ಬೆಂಗಳೂರಿನಲ್ಲಿವೆ 28 ಡೇಂಜರ್ ಅಂಡರ್​ಪಾಸ್​ಗಳು?!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಕೆಳಸೇತುವೆಯಲ್ಲಿ ನೀರು ನುಗ್ಗಿ ಮಹಿಳೆಯ ಬಲಿ ಪಡೆದುಕೊಂಡಿರುವ ಘಟನೆ ಸಂಚಲನ ಮೂಡಿಸಿದ್ದು, ಇದರ ಬೆನ್ನಲೇ ಇದೇ ಮಾದರಿಯ 28 ಕ್ಕೂ ಅಧಿಕ ಕೆಳಸೇತುವೆಗಳು ವಾಹನ ಸವಾರರಿಗೆ ಕಂಟಕವಾಗಿವೆ ಎಂದು ಬಿಬಿಎಂಪಿ ಅಂದಾಜಿಸಿದೆ.

ಅದರಲ್ಲೂ, ಶಿವಾನಂದ ರೈಲ್ವೆ ಕೆಳಸೇತುವೆ, ಕೆಆರ್ ಸರ್ಕಲ್, ಪ್ಯಾಲೇಸ್ ರೋಡ್ ಗಾಲ್ಫ್ ಕೆಳಸೇತುವೆ, ಮಾಗಡಿ ರೋಡ್‌ನ ಹೌಸಿಂಗ್ ಬೋರ್ಡ್ ಬಳಿಯ ಕೆಳಸೇತುವೆ, ಟೋಲ್ ಗೇಟ್ ಕೆಳಸೇತುವೆ, ನಾಯಂಡಹಳ್ಳಿ ಬಳಿಯ ಕೆಳಸೇತುವೆಗಳು ತುಂಬಾ ಅಪಾಯವಾಗಿವೆ. ಹೀಗೆ, ನಗರದ ಎಲ್ಲೆಡೆ 20 ರಿಂದ 25 ಕೆಳಸೇತುವೆಗಳು ಸಾವಿನ ಸೇತುವೆಗಳಾಗಿವೆ. ವಾಹನ ಸವಾರರು ಇಲ್ಲಿ ಪ್ರಯಾಣಿಸುವಾಗ ತುಸು ಎಚ್ಚರ ವಹಿಸಬೇಕಾಗಿದೆ. ಮಳೆ ಬಂದ 10 ನಿಮಿಷಕ್ಕೆ ಈ ಕೆಳಸೇತುವೆಗಳು ಕೆರೆಯಂತಾಗುತ್ತಿವೆ. ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ ಕೆಳಸೇತುವೆಗಳನ್ನು ದಾಟಿ ಮನೆಗೆ ಹೋಗುವಾಗ ಎಚ್ಚರ ವಹಿಸಿ ಎಂದು ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಡೇಂಜರ್ ಅಂಡರ್​ಪಾಸ್​​ಗಳು ಯಾವವು :2023-24ನೇ ಸಾಲಿನಲ್ಲಿ ಬಿಬಿಎಂಪಿ ಮಂಡನೆ ಮಾಡಿರುವ ಬಜೆಟ್​​ನಲ್ಲಿ ಉಲ್ಲೇಖಿಸಿರುವ ಪ್ರಕಾರ ನಗರದಾದ್ಯಂತ 42 ಫ್ಲೈಓವರ್​ಗಳು, 28 ಅಂಡರ್​ಪಾಸ್​​ಗಳು ಇವೆ. ಅಂಡರ್​ಪಾಸ್​​ಗಳ ವಿವರ ಇಲ್ಲಿದೆ.

ಗುಟ್ಟಹಳ್ಳಿ – ಕಾವೇರಿ ಜಂಕ್ಷನ್ ಅಂಡರ್​​ಪಾಸ್ (2013)

ಸಿವಿ ರಾಮನ್ ರಸ್ತೆ – ಸಿಎನ್‌ಆರ್ ರಾವ್ ಅಂಡರ್ ಪಾಸ್ (2014)

ಹೊಸಕೆರೆಹಳ್ಳಿ – ಮುತ್ತುರಾಜ್ ಜಂಕ್ಷನ್ ಅಂಡರ್ ಪಾಸ್ (2019)

ಬನ್ನೇರುಘಟ್ಟ ರಸ್ತೆ – ಡೈರಿ ಸರ್ಕಲ್ ಅಂಡರ್ ಪಾಸ್ (2004)

