ಸರಕಾರಕ್ಕೆ ಜನವಿಜ್ಞಾನ ಸಂಘಟನೆ ಎಐಪಿಎಸ್‍ಎನ್ ಮನವಿ
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(DST- ಡಿಎಸ್ಟಿ)ಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಳೆದ 32 ವರ್ಷಗಳಿಂದ ಕೆಲಸ ಮಾಡುತ್ತಿರುವ ‘ವಿಜ್ಞಾನ ಪ್ರಸಾರ‘ ವನ್ನು ಮುಚ್ಚಲಾಗುವುದು ಎಂಬ ಸುದ್ದಿಯ ಬಗ್ಗೆ ‘ಅಖಿಲ ಭಾರತ ಜನವಿಜ್ಞಾನ ಜಾಲ‘ (ಎಐಪಿಎಸ್ಎನ್- AIPSN) ಆಘಾತವನ್ನು ವ್ಯಕ್ತಪಡಿಸುತ್ತ, ಅದನ್ನು ಸಾರ್ವಜನಿಕ ಸಂಪರ್ಕ ಕೋಶದ, ಹೊರಗುತ್ತಿಗೆ ಚಟುವಟಿಕೆಯ ಮಟ್ಟಕ್ಕೆ ಇಳಿಸಬಾರದು” ಎಂದು ಸರಕಾರವನ್ನು ಆಗ್ರಹಿಸಿದೆ. ಬದಲಾಗಿ, ಅದನ್ನು ಅದನ್ನು ಇನ್ನಷ್ಟು ಬಲಪಡಿಸಬೇಕು ಎಂದು ಅದು ಮನವಿ ಮಾಡಿದೆ.
ವಿಜ್ಞಾನವನ್ನು ಜನಪ್ರಿಯಗೊಳಿಸಲು, ಅದರ ಸಂವಹನವನ್ನು ಮತ್ತು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ರೂಪಿಸುವ ಉದ್ದೇಶದೊಂದಿಗೆ 1989 ರಲ್ಲಿ ‘ವಿಜ್ಞಾನ ಪ್ರಸಾರ‘ (ಸಂಕ್ಷಿಪ್ತವಾಗಿ ‘ವಿಪಿ’) ಸಂಸ್ಥೆಯನ್ನು ಸ್ಥಾಪಿಸಲಾಯಿತು. ಅದನ್ನು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಮಾಡಲಾಯಿತು. ಅದು ಈಗ ಈ ಇಲಾಖೆಯ ಸುಪರಿಚಿತ ಮತ್ತು ಎದ್ದು ಕಾಣುವ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಗಮನಾರ್ಹ ಕ್ರಮಗಳನ್ನು ಕೈಗೊಂಡಿರುವ ಈ ಯಶಸ್ವಿ ಸಂಸ್ಥೆಯನ್ನು ಈ ಆಗಸ್ಟ್ ಹೊತ್ತಿಗೆ ಮುಚ್ಚಿ, ಅದನ್ನು ಡಿಎಸ್‌ಟಿಯಲ್ಲಿ ಒಂದು ಕೋಶದ ಮಟ್ಟಕ್ಕೆ ಇಳಿಸಲು ‘ನೀತಿ’ ಆಯೋಗ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ. ಈ ಮೂಲಕ ಇದಕ್ಕೆ ಒದಗಿಸಬೇಕಾದ ಮಾನವ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಕಡಿತ ಮಾಡಿಯೂ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಈಡೇರಿಸಬಹುದು ಎಂಬ ಕಲ್ಪನೆ ಇದರ ಹಿಂದಿರುವಂತೆ ಕಾಣುತ್ತದೆ, ಮೇಲಾಗಿ, ಪುನರಾವರ್ತಿತ ವೆಚ್ಚವನ್ನು ಕಡಿಮೆ ಮಾಡುವ ಮಾರ್ಗವಾಗಿ ಹೊರಗುತ್ತಿಗೆ ಕೊಡಲು ಇಂತಹ ವ್ಯವಸ್ಥೆಯು ಅನುಕೂಲಕರವಾಗಿರುತ್ತದೆ ಎಂಬ ವಿಚಾರವೂ ಇರುವಂತೆ ಕಾಣಿಸುತ್ತಿದೆ. ಆದರೆ ಇದು ಗುತ್ತಿಗೆಕರಣ ಮತ್ತು ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ. ಇವೆರಡೂ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವ ಹಾಗೂ ಮತ್ತು ವೈಚಾರಿಕ ಚೇತನವನ್ನು ಬೆಳೆಸುವ ಕೆಲಸದಲ್ಲಿ ಮುಂದೆಯೂ ತೊಡಗುವಲ್ಲಿ ತೊಡಕುಂಟು ಮಾಡುವ ಸಂಗತಿಗಳು ಎಂದು ಎಐಪಿಎಸ್‍ಎನ್ ಎಚ್ಚರಿಸಿದೆ.
