ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಯುರೋಪಿನ ದೇಶಗಳಲ್ಲಿ ಬಂಡವಾಳಶಾಹಿಯ ಆರಂಭದಲ್ಲಿ ನಿರುದ್ಯೋಗ ಉಂಟಾದರೂ ನಂತರ ಕಾರ್ಮಿಕರ ಅದೃಷ್ಟ ಖುಲಾಯಿಸಿತು, ಆದ್ದರಿಂದ ಬಂಡವಾಳಶಾಹಿಯು ತಾನು ಸೃಷ್ಟಿಸಿದ ನಿರುದ್ಯೋಗವನ್ನು ನಂತರ ತಾನೇ ನಿವಾರಿಸುತ್ತದೆ ಎನ್ನುವುದು ಒಂದು ತಪ್ಪು ಕಲ್ಪನೆಯಾಗುತ್ತದೆ. ತಾಂತ್ರಿಕ ಪ್ರಗತಿಯ ನಿರಂತರ ಅಳವಡಿಕೆಯಿಂದಾಗಿ ಕೆಲಸ ಕಳೆದುಕೊಂಡ ಎಲ್ಲ ಕಾರ್ಮಿಕರೂ ಪುನಃ ಸಕ್ರಿಯ ಕಾರ್ಮಿಕ ಪಡೆಯೊಂದಿಗೆ ಸೇರ್ಪಡೆಯಾಗುವ ಯಾವ ಕಾರ್ಯವಿಧಾನವೂ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಇಲ್ಲ ಎಂಬುದು ಸ್ಪಷ್ಟ. ಯುರೋಪಿನ ದೇಶಗಳಲ್ಲಿ ಕಾರ್ಮಿಕರ ಅದೃಷ್ಟ ಖುಲಾಯಿಸಿದ್ದರೆ, ಅದು ಬಂಡವಾಳಶಾಹಿ ವ್ಯವಸ್ಥೆಯಿಂದಲ್ಲ, ಬದಲಾಗಿ ಸಾಮ್ರಾಜ್ಯಶಾಹಿ ವಿದ್ಯಮಾನದಿಂದಾಗಿ- ಅಂದರೆ ಈ ದೇಶಗಳಿಗೆ ವಿಶ್ವಾದ್ಯಂತ ಭೂಕಬಳಿಕೆಯನ್ನು ಮತ್ತು ವಸಾಹತುಗಳು ಮತ್ತು ಅರೆ-ವಸಾಹತುಗಳಿಗೆ ನಿರುದ್ಯೋಗದ ರಫ್ತು ಈ ಎರಡನ್ನೂ ಖಾತ್ರಿಪಡಿಸಿದ ವಿದ್ಯಮಾನದಿಂದಾಗಿಯೇ ಹೊರತು, ಬಂಡವಾಳಶಾಹಿ ವ್ಯವಸ್ಥೆಯೊಳಗಿನ ಯಾವುದೇ ಅಂಶದಿಂದಾಗಿ ಅಲ್ಲ. ಇಂತಹ ಖಾತ್ರಿ ಈಗ ಬಂಡವಾಳಶಾಹಿ ದಾರಿ ಹಿಡಿದಿರುವ ಮೂರನೇ ಜಗತ್ತಿನ ದೇಶಗಳಿಗೆ ಲಭ್ಯವಿಲ್ಲ ಎಂಬುದು ಬಹಳ ಮುಖ್ಯವಾದದ್ದು.
ಬಂಡವಾಳಶಾಹಿಯು ತನ್ನ ಆರಂಭದ ಹಂತಗಳಲ್ಲಿ ನಿರುದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದಾಗಿ ಬಡತನ ಹೆಚ್ಚುತ್ತದೆ. ಆದರೆ, ಬಂಡವಾಳಶಾಹಿಯು ಬೆಳೆಯುತ್ತಾ ಹೋದಂತೆ, ಆರಂಭದ ಹಂತಗಳಲ್ಲಿ ಅದು ಉಂಟುಮಾಡಿದ ಹಾನಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ನಿರುದ್ಯೋಗಿಗಳು ಬಹುಪಾಲು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ನಿರುದ್ಯೋಗದ ಇಳಿಕೆಯ ನಂತರ, ವೇತನಗಳು ಏರುತ್ತವೆ. ಕಾರ್ಮಿಕರ ಉತ್ಪಾದಕತೆ ಹೆಚ್ಚುತ್ತಾ ಹೋದಂತೆ ವೇತನಗಳೂ ಏರುತ್ತಾ ಹೋಗುತ್ತವೆ. ಬಂಡವಾಳಶಾಹಿಯ ಬಗ್ಗೆ ಈ ರೀತಿಯ ಒಂದು ಅಭಿಪ್ರಾಯವು ಎಲ್ಲರಲ್ಲೂ ಮನೆಮಾಡಿದೆ ಎಂಬುದನ್ನು ಸಾಮಾನ್ಯವಾಗಿ ಕಾಣಬಹುದು.
