ನವದೆಹಲಿ: ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ ರಾಜ್ಯ ವಿಧಾನಸಭೆ ಚುನಾವಣೆ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಪತ್ನಿ ಅರುಣಾ ಪರ ಪ್ರಚಾರ ಮಾಡುವ ಲೆಕ್ಕಚಾರದಲ್ಲಿದ್ದ ರೆಡ್ಡಿಗೆ ಸುಪ್ರೀಂಕೋರ್ಟ್ ಬಳ್ಳಾರಿಗೆ ಪ್ರವೇಶವನ್ನು ನಿರಾಕರಿಸಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನಲೆ ಬಳ್ಳಾರಿ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಜನಾರ್ದನ ರೆಡ್ಡಿ ಮುಂದಾಗಿದ್ದರು. ಈ ಹಿನ್ನಲೆ ಬಳ್ಳಾರಿ ಪ್ರವೇಶಕ್ಕೆ ನೀಡಿರುವ ಅನುಮತಿಯನ್ನು ವಿಸ್ತರಿಸಬೇಕು ಎಂದು ಸುಪ್ರೀಂಗೆ ಮನವಿ ಮಾಡಿದ್ದರು. ಇಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಎಂ ಆರ್ ಶಾ ನೇತೃತ್ವದ ದ್ವಿಸದಸ್ಯ ಪೀಠ ಅನುಮತಿ ನಿರಾಕರಿಸಿತು.
ಇದನ್ನೂ ಓದಿ : ಜನಾರ್ದನ ರೆಡ್ಡಿ ಕುಟುಂಬಸ್ಥರ ಅಕ್ರಮ ಆಸ್ತಿ ಮುಟ್ಟುಗೋಲಿಗೆ ಸಿಬಿಐ ವಿಳಂಬ: ಹೈಕೋರ್ಟ್ ಅಸಮಾಧಾನ
ವಿಚಾರಣೆ ವೇಳೆ ವಾದ ಮಂಡಿಸಿದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ, ರೆಡ್ಡಿ ಮೊಮ್ಮಗಳ ಜನನ ಹಿನ್ನಲೆ ಬಳ್ಳಾರಿ ತೆರಳಲು ಅನುಮತಿ ನೀಡಿತ್ತು. ಜನಾರ್ದನ ರೆಡ್ಡಿಗೆ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಡಿಲಗೊಳಿಸಿತ್ತು. ಅದನ್ನು ಸದ್ಯ ವಿಸ್ತರಿಸಬೇಕು ಎಂದು ಮನವಿ ಮಾಡಿದರು. ಅನುಮತಿ ನಿರಾಕರಿಸಿ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ರೆಡ್ಡಿ ಪರ ವಕೀಲರು ಅರ್ಜಿಯನ್ನು ವಾಪಸ್ ಪಡೆದರು.
ಸುಪ್ರೀಂಕೋರ್ಟ್ ನಿರ್ಧಾರದಿಂದ ಜನಾರ್ದನ ರೆಡ್ಡಿಗೆ ತೀವ್ರ ಹಿನ್ನಡೆಯಾಗಿದ್ದು ಬಳ್ಳಾರಿಗೆ ತೆರಳುವ ಅವಕಾಶದಿಂದ ವಂಚಿತರಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಪತ್ನಿ ಅರುಣಾ ಸೇರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡದಂತಹ ಪರಿಸ್ಥಿತಿಯಲ್ಲಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಜಾಮೀನು ನೀಡಿತ್ತು.