ಸಂವಿಧಾನದ ಕಲಮು 51ಎ(ಹೆಚ್) ವಿಧಿಸಿರುವ ಆದೇಶವನ್ನು ‘ವಿಜ್ಞಾನ ಪ್ರಸಾರ’ ಇದುವರೆಗೆ ಈಡೇರಿಸಿಕೊಂಡು ಬಂದಿರುವಾಗ ‘ನೀತಿ’ ಆಯೋಗದ ಈ ಶಿಫಾರಸು ‘ಸಂಕುಚಿತ’ ದೃಷ್ಟಿಯದ್ದು, ಆಘಾತಕಾರಿ ಮತ್ತು ಗೊಂದಲಮಯವಾದದ್ದು ಎಂದು ಎಐಪಿಎಸ್‍ಎನ್ ಖೇದ ವ್ಯಕ್ತಪಡಿಸಿದೆ. ನಾಗರಿಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಸೂಚಿಸಿರುವ ಎಐಪಿಎಸ್‍ಎನ್, “ವಿಜ್ಞಾನ ಸಂವಹನವನ್ನು ಡಿಎಸ್‍ಟಿಗೆ ಸಂವಿಧಾನ ವಿಧಿಸಿರುವ ಮೂಲ ಆದೇಶವೆಂಬುದನ್ನು ಒಪ್ಪಿಕೊಳ್ಳಬೇಕು, ಅದನ್ನು ಸಾರ್ವಜನಿಕ ಸಂಪರ್ಕದ ಕೋಶದ, ಹೊರಗುತ್ತಿಗೆ ಚಟುವಟಿಕೆಯ ಮಟ್ಟಕ್ಕೆ ಇಳಿಸಬಾರದು” ಎಂದು ಸರಕಾರವನ್ನು ಆಗ್ರಹಿಸಿದೆ.