ಈ ಅಭಿಪ್ರಾಯವನ್ನು ಚಾರಿತ್ರಿಕ ಸಾಕ್ಷ್ಯಾಧಾರಗಳು ಬೆಂಬಲಿಸುತ್ತವೆ ಎಂಬುದು ಮೇಲ್ನೋಟದಲ್ಲಿ ತೋರುತ್ತದೆ: ಕೈಗಾರಿಕಾ ಬಂಡವಾಳಶಾಹಿಯ ಉದಯದೊಂದಿಗೆ ಬ್ರಿಟನ್ನಲ್ಲಿ ಬಡತನ ವೃದ್ಧಿಸಿತು ಎಂಬುದನ್ನು ಮಾರ್ಕ್ಸ್ವಾದಿ ಇತಿಹಾಸಕಾರ ಎರಿಕ್ ಹಾಬ್ಸ್ಬಾಮ್ ಅಂದಾಜು ಮಾಡಿದ್ದರು. ಆದರೆ, ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಿಂದ ಕಾರ್ಮಿಕರ ಸ್ಥಿತಿ-ಗತಿಗಳು ಉತ್ತಮಗೊಂಡವು. ಸ್ಥಿತ್ಯಂತರದ ಈ ಅವಧಿಯಲ್ಲಿ ಬಂಡವಾಳಶಾಹಿಯು ಕಾರ್ಮಿಕರಿಗೆ ಎಷ್ಟೇ ಕಷ್ಟ-ನಷ್ಟಗಳನ್ನು ಉಂಟುಮಾಡಿದ್ದರೂ ಸಹ, ಅಂತಿಮವಾಗಿ ಅದು ಅವರಿಗೆ ಪ್ರಯೋಜನಕಾರಿಯಾಗಿ ಪರಿಣಮಿಸುತ್ತದೆ ಎಂಬುದನ್ನು ಇದು ಸೂಚಿಸುವಂತೆ ಕಾಣಿಸಬಹುದು.
ಆದರೆ, ಈ ಪರಿಕಲ್ಪನೆಯು ಸಂಪೂರ್ಣವಾಗಿ ತಪ್ಪಾಗಿದೆ. ಏಕೆಂದರೆ, ಬಂಡವಾಳಶಾಹಿಯು ತನ್ನ ಆರಂಭದ ಅವಧಿಯಲ್ಲಿ ಕಾರ್ಮಿಕರ ಸ್ಥಿತಿ-ಗತಿಗಳಿಗೆ ಉಂಟುಮಾಡಿದ ಹಾನಿಯನ್ನು ನಂತರ ಸರಿಪಡಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಯಾವ ಸೈದ್ಧಾಂತಿಕ ಕಾರಣಗಳೂ ದೊರಕುವುದಿಲ್ಲ. ಮತ್ತು, ನಂತರದ ಅವಧಿಯಲ್ಲಿ ಕಂಡುಬಂದ ಕಾರ್ಮಿಕರ ಸ್ಥಿತಿ-ಗತಿಗಳ ಸುಧಾರಣೆಗಳ ಹಿಂದಿರುವ ಕಾರಣಗಳಿಗೂ ಮತ್ತು ಬಂಡವಾಳಶಾಹಿಯ ಹೊಂದಿರುವ ಯಾವ ಸಹಜ ಪ್ರವೃತ್ತಿಗೂ ಯಾವ ಸಂಬಂಧವೂ ಕಾಣುವುದಿಲ್ಲ.
ಇದನ್ನೂ ಓದಿ : ʻಬೆಳವಣಿಗೆಯ ಹಿಂದೂ ದರʼ ಅಂದರೆ ಕೆಳಮಟ್ಟದ ದರ ಈಗ ದುಡಿಯುವ ಜನಗಳಿಗೆ ಹೆಚ್ಚು ಕೆಟ್ಟದಾಗಿರುತ್ತದೆ
ಬಂಡವಾಳಶಾಹಿಯು ತನ್ನ ಆರಂಭದ ಹಂತಗಳಲ್ಲಿ ಕಾರ್ಮಿಕರ ಸ್ಥಿತಿ-ಗತಿಗಳಿಗೆ ಉಂಟುಮಾಡಿದ ಹಾನಿಯನ್ನು ಆನಂತರದಲ್ಲಿ ಸರಿಪಡಿಸುತ್ತದೆ ಎಂಬ ಕಲ್ಪನೆಯನ್ನು ಇಂಗ್ಲಿಷ್ ಅರ್ಥಶಾಸ್ತ್ರಜ್ಞ ಡೇವಿಡ್ ರಿಕಾರ್ಡೊ ಅವರು ಯಂತ್ರೋಪಕರಣಗಳ ಬಳಕೆಯನ್ನು ಆರಂಭಿಸಿದ ಸಂದರ್ಭದಲ್ಲಿ ಒಂದು ಸಮರ್ಥನೆಯಾಗಿ ಮಂಡಿಸಿದ್ದರು. ಉತ್ಪಾದನೆಯಲ್ಲಿ ಯಂತ್ರೋಪಕರಣಗಳ ಬಳಕೆಯು ಆರಂಭದಲ್ಲಿ ಕಾರ್ಮಿಕರನ್ನು ಕೆಲಸದಿಂದ ಕಿತ್ತೊಗೆಯುತ್ತದೆ ಮತ್ತು ಅವರನ್ನು ಹೆಚ್ಚಿನ ತೊಂದರೆಗಳಿಗೆ ಈಡು ಮಾಡುತ್ತದೆ. ಆದರೆ ಅದು ಲಾಭದ ದರವನ್ನು ಹೆಚ್ಚಿಸುತ್ತದೆ ಮತ್ತು ಅದರಿಂದಾಗಿ ಬಂಡವಾಳದ ಶೇಖರಣೆಯ ದರವನ್ನೂ ಹೆಚ್ಚಿಸುತ್ತದೆ. ಪರಿಣಾಮವಾಗಿ, ಕೆಲಸ ಕಳೆದುಕೊಂಡ ಕಾರ್ಮಿಕರು ಮತ್ತೆ ಉದ್ಯೋಗದಲ್ಲಿ ತೊಡಗುವಂತಾಗುತ್ತದೆ ಎಂದು ಅವರು ವಾದಿಸಿದರು. ಅಷ್ಟೇ ಅಲ್ಲದೆ, ಕಾರ್ಮಿಕರು ಒಟ್ಟಾರೆಯಾಗಿ ತಮ್ಮನ್ನು ತಾವು ವೇಗವಾಗಿ ಪುನರುತ್ಪತ್ತಿ ಮಾಡಿಕೊಳ್ಳದಿದ್ದರೆ ಮತ್ತು ಆ ಮೂಲಕ ಕಾರ್ಮಿಕ ಪಡೆಯ ಬೆಳವಣಿಗೆಯ ದರವನ್ನು ನಿಯಂತ್ರಿಸದಿದ್ದರೆ ತಮ್ಮ ವೇತನದ ಮಟ್ಟವನ್ನೂ ಹೆಚ್ಚಿಸಿಕೊಳ್ಳಬಹುದು ಎಂದಿದ್ದರು.
ತಳಬುಡವಿಲ್ಲದ ನಂಬಿಕೆ :
ರಿಕಾರ್ಡೊ ಅವರ ಈ ವಾದದಲ್ಲಿರುವ ಎರಡು ನ್ಯೂನತೆಗಳು ಸ್ಪಷ್ಟವಾಗಿ ಕಾಣುತ್ತವೆ. ಮೊದಲನೆಯದು, ಉತ್ಪಾದನೆಯಲ್ಲಿ ಯಂತ್ರೋಪಕರಣಗಳ ಬಳಕೆಯನ್ನು ಅದು ಒಮ್ಮೆ-ಮಾತ್ರ ಘಟಿಸುವ ಕ್ರಿಯೆ ಎಂದು ಅವರು ಹೇಳಿದ್ದರು. ಆದರೆ ಬಂಡವಾಳಶಾಹಿಯು ಹೊಸ ಯಂತ್ರೋಪಕರಣಗಳನ್ನು ಮತ್ತು ಹೊಸ ಉತ್ಪಾದನಾ ವಿಧಾನಗಳನ್ನು ನಿರಂತರವಾಗಿ ಪರಿಚಯಿಸುತ್ತಲೇ ಹೋಗುತ್ತದೆ. ಒಮ್ಮೆ-ಮಾತ್ರ ಘಟಿಸುವ ಯಂತ್ರೋಪಕರಣಗಳ ಬಳಕೆಯು ಸೃಷ್ಟಿಸುವ ನಿರುದ್ಯೋಗವು ಅಂತಿಮವಾಗಿ ಬಂಡವಾಳದ ಶೇಖರಣೆಯ ದರದ ಹೆಚ್ಚಳದ ಮೂಲಕ ಮತ್ತು ಅದರಿಂದಾಗಿ ಕಾರ್ಮಿಕರ ಮೇಲಿನ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ನಿವಾರಣೆಗೊಳ್ಳುತ್ತದೆ ಎಂಬ ಅವರ ವಾದವನ್ನು ನಾವು ಒಪ್ಪಿಕೊಂಡರೂ ಸಹ, ಅಂತಿಮವಾಗಿ ಸಂಭವಿಸಬಹುದಾದ ಈ ಘಟನಾವಳಿಯು ಎಂದಿಗೂ ಕಾರ್ಯರೂಪಕ್ಕೆ ಬರುವುದೇ ಇಲ್ಲ. ಏಕೆಂದರೆ, ಹೊಸ ಹೊಸ ಯಂತ್ರಗಳ ಆವಿಷ್ಕಾರ ಮತ್ತು ಅವುಗಳ ಬಳಕೆಯು ನಿರಂತರವಾಗಿ ಸಾಗುತ್ತಲೇ ಹೋಗುತ್ತದೆ.
ಆದ್ದರಿಂದ ಈ ವಿಷಯವನ್ನು ಒಂದು ಚಲನಾತ್ಮಕ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ಒಂದು ವೇಳೆ g ಎಂದರೆ ಬಂಡವಾಳ ದಾಸ್ತಾನಿನ ಬೆಳವಣಿಗೆಯ ದರ ಮತ್ತು ಉತ್ಪಾದನೆಯ ದರ (ತಾಂತ್ರಿಕ ಪ್ರಗತಿಯ ಹೊರತಾಗಿಯೂ ಬಂಡವಾಳ ದಾಸ್ತಾನು ಮತ್ತು ಉತ್ಪಾದನೆಯ ನಡುವಿನ ಅನುಪಾತವು ಬದಲಾಗದೆ ಉಳಿಯುತ್ತದೆ ಎಂದು ಭಾವಿಸಲಾಗಿದೆ, ಏಕೆಂದರೆ, ತಾಂತ್ರಿಕ ಪ್ರಗತಿಯ ಉದ್ದೇಶವೇ ಶ್ರಮಶಕ್ತಿಯ ಮೇಲಿನ ವೆಚ್ಚದ ಇಳಿಕೆ) ಮತ್ತು p ಎಂಬುದು ಕಾರ್ಮಿಕ ಉತ್ಪಾದಕತೆಯ ಬೆಳವಣಿಗೆಯ ದರವಾಗಿದ್ದರೆ, ಆಗ ಶ್ರಮಶಕ್ತಿಯ ಮೇಲಿನ ಬೇಡಿಕೆಯ ಬೆಳವಣಿಗೆಯ ದರವು g-p ಆಗಿರುತ್ತದೆ. ಇದು n ಎಂಬ ಕಾರ್ಮಿಕ ಪಡೆಯ ನೈಸರ್ಗಿಕ ಬೆಳವಣಿಗೆಯ ದರಕ್ಕಿಂತ ಕಡಿಮೆಯಿದ್ದರೆ, ನಿರುದ್ಯೋಗ ದರವು ಕಾಲಾನಂತರದಲ್ಲಿ ಹೆಚ್ಚುತ್ತಲೇ ಹೋಗುತ್ತದೆ. ಆದ್ದರಿಂದ, ಬಂಡವಾಳಶಾಹಿಯ ಕಾರ್ಯವೈಖರಿಯಲ್ಲಿ g-p ಅಂಶವು n ಗಿಂತ ಹೆಚ್ಚಾಗುವಂತೆ ಮಾಡುವಂತದ್ದೇನೂ ಇಲ್ಲ.
ನಿರುದ್ಯೋಗ ದರವು ವೃದ್ಧಿಸುತ್ತಿರುವಾಗ (ಇದರಿಂದಾಗಿ ವೇತನ-ದರವು ಬದುಕುಳಿಯುವ ಮಟ್ಟಕ್ಕೆ ಕಟ್ಟಿಹಾಕಲ್ಪಡುತ್ತದೆ) ಶ್ರಮದ ಉತ್ಪಾದಕತೆಯು ಹೆಚ್ಚುತ್ತಲೇ ಇದ್ದರೆ, ಆಗ ಉತ್ಪಾದನೆಯಿಂದ ಪಡೆಯಬಹುದಾದ ಲಾಭದ ದರವು ಏರುತ್ತಲೇ ಇರುತ್ತದೆ ಮತ್ತು ನಿರುದ್ಯೋಗ ದರವು ಗಮನಾರ್ಹವಾಗಿ ಕುಸಿಯುವವರೆಗೂ ಇದು ಬಂಡವಾಳದ ಶೇಖರಣೆಯ ದರವನ್ನು ಹೆಚ್ಚಿಸುತ್ತದೆ ಎಂಬ ನೆಲೆಯಲ್ಲಿ ಕೆಲವರು ರಿಕಾರ್ಡೊ ಅವರ ವಾದವನ್ನು ಸಮರ್ಥಿಸುತ್ತಾರೆ. ರಿಕಾರ್ಡೊ ಅವರ ವಾದದ ಎರಡನೇ ಸಮಸ್ಯೆ ಬರುವುದು ಇಲ್ಲಿಯೇ. ಅದೇನೆಂದರೆ, ಸಂಭಾವ್ಯ ಉತ್ಪಾದನೆಯು ಸಾಕಾರಗೊಳ್ಳುವಲ್ಲಿ ಮತ್ತು ಅದರಿಂದಾಗಿ ಲಾಭದ ದರ ಏರಿಕೆ ಮತ್ತು ಬಂಡವಾಳದ ಶೇಖರಣೆಯ ದರದ ಏರಿಕೆಯ ಮೇಲೆ ಎಂದೂ ಬೇಡಿಕೆಯ ನಿರ್ಬಂಧ ಇರುವುದಿಲ್ಲ ಎಂದು ಅವರು ಭಾವಿಸುತ್ತಾರೆ. ವಿಷಯವನ್ನು ಬೇರೆ ಮಾತುಗಳಲ್ಲಿ ಹೇಳುವುದಾದರೆ, "ಪೂರೈಕೆಯು ತನ್ನದೇ ಆದ ಬೇಡಿಕೆಯನ್ನು ಸೃಷ್ಟಿಸುತ್ತದೆ" ಎಂದು ಪ್ರತಿಪಾದಿಸುವ ಫ್ರೆಂಚ್ ಅರ್ಥಶಾಸ್ತ್ರಜ್ಞ ಸೇಯ್ಸ್ ನಿಯಮವು ಕಾರ್ಯಪ್ರವೃತ್ತವಾಗಿರುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ, ಉತ್ಪಾದನಾ ಪರಿಸ್ಥಿತಿಯಲ್ಲಿ "ಸಾಕಾರಗೊಳ್ಳುವ ಸಮಸ್ಯೆ" ಇದೆ ಎಂಬುದನ್ನು ನಾವು ಒಮ್ಮೆ ಗುರುತಿಸಿದರೆ, ಕೂಲಿಯ ದರದಿಂದ ಹೊರಹೊಮ್ಮುವ ಲಾಭದ ದರ ಮತ್ತು ಅದರಿಂದಾಗಿ ಬಂಡವಾಳದ ಶೇಖರಣೆಯ ದರ ಮತ್ತು ಅದರೊಂದಿಗೆ ಶ್ರಮಶಕ್ತಿಯ ಮೇಲಿನ ಬೇಡಿಕೆಯು ಒಂದು ಮಿತಿಗೆ ಒಳಪಟ್ಟಿರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆಗ, ತಾಂತ್ರಿಕ ಪ್ರಗತಿಯ ನಿರಂತರ ಅಳವಡಿಕೆಯಿಂದಾಗಿ ಕೆಲಸ ಕಳೆದುಕೊಂಡ ಎಲ್ಲ ಕಾರ್ಮಿಕರೂ ಪುನಃ ಸಕ್ರಿಯ ಕಾರ್ಮಿಕ ಪಡೆಯೊಂದಿಗೆ ಸೇರ್ಪಡೆಯಾಗುವ ಯಾವ ಕಾರ್ಯವಿಧಾನವೂ ಬಂಡವಾಳಶಾಹಿ ವ್ಯವಸ್ಥೆಯೊಳಗೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಯಂತ್ರೋಪಕರಣಗಳ ಅಳವಡಿಕೆಯು ಉದ್ಯೋಗದ ಮಟ್ಟ ಮತ್ತು ಕಾರ್ಮಿಕರ ಸ್ಥಿತಿ-ಗತಿಗಳ ಮೇಲೆ ಬೀರುವ ದುಷ್ಪರಿಣಾಮಗಳು ತಾತ್ಕಾಲಿಕ ಮಾತ್ರ ಎಂಬ ರಿಕಾರ್ಡೊ ಅವರ ಪ್ರತಿಪಾದನೆಯನ್ನು ವಿಮರ್ಶೆಗೆ ಒಳಪಡಿಸಿದ ಮಾರ್ಕ್ಸ್ ಈ ಮೇಲೆ ತಿಳಿಸಿದ ಎರಡೂ ಅಂಶಗಳನ್ನು ಹೇಳಿದ್ದರು. ಒಮ್ಮೆ ಈ ಅಂಶಗಳನ್ನು ಪರಿಶೀಲಿಸಿದರೆ, ಬಂಡವಾಳಶಾಹಿಯು ತನ್ನ ಆರಂಭದ ಹಂತಗಳಲ್ಲಿ ಉದ್ಯೋಗ ಪರಿಸ್ಥಿತಿಗೆ ಮತ್ತು ಕಾರ್ಮಿಕರ ಸ್ಥಿತಿ-ಗತಿಗಳಿಗೆ ಹಾನಿಕಾರಕವಾಗಿದ್ದರೂ, ಅಂತಿಮವಾಗಿ ಅವರ ಪರಿಸ್ಥಿತಿಯನ್ನು ಸುಧಾರಿಸುತ್ತದೆ ಎಂಬ ನಂಬಿಕೆಯು ತಳ ಬುಡ ಇಲ್ಲದ್ದು ಎಂಬುದು ಸ್ಪಷ್ಟವಾಗುತ್ತದೆ.
“ಹೊಸ ಜಗತ್ತಿಗೆ’ ಯುರೋಪಿಯನ್ನರ ವಲಸೆ :
ಹಾಗಾದರೆ, ಬಂಡವಾಳಶಾಹಿಯ ಬೆಳವಣಿಗೆಯ ಹಾದಿಯಲ್ಲಿ ಮೆಟ್ರೋಪಾಲಿಟನ್ (ಮಹಾನಗರೀಯ) ಕಾರ್ಮಿಕರ ಜೀವನ ಪರಿಸ್ಥಿತಿಗಳಲ್ಲಿ ನಿಸ್ಸಂದೇಹವಾಗಿ ಕಂಡುಬಂದ ತಿರುವು ಒಂದು ಚಾರಿತ್ರಿಕ ಸತ್ಯ ಎಂಬುದನ್ನು ವಿವರಿಸಬಹುದಾದರೂ ಹೇಗೆ? ಈ ಪ್ರಶ್ನೆಗೆ ಕೊಡಬಹುದಾದ ಉತ್ತರವೆಂದರೆ, ಯುರೋಪಿಯನ್ ಕಾರ್ಮಿಕರು "ಹೊಸ ಜಗತ್ತಿಗೆ" ದೊಡ್ಡ ಪ್ರಮಾಣದಲ್ಲಿ ಹೋದ ವಲಸೆಯೇ. ಈ ವಲಸೆಯು "ದೀರ್ಘ ಹತ್ತೊಂಬತ್ತನೇ ಶತಮಾನ" (ಅಂದರೆ, ಮೊದಲ ಮಹಾಯುದ್ಧದವರೆಗಿನ ಅವಧಿ) ಎಂದು ಕರೆಯಲ್ಪಡುವ ಅವಧಿಯಲ್ಲಿ ಸಂಭವಿಸಿತು. ಅರ್ಥಶಾಸ್ತ್ರಜ್ಞ ಡಬ್ಲ್ಯೂ ಆರ್ಥರ್ ಲೆವಿಸ್ ಅವರ ಪ್ರಕಾರ, ನೆಪೋಲಿಯನ್ ನಡೆಸಿದ ಯುದ್ಧದ ಅಂತ್ಯ ಮತ್ತು ಮೊದಲ ಮಹಾಯುದ್ಧದ ನಡುವಿನ ಅವಧಿಯಲ್ಲಿ, ಸರಿಸುಮಾರು ಐವತ್ತು ಮಿಲಿಯ ಯುರೋಪಿಯನ್ ಕಾರ್ಮಿಕರು ತಾವು ಹುಟ್ಟಿದ ದೇಶಗಳನ್ನು ತೊರೆದು ಯುಎಸ್, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾದಂತಹ ಬಿಳಿಯರ ವಸಾಹತುಗಳ ಇತರ ಸಮಶೀತೋಷ್ಣ ಪ್ರದೇಶಗಳಿಗೆ ವಲಸೆ ಹೋದರು.
ಇದು "ಉನ್ನತ ವೇತನ" ವಲಸೆಯಾಗಿತ್ತು. ಏಕೆಂದರೆ, ಅವರ ಮೂಲ ದೇಶಗಳಲ್ಲಿಯೂ ಮತ್ತು ಅವರ ವಲಸೆಯ ದೇಶಗಳಲ್ಲಿಯೂ ವೇತನಗಳು, ಅದೇ ಸಮಯದಲ್ಲಿ ಸಂಭವಿಸಿದ ಇನ್ನೊಂದು ವಲಸೆಯ ಅಲೆಗೆ ವ್ಯತಿರಿಕ್ತವಾಗಿ. ಉನ್ನತವಾಗಿದ್ದವು . ಈ ಎರಡನೇ ಅಲೆಯು ಭಾರತ ಮತ್ತು ಚೀನಾದಂತಹ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ದೇಶಗಳಿಂದ ಫಿಜಿ, ಮಾರಿಷಸ್, ವೆಸ್ಟ್ ಇಂಡೀಸ್, ಪೂರ್ವ ಆಫ್ರಿಕಾ ಮತ್ತು ನೈಋತ್ಯ ಅಮೆರಿಕಾದಂತಹ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ದೇಶಗಳತ್ತ ಸಾಗಿತು. ಅಲ್ಪ-ವೇತನದ ವಲಸೆಯ ಭಾಗವಾಗಿದ್ದ ಈ ಉಷ್ಣವಲಯದ ವಲಸಿಗರಿಗೆ ಬಿಳಿಯರ ವಸಾಹತುಗಳ ಸಮಶೀತೋಷ್ಣ ಪ್ರದೇಶಗಳಿಗೆ ಮುಕ್ತವಾಗಿ ವಲಸೆ ಹೋಗಲು ಅನುಮತಿ ಇರಲಿಲ್ಲ (ಅವರಿಗೆ ಇಂದಿಗೂ ಇಲ್ಲ).
ಬ್ರಿಟನ್ನಲ್ಲಿ ಜರುಗಿದ ಕೃಷಿ ಕ್ರಾಂತಿಯು ವಲಸಿಗರ ಮೂಲ ದೇಶಗಳಲ್ಲಿ ಗ್ರಾಮೀಣ ಜನಸಂಖ್ಯೆಯ ಆದಾಯವನ್ನು ಹೆಚ್ಚಿಸಿತು ಎಂದು ಸೂಚಿಸುವ ಮೂಲಕ ಉನ್ನತ ವೇತನ ಮತ್ತು ಅಲ್ಪ ವೇತನದ ವಲಸೆಗಳ ನಡುವಿನ ವ್ಯತ್ಯಾಸವನ್ನು ಅರ್ಥಶಾಸ್ತ್ರಜ್ಞ ಆರ್ಥರ್ ಲೆವಿಸ್ ವಿವರಿಸುತ್ತಾರೆ. ಆದರೆ, ಅಂತಹ ಕೃಷಿ ಕ್ರಾಂತಿ ಸಂಭವಿಸಿದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಿಲ್ಲ. ಮೊದಲ ವಲಸೆಗೆ ಸಂಬAಧಿಸಿ ಹೇಳುವುದಾದರೆ, ಉನ್ನತ ವೇತನಗಳು ಲಭಿಸುವಂತಾದ ನಿಜ ಕಾರಣವೆಂದರೆ, ಸ್ಥಳೀಯ ಬುಡಕಟ್ಟು ಜನರಿಗೆ ಸೇರಿದ ಭೂಮಿಯನ್ನು ಬಲ ಪ್ರಯೋಗದ ಮೂಲಕ ವಲಸಿಗರು ಸ್ವಾಧೀನಪಡಿಸಿಕೊಂಡರು ಮತ್ತು ಉನ್ನತ ಮಟ್ಟದ ಆದಾಯ ಗಳಿಸುವ ರೈತರಾಗಿ ತಮ್ಮನ್ನು ತಾವು ನೆಲೆಗೊಳಿಸಿಕೊಂಡರು. ಈ ವಿದ್ಯಮಾನವು ಅವರು ಬಂದ ಮೂಲ ದೇಶಗಳಲ್ಲಿ ಮತ್ತು ಗಮ್ಯ ದೇಶಗಳಲ್ಲಿ ವೇತನದ ದರವನ್ನು ಹೆಚ್ಚಿಸಿತು.
ಇದನ್ನೂ ಓದಿ : ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ
ಈ ಸಮಶೀತೋಷ್ಣ ದೇಶಗಳಿಂದ ಸಮಶೀತೋಷ್ಣ ದೇಶಗಳಿಗೆ ಜರುಗಿದ ವಲಸೆಯ ಪ್ರಮಾಣವು ಬಹಳ ದೊಡ್ಡದಾಗಿತ್ತು: ಉದಾಹರಣೆಗೆ, ಬ್ರಿಟನ್ನಲ್ಲಿ 1820 ಮತ್ತು 1915ರ ನಡುವೆ, ಪ್ರತಿ ವರ್ಷವೂ ಹೆಚ್ಚುತ್ತಿದ್ದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ವಲಸೆ ಹೋದರು ಎಂದು ಅಂದಾಜಿಸಲಾಗಿದೆ. ಗಾತ್ರದ ದೃಷ್ಟಿಯಲ್ಲಿ ಇದು, ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಭಾರತದಿಂದ ವಲಸೆ ಹೋದ ಸರಿಸುಮಾರು 500 ಮಿಲಿಯನ್ ಜನರಿಗೆ ಹೋಲುತ್ತದೆ. ಇಷ್ಟು ಅಗಾಧ ಪ್ರಮಾಣದ ವಲಸೆಯ ಸಾಧ್ಯತೆಯು ಇಂದು ಮೂರನೇ ಜಗತ್ತಿನ ವ್ಯಕ್ತಿಗಳಿಗೆ ಲಭ್ಯವಿಲ್ಲ. ಆದರೆ ಮುಂದುವರೆದ ಬಂಡವಾಳಶಾಹಿ (ಮೆಟ್ರೊಪಾಲಿಟನ್) ದೇಶಗಳ ಜನರಿಗೆ ಲಭ್ಯವಿದ್ದ ಈ ಸಾಧ್ಯತೆಯೇ ಹತ್ತೊಂಬತ್ತನೇ ಶತಮಾನದಲ್ಲಿ ಯುರೋಪಿಯನ್ ಕಾರ್ಮಿಕರ ಭಾಗ್ಯದ ಬಾಗಿಲು ತೆರೆದ ಕಾರಣವಾಗಿತ್ತು. ಕಾರ್ಮಿಕರಿಗೆ ಒದಗಿ ಬಂದ ಇಂತಹ ಒಂದು ಅದೃಷ್ಟದ ತಿರುವನ್ನು ಬಂಡವಾಳಶಾಹಿಯ ಸಹಜ ಪ್ರವೃತ್ತಿಗಳು ವಿವರಿಸುವುದಿಲ್ಲ. ಆದರೆ, ಒಂದು ಬೃಹತ್ ಸಂಖ್ಯೆಯ ಜನರು ವಿದೇಶಕ್ಕೆ ವಲಸೆ ಹೋಗಬಹುದಾದ ಮತ್ತು ಮೂಲ ನಿವಾಸಿಗಳ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ತಮ್ಮನ್ನು ತಾವು ಅನುಕೂಲಸ್ತ ರೈತರಾಗಿ ನೆಲೆಗೊಳಿಸಿಕೊಳ್ಳಬಹುದು ಎಂಬ ಅಂಶವು ಈ ತಿರುವನ್ನು ವಿವರಿಸುತ್ತದೆ. ಮೂಲ ನಿವಾಸಿಗಳಿಂದ ಭೂಮಿಯನ್ನು ಕಸಿದುಕೊಳ್ಳುವ ಸಾಧ್ಯತೆಯು ಸಾಮ್ರಾಜ್ಯಶಾಹಿ ವಿದ್ಯಮಾನದಿಂದಾಗಿಯೇ ಉದ್ಭವಿಸಿತು.
ನಿರುದ್ಯೋಗದ ರಫ್ತಿಗೆ ಅವಕಾಶ :
ಮೆಟ್ರೋಪಾಲಿಟನ್ ಕಾರ್ಮಿಕರ ಭಾಗ್ಯದ ಬಾಗಿಲು ತೆರೆದ ಈ ಪ್ರಕ್ರಿಯೆಗೆ ಸಾಮ್ರಾಜ್ಯಶಾಹಿಯು ಇನ್ನೊಂದು ರೀತಿಯ ಸಹಾಯವನ್ನೂ ಮಾಡಿತು. ಬಂಡವಾಳಶಾಹಿ ವ್ಯವಸ್ಥೆಯು ಬೇಡಿಕೆ-ನಿರ್ಬಂಧಿತವಾಗಿರುವ ಕಾರಣದಿಂದ ಯಂತ್ರೋಪಕರಣಗಳ ಅಳವಡಿಕೆಯಿಂದ ಕೆಲಸ ಕಳೆದುಕೊಂಡ ಕಾರ್ಮಿಕರನ್ನು ಪುನಃ ನೇಮಕ ಮಾಡಿಕೊಳ್ಳುವುದನ್ನು ತಡೆಯುತ್ತದೆ ಎಂಬುದನ್ನು ಈ ಹಿಂದೆಯೇ ಉಲ್ಲೇಖಿಸಲಾಗಿದೆ. ಆದರೆ, ವಸಾಹತುಗಳು ಮತ್ತು ಅರೆ-ವಸಾಹತುಗಳಲ್ಲಿನ ಕುಶಲಕರ್ಮಿ ಉತ್ಪಾದಕರಿಗೆ ನಷ್ಟವನ್ನುಂಟುಮಾಡಿ ಯಂತ್ರ-ನಿರ್ಮಿತ ಸರಕುಗಳನ್ನು ಮಾರಾಟ ಮಾಡುವ ಮೂಲಕ ಬೇಡಿಕೆಯ ಮೇಲಿನ ನಿರ್ಬಂಧವನ್ನು ಮುರಿಯಬಹುದು. ಇದು ಚರಿತ್ರೆಯಲ್ಲಿ ದಾಖಲಾಗಿರುವ ಸಂಗತಿಯೂ ಹೌದು. ಈ ಪ್ರಕ್ರಿಯೆಯ ಪರಿಣಾಮವಾಗಿ ಮೆಟ್ರೋಪಾಲಿಟನ್ ದೇಶಗಳಲ್ಲಿ ನಿರುದ್ಯೋಗದ ಮಟ್ಟದಲ್ಲಿ ಇಳಿಕೆಯಾಗುತ್ತದೆ. ವಾಸ್ತವವಾಗಿ ಈ ಪ್ರಕ್ರಿಯೆಯು ಮೆಟ್ರೋಪಾಲಿಟನ್ ದೇಶಗಳು ನಿರುದ್ಯೋಗವನ್ನು ವಸಾಹತುಗಳಿಗೆ ಮತ್ತು ಅರೆ-ವಸಾಹತುಗಳಿಗೆ ರಫ್ತು ಮಾಡಿದಂತಾಗುತ್ತದೆ. ಈ ವಸಾಹತುಗಳು ಮತ್ತು ಅರೆ-ವಸಾಹತುಗಳು ಮೆಟ್ರೋಪಾಲಿಟನ್ ದೇಶಗಳ ಆಳ್ವಿಕೆಗೆ ಒಳಪಟ್ಟಿರುವುದರಿಂದ ಅಂತಹ ಅಪ- ಕೈಗಾರಿಕೀಕರಣದ ಪರಿಣಾಮ ಹೊಂದಿದ ಆಮದುಗಳಿಂದ ತಮ್ಮ ಅರ್ಥವ್ಯವಸ್ಥೆಯನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ.
ಈ ಎಲ್ಲ ಅಂಶಗಳು, ಬಂಡವಾಳಶಾಹಿಯೇ ತನ್ನ ಆರಂಭದ ಹಂತಗಳಲ್ಲಿ ಮೆಟ್ರೋಪಾಲಿಟನ್ ದೇಶಗಳ ದುಡಿಯುವ ಜನರ ಮೇಲೆ ಉಂಟುಮಾಡಿದ ಹಾನಿಯನ್ನು ಸರಿಪಡಿಸುತ್ತದೆ ಎಂಬ ಒಂದು ತಪ್ಪು ಕಲ್ಪನೆಗೆ ವ್ಯತಿರಿಕ್ತವಾಗಿ, ಇದು ಸಾಮ್ರಾಜ್ಯಶಾಹಿ ವಿದ್ಯಮಾನವೇ ಹೌದು ಎಂಬುದನ್ನು ಹೇಳುತ್ತವೆ. ವಿಶ್ವಾದ್ಯಂತ ಭೂ ಕಬಳಿಕೆಯನ್ನು ಮತ್ತು ವಸಾಹತುಗಳು ಮತ್ತು ಅರೆ- ವಸಾಹತುಗಳಿಗೆ ನಿರುದ್ಯೋಗದ ರಫ್ತು ಈ ಎರಡನ್ನೂ ಖಾತ್ರಿಪಡಿಸುವ ಈ ವಿದ್ಯಮಾನವು ಮೆಟ್ರೋಪಾಲಿಟನ್ ದೇಶಗಳ ದುಡಿಯುವ ಜನರ ಅದೃಷ್ಟವನ್ನು ಖುಲಾಯಿಸಿತು, ನಿಜ. ಆದರೆ, ತಮ್ಮ ಅದೃಷ್ಟವನ್ನು ಬದಲಿಸಿಕೊಳ್ಳುವಲ್ಲಿ ಮೆಟ್ರೋಪಾಲಿಟನ್ ದೇಶಗಳ ದುಡಿಯುವ ಜನರು ಸಾಮ್ರಾಜ್ಯಶಾಹಿ ಯೋಜನೆಯಲ್ಲಿ ಕೈ ಜೋಡಿಸಿದ್ದರು ಎಂಬುದು ಈ ಮಾತಿನ ಅರ್ಥವಲ್ಲ. ಬಂಡವಾಳಶಾಹಿ ವ್ಯವಸ್ಥೆಯು ಕಾರ್ಯನಿರ್ವಹಿಸುವ ವಿಧಾನ ಇರುವುದೇ ಹಾಗೆ.