ಲಿಂಗಾಯತರಿಂದ ದೇಶದ ಪ್ರಜಾಪ್ರಭುತ್ವ ರಕ್ಷಣೆ

 

–  ರಂಜಾನ್ ದರ್ಗಾ

ಕರ್ನಾಟಕದಲ್ಲಿ ಒಂದು ವೇಳೆ ಬಿ.ಜೆ.ಪಿ. ಅಧಿಕಾರಕ್ಕೆ ಬಂದರೆ ಅದು ಕಾಂಗ್ರೆಸ್ಸಿಗಿಂತ ಹೆಚ್ಚಾಗಿ ಲಿಂಗಾಯತರ ಸೋಲಾಗುತ್ತದೆ ಎಂಬ ಸತ್ಯವನ್ನು ಮನಗಾಣಬೇಕಾಗಿದೆ. ಬಿ.ಜೆ.ಪಿ. ಸೋತರೆ ಅದಕ್ಕೆ ಲಿಂಗಾಯತರ ಶಕ್ತಿಯ ಅರಿವಾಗುವುದು. ಮುಂಬರುವ ಲೋಕಸಭಾ ಚುನಾವಣೆಗೆ ಮೊದಲೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದಕ್ಕೆ ತಾನೇ ಮುಂದಾಗುವುದು.

ಎಂಟು ಶತಮಾನಗಳ ನಂತರ ಮೊದಲಬಾರಿಗೆ ಲಿಂಗಾಯತರು ತಮ್ಮತನಕ್ಕಾಗಿ ಬೀದಿಗಿಳಿದಿರುವುದು ಐತಿಹಾಸಿಕವಾಗಿದೆ. ಕೋಮುವಾದಿ ಫ್ಯಾಸಿಸ್ಟರಿಂದಾಗಿ ದೇಶದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾದ ಸಂದರ್ಭದಲ್ಲಿ ’ನಮ್ಮದು ಸ್ವತಂತ್ರ ಧರ್ಮ’ ಎಂಬ ಸತ್ಯದ ಅರಿವು ಲಿಂಗಾಯತರಿಗೆ ಆಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಕಡೆಗಳಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ನಡೆದ ರ‍್ಯಾಲಿಗಳಿಂದಾಗಿ ದೇಶದ ಜನತೆ ಕರ್ನಾಟಕದ ಕಡೆಗೆ ಮುಖಮಾಡುವಂತಾಗಿದೆ.

ಬಸವಣ್ಣನವರು ೭೭೦ ಅಮರಗಣಗಳೊಂದಿಗೆ ಮತ್ತು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರೊಂದಿಗೆ ೧೨ನೆಯ ಶತಮಾನದಲ್ಲಿ ಸ್ಥಾಪಿಸಿದ ಲಿಂಗಾಯತ ಧರ್ಮವು ಕಾಯಕಜೀವಿಗಳ ವಚನ ಚಳವಳಿಯ, ಮಾನವಹಕ್ಕುಗಳ, ಲಿಂಗ, ವರ್ಗ, ವರ್ಣ ಮತ್ತು ಜಾತಿಭೇದಗಳಿಲ್ಲದ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಕೂಡಿದೆ. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆಯನ್ನು ಸಾರುವ ಧರ್ಮವಾಗಿದೆ. ಲಿಂಗಾಯತ ಧರ್ಮವು ವಚನಗಳ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಮತ್ತು ಅನುಭವ ಮಂಟಪದ ಮೂಲಕ ಸಂಸತ್ತಿನ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸಿದೆ.