‘ವಿಪಿ’ ಮಾಡಿರುವ ಅಗಾಧ ಕೆಲಸ–ಕಾರ್ಯಗಳು
‘ವಿಜ್ಞಾನ ಪ್ರಸಾರ’ ಸಮಾಜದ ಪ್ರತಿಯೊಂದು ಸ್ತರವನ್ನು ತಲುಪುವ , ಎಲ್ಲರನ್ನೂ ಒಳಗೊಳ್ಳುವ ಪಾತ್ರವನ್ನು ವಹಿಸಿದೆ. ಅದು ಮಹಿಳೆಯರಿರಬಹುದು, ವಿಕಲಚೇತನರು, ಬುಡಕಟ್ಟು ಜನಗಳು, ಬಹುದೂರದ, ಭೌಗೋಳಿಕವಾಗಿ ದುರ್ಗಮವಾದ ಪ್ರದೇಶಗಳ ಜನರಿರಬಹುದು, ಎಲ್ಲರನ್ನೂ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನದ, ಅವನ್ನು ಜನಪ್ರಿಯಗೊಳಿಸುವ ಮತ್ತು ವಿಸ್ತರಿಸುವ ಕೆಲಸದಲ್ಲಿ ಅಗತ್ಯ ಸಾಮಗ್ರಿಗಳೊಂದಿಗೆ ತಲುಪಿದೆ, 32 ವರ್ಷಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ 700ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಲವಾರು ಶಾಲಾಮಕ್ಕಳನ್ನು ಮತ್ತು ಯುವಜನರ ಬದುಕುಗಳನ್ನು ತಲುಪುವ ಅಗಾಧ ಕೆಲಸವನ್ನು ಅದು ಮಾಡಿದೆ ಎಂದಿರುವ ಎಐಪಿಎಸ್‍ಎನ್ ಹೇಳಿಕೆ ಇವನ್ನು ಕೇವಲ ಸರಕಾರದ ಹಣ ಉಳಿತಾಯದ ದೃಷ್ಟಿಯಿಂದ ನೋಡಬಾರದು ಎಂದಿದೆ.
ಆಧುನಿಕ ಸಮಾಜವನ್ನು ನಿರ್ಮಿಸುವಲ್ಲಿ ವೈಜ್ಞಾನಿಕ ಸಾಕ್ಷರತೆಯ ಪಾತ್ರವನ್ನು ನಗಣ್ಯಮಾಡಲು ಸಾಧ್ಯವಿಲ್ಲ. ಈ ಕೆಲಸವನ್ನು ನಮ್ಮ ನೆರೆಯ ಚೀನಾ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. 2002 ರಲ್ಲಿ, ಅದು ವಿಜ್ಞಾನವನ್ನು ಜನಪ್ರಿಯಗೊಳಿಸಲು ಕಾನೂನನ್ನು ಜಾರಿಗೊಳಿಸಿತು. 2006 ರಲ್ಲಿ “ರಾಷ್ಟ್ರೀಯ ವೈಜ್ಞಾನಿಕ ಸಾಕ್ಷರತಾ ಯೋಜನೆಯ ರೂಪುರೇಷೆ (2006-2010-2020)’ ಎಂಬ ದಸ್ತಾವೇಜನ್ನು ಪ್ರಕಟಿಸಲಾಯಿತು. ‘ಚೀನಾ ವಿಜ್ಞಾನ ಜನಪ್ರಿಯಕರಣ ಸಂಶೋಧನಾ ಸಂಸ್ಥೆ’ ನಡೆಸಿದ ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ ಚೀನಾದ ನಾಗರಿಕರಲ್ಲಿ ವೈಜ್ಞಾನಿಕ ಸಾಕ್ಷರತೆಯು 2005 ರಲ್ಲಿ 1.6% ರಿಂದ 2010 ರಲ್ಲಿ 3.7% ಗೆ 2018 ರಲ್ಲಿ 8.47% ಗೆ ಬೆಳೆದಿದೆ. 2020ರ ಮಾರ್ಗಸೂಚಿ ಅದನ್ನು 2025 ಕ್ಕೆ 15% ಮತ್ತು 2035 ಕ್ಕೆ 25% ಕ್ಕೆ ಏರಿಸುವ ಗುರಿಯನ್ನು ಹಾಕಿಕೊಟ್ಟಿದೆ. ಈ ಮಾರ್ಗಸೂಚಿಯ ಪ್ರಕಾರ “ವಿಜ್ಞಾನದ ಜನಪ್ರಿಯತೆಯು ವೈಜ್ಞಾನಿಕ ಮತ್ತು ತಾಂತ್ರಿಕ ನಾವೀನ್ಯತೆಯಷ್ಟೇ ಮಹತ್ವದ್ದಾಗಿದೆ” ಮತ್ತು ಅದು ದೇಶದ ತಂತ್ರಜ್ಞಾನದ ಮತ್ತು ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚೀನಾವು ವಿಜ್ಞಾನವನ್ನು ಜನಪ್ರಿಯಗೊಳಿಸಲು 20,000 ಕೋಟಿ ರೂಪಾಯಿಗಳ ಬಜೆಟ್ ಅನ್ನು ಹೊಂದಿದೆ, ಅದರಲ್ಲಿ 16,000 ಕೋಟಿ ರೂಪಾಯಿಗಳು ಸರ್ಕಾರದ ಧನಸಹಾಯವಾಗಿದೆ.
