ಉಷಾ, ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ!

                                                                                                                – ರಾಜಾರಾಂ ತಲ್ಲೂರು 

 

ನಾನು ಈವತ್ತು ಪಯ್ಯೋಳಿ ಎಕ್ಸ್‌ಪ್ರೆಸ್ ಅಭಿಮಾನಿ ಎಂಬ ನನ್ನ ಇಷ್ಟದ ಹಣೆಪಟ್ಟಿಯನ್ನು ಕಳಚಿಕೊಂಡಿದ್ದೇನೆ.

ದೇಶಕ್ಕೆ ಕೀರ್ತಿ ತಂದ ಕುಸ್ತಿ ಪಟು ಹೆಣ್ಣುಮಕ್ಕಳು, ತಮ್ಮ ಮೇಲೆ ನಡೆದಿರುವ ದೌರ್ಜನ್ಯದ ವಿರುದ್ಧ ಹೋರಾಟಕ್ಕೆ ಸಹಾಯ ಕೊಡಿ ಎಂದು ದಿಲ್ಲಿಯಲ್ಲಿ ಧರಣಿ ಹಮ್ಮಿಕೊಂಡು ಅಂಗಲಾಚಿ ಕುಳಿತಿರುವಾಗ, ಮೊದಲು ಬಂದು ಅವರ ಅಹವಾಲು ಕೇಳಬೇಕಿದ್ದ ಭಾರತ ಒಲಿಂಪಿಕ್ ಅಸೋಸಿಯೇಷನ್ನಿನ ಹೊಸ ಅಧ್ಯಕ್ಷೆ ಪಿ ಟಿ ಉಷಾ ಅವರು, ಈ ಹೆಣ್ಣುಮಕ್ಕಳು ದೇಶದ ಮರ್ಯಾದೆಗೆ ಧಕ್ಕೆ ತರುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದು ಅತ್ಯಂತ ಶೋಚನೀಯ ಸ್ಥಿತಿ.

ಐದಾರು ತಿಂಗಳ ಹಿಂದೆ ಇದೇ ಪಿ ಟಿ ಉಷಾ ಅವರು ತಮ್ಮ ಅಕಾಡೆಮಿಯಲ್ಲಿ ಭೂವಿವಾದವೊಂದು ಸೃಷ್ಟಿ ಆಗಿದ್ದಾಗ (ಅದರ ಒಳಸುಳಿಗಳು ಏನಿವೆ ನನಗೆ ಅರಿವಿಲ್ಲ), ತಾವೇ ಸ್ವತಃ ಮಾಧ್ಯಮಗಳ ಎದುರು ಬಂದು ತಮ್ಮ ಸಂಸ್ಥೆಯ ದಯನೀಯ ಸ್ಥಿತಿಯಬಗ್ಗೆ ಅಲವತ್ತುಕೊಂಡದ್ದು ರಾಷ್ಟ್ರೀಯ ಸುದ್ದಿ ಆಗಿತ್ತು. ಹಾಗಾಗಿ, ಒಂದು ಸಮಸ್ಯೆ ಎದುರಾದಾಗ, ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದರೆ ಪರಿಹಾರ ಸಿಗಬಹುದೆಂಬ ಪೂರ್ವೋದಾಹರಣೆ ಹಾಕಿಕೊಟ್ಟ ಹಿರಿಯಕ್ಕ ಅವರೇ.

ಈಗ ಅದನ್ನೇ ಅನುಸರಿಸಿದ ಕಿರಿಯ ಕ್ರೀಡಾಪಟುಗಳ ಮೇಲೆ ಹರಿಹಾಯುವುದು ಖಂಡಿತಕ್ಕೂ ಭಾರತದ ಕ್ರೀಡಾಜಗತ್ತಿನ ನೈತಿಕ ಸ್ಥೈರ್ಯಕ್ಕೆ ಮರ್ಮಾಘಾತ.

ಇದನ್ನೂ ಓದಿ : ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕುಸ್ತಿಪಟುಗಳ ಅರ್ಜಿ: ನೊಟೀಸ್ ಜಾರಿ ಮಾಡಿದ ಸುಪ್ರೀಂ

ಈಗ ಸ್ವತಃ ರಾಜ್ಯಸಭಾ ಸದಸ್ಯರಾಗಿ, ಒಲಿಂಪಿಕ್ ಅಸೋಸಿಯೇಷನ್ನಿನ ಅಧ್ಯಕ್ಷೆಯಾಗಿ ಉಷಾ ಅವರಿಗೆ ತೀರಿಸಲು ಸಾಕಷ್ಟು ದೊಡ್ಡ ಋಣದ ಹೊರೆ ಇರಬಹುದು. ಆದರೆ, ಅದನ್ನು ತೀರಿಸಲು, ಈ ಕ್ರೀಡಾಪಟುಗಳ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಪರೋಕ್ಷ ಸಮರ್ಥನೆಗೆ ಇಳಿಯುವ ಮೂಲಕ ಪಿ ಟಿ ಉಷಾ, ತಮ್ಮ ಜಾಗತಿಕ ಮಟ್ಟದ ಕ್ರೀಡಾಸಾಧನೆಗಳ ಸಾಮಾಜಿಕ ಔನ್ನತ್ಯವನ್ನು ರಾಜಕೀಯದ ಕೆಸರು ರಾಡಿಯಲ್ಲಿ ಮುಳುಗಿಸಿ ಸಣ್ಣವರಾಗಿದ್ದಾರೆ. ಆ ಹೆಣ್ಣುಮಕ್ಕಳ ದೂರನ್ನು ಕನಿಷ್ಠ ಏನೆಂದು ಕೇಳುವ ನೈತಿಕತೆಯನ್ನು ಅವರು ಉಳಿಸಿಕೊಳ್ಳಬೇಕಾಗಿತ್ತು.

ತುಂಬಾ ಬೇಸರದಿಂದ ಇದನ್ನು ದಾಖಲಿಸುತ್ತಿದ್ದೇನೆ.

Donate Janashakthi Media

Leave a Reply

Your email address will not be published. Required fields are marked *