ಈ ಎಲ್ಲ ಕಾರಣಗಳಿಂದ ಬಸವತತ್ತ್ವದ ಮಹತ್ವವನ್ನು ದೇಶಕ್ಕೆ ಮತ್ತು ಒಟ್ಟಾರೆ ವಿಶ್ವಕ್ಕೆ ಸಹಜವಾಗಿಯೆ ಸಾರುವ ಮಹತ್ಕಾರ್ಯವು ರ‍್ಯಾಲಿಗಳಲ್ಲಿ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯಿಂದ ಸಾಧ್ಯವಾಯಿತು. ಜೈನರು, ಬೌದ್ಧರು, ಮುಸ್ಲಿಮರು, ಸಿಖ್ಖರು, ದಲಿತರು ಮುಂತಾದ ಪ್ರಜ್ಞಾವಂತರು ಈ ರ‍್ಯಾಲಿಗಳಿಗೆ ತನು ಮನ ಧನದಿಂದ ಸ್ಪಂದಿಸಿದ್ದು ಅನುಕರಣೀಯವಾಗಿತ್ತು.

ಲಿಂಗಾಯತರ ಬೇಡಿಕೆ ನ್ಯಾಯಬದ್ಧವಾಗಿದೆ ಎಂಬುದನ್ನು ಕರ್ನಾಟಕ ಸರ್ಕಾರ ಅರಿತುಕೊಂಡು ಕೇಂದ್ರಕ್ಕೆ ಶಿಫರಸು ಮಾಡಿತು. ಆದರೆ ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಪಸ್ವರ ಎತ್ತಿದರು. ಇದರಿಂದ ಹಿಂದೂ ಧರ್ಮ ಒಡೆಯುವುದು ಎಂಬ ಆತಂಕ ವ್ಯಕ್ತಪಡಿಸಿದರು. ಬಿಜೆಪಿ ಪಕ್ಷದದಲ್ಲಿರುವ ಇತರೆ ನಾಯಕರ ನಿಲವು ಕೂಡ ಇದೇ ಆಗಿದೆ. ವೀರಶೈವ ಪ್ರತಿಪಾದಕರಾದ ಪಂಚಾಚಾರ್ಯರು ಕೂಡ ಇದೇ ಅಭಿಪ್ರಾಯದವರಾಗಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ಯೋಚನೆಯೂ ಇದೇ ಆಗಿದೆ.