ನಮ್ಮ ‘ವಿಜ್ಞಾನ ಪ್ರಸಾರ’ ಸಂಸ್ಥೆಯನ್ನು ಮುಚ್ಚುವುದರಿಂದ ಸುಮಾರು 20 ಕೋಟಿ ರೂಪಾಯಿಗಳ ಉಳಿತಾಯವಾಗಬಹುದು, ಆದರೆ ಇದರಿಂದ ನಮ್ಮ ಅರ್ಥವ್ಯವಸ್ಥೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಆಗುವ ದೀರ್ಘಾವಧಿಯ ಹಾನಿಯು ಅಂದಾಜು ಮಾಡಲು ಸಾಧ್ಯವಿಲ್ಲದಷ್ಟಾಗಿರುತ್ತದೆ. ಅಲ್ಲದೆ ಬೇರೆ ಯಾವ ಸಂಸ್ಥೆಯೂ ಮಾಡದ ಕೆಲಸವನ್ನು ಇದು ಮಾಡುತ್ತಿದೆ. ಆದ್ದರಿಂದ ಇದನ್ನು ಮುಚ್ಚುವುದು ದೂರದೃಷ್ಟಿಯಿಲ್ಲದ, ಸರಿಯಾಗಿ ಪರಿಶೀಲಿಸದ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದಿರುವ ಎಐಪಿಎಸ್‍ಎನ್ ಮನವಿ “ವಿಜ್ಞಾನದ ಜನಪ್ರಿಯತೆ ಮತ್ತು ವೈಜ್ಞಾನಿಕ ಸಾಕ್ಷರತೆಯು ರಾಷ್ಟ್ರಕ್ಕೆ ಅನಿವಾರ್ಯವಾಗಿದೆ, ಏಕೆಂದರೆ ನಾವು ಆಧುನಿಕ, ತಾಂತ್ರಿಕವಾಗಿ ಮತ್ತು ವೈಜ್ಞಾನಿಕವಾಗಿ ಮುಂದುವರಿದ ಜ್ಞಾನಪೂರ್ಣ ಸಮಾಜವಾಗಲು ಪ್ರಯತ್ನಿಸುತ್ತಿದ್ದೇವೆ. ಈ ರಾಷ್ಟ್ರೀಯ ಸಮಗ್ರ ದೃಷ್ಟಿಕೋನವನ್ನು ಖಾಸಗಿ ವಲಯ ಒದಗಿಸಲಾರದು” ಎಂದು ಅಭಿಪ್ರಾಯ ಪಟ್ಟಿದೆ.
