ನವದೆಹಲಿ: ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದ್ದ ‘ಕೋವಿನ್’ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದ ಹಿರಿಯ ರಾಜಕೀಯ ನಾಯಕರು ಸೇರಿದಂತೆ ದೇಶದ ಎಲ್ಲ ನಾಗರಿಕರ ಮಾಹಿತಿ ಸೋರಿಕೆಯಾಗಿದೆ ಎಂಬ ಗಂಭೀರ ಮಾಹಿತಿಯೊಂದು ಬಹಿರಂಗವಾಗಿದೆ.
ಟೆಲಿಗ್ರಾಂ ಆ್ಯಪ್ನಲ್ಲಿ ಭಾರತೀಯರ ಖಾಸಗಿ ಮಾಹಿತಿ, ಆಧಾರ್ ಹಾಗೂ ಪಾನ್ ಕಾರ್ಡ್ ವಿವರಗಳು ಲಭ್ಯ ಇವೆ ಎಂದು ಮಲಯಾಳ ವೆಬ್ಸೈಟ್ವೊಂದು ವರದಿ ಮಾಡಿದೆ. ಟೆಲಿಗ್ರಾಂನಲ್ಲಿ ಬಾಟ್ ಚಾನಲ್ವೊಂದಿದೆ. ಕೋವಿನ್ ಪೋರ್ಟಲ್ನಲ್ಲಿ ನೋಂದಾಯಿತವಾಗಿರುವ ಯಾವುದೇ ಮೊಬೈಲ್ ಸಂಖ್ಯೆಯನ್ನು ಬಾಟ್ನಲ್ಲಿ ನಮೂದಿಸುತ್ತಿದ್ದಂತೆ, ಲಸಿಕಾಕರಣಕ್ಕಾಗಿ ಉಪಯೋಗಿಸಲಾಗಿದ್ದ ಗುರುತಿನ ಚೀಟಿಯ ಸಂಖ್ಯೆ, ಲಿಂಗ, ಜನ್ಮ ದಿನಾಂಕ, ಹೆಸರು, ಆತ/ಆಕೆಯ ಡೋಸ್ಗಳು ಎಲ್ಲ ಮಾಹಿತಿಯೂ ಹೊರಬೀಳುತ್ತದೆ. ಈ ಮಹಾ ದತ್ತಾಂಶ ಸೋರಿಕೆಯಿಂದಾಗಿ ಭಾರತೀಯರ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆಗಳು ಟೆಲಿಗ್ರಾಂ ಆ್ಯಪ್ನಲ್ಲಿ ಎಲ್ಲರಿಗೂ ಲಭ್ಯವಾದಂತಾಗಿದೆ ಎಂದು ಕೇರಳ ವೆಬ್ಸೈಟ್ ವರದಿ ಮಾಡಿದೆ. 2021ರಲ್ಲಿ ಕೋವಿನ್ ಆ್ಯಪ್ ಹ್ಯಾಕ್ ಆಗಿದೆ. 15 ಕೋಟಿ ಜನರ ಡೇಟಾ ಬೇಸ್ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ , ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿ ರಾಜೇಶ್ ಭೂಷಣ್ , ಅವರ ಪತ್ನಿ ಶಾಸಕಿ ರೀತೂ ಖಂಡೂರಿ, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ಖ್ಯಾತನಾಮ ಪತ್ರಕರ್ತರು ಸೇರಿದಂತೆ ಹಲವರ ಮಾಹಿತಿ ಸೋರಿಕೆಯಾಗಿರುವುದಕ್ಕೆ ಸಂಬಂಧಿಸಿದ ಸ್ಕ್ರೀನ್ಶಾಟ್ಗಳು ವೈರಲ್ ಆಗಿವೆ.
ಈ ವರದಿ ಬಹಿರಂಗವಾಗುತ್ತಿದ್ದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಮೋದಿ ಸರ್ಕಾರ ಬಲಿಷ್ಠ ದತ್ತಾಂಶ ಭದ್ರತೆಯನ್ನು ಅನುಸರಿಸುವುದಾಗಿ ಹೇಳುತ್ತದೆ. ಇದೊಂದು ತೀವ್ರ ಕಳವಳದಾಯಕವಾದ ಹಾಗೂ ಒಪ್ಪತಕ್ಕ ಬೆಳವಣಿಗೆಯಲ್ಲ ಎಂದು ವಿಪಕ್ಷಗಳು ಆರೋಪಿಸಿವೆ.
ಈ ನಡುವೆ, ಕೋವಿನ್ ಪೋರ್ಟಲ್ ಯಾವುದೇ ವ್ಯಕ್ತಿಯ ಜನ್ಮದಿನಾಂಕ, ವಿಳಾಸ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನೂ ಪಡೆದುಕೊಂಡಿಲ್ಲ. ಆದಾಗ್ಯೂ ಈ ವಿವರವನ್ನು ಪರಿಶೀಲಿಸಲಾಗುತ್ತಿದೆ. ಯಾರಾದರೂ ಅನಧಿಕೃತವಾಗಿ ಕೋವಿನ್ ಆ್ಯಪ್ ಸಂಪರ್ಕ ಗಳಿಸಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ. ಕೋವಿನ್ ಹ್ಯಾಕ್ ಆಗಿದೆ ಎಂಬುದನ್ನು ತಳ್ಳಿ ಹಾಕಿವೆ.