ಲಿಂಗಾಯತ ಧರ್ಮದ ಪಂಚ ಆಚಾರಗಳಲ್ಲಿನ ಮೊದಲನೆಯ ಆಚಾರವೇ ಇಷ್ಟಲಿಂಗ ನಿಷ್ಠೆಯಿಂದ ಕೂಡಿದ ಲಿಂಗಾಚಾರವಾಗಿದೆ. ಲಿಂಗಾಚಾರವನ್ನು ಪಾಲಿಸುವವರು ಗುಡಿಗುಂಡಾರಗಳಿಗೆ ಹೋಗಿ ಮೂರ್ತಿ ಪೂಜೆ ಮಾಡುವಂತಿಲ್ಲ. ಸ್ಥಾವರಲಿಂಗಕ್ಕೆ ಎರಗುವಂತಿಲ್ಲ. ಪಂಚಾಚಾರ್ಯರು ಮೊದಲನೆಯ ಆಚಾರದಲ್ಲೇ ಸೋಲುತ್ತಾರೆ. ಅವರು ಇಷ್ಟಲಿಂಗ ಪೂಜೆಯ ಜೊತೆ ಸ್ಥಾವರಲಿಂಗವನ್ನೂ ಪೂಜಿಸುತ್ತಾರೆ. ಅಷ್ಟೇ ಅಲ್ಲದೆ ವಿವಿಧ ಮೂರ್ತಿಗಳ ಪೂಜೆಯನ್ನೂ ಮಾಡುತ್ತಾರೆ. ಹೋಮ ಹವನಗಳಲ್ಲಿ ಕೂಡ ಅವರ ನಂಬಿಕೆ ಇದೆ. ತಾವು ಗುರುವರ್ಗದವರಾಗಿರುವುದರಿಂದ ಇತರರಿಗಿಂತ ಮೇಲು ಎಂಬ ಭಾವನೆ ಅವರದಾಗಿದೆ. ’ಎನಗಿಂತ ಕಿರಿಯರಿಲ್ಲ’ ಎಂದು ಬಸವಣ್ಣನವರು ಹೇಳಿದ್ದನ್ನು ಅವರು ನೆನಪಿಸಿಕೊಳ್ಳಲು ಕೂಡ ಹಿಂಜರಿಯುತ್ತಾರೆ. ’ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕೆನ್ನುವವರು ಧರ್ಮ ಒಡೆಯುತ್ತಿದ್ದಾರೆ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಜೈನಧರ್ಮ ಅಲ್ಪಸಂಖ್ಯಾತ ಧರ್ಮವಾಗಿ ಸಂವಿಧಾನದ ಮಾನ್ಯತೆ ಪಡೆಯುವ ಸಂದರ್ಭದಲ್ಲಿ ದೇಶ ಒಡೆಯುತ್ತದೆ ಎಂದು ಅಮಿತ ಶಾ ಅವರು ಹೋರಾಟಕ್ಕೆ ಇಳಿಯದೆ ಅದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಆಗ ಧರ್ಮ ಒಡೆಯಿತೆ? ಈಗ ಅವರೇ ಹಿಂದುತ್ವವಾದಿ ಬಿ.ಜೆ.ಪಿ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಇನ್ನು ಅಖಿಲ ಭಾರತ ವೀರಶೈವ ಮಹಾಸಭಾದವರು ಸ್ವತಂತ್ರ ಧರ್ಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಒತ್ತಾಯಿಸಿದಾಗಲೂ ಪಂಚಾಚಾರ್ಯರು ’ಇದು ಧರ್ಮ ಒಡೆಯುವ ಕೆಲಸ’ ಎಂದು ಏಕೆ ಹೇಳಲಿಲ್ಲ? ೧೨ನೇ ಶತಮಾನದಲ್ಲಿ ಬಸವಾದಿ ಶರಣರಿಂದ ಸ್ಥಾಪಿತವಾದ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಕೇಳುವ ಸಂದರ್ಭದಲ್ಲಿ ಇವರೆಲ್ಲ ’ಧರ್ಮ ಒಡೆಯುವುದು’ ಎಂದು ಅಸಮಾಧಾನ ವ್ಯಕ್ತಪಡಿಸಲು ಇರುವ ಕಾರಣವಾದರೂ ಏನು?

ಉತ್ತರ ಸರಳವಿದೆ. ಲಿಂಗಾಯತವು ಅವೈದಿಕ ಧರ್ಮವಾಗಿದೆ. ಬಸವಣ್ಣನವರು ವೇದಗಳ ಜೊತೆಗೆ ಆಗಮಗಳನ್ನೂ ತಿರಸ್ಕರಿಸಿದ್ದಾರೆ. ’ವೇದಕ್ಕೆ ಒರೆಯ ಕಟ್ಟುವೆ, ಆಗಮದ ಮೂಗ ಕೊಯಿವೆ’ ಎಂದು ವೇದಾಗಮಗಳನ್ನು ತಿರಸ್ಕರಿಸಿದ್ದಾರೆ. ವೈದಿಕ ನೆಲೆಯ ಮೇಲೆ ನಿಂತ ಹಿಂದೂ ಧರ್ಮಕ್ಕೂ ಜನರ ಅನುಭವದ ನೆಲೆಯ ಮೇಲೆ ನಿಂತ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿಲಿಂಗಾಯತರ ವಿರೋಧ ಕಟ್ಟಿಕೊಳ್ಳದೆ ತಂತ್ರ ಹೆಣೆದ ಬಿಜೆಪಿ, ಹಿಂದುತ್ವದ ಅಜೆಂಡ ಸಿಎಂ ಆಯ್ಕೆಗೆ ಮುಖ್ಯವಾಯಿತೆ?!