‘ವಿಜ್ಞಾನ ಪ್ರಸಾರ’ ಸಂಸ್ಥೆಯ ಪ್ರಮುಖ ಸಾಧನೆಗಳನ್ನು ಅದು ಹೀಗೆ ಪಟ್ಟಿಮಾಡಿದೆ:
*ವಿಜ್ಞಾನವನ್ನು ಮಾತೃಭಾಷೆಯಲ್ಲಿ ಜನರ ನಡುವೆ ತೆಗೆದುಕೊಂಡು ಹೋಗುವ ಅದರ ‘ವಿಜ್ಞಾನ ಭಾಷಾ’ ಕಾರ್ಯಕ್ರಮ 8ನೇ ಶೆಡ್ಯೂಲ್‌ನಲ್ಲಿರುವ ಭಾಷೆಗಳಿಗೆ ಮಾತ್ರ ಸೀಮಿತವಾಗಿಲ್ಲ, ದೊಡ್ಡ ಸಮಖ್ಯೆಯಲ್ಲಿ ಮಾತನಾಡುವ ಬುಡಕಟ್ಟು ಭಾಷೆಗಳಿಗೂ ಅದನ್ನು ವಿಸ್ತರಿಸಲಾಗಿದೆ.. ಭಾರತೀಯ ಭಾಷೆಗಳಲ್ಲಿ (ಬಾಂಗ್ಲಾ, ತಮಿಳು, ಕನ್ನಡ, ಉರ್ದು, ಗುಜರಾತಿ ಮತ್ತು ಮರಾಠಿ) ವಿಜ್ಞಾನ ಪ್ರಕಟಣೆಗಳನ್ನು ಮಾಡಲಾಗಿದೆ. ಮಾಸಿಕ ಸುದ್ದಿಪತ್ರಗಳು, ತಜಸ್ಸಸ್ (ಉರ್ದು), ಅರಿವಿಯಲ್ ಪಾಲಗೈ (ತಮಿಳು) ಬಿಗ್ಯಾನ್ ಕಥಾ (ಬಾಂಗ್ಲಾ) ಮತ್ತು ಕುತೂಹಲಿ (ಕನ್ನಡ) ವಿಜ್ಞಾನ ಪತ್ರಿಕೆಗಳ ಮೂಲಕ ಸಾರ್ವಜನಿಕರಿಗೆ ಅವರ ಮಾತೃಭಾಷೆಯಲ್ಲಿ ವೈಜ್ಞಾನಿಕ ಮಾಹಿತಿಯನ್ನು ತಲುಪಿಸುವ ಬೃಹತ್ ಪ್ರಯತ್ನ ಹಿಂದೆಂದೂ ನಡೆದಿಲ್ಲ. ಇದಕ್ಕೆ ವಿಜ್ಞಾನ ಮತ್ತು ಸಂವಹನ ಹಿನ್ನೆಲೆಗಳೆರಡನ್ನೂ ಹೊಂದಿರುವ ಮೀಸಲಾದ ತಜ್ಞರ ತಂಡದ ಅಗತ್ಯವಿದೆ.
*‘ಇಂಡಿಯಾ ಸೈನ್ಸ್ ವೈರ್‘ ಭಾರತೀಯ ಪ್ರಯೋಗಾಲಯಗಳ ಸಂಶೋಧನಾ ಪ್ರಕಟಣೆಗಳನ್ನು ‘ಸುದ್ದಿ–ಕಥೆ’ ಗಳಾಗಿ ಪರಿವರ್ತಿಸುತ್ತದೆ ಮತ್ತು ಭಾರತೀಯ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರದರ್ಶಿಸಲು ಸಹಾಯ ಮಾಡುತ್ತದೆ. ಇದೇ ಮೊದಲ ಬಾರಿಗೆ ಮಾಧ್ಯಮಗಳು ನಿಯಮಿತವಾಗಿ ‘ಇಂಡಿಯಾ ಸೈನ್ಸ್ ವೈರ್’ ನಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಸುದ್ದಿ–ಮಾಹಿತಿಗಳಿಗೆ ಸ್ಥಳಾವಕಾಶವನ್ನು ಒದಗಿಸುವಂತಾಗಿದೆ. ‘ಇಂಡಿಯನ್ ಸೈನ್ಸ್ ನ್ಯೂಸ್ ಫೀಚರ್ ಸರ್ವಿಸ್‘ ಒಂದು ಲಕ್ಷಕ್ಕೂ ಹೆಚ್ಚು ಟ್ವೀಟ್ ಇಂಪ್ರೆಶನ್ನೊಂದಿಗೆ 500 ಕ್ಕೂ ಹೆಚ್ಚು ಸುದ್ದಿ–ಮಾಹಿತಿಗಳನ್ನು ಒದಗಿಸಿದೆ.