ರಾಜಾಜಿನಗರ – ಡಾ. ರಾಜ್‌ಕುಮಾರ್ ರಸ್ತೆ ಕೆಳಸೇತುವೆ (2017)

ಜೆಪಿ ನಗರ – ಜಿಆರ್ ವಿಶ್ವನಾಥ್ ಅಂಡರ್ ಪಾಸ್ (2011)
ಹಳೆಯ ವಿಮಾನ ನಿಲ್ದಾಣ ರಸ್ತೆ – ಎಚ್​ಎಎಲ್ (2023)

ಹೆಣ್ಣೂರು – ಹೆಣ್ಣೂರು ಅಂಡರ್ ಪಾಸ್

ಹೊರಮಾವು – ಹೊರಮಾವು ಅಂಡರ್ ಪಾಸ್

ಬನ್ನೇರುಘಟ್ಟ ರಸ್ತೆ – ಜಯದೇವ ಆಸ್ಪತ್ರೆ ಕೆಳಸೇತುವೆ (2006)

ಉತ್ತರಹಳ್ಳಿ – ಕಡೇರನಹಳ್ಳಿ ಅಂಡರ್ ಪಾಸ್ (2012)

ಕಾಡುಬೀಸನಹಳ್ಳಿ – ಕಾಡುಬೀಸನಹಳ್ಳಿ ಅಂಡರ್ ಪಾಸ್ (2012)

ಬಸವೇಶ್ವರನಗರ – ಕೆಎಚ್​ಬಿ ಜಂಕ್ಷನ್ ಅಂಡರ್‌ಪಾಸ್ (2017)

ಕೆಆರ್ ಸರ್ಕಲ್ – ಕೆಆರ್ ಸರ್ಕಲ್ ಅಂಡರ್ ಪಾಸ್ (2009)
ಕುಂದಲಹಳ್ಳಿ – ಕುಂದಲಹಳ್ಳಿ ಅಂಡರ್ ಪಾಸ್ (2022)

ಹೊರ ವರ್ತುಲ ರಸ್ತೆ – ಕುವೆಂಪು ವೃತ್ತದ ಕೆಳಸೇತುವೆ

ಲಗ್ಗೆರೆ – ಲಗ್ಗೆರೆ ಅಂಡರ್ ಪಾಸ್ (2020)

ಮಡಿವಾಳ – ಮಡಿವಾಳ ಅಂಡರ್ ಪಾಸ್ (2010)

ವಿಜಯನಗರ – ಮಾಗಡಿ ರಸ್ತೆ ಟೋಲ್‌ಗೇಟ್ ಅಂಡರ್‌ಪಾಸ್ (2009)

ಅರಮನೆ ರಸ್ತೆ – ಮಹಾರಾಣಿ ಕಾಲೇಜು ಕೆಳಸೇತುವೆ (2009)

ಮಲ್ಲೇಶ್ವರಂ – ಮಲ್ಲೇಶ್ವರಂ ಅಂಡರ್ ಪಾಸ್ (2008)

ಬಳ್ಳಾರಿ ರಸ್ತೆ – ಮೇಖ್ರಿ ವೃತ್ತ (2001)

ನಾಗರಭಾವಿ – ನಾಗರಭಾವಿ ಅಂಡರ್ ಪಾಸ್ (2009)

ನಾಯಂಡಹಳ್ಳಿ – ನಾಯಂಡಹಳ್ಳಿ ಅಂಡರ್ ಪಾಸ್ (2010)

ರಾಜಾಜಿನಗರ – ರಾಜಾಜಿನಗರ ಪ್ರವೇಶ ಅಂಡರ್‌ಪಾಸ್ (2004)

ರಾಜಾಜಿನಗರ – ಸ್ಟಾರ್ ಸರ್ಕಲ್ ಅಂಡರ್ ಪಾಸ್ (2004)

ರಾಮಮೂರ್ತಿ ನಗರ – ರಾಮಮೂರ್ತಿ ನಗರ ಕೆಳಸೇತುವೆ

ವಸಂತ ನಗರ – ಸ್ಯಾಂಕಿ ರಸ್ತೆ ಅಂಡರ್‌ಪಾಸ್ (2008)

ಬಸವನಗುಡಿ – ಟ್ಯಾಗೋರ್ ಸರ್ಕಲ್ ಅಂಡರ್ ಪಾಸ್ (2012)