ಇಷ್ಟಲಿಂಗ ಮಾತ್ರ ಲಿಂಗಾಯತರ ಪೂಜಾ ಸಾಧನವಾಗಿದೆ ಎಂದು ಲಿಂಗಾಚಾರ ಸಾರುತ್ತದೆ. ಸ್ವಾವಲಂಬಿಯಾಗಿ ದಾಸೋಹ ಭಾವದಿಂದ ಸಮಾಜಸೇವೆ ಮಾಡಲು ಸದಾಚಾರ ತಿಳಿಸುತ್ತದೆ. ಲಿಂಗಭೇದ, ವರ್ಗಭೇದ, ವರ್ಣಭೇದ ಮತ್ತು ಜಾತಿಭೇದ ಮಾಡಬಾರದು ಎಂದು ಶಿವಾಚಾರ ತಿಳಿಸುತ್ತದೆ. ಈ ಶಿವಶರಣರ ಸಿದ್ಧಾಂತವನ್ನು ರಕ್ಷಿಸಲು ಗಣಾಚಾರ ಮಾರ್ಗದರ್ಶನ ಮಾಡುತ್ತದೆ. ತಾನು ಎಲ್ಲರಿಗಿಂತ ಚಿಕ್ಕವನೆಂದು ತಿಳಿದು ನಿರಹಂಕಾರಿಯಾಗಿ ಸೇವಾಭಾವ ಹೊಂದಬೇಕು ಎಂಬುದನ್ನು ಭೃತ್ಯಾಚಾರ ಸೂಚಿಸುತ್ತದೆ. ಈ ಪಂಚಾಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವವರೇ ಲಿಂಗಾಯತರು.

ಲಿಂಗಾಯತ ಧರ್ಮದಲ್ಲಿ ಇಷ್ಟಲಿಂಗವೇ ಪರಮಾತ್ಮನ ಕುರುಹು. ಬಸವಣ್ಣನವರೇ ಧರ್ಮಗುರು, ವಚನಗಳೇ ಧರ್ಮಗ್ರಂಥ, ಅನುಭವದ ಮೂಲಕ ಬರುವ ಅನುಭಾವವೇ ಧರ್ಮದ ದರ್ಶನ, ಈ ದರ್ಶನವನ್ನು ಲಿಂಗಾದ್ವೈತ ಅಥವಾ ಬಸವಾದ್ವೈತ ಎಂದೂ ಕರೆಯುತ್ತಾರೆ. ಕನ್ನಡವೇ ಲಿಂಗಾಯತದ ಧರ್ಮಭಾಷೆ.
ಪಂಚಾಚಾರ್ಯರು ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪುವುದಿಲ್ಲ. ವಚನಗಳನ್ನು ಧರ್ಮಗ್ರಂಥಗಳೆಂದು ಒಪ್ಪುವುದಿಲ್ಲ. ಅನುಭಾವವನ್ನು ತತ್ತ್ವಜ್ಞಾನವೆಂದು ಒಪ್ಪುವುದಿಲ್ಲ. ಕನ್ನಡವನ್ನು ಧರ್ಮಭಾಷೆ ಎಂದು ಒಪ್ಪುವುದಿಲ್ಲ.

ಇಷ್ಟಲಿಂಗ, ಸ್ಥಾವರಲಿಂಗ ಮತ್ತು ಮೂರ್ತಿಗಳು ಅವರ ಆರಾಧನಾ ಸಾಧನಗಳು. ಆದಿರೇಣುಕರು ಅವರ ಧರ್ಮಗುರು. ಆಗಮಗಳೊಂದಿಗೆ ಸಿದ್ಧಾಂತ ಶಿಖಾಮಣಿ ಅವರ ಧರ್ಮಗ್ರಂಥ, ಶಕ್ತಿವಿಶಿಷ್ಡಾದ್ವೈತ ಅವರ ತತ್ತ್ವಜ್ಞಾನ, ಸಂಸ್ಕೃತ ಅವರ ಧರ್ಮಭಾಷೆ. ಅವರ ವೀರಶೈವವು ಹಿಂದೂಧರ್ಮದ ಭಾಗ ಎಂದು ಪಂಚಾಚಾರ್ಯರು ಪ್ರತಿಪಾದಿಸುತ್ತಾರೆ.

