ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ.ಭುಜಂಗಶೆಟ್ಟಿ ನಿಧನ : ಸಾವಿನಲ್ಲೂ ಸಾರ್ಥಕತೆ ಮೆರೆದ ವೈದ್ಯ

ಬೆಂಗಳೂರು: ನಾರಾಯಣ ನೇತ್ರಾಲಯ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ. ಕೆ.ಭುಜಂಗ ಶೆಟ್ಟಿ (69) ಹೃದಯಾಘಾತದಿಂದ  ನಿಧನರಾಗಿದ್ದಾರೆ. ನಿನ್ನೆ (ಮೇ 19) ಸಂಜೆ 6:30 ರ ವೇಳೆಗೆ ಮನೆಯಲ್ಲಿದ್ದಾಗ ಹೃದಯಘಾತವಾಗಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ನಾರಾಯಣ ನೇತ್ರಾಲಯದ ಮುಖ್ಯಸ್ಥರಾಗಿ ಭುಜಂಗ ಶೆಟ್ಟಿ ಅವರು ಈ ಸಂಸ್ಥೆಯನ್ನು ಅತ್ಯುನ್ನತ ಮಟ್ಟಕ್ಕೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಸಾರ್ವಜನಿಕರಿಗೆ ಸೇವೆ ಒದಗಿಸಿಕೊಂಡು ಬಂದಿದ್ದವರು. ಆ ಮೂಲಕ ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು.

ಡಾ. ರಾಜಕುಮಾರ್ ಐ ಬ್ಯಾಂಕ್ ತೆರೆದು ನೇತ್ರದಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದರು. ಆರೋಗ್ಯ ಕ್ಷೇತ್ರದಲ್ಲಿ ಅಪಾರ ಸೇವೆಗೆ 2010 ರಲ್ಲಿ ರಾಜ್ಯೋತ್ಸವ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಇವರು ಭಾಜನರಾಗಿದ್ದಾರೆ. ಡಾ. ಕೆ. ಭುಜಂಗ ಶೆಟ್ಟಿ ಅವರ ನಿಧನಕ್ಕೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.

ಇಬ್ಬರ ಬಾಳಿಗೆ ಬೆಳಕು :  ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿಯವರ ಕಣ್ಣುಗಳು ಇಬ್ಬರ ಬಾಳಿಗೆ ಬೆಳಕಾಗಿದೆ. ಲಕ್ಷಾಂತರ ಕಣ್ಣುಗಳನ್ನ ದಾನ ಮಾಡುವ ಮೂಲಕ ನೇತ್ರದಾನ  ದ ಕ್ರಾಂತಿ ಮಾಡಿದ್ದ ನೇತ್ರ ತಜ್ಞರಿಂದಲೇ ಇದೀಗ ನೇತ್ರದಾನವಾಗಿದೆ. ಬದುಕಿದ್ದಾಗ ಲಕ್ಷಾಂತರ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಅಂಧಕಾರವನ್ನ ನೀಗಿಸಿದ್ದರು. ಶುಕ್ರವಾರ ತಡರಾತ್ರಿ ಡಾ. ರಾಜ್ ಕುಮಾರ್ ಕಣ್ಣಿನ ಬ್ಯಾಂಕ್ ಗೆ ನೇತ್ರದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ಭುಜಂಗ ಶೆಟ್ಟಿಯವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ

Donate Janashakthi Media

Leave a Reply

Your email address will not be published. Required fields are marked *