ಉಡುಪಿ: ಕಾಂತಾರ ಸಿನಿಮಾದ ನಾಯಕ ರಿಷಭ್ ಶೆಟ್ಟಿ ನಮ್ಮ ಸಿದ್ಧಾಂತಕ್ಕೆ ಹತ್ತಿರ ಇದ್ದವರು. ನಮ್ಮ ಸಿದ್ದಾಂತ ಪ್ರತಿಪ್ರಾದನೆ ಮಾಡಿದವರು ಎನ್ನುವ ಮೂಲಕ ರಿಷಭ್ ಶೆಟ್ಟಿ ಬಿಜೆಪಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂಬ ಸುಳಿವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಷಭ್ ಶೆಟ್ಟಿ ಜೊತೆಗೆ ಮೂಕಾಂಬಿಕಾ ದರ್ಶನ ಮಾಡಿದ್ದೇನೆ. ಆದರೆ, ಯಾವುದೇ ಕ್ಯಾಂಪಿಯನ್ ವಿಚಾರ ಮಾತನಾಡಿಲ್ಲ. ಮೊದಲಿಂದಲೂ ಒಳ್ಳೆಯ ಸ್ನೇಹಿತರು. ಅವರು ದೇವಸ್ಥಾನಕ್ಕೆ ಬರುತ್ತಿರುವುದೇ ನನಗೆ ಗೊತ್ತಿರಲಿಲ್ಲ. ಇನ್ನು ಅವರು ನಮ್ಮ ಸಿದ್ಧಾಂತಕ್ಕೆ ಹತ್ತಿರ ಇದ್ದವರು. ನಮ್ಮ ಸಿದ್ಧಾಂತ ಪ್ರತಿಪಾದನೆ ಮಾಡಿದ್ದಾರೆ. ಈಗ ಸದ್ಯದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದರು. ಸದ್ಯದಲ್ಲಿ ಪ್ರಚಾರ ಇಲ್ಲವೆಂದರೂ ಮುಂದಿನ ದಿನಗಳಲ್ಲಿ ಕರಾವಳಿ ಕ್ಷೇತ್ರದಲ್ಲಿ ಅವರ ಪ್ರಚಾರವನ್ನು ಪಡೆದುಕೊಳ್ಳುವ ಸುಳಿವನ್ನು ಬೊಮ್ಮಾಯಿ ನೀಡಿದರು.
ರಿಷಭ್ ಶೆಟ್ಟಿ ಅವರು ಕೂಡ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಭಾಗವಹಿಸುವರೇ ಎಂಬ ಪ್ರಶ್ನೆಗೆ ಪ್ರಕ್ರಿಯಿಸಿದ ಸಿಎಂ, ನಮ್ಮ ಸಿದ್ದಾಂತ ಮತ್ತು ರಿಷಭ್ ಶೆಟ್ಟಿ ಅವರ ಸಿದ್ದಾಂತ ಒಂದೇ ಆಗಿದೆ. ಈ ಹಿಂದೆಯೂ ಹಲವು ಬಾರಿ ಸಿದ್ಧಾಂತ ಸಾಮ್ಯತೆ ಆಗಿರುವ ಬಗ್ಗೆ ಪ್ರತಿಪಾದನೆ ಮಾಡಿದ್ದಾರೆ. ಆದರೆ ಈಗ ಅವರೊಂದಿಗೆ ಬಿಜೆಪಿ ಪರವಾಗಿ ಪ್ರಚಾರ ಮಾಡಿ ಎಂದು ಅಕೃತವಾಗಿ ಯಾವುದೇ ಚರ್ಚೆ ಮಾಡಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕೆಂದು ಚಿಂತನೆ ಮಾಡಿ ಕ್ರಮವಹಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ ಕುರಿತು ಮಾತನಾಡಿದ ಸಿಎಂ, ಈಗಾಗಲೇ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಸಮೀಕ್ಷೆಯ ವರದಿಯ ಆಧಾರದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಅವರೊಂದಿಗೆ ಮಾತನಾಡಿ ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ; 3 ಸ್ಥಳ-200ಕ್ಕೂ ಹೆಚ್ಚು ಸಿನಿಮಾ
ಉಡುಪಿಯಲ್ಲಿ ಸಂಘಟನೆ ಮಾಡಿದವರಿಗೆ ಟಿಕೆಟ್: ಉಡುಪಿಯಲ್ಲಿ ಹೊಸ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಇದು ಪ್ರಯೋಗವೂ ಅಲ್ಲ, ರಿಸ್ಕ್ ಕೂಡ ಇಲ್ಲ. ಈಗ ಇರುವವರು ಪ್ರಬಲ ಸಂಘಟನೆಯಿಂದ ಬಂದವರು. ಸಂಘಟನೆಯಲ್ಲಿ ಪ್ರಬಲ ಅತ್ಯಂತ ಗಟ್ಟಿ ಇರುವವರನ್ನು ಆಯ್ಕೆ ಮಾಡಿದ್ದೇವೆ.
ಇನ್ನು 5 ಶಾಸಕರು ದೇವಸ್ಥಾನಕ್ಕೆ ನಿಮ್ಮೊಂದಿಗೆ ಹಾಜರಾಗಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ, ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಬರುವುದು ಬೇಡ ಅಂದಿದ್ದೇನೆ. ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ನನಗೆ ನಾಯಕನಾಗಿ ಟೀಕೆ ಸಹಜ. ಇದನ್ನು ಸ್ಪರ್ಧಾತ್ಮಕವಾಗಿ ಎದುರಿಸುತ್ತೇನೆ. ಚುನಾವಣೆಗೆ ಅನುಭವ ಬೇಕಿಲ್ಲ ಜನ ಬೆಂಬಲ ಸಿಗುತ್ತದೆ ಎಂದು ಹೇಳಿದರು.