ಬಸವಾದಿ ಶರಣರು ೧೨ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸುವುದರ ಮೂಲಕ ಕಾಯಕಜೀವಿಗಳನ್ನು ವೈದಿಕರ ಮನುವಾದಿ ವ್ಯವಸ್ಥೆಯ ಶೋಷಣೆಯಿಂದ ವಿಮೋಚನೆಗೊಳಿಸಿದರು. ಲಿಂಗಾಯತರ ಪೂರ್ವಜರಲ್ಲಿ ಬಹುಪಾಲು ಜನರು ನೇಕಾರರು, ನೂಲು ತೆಗೆಯುವವರು, ಅಂಬಿಗರು, ಅಕ್ಕಸಾಲಿಗರು, ಮಡಿವಾಳರು, ದನಕಾಯುವವರು, ಕಸಗುಡಿಸುವವರು, ಕಟ್ಟಿಗೆ ಮಾರುವವರು, ಹುಲ್ಲುಮಾರುವವರು, ಹಿರಿಯ ಮಾಹೇಶ್ವರರು ಎಂದು ಬಸವಣ್ಣನವರಿಂದ ಕರೆಯಿಸಿಕೊಂಡ ಹೊಲೆ ಮಾದಿಗರು, ಸಮಗಾರರು, ಮೇದಾರರು, ಕುಂಬಾರರು, ಕಮ್ಮಾರರು, ಗಾಣಿಗರು, ಕೃಷಿಕಾರ್ಮಿಕರು, ಒಕ್ಕಲಿಗರು, ಬಹುರೂಪಿಗಾರರು, ವಿವಿಧ ವಾದ್ಯಗಳನ್ನು ನುಡಿಸುವ ಜನಪದ ಕಲಾವಿದರು, ಹಾಡುಗಾರರು, ನಾಟ್ಯಕಲಾವಿದರು ಮುಂತಾದ ಕಾಯಕಜೀವಿಗಳಾಗಿದ್ದರು ಎಂಬುದನ್ನು ಮರೆಯಬಾರದು.
ನಮ್ಮ ಪೂರ್ವಜರು ಹೋರಾಟ ಮಾಡಿ ಕಟ್ಟಿದ ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗುವವರೆಗೆ ಹೋರಾಟ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂಬ ಛಲವನ್ನು ಪ್ರತಿಯೊಬ್ಬ ಲಿಂಗಾಯತ ಹೊಂದಬೇಕಾಗಿದೆ. ಗುಜರಾತಿನಲ್ಲಿ ತನಗೆ ವಿರೋಧ ವ್ಯಕ್ತಪಡಿಸಿದ ಪಟೇಲ ಸಮುದಾಯವನ್ನು ಬಿಟ್ಟು ಬಿ.ಜೆ.ಪಿ. ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಯಾದವರನ್ನು ಬಿಟ್ಟು ಅಧಿಕಾರ ಪಡೆದಿದೆ. ಕರ್ನಾಟಕದಲ್ಲಿ ಲಿಂಗಾಯತರನ್ನು ಬಿಟ್ಟು ಅಧಿಕಾರ ಪಡೆಯುವ ಬಿ.ಜೆ.ಪಿ.ಯ ರಾಷ್ಟ್ರಾಧ್ಯಕ್ಷ ಅಮಿತ ಶಾ ಯೋಚನೆಯನ್ನು ಬುಡಮೇಲು ಮಾಡಬೇಕಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂತ್ರಿಮಂಡಲ ಸಭೆ ಕರೆದು ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆಗಾಗಿ ಶಿಫಾರಸು ಮಾಡುವ ಮುನ್ನಾದಿನ ಅವರ ಮನೆಯಲ್ಲಿ ಕರೆದ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಚಿತ್ರದುರ್ಗದ ಮುರುಘಾ ಮಠ, ಗದುಗಿನ ತೋಂಟದಾರ್ಯ ಮಠ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠ, ಭಾಲ್ಕಿ ಹಿರೇಮಠ ಮುಂತಾದ ಮಠಗಳ ೨೦೦ರಷ್ಟು ಸ್ವಾಮಿಗಳು ಇದ್ದರು. ಮಾತಾಜಿ ಅವರು ನೇರವಾಗಿ ಕಾಂಗ್ರೆಸ್‌ಗೆ ತಮ್ಮ ಬೆಂಬಲ ವ್ಯಕ್ತ ಪಡಿಸಿದರು. ಉಳಿದ ಸ್ವಾಮಿಗಳು ಚಪ್ಪಾಳೆಯೊಂದಿಗೆ ಸಮ್ಮತಿ ಸೂಚಿಸಿದರು. ’ಲಿಂಗಾಯತ ಸ್ವತಂತ್ರ ಧರ್ಮವಾಗುವುದಕ್ಕೆ ಸಹಾಯ ಮಾಡಿದವರಿಗೆ ನಮ್ಮ ಸಹಾಯವಿದೆ’ ಎಂಬ ಮಾತು ಸರ್ವಾನುಮತದಿಂದ ಸ್ವೀಕೃತವಾಯಿತು. ಆ ಪ್ರಕಾರ ಎಲ್ಲ ಸ್ವಾಮಿಗಳು ತಮ್ಮ ಮಠಗಳ ಭಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ ಎಂಬ ನಂಬಿಕೆ ನನಗಿದೆ.

ಲಿಂಗಾಯತರೇ ನೆನಪಿಟ್ಟುಕೊಳ್ಳಿ. ನಿಮ್ಮ ಪೂರ್ವಜರು ಬಸವಣ್ಣನವರ ನಾಯಕತ್ವದಲ್ಲಿ ಜಾತಿ, ವರ್ಣ, ವರ್ಗ ಮತ್ತು ಲಿಂಗಭೇದಗಳಿಂದ ಮುಕ್ತವಾದ ಶರಣಸಂಕುಲದ ಸ್ಥಾಪನೆ ಮಾಡಿ ನುಡಿದಂತೆ ನಡೆದು ತೋರಿಸಿದ್ದಾರೆ. ಈ ಶರಣಸಂಕುಲ ವಿಶ್ವದಲ್ಲೇ ಸರ್ವ ಸಮಾನತೆಯ ಪ್ರಥಮ ಪ್ರಯೋಗವಾಗಿದೆ ಎಂಬುದರ ಬಗ್ಗೆ ಅಭಿಮಾನ ತಾಳಿರಿ. ಶರಣ ಸಂಕುಲದಲ್ಲಿ ಲಿಂಗವಂತ ಸಮಗಾರ ಹರಳಯ್ಯನವರೂ ಅಷ್ಟೇ, ಬ್ರಾಹ್ಮಣ ಮೂಲದಿಂದ ಬಂದು ಲಿಂಗವಂತರಾದ ಮಂತ್ರಿ ಮಧುವರಸರೂ ಅಷ್ಟೇ ಎಂಬುದನ್ನು ಎಲ್ಲ ಜಾತಿಮೂಲಗಳಿಂದ ಬಂದ ನಿಮ್ಮ ಪೂರ್ವಜರು ಸಾಧಿಸಿ ತೋರಿಸಿದ್ದಾರೆ. ಹರಳಯ್ಯನವರ ಮಗ ಶೀಲವಂತನ ಜೊತೆ ಮಧುವರಸರ ಮಗಳು ಲಾವಣ್ಯಳ ಮದುವೆ ಮಾಡುವುದರ ಮೂಲಕ ಬ್ರಾಹ್ಮಣರ ಶಾಸ್ತ್ರಗಳನ್ನು ಮತ್ತು ಬಿಜ್ಜಳನ ಶಸ್ತ್ರಗಳನ್ನು ಏಕಕಾಲಕ್ಕೆ ಎದುರಿಸಿದ ವೀರಪುರುಷರು ನಮ್ಮ ಶರಣರಾಗಿದ್ದಾರೆ. ಶರಣರು ಸೃಷ್ಟಿಸಿದ ಇತಿಹಾಸದಲ್ಲಿ ಮಾನವ ಕುಲದ ಭವಿಷ್ಯ ಅಡಗಿದೆ. ಒಂದಿಷ್ಟು ರಾಜಕೀಯ ಆಸೆಗಾಗಿ ಬಸವತತ್ತ್ವವನ್ನು ಮರೆತು ಮನುವಾದಿಗಳ ಗುಲಾಮರಾಗುವವರನ್ನು ಶರಣರು ಎಂದೂ ಕ್ಷಮಿಸುವುದಿಲ್ಲ. ಮನುವಾದಿಗಳು ನಮ್ಮ ಶರಣರ ಕೊಲೆ ಮಾಡಿದ್ದಾರೆ. ಪವಿತ್ರವಾದ ವಚನಕಟ್ಟುಗಳನ್ನು ಸುಟ್ಟು ಹಾಕಿದ್ದಾರೆ. ಲಿಂಗಾಯತ ಧರ್ಮವನ್ನು ನಿರ್ನಾಮ ಮಾಡಲು ಅಂದಿನಿಂದ ಇಂದಿನ ವರೆಗೂ ನಿರಂತರ ಪ್ರಯತ್ನಗಳು ನಡೆಯುತ್ತಲೇ ಇವೆ. ಎಚ್ಚರಾಗಿರಿ. ನಿಮ್ಮ ಧರ್ಮವನ್ನು ರಕ್ಷಿಸಿಕೊಳ್ಳಿ. ಆ ಮೂಲಕ ಸಕಲ ಜೀವಾತ್ಮರ ರಕ್ಷಣೆ ಮಾಡಿರಿ.