ಪ್ರತಿ ವರ್ಷದ ಮಳೆಗಾಲದಲ್ಲೂ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ವಾಹನ ಸವಾರರು ಅನಾಹುತಕ್ಕೀಡಾದ ಘಟನೆಗಳು ನಡೆಯುತ್ತಿವೆ. ಈ ನಡುವೆ ಮಳೆಗಾಲದಲ್ಲಿ ನೀರು ನಿಲ್ಲುವ ಪ್ರಮುಖ 20 ರಿಂದ 25 ಅಂಡರ್ ಪಾಸ್‌ಗಳನ್ನು ಬಿಬಿಎಂಪಿ ಗುರುತಿಸಿದ್ದು, ನಿನ್ನೆ ಅಂಡರ್ ಪಾಸ್ ನಲ್ಲಿ ದುರಂತ ಸಂಭವಿಸಿರುವ ಹಿನ್ನಲೆ ಇಂಥ ಘಟನೆ ಮರುಕಳಿಸದಂತೆ ನಗರಾಡಳಿತ ಅಂಡರ್ ಪಾಸ್ ಡ್ರೈನೇಜ್ ವ್ಯವಸ್ಥೆಗೆ ಒತ್ತು ಕೊಡಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಹಲವೆಡೆ ಹೂಳು, ಕಸ ಕಡ್ಡಿಗಳನ್ನು ವಿಲೇವಾರಿ ಮಾಡಲಾಗಿದೆ. ಮಹಾಲಕ್ಷ್ಮಿ ಲೇಔಟ್, ಕೆ.ಆರ್, ಸರ್ಕಲ್, ವಿದ್ಯಾರಣ್ಯಪುರ ಸೇರಿದಂತೆ ಹಲವೆಡೆ ನಿರಂತರ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಧಾರಾಕಾರ ಮಳೆ ಹಿನ್ನೆಲೆ ನೀರು ಸುಗಮವಾಗಿ ಹೋಗದ ನಗರ ವ್ಯಾಪ್ತಿಯ ಎಲ್ಲ ಮಾದರಿಯ ಕೆಳ ಸೇತುವೆಗಳನ್ನು ಬಂದ್ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಕೆಆರ್ ಸರ್ಕಲ್‌ನ ಕೆಳ ಸೇತುವೆಯಲ್ಲಿ ಯುವತಿ ಸಾವಿನ ಪ್ರಕರಣ ಸಂಬಂಧ ಈಗಾಗಲೇ ನಗರದಲ್ಲಿರುವ ಎಲ್ಲ ಮಾದರಿಯ ಕೆಳಸೇತುವೆಗಳ ಮಾಹಿತಿ ಸಂಗ್ರಹಿಸಲಾಗಿದ್ದು, ಯಾವ ಕೆಳಸೇತುವೆಯಲ್ಲಿ ನೀರು ಸುಗಮವಾಗಿ ಹೋಗುವುದಿಲ್ಲವೂ, ಆ ಕೆಳಸೇತುವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು ಎಂದಿದ್ದಾರೆ.

ಬೆಂಗಳೂರು ನಗರ ಸಂಚಾರ ಪೊಲೀಸರು ಸಹ ಸಾರ್ವಜನಿಕರಿಗೆ ಮಳೆ ಸಮಯದಲ್ಲಿ ಫ್ಲೈ ಓವರ್ ಮತ್ತು ಅಂಡರ್‌ಪಾಸ್‌ಗಳ ಕೆಳಗೆ ನಿಲ್ಲದಂತೆ ಸೂಚಿಸಿದ್ದಾರೆ. ಭಾರೀ ಮಳೆಯ ಕಾರಣ ಸಾರ್ವಜನಿಕರು ವಿಧಾನಸೌಧದ ಸುತ್ತಲಿನ 6 ಕಿಮೀ ವ್ಯಾಪ್ತಿಯಲ್ಲಿರುವ ಅಂಡರ್​ಪಾಸ್​​ಗಳಲ್ಲಿ ಸಂಚರಿಸಬಾರದು ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆ ಕೂಡ ನಗರದಲ್ಲಿ ಮಳೆಯಾಗಿದೆ. ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಕಾರ್ಪೊರೇಷನ್, ಗಿರಿನಗರ, ಶಾಂತಿನಗರ, ಕೋರಮಂಗಲ, ಜಯನಗರ, ಕತ್ರಿಗುಪ್ಪೆ, ಜೆಪಿ ನಗರ, ರಿಚ್​ಮಂಡ್ ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಜಾಲಹಳ್ಳಿ ಕ್ರಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಗಾಳಿ ಸಹಿತ ಧಾರಕಾರ ಮಳೆ ಸುರಿಯುತ್ತಿದೆ.

 

 

 

Donate Janashakthi Media

Leave a Reply

Your email address will not be published. Required fields are marked *