ಕಲಬುರಗಿ : ಕೆಪಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಮೋದಿಗೆ ವಿಷ ಸರ್ಪ ಎಂದು ಹೇಳಿ ಅವಮಾನ ಮಾಡಿದ್ದಾರೆ. ಮೋದಿಯವರನ್ನು ಅವಮಾನ ಮಾಡುವುದು ಅಂದರೆ ಅದು ದೇಶಕ್ಕೆ ಅವಮಾನ ಮಾಡಿದಂತೆ. ಮೋದಿ ಅವರನ್ನು ವಿಷ ಸರ್ಪಕ್ಕೆ ಹೋಲಿಸುವ ಮೂಲಕ ಖರ್ಗೆ ದೇಶಕ್ಕೇ ಅವಮಾನ ಮಾಡಿದ್ದಾರೆ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಈ ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವಂತೆ ಮಾಡಿ, ಹೀನಾಯವಾಗಿ ಸೋಲಿಸಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆಕೊಟ್ಟರು.
ಚಿತ್ತಾಪುರ ಕ್ಷೇತ್ರ ವ್ಯಾಪ್ತಿಯ ವಾಡಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಪರ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ದೇಶಕ್ಕೆ ಅಪಮಾನ ಮಾಡಿದವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲ್ಲಬೇಕಾ? ಆ ಪಕ್ಷದವರನ್ನು ಹೀನಾಯವಾಗಿ ಸೋಲಿಸುವ ಮೂಲಕ ದೇಶ ವಿರೋಧಿ ಮಾತು ಆಡುವವರಿಗೆ ತಕ್ಕ ಶಾಸ್ತಿ ಮಾಡಿ ಎಂದರು.
ಇದನ್ನೂ ಓದಿ : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ಗೆ ಜೀವ ಬೆದರಿಕೆ : ಪ್ರಕರಣ ದಾಖಲು
ಭಗವಾನ್ ರಾಮನ ಭೂಮಿ ಅಯೋಧ್ಯೆಯಿಂದ ಇಲ್ಲಿಗೆ ಬಂದಿದ್ದೇನೆ. ಭಗವಾನ್ ರಾಮನಿಗೆ ಆಂಜನೇಯ ಸಿಕ್ಕಿರುವುದು ಇದೇ ಕರ್ನಾಟಕದ ಭೂಮಿಯಲ್ಲಿ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿದೆ. ರಾಮನಿಗೆ ಸಂಕಟ ಬಂದಾಗ ಹನುಮ ಹೇಗಿದ್ದನೋ ಹಾಗೆಯೇ ದೇಶಕ್ಕೆ ಸಂಕಟ ಬಂದಾಗ ಪ್ರಧಾನಿ ಮೋದಿ ಹನುಮನ ರೀತಿ ರಕ್ಷಣೆಗೆ ಧಾವಿಸುತ್ತ ದೇಶದ ಜೊತೆಗಿದ್ದಾರೆ. ಇಂಥ ದೇಶಭಕ್ತನಿಗೆ ನಿಂದಿಸೋದು ಮಹಾ ಅಪರಾಧ ಎಂದರು.