ಕರ್ನಾಟಕದಲ್ಲಿ ಒಂದು ವೇಳೆ ಬಿ.ಜೆ.ಪಿ. ಅಧಿಕಾರಕ್ಕೆ ಬಂದರೆ ಅದು ಕಾಂಗ್ರೆಸ್ಸಿಗಿಂತ ಹೆಚ್ಚಾಗಿ ಲಿಂಗಾಯತರ ಸೋಲಾಗುತ್ತದೆ ಎಂಬ ಸತ್ಯವನ್ನು ಮನಗಾಣಬೇಕಾಗಿದೆ. ಬಿ.ಜೆ.ಪಿ. ಸೋತರೆ ಅದಕ್ಕೆ ಲಿಂಗಾಯತರ ಶಕ್ತಿಯ ಅರಿವಾಗುವುದು. ಮುಂಬರುವ ಲೋಕಸಭಾ ಚುನಾವಣೆಗೆ ಮೊದಲೇ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವುದಕ್ಕೆ ತಾನೇ ಮುಂದಾಗುವುದು.

ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ದೊರೆತರೆ ಲಿಂಗಾಯತರಿಗೆ ಅಲ್ಪಸಂಖ್ಯಾತರ ಹಕ್ಕುಗಳು ಲಭಿಸುವುದಲ್ಲದೆ, ಅದು ವಿಶ್ವದಲ್ಲಿ ಸ್ವತಂತ್ರ ಧರ್ಮದ ಅಸ್ತಿತ್ವ ಪಡೆಯುವುದು. ಜಗತ್ತಿನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಚನಸಾಹಿತ್ಯದ ಅಧ್ಯಯನ, ಅಧ್ಯಾಪನ ಮತ್ತು ಸಂಶೋಧನೆ ಆರಂಭವಾಗುವುದು. ನಮ್ಮ ಬಸವಾದಿ ಶರಣರು ಜಗತ್ತಿನ ತುಂಬೆಲ್ಲ ರಾರಾಜಿಸುವರು. ಈ ಧರ್ಮದ ತತ್ತ್ವಗಳು ಜಗತ್ತಿನ ಜನರಿಗೆ ತಲುಪಿದಾಗ ಯುದ್ಧಗಳು ಕಡಿಮೆಯಾಗುತ್ತ ಜಗತ್ತಿನಲ್ಲಿ ಶಾಂತಿ ನೆಲೆಸುವುದು.
ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವ ನೆಲೆಗೊಳ್ಳುವುದು. ಜಾತಿವ್ಯವಸ್ಥೆ ಶಿಥಿಲಗೊಳ್ಳುವುದು. ಕೋಮುವಾದಿ ಫ್ಯಾಸಿಸ್ಟರು ಶಕ್ತಿಗುಂದಿ ’ಬಸವಾ ಬಸವಾ’ ಎನ್ನುವ ಪರಿಸ್ಥಿತಿ ನಿರ್ಮಾಣವಾಗುವುದು. ಎಲ್ಲ ಧರ್ಮಗಳ ಜನರು ಸಂವಿಧಾನಬದ್ಧವಾಗಿ ಶಾಂತಿ ಸಮಾಧಾನದಿಂದ ಬದುಕಲು ಸಾಧ್ಯವಾಗುವುದು. ಬಸವನ ಕೀರ್ತಿ ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದ ಮೂಲೆ ಮೂಲೆಗಳಲ್ಲಿ ಹರಡುವುದು.

