ಹಾಸನ: ಸಂವಿಧಾನದ ಕಾನೂನುಗಳ ಆಡಳಿತ ಸರಾಗವಾಗಿ ನಡೆಯಬೇಕಿದ್ದರೆ ರೌಡಿ ಶೀಟರ್ ರಘು ಸಕಲೇಶಪುರನಂತಹ ದುಷ್ಟರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸಬೇಕು. ಈ ಮೂಲಕ ದುಷ್ಟ ಶಕ್ತಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಧರ್ಮೇಶ್ ಶನಿವಾರ ಹೇಳಿದ್ದಾರೆ.
ಬಿಜೆಪಿ ಪರ ಸಂಘಟನೆ ಬಜರಂಗಳದಳ ನಾಯಕ ರಘು ಸಕಲೇಶಪುರ ಇತ್ತೀಚೆಗೆ ಭಾಷಣ ಮಾಡುತ್ತಾ ಮುಸ್ಲಿಮರನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದನು. ರೌಡಿ ಶೀಟರ್ ನೀಡಿರುವ ಈ ಹೇಳಿಕೆಯನ್ನು ಖಂಡಿಸಿರುವ ಹಾಸನ ಜಿಲ್ಲಾ ಸಿಪಿಐಎಂ, ಸಮಾಜಘಾತಕನನ್ನು ಪೋಲೀಸರು ಕೂಡಲೇ ಬಂಧಿಸಬೇಕು ಹಾಗೂ ಆತನ ಮೇಲೆ ಕೊಲೆಗೆ ಪ್ರಚೋದನೆ, ಭಯೋತ್ಪಾದನೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಿಕೆಗೆ ಸಂಬಂಧಿಸಿದ ಕಾಯ್ದೆಗಳನ್ವಯ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯವಾಗಿದೆ.
“ರಘು ಸಕಲೇಶಪುರ ಎಂಬ ಸಮಾಜಘಾತುಕ ಭಜರಂಗದಳದ ಹೆಸರಿನಲ್ಲಿ ಹಲವಾರು ಅಕ್ರಮ ಹಾಗೂ ಕುಕೃತ್ಯಗಳನ್ನು ನಡೆಸಿದ್ದಾನೆ. ಅವನ ಮೇಲೆ ಈಗಾಗಲೇ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ‘ಗೋರಕ್ಷಣೆ’, ‘ಹಿಂದೂ’ ಧರ್ಮ ರಕ್ಷಣೆ ಹೆಸರಿನಲ್ಲಿ ರೋಲ್‌ಕಾಲ್, ಗೂಂಡಾಗಿರಿಯಂತಹ ಹಲವಾರು ಕಾನೂನು ಭಾಹಿರ ಚಟುವಟಿಕೆಯಲ್ಲಿ ತೊಡಗಿದ್ದಾನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅವನ ವಿರುದ್ಧ ಪೋಲೀಸರು ಕಠಿಣ ಕ್ರಮ ಜರುಗಿಸಲು ವಿಫಲರಾಗಿದ್ದರು. ಸಕಲೇಶಪುರ ತಾಲ್ಲೂಕಿನಲ್ಲಿ ಕೆಲವು ಪೋಲೀಸರೂ ಅವನೊಂದಿಗೆ ಶಾಮೀಲಾಗಿರುವ ಮಾತುಗಳಿವೆ” ಎಂದು ಸಿಪಿಐಎಂ ಕಾಯರ್ಯದರ್ಶಿ ಧರ್ಮೇಶ್ ಆರೋಪಿಸಿದ್ದಾರೆ.
ಇದನ್ನೂ ಓದಿ: ರೌಡಿ ಶೀಟರ್ ರಘು ಸಕಲೇಶಪುರ ಬಂಧನಕ್ಕೆ ಬಲೆ ಬೀಸಿದ ಪೋಲಿಸರು: ಭೂಗತನಾದ ಆರೋಪಿ
ಈಗ ಸಕಲೇಶಪುರ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಆಯ್ಕೆಯಾಗಿರುವುದು ಆತನಿಗೆ ಮತ್ತಷ್ಟು ಉತ್ತೇಜನ ಸಿಕ್ಕಂತಾಗಿದೆ. ಸಕಲೇಶಪುರ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು ಅವರ ಬೆಂಬಲಿಗನಾಗಿದ್ದಾನೆ ಎಂದು ಸಿಪಿಐಎಂ ಹೇಳಿದ್ದು, “ರಘು ವಿರುದ್ಧ ಪೋಲೀಸರು ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ” ಎಂದು ಒತ್ತಾಯಿಸಿದೆ.
“ನಾಗರಿಕ ಸಮಾಜ ಮತ್ತು ಸರ್ಕಾರಕ್ಕೆ ಸವಾಲಾಗಿರುವ ಇಂತಹ ದುಷ್ಟ ಶಕ್ತಿಗಳ ನಿಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಸಂವಿಧಾನದ ಕಾನೂನುಗಳ ಆಡಳಿತದ ಸರಾಗವಾಗಿ ನಡೆಯಬೇಕಿದ್ದರೆ ರಘುನಂತಹ ದುಷ್ಟರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸುವ ಮುಖಾಂತರ ಅಂತಹ ದುಷ್ಟ ಶಕ್ತಿಗಳಿಗೆ ಸ್ಪಷ್ಟ ಸಂದೇಶವನ್ನು ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಒಂದು ವೇಳೆ ರೌಡಿ ಶೀಟರ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸು ಇಲಾಖೆಯ ವಿರುದ್ಧ ತೀವ್ರ ಹೋರಾಟಕ್ಕೆ ಇಲಿಯುವುದು ಅನಿವಾರ್ಯವಾಗಲಿದೆ ಎಂದು ಸಿಪಿಐಎಂ ಎಚ್ಚರಿಸಿದೆ.