರ ಟಿಕೆಟ್ ಮೇಲೆ 5 ರೂಪಾಯಿ ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ಸು ಮಾಲಕರ ವಿರುದ್ಧ ಕ್ರಮ ಕೈಗೊಳ್ಳದೆ, ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆ ನಡೆಸದೆ ಜಿಲ್ಲಾಡಳಿತ ಲೂಟಿಯ ಪರವಾಗಿ ನಿಂತಿದೆ. ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ದರ್ಬಾರನ್ನು ಕೊನೆಗೊಳಿಸಲು ಜಿಲ್ಲೆಯ ಜನರು ಪ್ರತಿ ಗ್ರಾಮಗಳಿಗೆ ಸರಕಾರಿ ಬಸ್ಸಿನ ಬೇಡಿಕೆ ಸಲ್ಲಿಸಬೇಕು” ಎಂದು ಇಂಮ್ತಿಯಾಝ್ ಕರೆ ನೀಡಿದರು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, “ನಗರಕ್ಕೆ ಈಗಾಗಲೇ ಮಂಜೂರಾಗಿರುವ 68 ಸರಕಾರಿ ನರ್ಮ್ ಬಸ್ಸಿನಲ್ಲಿ 35 ಬಸ್ಸಷ್ಟೇ ಓಡಾಟ ಮಾಡುತ್ತಿದೆ. ಸರಕಾರಿ ಬಸ್ಸುಗಳ ಕೊರತೆ ನೀಗಿಸುವಂತೆ ಕೆಎಸ್ಆರ್ಟಿಸಿ ಸಂಸ್ಥೆ ಸರಕಾರದ ಮುಂದಿಟ್ಟಿದೆ. ಸರಕಾರ ಕೂಡಲೇ ಜಿಲ್ಲೆಗೆ ಹೊಸ ಬಸ್ಸುಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು” ಎಂದರು.
“ಅಷ್ಟೆ ಅಲ್ಲದೆ ನಗರದ ಸ್ಟೇಟ್ ಬ್ಯಾಂಕ್ ನಿಂದ ಈ ಹಿಂದೆ ಸಂಚರಿಸುತ್ತಿದ್ದ ನರ್ಮ್ ಬಸ್ ಓಡಾಡುವಂತೆ ನೋಡಿಕೊಳ್ಳಬೇಕು. ಪುತ್ತೂರು, ಬೆಳ್ತಂಗಡಿ ನಡುವೆ ಸರಕಾರಿ ಬಸ್ಸು ಓಡಾಡುವಂತೆ, ಮಂಗಳೂರು-ಮೂಡಬಿದ್ರೆ-ಕಾರ್ಕಳ ನಡುವೆಯೂ ಸರಕಾರಿ ಬಸ್ಸು ಓಡಾಡಲು ಕ್ರಮಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಸುಳ್ಳು ಮೊಕದ್ದಮೆ ವಾಪಸ್ ಪಡೆಯಲು ಒತ್ತಾಯ: ಬೀದಿಬದಿ ವ್ಯಾಪಾರಿಗಳಿಂದ ಮಂಗಳೂರು ಮಹಾನಗರ ಪಾಲಿಕೆ ಚಲೋ
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ್ ನಾಯಕ್ ಪ್ರತಿಭಟನಾ ಸ್ಥಳಕ್ಕಾಗಮಿಸಿ ಮನವಿಯನ್ನು ಸ್ವೀಕರಿಸಿದರು. ಈ ವೇಳೆ ಅವರು ಪ್ರತಿಭಟನಾಕಾರರು ಸಲ್ಲಿಸಿದ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಕೋಶಾಧಿಕಾರಿ ಮನೋಜ್ ವಾಮಂಜೂರು, ನಗರ ಅಧ್ಯಕ್ಷರಾದ ಜಗದೀಶ್ ಬಜಾಲ್, ನಗರ ಕೋಶಾಧಿಕಾರಿ ತಯ್ಯೂಬ್ ಬೆಂಗರೆ, ಸೈಫರ್ ಆಲಿ, ರಫೀಕ್ ಹರೇಕಳ, ಹನೀಫ್ ಬೆಂಗರೆ, ಮುಸ್ತಫಾ ಕಲ್ಲಕಟ್ಟೆ, ಮನೋಜ್ ಉರ್ವಸ್ಟೋರ್, ರಿಹಾಬ್, ನಾಸಿರ್, ಜೆರಾಲ್ಡ್ ಮುಂತಾದವರು ಉಪಸ್ಥಿತರಿದ್ದರು.