ಈ ಎಲ್ಲ ಕಾರಣಗಳಿಂದ ಕರ್ನಾಟಕದಲ್ಲಿ ಲಿಂಗಾಯತರು ಕಾಂಗ್ರೆಸ್‌ಗೆ ಮತ ನೀಡುವುದು ಅವಶ್ಯವಾಗಿದೆ. ಇದು ಧರ್ಮದ ಸೇವೆಯ ಜೊತೆಗೆ ದೇಶಸೇವೆಯೂ ಆಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ ಮಾಡುವ ಸೇವೆಗಿಂತ ದೊಡ್ಡ ದೇಶಸೇವೆ ಇನ್ನೊಂದಿಲ್ಲ. ಲಿಂಗಾಯತ ಧರ್ಮದ ರಕ್ಷಣೆ ಎಂದರೆ ಪ್ರಜಾಪ್ರಭುತ್ವದ ರಕ್ಷಣೆಯೆ ಆಗಿದೆ.

ನಮ್ಮ ಸಂವಿಧಾನ ಗಂಡಾಂತರದಲ್ಲಿದೆ. ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರು ಗಂಡಾಂತರದಲ್ಲಿದ್ದಾರೆ. ಲಿಂಗಾಯತ ಧರ್ಮವೂ ಗಂಡಾಂತರದಲ್ಲಿದೆ. ನಿಮ್ಮ ಒಂದು ಮತ ಇಷ್ಟೆಲ್ಲ ರಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ.

(ಈ ವಿಚಾರ ಬಸವಾಭಿಮಾನಿಗಳಿಗೆ ತಲುಪಿಸಲು ದಯವಿಟ್ಟು ಎಲ್ಲರೂ ಯುದ್ಧೋಪಾದಿಯಲ್ಲಿ ಪ್ರಯತ್ನಿಸಿರಿ. ಸಾಧ್ಯವಾದರೆ ಕರಪತ್ರ ಮುದ್ರಿಸಿ ಹಂಚಿ. ಪೇಸ್ ಬುಕ್ ಮತ್ತು ವ್ಯಾಟ್ಸಫ್ ಗ್ರೂಪ್ ನಲ್ಲಿ ಶೇರ್ ಮಾಡಿ. ಆ ಮೂಲಕ ಶರಣರ ಮತ್ತು ದೇಶದ ಸೇವೆಯನ್ನು ಏಕಕಾಲಕ್ಕೆ ಮಾಡಿರಿ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಭಾವೈಕ್ಯದ ರಕ್ಷಣೆಗಾಗಿ ನಡೆದ ಹೋರಾಟದಲ್ಲಿ ನಮ್ಮೆಲ್ಲರ ಅಳಿಲು ಸೇವೆಯೂ ಇರಲಿ.)

Donate Janashakthi Media

Leave a Reply

Your email address will not be published. Required fields are marked *