ಬೆಂಗಳೂರು : ಏತ ನೀರಾವರಿ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ವಿದ್ಯುತ್ ಬಿಲ್ ಬಾಕಿ ಇತ್ಯರ್ಥ ಪಡಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಜಲ ಸಂಪನ್ಮೂಲ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ವಿಧಾನ ಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ ಸುರೇಶ್ ಗೌಡ ಅವರು ಪ್ರಶ್ನೆಕೇಳಿ ಹೆಬ್ಬೂರು ಗೂಳೂರು ಏತ ನೀರಾವರಿ ಯೋಜನೆ 10 ವರ್ಷಗಳ ಹಿಂದೆ ಆರಂಭಗೊಂಡಿದೆ.
ಇದರಲ್ಲಿ 4 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಒಳಗೊಂಡಿದೆ. ಯೋಜನೆ ಸ್ಥಗಿತವಾಗಿಲ್ಲ ಎಂದು ಸಚಿವರು ತಿಳಿಸಿದ್ದಾರೆ ಆದರೆ ಕೆರೆಗಳಿಗೆ ನೀರು ಬಂದಿಲ್ಲ ಹೇಮಾವತಿ ನದಿಯಿಂದ ಈ ಮೊದಲು 100 ದಿನ ನೀರು ಬಿಡಲಾಗುತ್ತಿತ್ತು. ಈಗ ಅದನ್ನು 83 ದಿನಗಳಿಗೆ ಇಳಿಸಿದ್ದಾರೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 40 ಕೋಟಿ, ಏತ ನೀರಾವರಿ ಯೋಜನೆಗೆ 60 ಕೋಟಿ ಸೇರಿ ಕುಡಿಯುವ ನೀರಾವರಿ ಯೋಜನೆಗೆ 100 ಕೋಟಿ ವೆಚ್ಚ ಮಾಡಲಾಗಿದೆ. ಆದರೆ ಈವರೆಗೂ ನೀರು ಬಂದಿಲ್ಲ. ಏತ ನೀರಾವರಿಗೆ ಅಳವಡಿಸಲಾಗಿದ್ದ ಮೋಟಾರು ಪಂಪ್‍ಗಳು ಹಳೆಯದಾಗಿದ್ದು ಅವುಗಳನ್ನು ಬದಲಾವಣೆ ಮಾಡಬೇಕು. ಹಾಕಿ ವಿದ್ಯುತ್ ಬಿಲ್ ನ್ನು ಪಾವತಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಎಲ್ಲಾ ಶಾಸಕರು ಏತ ನೀರಾವರಿ ಯೋಜನೆಗಳಿಗಾಗಿಯೇ ಬೇಡಿಕೆ ಸಲ್ಲಿಸುತ್ತಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 60 ಕೋಟಿ ಯೋಜನೆಗೆ 6 ಕೋಟಿ ವಿದ್ಯುತ್ ಬಿಲ್ ಬಾಕಿ ಇದೆ. ನೀರಾವರಿ ಇಲಾಖೆಯಿಂದ ಇದೇ ರೀತಿ ನಾಲ್ಕು ಸಾವಿರ ಕೋಟಿ ರೂ.ಗಳನ್ನು ಇಂಧನ ಇಲಾಖೆಗೆ ಪಾವತಿಸಬೇಕು. ರಾಜ್ಯಾದ್ಯಂತ ಇದು ಬಾಕಿ ಉಳಿದಿದೆ ಎಂದು ಹೇಳಿದರು.
ನೀರಾವರಿ ಇಲಾಖೆ ಆರಂಭದಲ್ಲಿ ಒಂದೆರಡು ವರ್ಷ ವಿದ್ಯತ್ ಬಿಲ್ಲನ್ನು ಪಾವತಿಸಬಹುದು. ಆನಂತರ ಅದರ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಉದ್ಬವಿಸಿದೆ. ಕೆರೆ ತುಂಬಿಸಿದ ತಕ್ಷಣ ತೆರಿಗೆ ಸಂಗ್ರಹವಾಗಿ ಬಿಲ್ ಪಾವತಿಸುವ ವ್ಯವಸ್ಥೆಯಿಲ್ಲ, ನೀರು ಬಳಕೆದಾರರ ಸಂಘಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳಲು ರಾಜ್ಯಾದ್ಯಾಂತ ಎಲ್ಲಾ ಕರೆಗಳಲ್ಲೂ ಮೀನುಗಾರಿಕೆ ಕೈಗೊಳ್ಳಲು ನಿರ್ಧರಿಸಲಾಗಿದೆ.