ಕೋಲಾರ: ರಾಜ್ಯದಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ, ಆ ಸ್ಥಾನ ನನಗೆ ಬೇಡ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಷ್ಟೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ರಾಜ್ಯ ಕಾಂಗ್ರೆಸ್ ಆಯೋಜಿಸಿದ ಜೈ ಭಾರತ ಸಮಾವೇಶದಲ್ಲಿ ಮಾತನಾಡಿ ಅವರು, ಮುಖ್ಯಮಂತ್ರಿ ಯಾರಾಗಬೇಕೆಂದು ಕಾಂಗ್ರೆಸ್ ನಾಯಕರು ತಲೆ ಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ. ಪಕ್ಷಕ್ಕೆ ಬಹುಮತ ಬಂದಾಗ ಸಿಎಂ ಬಗ್ಗೆ ಶಾಸಕರು ನಿರ್ಧರಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರ ಅಂತಾರೆ, ಹೊಸ ಯೋಜನೆ ತಂದಿಲ್ಲ. ಹಳೇ ಡಬ್ಬಿಗೆ ಹೊಸ ಇಂಜಿನ್ ಕಲರ್ ಹಚ್ಚುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ತೆಗೆಯದಿದ್ದರೆ ಯಾವುದೇ ಅಭಿವೃದ್ಧಿ ಆಗಲ್ಲ ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಅನೇಕ ಜನರನ್ನು ಭೇಟಿಯಾಗಿ ಜನರ ದುಃಖ ದುಮ್ಮಾನ ಕೇಳಿದ್ದಾರೆ ಎಂದು ಹೇಳಿದ ಖರ್ಗೆ, ಕೋಲಾರ ಜಿಲ್ಲೆ ಬಂಗಾರದ ಜಿಲ್ಲೆ. ಮೂರೇ ಮೂರು ಬಂಗಾರದ ಗಣಿಗಳು ಕರ್ನಾಟಕದಲ್ಲೇ ಇವೆ. ಇಡೀ ದೇಶದ ಬಂಗಾರ ಇರೋದು ಸಿಗುವುದು ಇಲ್ಲಿಂದಲೇ. ಕೋಲಾರದಲ್ಲಿ ಬರಗಾಲಕ್ಕೆ ತುತ್ತಾದ ಜಿಲ್ಲೆ ನೀರಾವರಿಗಾಗಲಿ ಕೃಷಿ ಗಾಗಲಿ ಅಷ್ಟೊಂದು ಮಹತ್ವ ಕೊಡುತ್ತಾ ಇರಲಿಲ್ಲ. ಅನೇಕ ಶಾಸಕರು ಒಗ್ಗಟ್ಟಾಗಿ ಕಾಂಗ್ರೆಸ್ ಸರ್ಕಾರ ಇದ್ದಾಗ ಕೆರೆಗಳನ್ನು ತುಂಬಿಸಿದ್ದು ಕಾಂಗ್ರೆಸ್ ಪಕ್ಷ. ಲಕ್ಷಾಂತರ ಎಕರೆ ಇದರಿಂದ ನೀರಾವರಿ ಆಗುತ್ತಿದೆ ಎಂದರು.