ಮಂಗಳೂರು: ಇತ್ತೀಚೆಗಷ್ಟೇ ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಘಟನೆಗೆ ಬಲಿಯಾದ ವಿದ್ಯಾರ್ಥಿಯೊಬ್ಬರು ತಮ್ಮ ಮೇಲೆ ಉಳ್ಳಾಲ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಯೊಬ್ಬರು ದೂರು ನೀಡಿರುವುದನ್ನು ಕಮಿಷನರ್ ಕುಲದೀಪ್ ಕುಮಾರ್ ಆರ್ ಜೈನ್ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ‘ನಾವು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)ಗೆ ಕೇಳಿದ್ದೇನೆ. ಪೊಲೀಸ್ ಠಾಣೆ ಸಿಬ್ಬಂದಿ ತಪ್ಪಿತಸ್ಥರೆಂದು ಕಂಡುಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಸ್ಥಳೀಯರು ತನ್ನ ಮೇಲೆ ಹಲ್ಲೆ ನಡೆಸಿದ ನಂತರ ಸಬ್ ಇನ್ಸ್‌ಪೆಕ್ಟರ್ ತನ್ನನ್ನು ಠಾಣೆಗೆ ಕರೆಸಿ ಖಾಲಿ ಕಾಗದದ ಮೇಲೆ ಸಹಿ ಪಡೆದಿದ್ದಾರೆ. ಈ ಕೃತ್ಯವನ್ನು ಪ್ರಶ್ನಿಸಿದಾಗ ಅಧಿಕಾರಿ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ತನ್ನ ದೂರಿನಲ್ಲಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ನಗರದ ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಜೂನ್ 1 ರಂದು ಸಂಜೆ ತಮ್ಮ ಕಾಲೇಜು ಸ್ನೇಹಿತರಾದ ಮೂವರು ಹುಡುಗರೊಂದಿಗೆ ಸೋಮೇಶ್ವರ ಬೀಚ್‌ಗೆ ಹೋಗಿದ್ದರು. ಬೇರೆ ಸಮುದಾಯದ ವಿದ್ಯಾರ್ಥಿಗಳು ಯುವತಿಯರ ಜೊತೆ ಇರುವುದನ್ನು ಕಂಡ ಸ್ಥಳೀಯ ಕೆಲ ಯುವಕರು ಆಕ್ಷೇಪಿಸಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದರು.
ಇದನ್ನೂ ಓದಿ : ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಸೋಮೇಶ್ವರ ಬೀಚ್‌ನಲ್ಲಿ 6 ವಿದ್ಯಾರ್ಥಿಗಳ ಮೇಲೆ ಹಲ್ಲೆ
ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ : ಜಿ ಪರಮೇಶ್ವರ್ : ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಅದಕ್ಕೆ ಸಮರ್ಥ ಅಧಿಕಾರಿಯನ್ನು ನೇಮಕ ಮಾಡುತ್ತೇವೆ. ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯಲು ಅವಕಾಶವೇ ಕೊಡಬಾರದು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಸಮೂಹದ ಡ್ರಗ್ಸ್ ಮಾಫಿಯಾಗೆ ಬಲಿಯಾಗಿದೆ. ಡ್ರಗ್ಸ್ ದಂಧೆ ತಡೆಯೋಕೆ ಆಗದ ರೀತಿಯಲ್ಲಿ ಬೆಳೆಯುತ್ತಿದೆ. ಆಗಸ್ಟ್ 15ರ ಒಳಗೆ ಕರಾವಳಿಯನ್ನು ಡ್ರಗ್ಸ್ ಮುಕ್ತ ಮಾಡಬೇಕು, ಎಲ್ಲೂ ಮಾದಕ ದ್ರವ್ಯ ಸಿಗದಂತೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಕೇವಲ ಕರಾವಳಿ ಅಷ್ಟೇ ಅಲ್ಲದೇ ಕೋಮು ವೈಷಮ್ಯ ಇರುವ ಕಡೆ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಅದರ ರೂಪುರೇಷೆಯನ್ನು ಕಮಿಷನರ್ ತಯಾರಿಸುತ್ತಾರೆ. ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಯ ಮುಖ್ಯ ಉದ್ದೇಶ ನೈತಿಕ ಪೊಲೀಸ್‌ಗಿರಿ ಹತ್ತಿಕ್ಕುವುದು. ಮೊದಲಿಗೆ ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುತ್ತೇವೆ. ಇಲ್ಲಿ ಯಶಸ್ವಿಯಾದರೆ ಬಳಿಕ ರಾಜ್ಯಾದ್ಯಂತ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.