ಬೆಂಗಳೂರು: ಒಡಿಶಾದ ಬಾಲಸೋರ್ನಲ್ಲಿ ಸಂಭವಿಸಿದ ರೈಲು ದುರಂತದ ಹಿನ್ನೆಲೆಯಲ್ಲಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಜಿಸಿದ್ದಾರೆ. ಘಟನೆ ಕುರಿತಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ಕೇಳಿದ ಬಳಿಕ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಬಳಿಕ ತಕ್ಷಣ ಸ್ಥಳಕ್ಕೆ ತೆರಳಿ ಕನ್ನಡಿಗರ ಸುರಕ್ಷತೆ ಬಗ್ಗೆ ಗಮನ ಹರಿಸಲು ಹಾಗೂ ಅಗತ್ಯ ನೆರವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಸಂತೋಷ್ ಲಾಡ್ ಅವರ ಜತೆಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸೇರಿ ಇತರೆ ಅಧಿಕಾರಿಗಳ ತಂಡ ಘಟನಾ ಸ್ಥಳಕ್ಕೆ ಹೊರಟಿದೆ.
ರೈಲಿನಲ್ಲಿದ್ದ ಚಿಕ್ಕಮಗಳೂರು ಮೂಲದ ಪ್ರಕಾಶ್ ಜೈನ್ ಸಹೋದರ ಮಾಳ ಹರ್ಷವರ್ಧನ್ ಜೈನ್ ಮಾಧ್ಯಮಗಳಿಗೆ ಹಾಗೂ ಸರಕಾರಕ್ಕೆ ಮಾಹಿತಿ ನೀಡಲು ದೂರವಾಣಿಯಲ್ಲಿ ಮಾತನಾಡಿದ್ದಾರೆ. ಮೇ 31 ರಂದು ಶೃಂಗೇರಿ, ಹೊರನಾಡಿನಿಂದ ಜೈನ ಸಮಾಜದ 110 ಮಂದಿ ಶಿಕರ್ಜಿ ಕ್ಷೇತ್ರಕ್ಕೆ ಹೊರಟಿದ್ದರು. ಅಜಿತ್‌ಕುಮಾರ್ ಜೈನ್ ನೇತೃತ್ವದಲ್ಲಿ ಶ್ರಾವಕ ಶ್ರಾವಕಿಯರು ಯಾತ್ರೆಗೆ ತೆರಳಿದ್ದರು. ಬೆಳಗ್ಗೆ 4 ಗಂಟೆಗೆ ಬೆಂಗಳೂರು ತಲುಪಿದರು. ನನ್ನ ಅಣ್ಣ ಮಾಳ ಪ್ರಕಾಶ್ ಜೈನ್, ಅತ್ತಿಗೆ ಲಾವಣ್ಯ 110 ಯಾತ್ರಿಕರೊಂದಿಗೆ ತೆರಳಿದ್ದರು ಎಂದು ಹೇಳಿದರು.
ಇದನ್ನೂ ಓದಿ : ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