* ‘ಇಂಡಿಯಾ ಸೈನ್ಸ್‘ ಟಿವಿ ಒಟಿಟಿ ಚಾನೆಲ್ ವಿಜ್ಞಾನ ರಂಗದ ಇತ್ತೀಚಿನ ಸಂಗತಿಗಳನ್ನು ಕುರಿತು ಭಾರತೀಯ ಪ್ರೇಕ್ಷಕರಿಗೆ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ವೀಡಿಯೊಗಳನ್ನು ಒದಗಿಸುತ್ತದೆ. ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 85 ದಶಲಕ್ಷ ರೀಚ್ನೊಂದಿಗೆ 2000 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದೆ. 500 ಹೊಸ ವಿಡಿಯೋ ಕಾರ್ಯಕ್ರಮಗಳನ್ನು ಮಾಡಲಾಗಿದೆ. 600 ಡಿಡಿ ಸೈನ್ಸ್ ಚಾನೆಲ್ ಮತ್ತು ಇಂಡಿಯಾ ಸೈನ್ಸ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಪ್ರಸಾರವಾಗಿದ್ದು. ಯುವಕರನ್ನು ತಲುಪಲು ಸಾಧ್ಯವಾಗಿದೆ.
* 25 ವಿಭಿನ್ನ ಡು–ಇಟ್–ಯುವರ್ಸೆಲ್ಫ್ (ನೀನೆ ಮಾಡಿ ನೋಡು) ಕಿಟ್ಗಳನ್ನು ತಯಾರಿಸಿದ್ದು, ಸ್ವತಃ ಮಾಡಿ ನೋಡುವ ವಿಧಾನದ ಪ್ರಾಮುಖ್ಯತೆಯನ್ನು ಕಲಿಸುವ ಬದಲಾವಣೆಯ ಹರಿಕಾರನಾಗಿದೆ. ಎರಡು ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಉತ್ಸವಗಳು ದೇಶದಲ್ಲಿಯೇ ಮೊದಲ ಬಾರಿಗೆ ಆದ ಸಾಧನೆಗಳು.
* ವಿಶ್ವ ಸಂಸ್ಥೆ ಘೋಷಿಸಿದ ಅಂತರಾಷ್ಟ್ರೀಯ ಬೆಳಕಿನ ವರ್ಷದ ಆಚರಣೆ, ಮತ್ತು ಭಾರತ ಸರ್ಕಾರವು ಘೋಷಿಸಿದ ರಾಷ್ಟ್ರೀಯ ಗಣಿತ ವರ್ಷ, ಜೀವವೈವಿಧ್ಯ– ಇವುಗಳ ರಾಷ್ಟ್ರವ್ಯಾಪಿ ಜಾರಿಯನ್ನು ಈ ಸಂಸ್ಥೆಮಾಡಿದ್ದು, ಈ ಕಾರ್ಯಕ್ರಮಗಳ ವ್ಯಾಪ್ತಿಯು ಗಮನಾರ್ಹವಾಗಿದೆ.
* ವಿವಿಧ ವೈಜ್ಞಾನಿಕ ವಿಷಯಗಳ ಮೇಲೆ ದೇಶದ ಸುಮಾರು 85% ಜನಸಂಖ್ಯೆಯನ್ನು ತಲುಪುವ, ವಿಶೇಷವಾಗಿ ಗ್ರಾಮೀಣ ಜನಸಂಖ್ಯೆಯನ್ನು ಅವರದೇ ಭಾಷೆಯಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ತೊಡಗಿಸಿಕೊಳ್ಳುವ ನಾಟಕಗಳು ಮತ್ತು ಸ್ಥಳೀಯ ಒಳಗೊಳ್ಳುವಿಕೆಯ ಮೂಲಕ ವಿಜ್ಞಾನ ಆಧಾರಿತ ವಿಷಯವನ್ನು ತೆಗೆದುಕೊಳ್ಳಲು ‘ಆಕಾಶವಾಣಿ‘ಯೊಂದಿಗೆ ಮಾಡಿಕೊಂಡ ಒಪ್ಪಂದ 118 ಕೇಂದ್ರಗಳನ್ನು ಒಳಗೊಂಡಿದೆ, 19 ರಾಷ್ಟ್ರೀಯ ಭಾಷೆಗಳು ಮತ್ತು ಉಪಭಾಷೆಗಳಲ್ಲಿ 1040 ರೇಡಿಯೋ ಕಾರ್ಯಕ್ರಮಗಳನ್ನು ಮಾಡಲಾಗಿದೆ.
* ಬುಡಕಟ್ಟು ಮಕ್ಕಳಿಗಾಗಿ ಮೂವತ್ತೈದು ವಿಜ್ಞಾನ ಮೇಳಗಳು, ಪ್ರದರ್ಶನಗಳು ಮತ್ತು ಮೇಳಗಳನ್ನು ನಡೆಸಿದೆ.
* ಗಾಂಧಿ@150 ಯೋಜನೆ –ಡಿಜಿಟಲ್ ಪ್ರದರ್ಶನವನ್ನು 17 ಸ್ಥಳಗಳಲ್ಲಿ ಈ ಸಂಸ್ಥೆ ಆಯೋಜಿಸಿದೆ.
* ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಹೆಮ್ಮೆಯ ವಿಷಯಗಳ ಬಗ್ಗೆ ವಿಶ್ವಾಸಾರ್ಹ ಮತ್ತು ಅಧಿಕೃತ ಮಾಹಿತಿಯನ್ನು ಒದಗಿಸಲು ವ್ಯಾಪಕ ಪ್ರಯತ್ನಗಳನ್ನು ಇದು ನಡೆಸಿದೆ.
* ಪ್ರಸಿದ್ಧ ವಿಜ್ಞಾನ ಲೇಖಕರು ಮತ್ತು ವಿಜ್ಞಾನಿಗಳ ಸುಮಾರು 300 ಪುಸ್ತಕಗಳನ್ನು ತಯಾರಿಸಿದೆ. ಈ ಪುಸ್ತಕಗಳು ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮತ್ತು ದೇಶದ ಹೊರಗೆ ಮೆಚ್ಚುಗೆ ಪಡೆದಿವೆ. ಇದರಲ್ಲಿ ಕೆಲಸ ಮಾಡುತ್ತಿರುವವರು ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ಯುನೆಸ್ಕೋ ಕಳಿಂಗ ಪ್ರಶಸ್ತಿ, ರಾಷ್ಟ್ರೀಯ ವಿಜ್ಞಾನ ಜನಪ್ರಿಯತೆ ಪ್ರಶಸ್ತಿ, ವಿಜ್ಞಾನದ ಜನಪ್ರಿಯತೆಗಾಗಿ ಇಂದಿರಾ ಗಾಂಧಿ ಪ್ರಶಸ್ತಿ, ಜನಪ್ರಿಯ ವಿಜ್ಞಾನ ಪುಸ್ತಕ ಬರವಣಿಗೆಗಾಗಿ ಆತ್ಮರಾಮ್ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ‘ ಡ್ರೀಮ್ 2047’ ಎಂಬ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಸಿಕ ದ್ವಿಭಾಷಾ ನಿಯತಕಾಲಿಕ ಯುವ ಕಾಲೇಜು ವಿದ್ಯಾರ್ಥಿಗಳು ಮತ್ತು ಸಮಾಜದ ಇತರ ವರ್ಗಗಳನ್ನು ತಲುಪುತ್ತಿದೆ.