ಯತ್ನಾಳ್‌ಗೆ ಸಂವಿಧಾನ ಪಾಠ ಮಾಡಿದ ಸ್ಪೀಕರ್

– ನವೀನ್ ಸೂರಿಂಜೆ

ಮೊದಲ ದಿನದ ಅಧಿವೇಶನದ ಕುರಿತ ಕೆಲ ಮಾಧ್ಯಮ ವರದಿಗಳಲ್ಲಿ “ಸ್ಪೀಕರ್ ಖಾದರ್ ವಿರುದ್ದ ಸಿಡಿದೆದ್ದ ಯತ್ನಾಳ್” ಎಂದು ಸುದ್ದಿ ಪ್ರಕಟವಾಗಿದೆ‌. ಇದೊಂದು ತಿರುಚಿದ ವರದಿ. ವಾಸ್ತವವಾಗಿ ಸ್ಪೀಕರ್ ಯು ಟಿ ಖಾದರ್ ಅವರು ಯತ್ನಾಳ್ ರವರಿಗೆ ಸಂವಿಧಾನ ಪಾಠ ಮಾಡಿ ಕುಳ್ಳಿರಿಸಿದರು.

ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು ಟಿ ಖಾದರ್ ಅವರು ಸಂವಿಧಾನದ ಪೀಠಿಕೆಯನ್ನು ಶಾಸಕರಿಗೆ ಬೋಧಿಸುತ್ತಾರೆ. ಆ ಬಳಿಕ ಮತ್ತೆ ಎದ್ದು ನಿಂತ ಯತ್ನಾಳ್ “ಮಾನ್ಯ ಅಧ್ಯಕ್ಷರೇ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಧ್ಯಯನ ಮಾಡಿ ಸಂವಿಧಾನ ಬರೆದಿದ್ದಾರೆ. ಆ ಸಂವಿಧಾನದ ಮೂಲ ಪೀಠಿಕೆಯನ್ನೇ ಓದಬೇಕು ಹೊರತು ನಮಗೆ ತಿಳಿದಂಗೆ ವಿಸ್ತರಿಸುತ್ತಾ ಹೋದ್ರೆ ಸಂವಿಧಾನಕ್ಕೆ ಅಪಮಾನ ಮಾಡಿದ ಹಾಗೆ ಆಗುತ್ತದೆ. ನಾನು ವಿನಂತಿ ಮಾಡ್ಕೋತಿನಿ. ನನಗೆ ನಿಮ್ಮ ಬಗ್ಗೆ ಅಪಾರ ಗೌರವ ಇದೆ. ಮೂಲ ಸಂವಿಧಾನ ಪೀಠಿಕೆಯಲ್ಲಿ ಒಂದಕ್ಷರವೂ ಬದಲಾವಣೆ ಆಗದ ರೀತಿಯಲ್ಲಿ ನೀವು ಹೇಳಬೇಕು, ಬೋಧಿಸಬೇಕು. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಗೌರವ ಕೊಡುವ ಕೆಲಸ ಆಗಬೇಕು” ಎಂದರು.

ಇದನ್ನೂ ಓದಿ:ಸಂವಿಧಾನದ ಉಲ್ಲಂಘನೆಗೆ ಬಹಿಷ್ಕಾರ ಉತ್ತರವಾಗಲಾರದು

ತಕ್ಷಣ ಯತ್ನಾಳ್‌ಗೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಯು ಟಿ ಖಾದರ್ “ನನಗೆ ಇವತ್ತು ಭಾರೀ ಸಂತೋಷವಾಗಿದೆ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ತಾವೆಲ್ಲಾ ಬಹಳಷ್ಟು ಪ್ರೀತಿ ವಿಶ್ವಾಸ ಗೌರವ ಇಟ್ಟಿದ್ದೀರಿ. ಆದ ಕಾರಣ ಈ ಸಂವಿಧಾನ ಓದಲು ಹೇಗೆ ಆಸಕ್ತಿ ವಹಿಸಿದ್ದೀರೋ, ಪೀಠಿಕೆ ಬಗ್ಗೆ ಹೇಗೆ ಚರ್ಚೆ ಮಾಡಿದ್ದೀರೋ ಹಾಗೆಯೇ ತಮ್ಮ‌ ನಡೆ ನುಡಿ, ತಮ್ಮ ಕ್ಷೇತ್ರದ ಕೆಲಸ ಮಾಡುವಾಗಲೂ ಕೂಡಾ ಶಾಸಕರಾಗಿ ಪ್ರತಿಯೊಂದು ಹಂತದಲ್ಲೂ ಕೂಡಾ ಡಾ ಬಿ ಆರ್ ಅಂಬೇಡ್ಕರ್ ಅವರ ತತ್ವಕ್ಕೆ ಅನುಗುಣವಾಗಿ, ಸಂವಿಧಾನದ ಆಶಯಕ್ಕೆ ಎಲ್ಲೂ ಲೋಪವಾಗದಂತೆ ಕೆಲಸ ಮಾಡಿ ಸರ್ವರ ಪ್ರೀತಿಗೆ ಪಾತ್ರರಾಗುವ ಅವಕಾಶ ಪಡೆದುಕೊಳ್ಳಿ” ಎಂದರು.

“ಎದೆಯಲ್ಲಿ ಜನಸಮುದಾಯಗಳ ಬಗ್ಗೆ ದ್ವೇಷ ಇಟ್ಟುಕೊಂಡು, ಮಾತೆತ್ತಿದರೆ ಕಡಿ, ಕೊಲ್ಲು ಎನ್ನುತ್ತಲೇ ರಾಜಕೀಯಕ್ಕಾಗಿ ಅಂಬೇಡ್ಕರ್ ಹೆಸರು ಹೇಳ್ತೀರಲ್ವಾ ! ಸುಮ್ನೆ ಕೂತ್ಕೊಳ್ಳಿ” ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ ಹಾಗಿತ್ತು.

ಸ್ಪೀಕರ್ ಯು ಟಿ ಖಾದರ್ ಕೊಟ್ಟ ಒಂದೇ ಏಟಿಗೆ ಯತ್ನಾಳ್ ತೆಪ್ಪಗೆ ಕುಳಿತುಕೊಂಡರು. ಆದರೆ ಮಾಧ್ಯಮಗಳು ಮಾತ್ರ ಸ್ಪೀಕರ್ ವಿರುದ್ದ ಸಿಡಿದೆದ್ದ ಯತ್ನಾಳ್ ಎಂದು ತಲೆಬರಹ ನೀಡಿದ್ದವು. ವಾಸ್ತವವಾಗಿ “ಯತ್ನಾಳ್‌ಗೆ ಸಂವಿಧಾನ ಪಾಠ ಮಾಡಿದ ಸ್ಪೀಕರ್” ಎಂಬ ತಲೆಬರಹ ಪ್ರಕಟವಾಗಬೇಕಿತ್ತು.

Donate Janashakthi Media

Leave a Reply

Your email address will not be published. Required fields are marked *