ಬೆಂಗಳೂರು: ವಾಟ್ಸಾಪ್‌ನಲ್ಲಿಯೂ ಪೊಲೀಸರಿಗೆ ದೂರು ಸಲ್ಲಿಸಲು ಅವಕಾಶ- ಬಿ. ದಯಾನಂದ

ಬೆಂಗಳೂರು:  ಇನ್ನೂ ಮುಂದೆ ನಗರದ ನಾಗರಿಕರು ತಮಗಾದ ವಂಚನೆ, ಅಪರಾಧ ಕುರಿತು ವಾಟ್ಸಾಪ್ ಮೂಲಕವೂ ಪೊಲೀಸರಿಗೆ ದೂರು ಸಲ್ಲಿಸಬಹುದು. ತುರ್ತು ಸಂದರ್ಭದಲ್ಲಿ ಯಾವುದೇ ರೀತಿಯ ದೂರು ಅಥವಾ ಸಹಾಯಕ್ಕಾಗಿ ವಾಟ್ಸಾಪ್ ಸಂಖ್ಯೆ 9480801000ಗೆ ಕಳುಹಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

112 ನಿಯಂತ್ರಣ ಕೊಠಡಿ ಉನ್ನತೀಕರಿಸಲು ಮೊದಲ ಹೆಜ್ಜೆ ಇರಿಸಲಾಗಿದೆ. ಈ ನಿಯಂತ್ರಣ ಕೊಠಡಿ ಮೂಲಕ ಜನರ ದೂರು ಸ್ವೀಕರಿಸುತ್ತಿದ್ದ ಪೊಲೀಸರು ವಾಟ್ಸಾಪ್ ಮೂಲಕವೂ ದೂರು ಪಡೆಯಲು ಮುಂದಾಗಿರುವುದರಿಂದ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಹೊಯ್ಸಳ ಗಸ್ತು ವಾಹನಕ್ಕೆ ಮಾಹಿತಿ; ತುರ್ತು ಸಂದರ್ಭದಲ್ಲಿ ಜನರು 112 ಸಂಖ್ಯೆಗೆ ಕರೆ ಬದಲು ವಾಟ್ಸಪ್‌ನಲ್ಲಿ ಸಂದೇಶ ಕಳಿಸಿದರೆ ಕೂಡಲೇ ಸಂದೇಶವು ಹೊಯ್ಸಳ ವಾಹನ ಸಿಬ್ಬಂದಿಗೆ ನಿಯಂತ್ರಣ ಕೊಠಡಿಯಿಂದ ರವಾನೆಯಾಗಲಿದೆ. ಇದರಿಂದಾಗಿ ಗಸ್ತಿನಲ್ಲಿರುವ ಪೊಲೀಸರು ತಕ್ಷಣವೇ ಸಂಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಲು ಅನುಕೂಲವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಬಿ. ದಯಾನಂದ್ ಹೊಯ್ಸಳ ವಾಹನದಲ್ಲಿ ನಗರದಲ್ಲಿ ನಗರದಲ್ಲಿ ಗಸ್ತು ತಿರುಗುವ ಮೂಲಕ 112 ಸಂಖ್ಯೆಯ ಕಾರ್ಯ ನಿರ್ವಹಣೆ ಬಗ್ಗೆ ಮಾಹಿತಿ ಪಡೆದಿದ್ದರು. ಈಗ ವಾಟ್ಸಪ್ ನಂಬರ್‌ ಜೊತೆ ಈ ಸಂಖ್ಯೆಯನ್ನು ಜೋಡಿಸಲಾಗಿದೆ.

ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಿ. ದಯಾನಂದ 112 ಸಂಖ್ಯೆಯನ್ನು ಮತ್ತಷ್ಟು ಜನಸ್ನೇಹಿಯಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದರು. ಇದರ ಮೊದಲ ಭಾಗವಾಗಿ ಅದನ್ನು ವಾಟ್ಸಪ್ ನಂಬರ್‌ಗೆ ಜೋಡಣೆ ಮಾಡಿ, ಜನರ ದೂರು ನಿಯಂತ್ರಣ ಕೊಠಡಿಗೆ ತಲುಪುವಂತೆ ಮಾಡಿದ್ದಾರೆ.

“ಬೆಂಗಳೂರು ನಗರದಲ್ಲಿ ಹುಟ್ಟಿ ಬೆಳೆದವ ನಾನು. ನಗರದ ಪೊಲೀಸ್ ವ್ಯವಸ್ಥೆಯನ್ನು ಬಲ್ಲೆ. ಬಹಳಷ್ಟು ಸವಾಲುಗಳು ಇವೆ, ಅದನ್ನು ಎದುರಿಸಲು ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ, ಬದಲಾವಣೆ ತರುತ್ತೇನೆ” ಎಂದು ಬಿ. ದಯಾನಂದ್ ಹೇಳಿದ್ದರು.

“ಪೊಲೀಸ್ ಠಾಣೆಗಳನ್ನು ಜನಸ್ನೇಹಿಗೊಳಿಸಿ ಅಲ್ಲಿಯೇ ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುತ್ತದೆ. ಸಮಸ್ಯೆಗಳಿಗೆ ಪೊಲೀಸ್ ಠಾಣೆಗಳಲ್ಲಿ ಪರಿಹಾರ ದೊರೆಯದಿದ್ದರೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳ ಮೊರೆ ಹೋಗುತ್ತಾರೆ. ಅದನ್ನು ತಪ್ಪಿಸುವುದು ಮೊದಲ ಆದ್ಯತೆಯಾಗಿದೆ” ಎಂದು ನೂತನ ಪೊಲೀಸ್ ಆಯುಕ್ತರು ತಿಳಿಸಿದ್ದರು.

“ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟಹಾಕಲು ಹಿಂದಿನ ಪೊಲೀಸ್ ಆಯುಕ್ತರು ಶ್ರಮಿಸಿ ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸಿ ನಗರವನ್ನು ರೌಡಿ ಚಟುವಟಿಕೆ ಮುಕ್ತವಾಗಿಸಲು ಶ್ರಮಿಸುತ್ತೇನೆ” ಎಂದು ಆಯುಕ್ತರು ಭರವಸೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *